ಬೆಂಗಳೂರು ಸೇರಿ ದೇಶದ ಪ್ರಮುಖ ಎಂಟು ನಗರಗಳಲ್ಲಿ ಬಿವೈಡಿ ಇ6 ಕಾರು ಮಾರಾಟ ಆರಂಭ
ಭಾರತದಲ್ಲಿ ದುಬಾರಿ ಇಂಧನಗಳ ಬೆಲೆ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿವೈಡಿ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದೆ.

ಬಿವೈಡಿ ಹೊಸ ಕಾರು ಇ6 ಎಲೆಕ್ಟ್ರಿಕ್ ಕಾರು ಎಂಪಿವಿ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅತ್ಯಧಿಕ ಮೈಲೇಜ್ ರೇಂಜ್ ಫೀಚರ್ಸ್ ಹೊಂದಿದ್ದು, ಹೊಸ ಕಾರು ಸದ್ಯ ದೇಶದ ಪ್ರಮುಖ ಎಂಟು ನಗರಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿವೈಡಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್ ಗ್ರೂಪ್ಸ್ ಜೊತೆಗೂಡಿ ಹೊಸ ಕಾರು ಮಾರಾಟ ಆರಂಭಿಸಿದೆ.

ನಮ್ಮ ಬೆಂಗಳೂರು ಮತ್ತು ವಿಜಯವಾಡದಲ್ಲಿ ಪಿಪಿಎಸ್ ಮೋಟಾರ್ಸ್ ಗ್ರೂಪ್, ಚೆನ್ನೈನಲ್ಲಿ ಕೆಯುಎನ್ ಆಟೋ ಗ್ರೂಪ್, ಹೈದ್ರಾಬಾದ್‌ನಲ್ಲಿ ಮ್ಯಾಡಿ ಗ್ರೂಪ್, ಅಹಮದಾಬಾದ್‌ನಲ್ಲಿ ಕಾರ್ಗೊ ಮೋಟಾರ್ಸ್, ಕೊಚ್ಚಿಯಲ್ಲಿ ಇವಿಎಂ ಆಟೋಕಾರ್ಫ್ಟ್ ಮತ್ತು ದೆಹಲಿಯಲ್ಲಿ ಲ್ಯಾಂಡ್‌ಮಾರ್ಕ್ ಆಟೋಮೊಬೈಲ್ಸ್ ಕಂಪನಿಗಳು ಬಿವೈಡಿ ಇವಿ ಕಾರು ಮಾರಾಟ ಮಾಡಲಿವೆ.

ಬಿವೈಡಿ ಇವಿ ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 29.15 ಲಕ್ಷ ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಕಂಪನಿಯು ಆರಂಭಿಕವಾಗಿ ಬಿ2ಬಿ ಉದ್ದೇಶಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ.

ಬಿ2ಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗಾಗಿ ಮಾತ್ರವೇ ಪರಿಚಯಿಸಲಾಗಿರುವ ಹೊಸ ಇ6 ಕಾರನ್ನು ಫ್ಲೀಟ್ ಆಪರೇಟರ್‌ಗಳು ಮತ್ತು ಇತರೆ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ಖರೀದಿಸಬಹುದಾಗಿದ್ದು, ಮುಂಬರುವ ಕೆಲ ತಿಂಗಳ ನಂತರ ಹೊಸ ಕಾರನ್ನು ವ್ಯಯಕ್ತಿಕ ಕಾರು ಬಳಕೆದಾರರು ಕೂಡಾ ಖರೀದಿಸಬಹುದಾಗಿದೆ.

ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾದರಿಯಾಗಿರುವ ಇ6 ಇವಿ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 71.6kWh 'ಬ್ಲೇಡ್' ಲಿಥಿಯಂ ಫೆರೋ ಫಾಸ್ಫೇಟ್ (LiFePO4) ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಹೊಸ ಕಾರಿನಲ್ಲಿ ಬ್ಲೇಡ್ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್ AC ಮತ್ತು DC ಚಾರ್ಜಿಂಗ್ ಮಾನದಂಡಗಳನ್ನು ಬೆಂಬಲಿಸಲಿದ್ದು, WLTP ಮಾನದಂಡಗಳ ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 415 ಕಿ.ಮೀ ನಿಂದ ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹೊಸ ಕಾರಿನ ಮೈಲೇಜ್ ಪ್ರಮಾಣವು ಕಾರಿನಲ್ಲಿರುವ ವಿವಿಧ ಡ್ರೈವಿಂಗ್ ಮೋಡ್ ಆಧರಿಸಿ ನಿರ್ಧಾರವಾಗಲಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೊಸ ಕಾರಿನಲ್ಲಿರುವ ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಾಗ ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 6 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಿದ್ದರೆ ಡಿಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 35 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದೆ.

ಇ6 ಕಾರಿನಲ್ಲಿರುವ ಕೋಬಾಲ್ಟ್-ಮುಕ್ತ LiFePO4 ಬ್ಯಾಟರಿ ಪ್ಯಾಕ್ ಹೆಚ್ಚು ಸುರಕ್ಷಿತವಾಗಿದ್ದು, ಸ್ಫೋಟ ಮುಕ್ತವಾಗಿರುವ ಈ ಬ್ಯಾಟರಿ ಹೆಚ್ಚು ವಿಶ್ವಾರ್ಹತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಮೇಲೆ ಅಭಿವೃದ್ದಿಗೊಂಡಿದೆ. ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಉತ್ತಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಕಾರು 4,695 ಎಂಎಂ ಉದ್ದ, 1,810 ಎಂಎಂ ಅಗಲ ಮತ್ತು 1,670 ಎಂಎಂ ಎತ್ತರ ಹೊಂದಿದ್ದು, 570 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದುಕೊಂಡಿದೆ.

ಹಾಗೆಯೇ ಸ್ಪೋರ್ಟಿ ವಿನ್ಯಾಸದೊಂದಿಗೆ ಹೊಸ ಇ6 ಎಂಪಿವಿ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಕ್ರೋಮ್ ಬಾರ್ ಒಳಗೊಂಡ ಬಿವೈಡಿ ಲೊಗೊ, ಆಕರ್ಷಕ ಸ್ಪಾಯ್ಲರ್, ಸ್ಲಿಕ್ ಎಲ್ಇಡಿ ಟೈಲ್‌ಲೈಟ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ.

ಹೊಸ ಕಾರಿನಲ್ಲಿ ಹೊರಭಾಗದಲ್ಲಿರುವಂತೆ ಒಳಭಾಗದಲ್ಲಿರುವ ಫೀಚರ್ಸ್‌ಗಳು ಕೂಡಾ ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ 10 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಲೆದರ್ ಸೀಟ್‌ಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಸೀಟ್‌ಗಳು ಮತ್ತು ಏರ್ ಫಿಲ್ಟರ್ ಸಿಸ್ಟಂ ಹೊಂದಿದೆ.

ಇನ್ನು ಹೊಸ ಕಾರಿನಲ್ಲಿ ಹಲವಾರು ಸುರಕ್ಷತಾ ವೈಶಿಷ್ಟ್ಯತೆಗಳಿದ್ದು, 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ. ಹಾಗೆಯೇ ಹೊಸ ಕಾರಿನ ಖರೀದಿ ಮೇಲೆ ಕಂಪನಿಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ನೀಡಿದ್ದು, ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ಕಾಲ ವಾರಂಟಿ ನೀಡಿದೆ.


Click it and Unblock the Notifications








