ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಕೇಂದ್ರ ಸಾರಿಗೆ ಇಲಾಖೆಯಿಂದ ಹೊಸ ಆದೇಶ
ಕೋವಿಡ್ ಪರಿಣಾಮ ಉಂಟಾಗುತ್ತಿರುವ ಆರ್ಥಿಕ ಬಿಕ್ಕಟ್ಟು ಸಾರಿಗೆ ವಲಯಕ್ಕೆ ಭಾರೀ ಹೊಡೆತ ನೀಡಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ವಲಯಕ್ಕೆ ಕೇಂದ್ರ ಸರ್ಕಾರವು ಈಗಾಗಲೇ ಹಲವಾರು ವಿನಾಯ್ತಿಗಳನ್ನು ಘೋಷಣೆ ಮಾಡಿದೆ.

ದೇಶಾದ್ಯಂತ ಕರೋನಾ ವೈರಸ್ 2ನೇ ಅಲೆ ಹೆಚ್ಚಿರುವ ಪರಿಣಾಮ ಲಾಕ್‌ಡೌನ್ ವಿಸ್ತರಣೆಯಾಗುತ್ತಿರುವುದು ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ವಾಹನ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಕೆಲವು ಪ್ರಮುಖ ವಿನಾಯ್ತಿಗಳನ್ನು ನೀಡಿದೆ.

ಕಳೆದ ವರ್ಷದಿಂದ ಸುಮಾರು ಆರು ಬಾರಿ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಇದೀಗ 2ನೇ ಅಲೆಯ ಸಂದರ್ಭದಲ್ಲೂ ಎರಡನೇ ಬಾರಿಗೆ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಎಫ್‌ಸಿ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಕೋವಿಡ್ 2ನೇ ಅಲೆ ಜೋರಾದ ಪರಿಣಾಮ ಸಂಪೂರ್ಣ ಲಾಕ್‌ಡೌನ್ ಹಿನ್ನಲೆಯಲ್ಲಿ ಈ ತಿಂಗಳು ಜೂನ್ 30ರ ತನಕ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತೆ ವಿಸ್ತರಿಸಿದ್ದ ಕೇಂದ್ರ ಸಾರಿಗೆ ಇಲಾಖೆಯು ಇದೀಗ ಮತ್ತೆ ಹೊಸ ಆದೇಶ ನೀಡಿದ್ದು, ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ವಾಹನ ದಾಖಲೆಗಳ ನವೀಕರಣವು ವಿಳಂಬವಾಗುವ ಹಿನ್ನಲೆಯಲ್ಲಿ ಮಾನ್ಯತಾ ಅವಧಿಯನ್ನು ಮತ್ತೆ ಮುಂದೂಡಿಕೆ ಮಾಡಿದೆ.

ಈ ತಿಂಗಳು 30ಕ್ಕೆ ಮುಕ್ತಾಯಗೊಳ್ಳುವ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಎಫ್‌ಸಿ ಮಾನ್ಯತಾ ಅವಧಿಯನ್ನು ಸೆಪ್ಟೆಂಬರ್ 31ರ ತನಕ ವಿಸ್ತರಣೆ ಮಾಡಿದ್ದು, ಮಾನ್ಯತಾ ಅವಧಿ ಮುಗಿದಿರುವ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಎಫ್‌ಸಿ ಕಾರಣಕ್ಕೆ ವಾಹನ ಸವಾರರಿಗೆ ಯಾವುದೇ ದಂಡವಿಧಿಸುವಂತಿಲ್ಲವೆಂದು ಸ್ಪಷ್ಟಪಡಿಸಿದೆ.

ಹೊಸ ಆದೇಶದಂತೆ ಜೂನ್ 30ಕ್ಕೆ ಮುಕ್ತಾಯಗೊಳ್ಳಲಿರುವ ಆರ್‌ಸಿ(ನೋಂದಣಿ ಪ್ರಮಾಣಪತ್ರ), ಡಿಎಲ್(ಚಾಲನಾ ಪ್ರಮಾಣಪತ್ರ) ಮತ್ತು ಎಫ್‌ಸಿ(ಫಿಟ್‌ನೆಸ್ ಪ್ರಮಾಣಪತ್ರ)ಗಳ ಮಾನ್ಯತಾ ಅವಧಿಯು ಮುಂದಿನ ಸೆಪ್ಟೆಂಬರ್ ಅಂತ್ಯದ ತನಕ ಮಾನ್ಯತೆ ಹೊಂದಿರಲಿದ್ದು, ಆರ್‌ಸಿ, ಡಿಎಲ್ ಮತ್ತು ಎಫ್‌ಸಿ ಹೊರತುಪಡಿಸಿ ವಾಹನಗಳ ಇನ್ಸುರೆನ್ಸ್‌ಗೆ ಯಾವುದೇ ವಿನಾಯ್ತಿ ನೀಡಲಾಗಿಲ್ಲ.

ವಾಹನಗಳ ಇನ್ಸುರೆನ್ಸ್ ನವೀಕರಣ ಅವಧಿಯನ್ನು ಕಳೆದ ವರ್ಷ ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ ಮಗಿದ್ದ ವಾಹನ ಮಾಲೀಕರಿಗೆ ಲಾಕ್‌ಡೌನ್ ಕಾರಣಕ್ಕಾಗಿ ಮಾತ್ರ ವಿನಾಯ್ತಿ ನೀಡಲಾಗಿತ್ತು. ಆದರೆ ಇದೀಗ ಡಿಎಲ್, ಆರ್‌ಸಿ ಮತ್ತು ಎಫ್‌ಸಿ ಹೊರತುಪಡಿಸಿ ಇನ್ಸುರೆನ್ಸ್ ಗಾಗಿ ಯಾವುದೇ ವಿನಾಯ್ತಿ ನೀಡುತ್ತಿಲ್ಲ.

ಕೋವಿಡ್ ಹರಡುವಿಕೆಯನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ಮುಂದುವರಿಸಿರುವ ಕೇಂದ್ರ ಸರ್ಕಾರವು ಸಂಕಷ್ಟ ಸಮಯದಲ್ಲಿ ವಾಹನ ದಾಖಲೆಗಳಿಗೆ ಹೆಚ್ಚುವರಿ ಮಾನ್ಯತಾ ಅವಧಿಯನ್ನು ವಿಸ್ತರಿಸಿರುವುದು ಸ್ವಾಗತಾರ್ಹ.

ಇನ್ನು ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್‌ಡೌನ್ ಮುಂದುವರಿಸಿದ್ದು, ಹೊಸ ಸುರಕ್ಷಾ ಕ್ರಮಗಳ ಪರಿಣಾಮ ಆಟೋ ಉದ್ಯಮ ಹಿಂದೆಂಗಿಂತಲೂ ಹೆಚ್ಚು ನಷ್ಟ ಅನುಭವಿಸುತ್ತಿದೆ.

ಕಳೆದ ವರ್ಷದ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಹಲವು ಆಟೋ ಕಂಪನಿಗಳು ಮಾರಾಟದಲ್ಲಿ ನೆಲಕಚ್ಚಿದ್ದು, ಪರಿಸ್ಥಿತಿಯು ಸುಧಾರಣೆಗೊಳ್ಳಲು ಇನ್ನು ಕೆಲವು ತಿಂಗಳುಗಳೇ ಬೇಕಾಗಬಹುದು.


Click it and Unblock the Notifications