ಕಾರು ಉತ್ಪಾದನೆ ಸ್ಥಗಿತಗೊಳಿಸುವುದಕ್ಕೂ ಮುನ್ನ ಉದ್ಯೋಗಿಗಳಿಗೆ ಪರಿಹಾರ ನೀಡಲಿದೆ Ford India
ಅಮೆರಿಕದ ವಾಹನ ತಯಾರಕ ಕಂಪನಿ ಫೋರ್ಡ್(Ford) ಭಾರತದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸುಮಾರು 2 ಬಿಲಿಯನ್ ಯುಎಸ್ ಡಾಲರ್ ನಷ್ಟ ಅನುಭವಿಸಿದ್ದು, ಕಂಪನಿಯು ಮುಂದಿನ ನಷ್ಟವನ್ನು ನಿಲ್ಲಿಸಲು ಭಾರತದಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಮುಚ್ಚುವ ಕಠಿಣ ನಿರ್ಧಾರ ಕೈಗೊಂಡಿದೆ.

ಫೋರ್ಡ್ ಕಂಪನಿಯು ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಕಂಪನಿಯನ್ನೇ ನಂಬಿರುವ ಸಾವಿರಾರು ಉದ್ಯೋಗಿಗಳ ಜೀವನೋಪಾಯದ ಪ್ರಶ್ನೆ ಜೋರಾಗಿತ್ತು. ಕಂಪನಿಯ ನಿರ್ಧಾರದ ಬಗೆಗೆ ಚೆನ್ನೈ ಘಟಕದ ಕಾರ್ಮಿಕರ ಒಕ್ಕೂಟವು ಕಂಪನಿಯ ಸ್ಥಗಿತ ನಿರ್ಧಾರ ಪ್ರಕಟ ದಿನದಿಂದಲೇ ಪ್ರತಿಭಟಿಸಿ ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದರು. ಕಾರ್ಮಿಕರ ಪ್ರತಿಭಟನೆಗೆ ಮಣಿದ ತಮಿಳುನಾಡು ಸರ್ಕಾರವು ಕಂಪನಿಯ ಜೊತೆ ಮಾತುಕತೆ ನಡೆಸಿ ಸೂಕ್ತ ಪರಿಹಾರದ ಭರವಸೆ ನೀಡಿದೆ.

ತಮಿಳುನಾಡಿನ ಗ್ರಾಮೀಣ ಕೈಗಾರಿಕಾ ಸಚಿವ ಟಿ ಎಂ ಅನ್ಬರಸನ್ ಅವರು ಫೋರ್ಡ್ ಕಂಪನಿಯ ಜೊತೆಗೆ ಮಾತುಕತೆ ನಡೆಸಿದ್ದು, ಕಂಪನಿಯ ಉದ್ಯೋಗಿಗಳು ಮತ್ತು ವಾಹನ ಬಿಡಿಭಾಗಗಳ ಪೂರೈಕೆದಾರರ ಮುಂದಿನ ಪರಿಸ್ಥಿತಿಯ ಕುರಿತಂತೆ ಪರಿಶೀಲನಾ ಸಭೆಯಲ್ಲಿ ಚರ್ಚಿಸಿದ್ದಾರೆ.

ಸಭೆಯ ನಂತರ ಮಾತನಾಡಿದ ಸಚಿವ ಟಿ ಎಂ ಅನ್ಬರಸನ್, ರಾಜ್ಯ ಸರ್ಕಾರವು ಕೈಗಾರಿಕೋದ್ಯಮಿಗಳು ಮತ್ತು ಕಾರ್ಮಿಕರ ಹಿತದೃಷ್ಠಿಯಿಂದ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದು, ಚೆನ್ನೈನಲ್ಲಿರುವ ಫೋರ್ಡ್‌ನ ಉತ್ಪಾದನಾ ಘಟಕವನ್ನು ಇತರೆ ಕಾರು ಉತ್ಪಾದನಾ ಕಂಪನಿಗಳು ಸ್ವಾಧೀನಪಡಿಸಿಕೊಂಡು ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಕೈಗೊಳ್ಳಬಹುದಾದ ಸಾಧ್ಯತೆ ಬಗೆಗೆ ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ.

