ಕೋವಿಡ್ ಪರಿಣಾಮ ಇಕೆಯುವಿ100 ಮತ್ತು ಇಎಕ್ಸ್‌ಯುವಿ 300 ಬಿಡುಗಡೆ ಮುಂದೂಡಿದ ಮಹೀಂದ್ರಾ
ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ತೀವ್ರ ಬೆಳವಣಿಗೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಹಲವಾರು ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ಇವಿ ವಾಹನ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಈಗಾಗಲೇ ಸಾಕಷ್ಟು ಮುಂಚೂಣಿ ಸಾಧಿಸಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಮಹೀಂದ್ರಾ ಎಲೆಕ್ಟ್ರಿಕ್ ವಿಭಾಗವು ಮತ್ತಷ್ಟು ಹೊಸ ಇವಿ ವಾಹನ ಉತ್ಪನ್ನ ಬಿಡುಗಡೆ ಸಿದ್ದವಾಗುತ್ತಿದ್ದು, ವಾಣಿಜ್ಯ ವಾಹನಗಳ ಮಾದರಿಗಳಂತೆ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನ ಮಾದರಿಯ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಮೇಲೆ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಕಂಪನಿಯು ಇತ್ತೀಚೆಗೆ ಹೆಚ್ಚುವರಿಯಾಗಿ ರೂ.3 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಹೊಸ ಬಂಡವಾಳದೊಂದಿಗೆ ಕಂಪನಿಯು ಇದುವರೆಗೆ ಸುಮಾರು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದಂತಾಗಿದೆ.

ರೆವಾ ಎಲೆಕ್ಟ್ರಿಕ್ ಕಂಪನಿಯೊಂದಿಗೆ 2010ರಲ್ಲಿ ಮೊದಲ ಹೂಡಿಕೆಯೊಂದಿಗೆ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಕಾಲಿರಿಸಿದ ಮಹೀಂದ್ರಾ ಕಂಪನಿಯು ಇದುವರೆಗೆ ಹಲವಾರು ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸಿದ್ದು, ಇದೀಗ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ವಾಹನಗಳ ಅಭಿವೃದ್ದಿಯತ್ತ ಹೆಚ್ಚಿನ ಗಮನಹರಿಸುತ್ತಿದೆ.

ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಮಾತ್ರವಲ್ಲ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಎಲೆಕ್ಟ್ರಿಕ್ ಮಾದರಿಗಳನ್ನು ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳೊಂದಿಗೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಮಹೀಂದ್ರಾ ಕಂಪನಿಯು ಕೇವಲ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮಾತ್ರವಲ್ಲದೆ ಸಂಶೋಧನೆ, ವಿಶ್ವಾದ್ಯಂತ ನೂರಾರು ಇವಿ ಸ್ಟಾರ್ಟ ಅಪ್ ಕಂಪನಿಗಳಲ್ಲೂ ಹಣ ಹೂಡಿಕೆ ಮಾಡಿರುವುದು ಭವಿಷ್ಯದ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಮಹತ್ವದ ಪಾತ್ರವಹಿಸಲಿದೆ.

ಹೊಸ ಬಂಡವಾಳದೊಂದಿಗೆ ಇದೀಗ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸುತ್ತಿದ್ದು, ಒಂದೇ ಪ್ಲ್ಯಾಟ್‌ಫಾರ್ಮ್ ಅಡಿ ಹಲವು ವಾಹನ ಮಾದರಿಗಳನ್ನು ನಿರ್ಮಾಣ ಮಾಡುವ ಗುರಿಹೊಂದಿದೆ.

ಭಾರತದಲ್ಲಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೊಂದಿರುವ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಕೆಯುವಿ100 ಇವಿ ಮತ್ತು ಎಕ್ಸ್‌ಯುವಿ300 ಇವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಕಳೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕೆಯುವಿ100 ಎಲೆಕ್ಟ್ರಿಕ್, ಎಕ್ಸ್‌ಯುವಿ300 ಎಲೆಕ್ಟ್ರಿಕ್ ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಗಳನ್ನು ಪ್ರದರ್ಶನ ಮಾಡಿದ್ದ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ಪ್ರದರ್ಶನದ ವೇಳೆ ಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯ ಬೆಲೆ ಮಾಹಿತಿ ಮಾತ್ರವೇ ಹಂಚಿಕೊಳ್ಳುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ವಿತರಣೆ ಮಾಡುವುದಾಗಿ ಹೇಳಿಕೊಂಡಿತ್ತು.

ಆದರೆ ಮಾರ್ಚ್ ಹೊತ್ತಿಗೆ ಕರೋನಾ ವೈರಸ್ ಹೆಚ್ಚಾದ ಹಿನ್ನಲೆ ಲಾಕ್‌ಡೌನ್ ಮಾಡಿದ ಪರಿಣಾಮ ಹೊಸ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತ ಬಂದಿರುವ ಮಹೀಂದ್ರಾ ಕಂಪನಿಯು ಇದೀಗ ಹೊಸ ವಾಹನಗಳ ಬಿಡುಗಡೆಯ ಸಂದರ್ಭದಲ್ಲೇ ಮತ್ತೆ ಕೋವಿಡ್ 2ನೇ ಅಲೆ ಹೆಚ್ಚಳವಾಗಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಮಹೀಂದ್ರಾ ಕಂಪನಿಯು ಸದ್ಯ ಕೆಯುವಿ100 ಎಲೆಕ್ಟ್ರಿಕ್, ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಗಳ ಬಿಡುಗಡೆಯ ಸಿದ್ದತೆಯಲ್ಲಿದ್ದು, ಹೊಸ ವಾಹನಗಳ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿರುವ ಕಂಪನಿಯು 2022ಕ್ಕೆ ಮುಂದೂಡಿಕೆ ಮಾಡಿದೆ.

ಇಕೆಯುವಿ100 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.8.25 ಲಕ್ಷ ಬೆಲೆ ಹೊಂದಿದ್ದು, 15.9kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ 120ರಿಂದ 150 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಇಎಕ್ಸ್‌ಯುವಿ 300 ಮಾದರಿಯು ಕೂಡಾ 300ರಿಂದ 350 ಕಿ.ಮೀ ಮೈಲೇಜ್ ಪ್ರೇರಣೆ ಹೊಂದಿದೆ.
MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಇಎಕ್ಸ್‌ಯುವಿ300 ಕಾರು ಮಾದರಿಯೊಂದಿಗೆ 2025ರ ವೇಳೆಗೆ 5 ಲಕ್ಷ ಯುನಿಟ್ ಇವಿ ವಾಹನಗಳನ್ನು ಮಾರಾಟ ಮಾಡುವ ಗುರಿಹೊಂದಿದ್ದು, ಹೊಸ ಕಾರುಗಳು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಬದಲಾವಣೆ ತರಲಿವೆ.


Click it and Unblock the Notifications