ಫೋರ್ಡ್ ಕಂಪನಿಯು ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಣೆ ಮಾಡಿದ್ದರೂ 2022ರ ಮಧ್ಯಂತರವೆರೆಗೂ ವಿದೇಶಿ ಮಾರುಕಟ್ಟೆಗಳಿಗಾಗಿ ವಿವಿಧ ಕಾರು ಮಾದರಿಗಳ ಉತ್ಪಾದನಾ ಪ್ರಕ್ರಿಯೆಯನ್ನು ಮುಂದುವರಿಸಲಿದೆ.

ಹೀಗಾಗಿ ಸದ್ಯಕ್ಕೆ ಕಾರ್ಮಿಕರಿಗೆ ಯಾವುದೇ ರೀತಿಯ ಉದ್ಯೋಗ ಕಳೆದುಕೊಳ್ಳುವ ಭೀತಿ ಬೇಡ ಎಂದಿರುವ ಗ್ರಾಮೀಣ ಕೈಗಾರಿಕೆ ಸಚಿವರು ಕಾರು ಉತ್ಪಾದನಾ ಸ್ಥಗಿತಗೊಳ್ಳುವ ವೇಳೆಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೂ ನ್ಯಾಯಯುತವಾದ ಪರಿಹಾರ ಕ್ರಮಗಳನ್ನು ಪ್ರಕಟಿಸುವುಗಾಗಿ ಕಂಪನಿಯೇ ಭರವಸೆ ನೀಡಿದೆ ಎಂದಿದ್ದಾರೆ.

ಚೆನ್ನೈನಲ್ಲಿರುವ ಫೋರ್ಡ್‌ನ ಉತ್ಪಾದನಾ ಘಟಕದಲ್ಲಿ ಪ್ರಸ್ತುತ 2638 ಕಾರ್ಮಿಕರು ಪ್ರತ್ಯೇಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದರೆ 1421 ಕಾರ್ಮಿಕರು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದು, ಭಾರತದಲ್ಲಿ ದೀರ್ಘಕಾಲದಿಂದ ನಷ್ಟ ಅನುಭವಿಸುತ್ತಿರುವ ಫೋರ್ಡ್ ಕಂಪನಿಯು ಭಾರತವು ಪ್ರಮುಖ ಮಾರುಕಟ್ಟೆಗಳಲ್ಲಿನ ಕಾರು ಉತ್ಪಾದನೆ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ.

ಫೋರ್ಡ್ ಕಂಪನಿಯು ಭಾರತದಲ್ಲಿ ಚೆನ್ನೈ ಮತ್ತು ಗುಜರಾತ್‌ನಲ್ಲಿರುವ ತನ್ನ ಎರಡೂ ಉತ್ಪಾದನಾ ಘಟಕಗಳನ್ನು ಮುಚ್ಚುತ್ತಿದ್ದರೂ ಸಹ ಭಾರತೀಯ ಮಾರುಕಟ್ಟೆನ ಕಾರು ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸುತ್ತಿಲ್ಲ.

ಫೋರ್ಡ್ ಕಂಪನಿಯು ಭಾರತದಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸಲಿದ್ದು, ಸಾಮಾನ್ಯ ಕಾರುಗಳ ಬದಲಾಗಿ ಹೈ ಎಂಡ್ ಕಾರು ಮಾದರಿಗಳಾದ ಫೋರ್ಡ್ ಮುಸ್ಟಾಂಗ್, ಫೋರ್ಡ್ ಮುಸ್ಟಾಂಗ್ ಮ್ಯಾಕ್-ಇ ಸೇರಿದಂತೆ ಕೆಲವು ಆಮದು ಕಾರು ಮಾದರಿಗಳನ್ನು ಮಾತ್ರ ಮಾರಾಟ ಮಾಡಲಿದೆ.

ಇನ್ನು ಭಾರತದಲ್ಲಿ ಸುಮಾರು 27 ವರ್ಷಗಳ ಕಾಲ ಆಟೋ ಉದ್ಯಮ ಕಾರ್ಯಾಚರಣೆ ನಡೆಸಿದ ಫೋರ್ಡ್ ಕಂಪನಿಯು ಭಾರತೀಯ ಆಟೋದಲ್ಲಿ ಒಂದು ಇತಿಹಾಸವನ್ನೇ ಹೊಂದಿದೆ. ಸ್ವತಂತ್ರ ಪೂರ್ವದಲ್ಲೇ ಭಾರತದಲ್ಲಿ ವಾಹನ ಉತ್ಪಾದನೆ ಆರಂಭಿಸಿದ್ದ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು 1926ರಲ್ಲಿ ಕೆನಡಾದ ಫೋರ್ಡ್ ಮೋಟಾರ್ ಕಂಪನಿಯ ಅಂಗಸಂಸ್ಥೆಯಾಗಿ ವಾಹನ ಉತ್ಪಾದನೆಯನ್ನು ಆರಂಭಿಸಿತ್ತು.

ಆರಂಭದಲ್ಲಿ ವಿವಿಧ ವಾಹನಗಳಿಗೆ ಎಂಜಿನ್ ಪೂರೈಕೆ ಮಾಡುತ್ತಿದ್ದ ಫೋರ್ಡ್ ಕಂಪನಿಯು ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ವಾಹನ ಉತ್ಪಾದನೆ ಮಾಡಿ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ರಫ್ತು ಕೈಗೊಳ್ಳುತ್ತಿತ್ತು.

ಲಾಭದ ಹಾದಿಯಲ್ಲಿರುವಾಗಲೇ ಫೋರ್ಡ್ ಇಂಡಿಯಾ ಕಂಪನಿಯು ತೀವ್ರ ಆಮದು ನಿರ್ಬಂಧಗಳನ್ನು ಎದುರಿಸಿದ ಪರಿಣಾಮವಾಗಿ ಮೇ 1953ರಲ್ಲಿ ದಿವಾಳಿಯಾಗುವ ಮೂಲಕ ಭಾರತದಲ್ಲಿ ವಾಹನ ಉತ್ಪಾದನೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಿ ದೇಶಿಯ ಮಾರುಕಟ್ಟೆಯಿಂದ ಹೊರನಡೆದಿತ್ತು.

ಭಾರತೀಯ ಆಟೋ ಉದ್ಯಮದಲ್ಲಿ ಛಾಪು ಮೂಡಿಸಿ ಕಾರಣಾಂತರಗಳಿಂದ ಹೊರನಡೆದಿದ್ದ ಫೋರ್ಡ್ ಕಂಪನಿಯು ಸುಮಾರು 43 ವರ್ಷಗಳ ನಂತರ 1995ರಲ್ಲಿ ಮತ್ತೆ ಹೊಸತನದೊಂದಿಗೆ ಭಾರತೀಯ ಮಾರುಕಟ್ಟೆ ಪ್ರವೇಶಿತು. ಆಟೋ ಉದ್ಯಮದಲ್ಲಿ ಆಗಷ್ಟೇ ಪ್ರಯಾಣಿಕ ವಾಹನಗಳ ಉತ್ಪಾದನೆಯಲ್ಲಿ ಗುರುತಿಸಿಕೊಳ್ಳುತ್ತಿದ್ದ ಮಹೀಂದ್ರಾ ಜೊತೆ ಫೋರ್ಡ್ ಕಂಪನಿಯು ಸಹಭಾಗಿತ್ವ ಘೋಷಣೆ ಮಾಡಿತು.

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ಜೊತೆ 50-50 ಜಂಟಿ ಉದ್ಯಮ ಆರಂಭಿದ ಕಂಪನಿಯು ಮಹೀಂದ್ರಾ ಫೋರ್ಡ್ ಇಂಡಿಯಾ ಲಿಮಿಟೆಡ್ (MFIL) ಆಗಿ 1995ರ ಅಕ್ಟೋಬರ್‌ನಲ್ಲಿ ಮರಳಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ಯುರೋಪ್ ನಲ್ಲಿದ್ದ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲಿ ಪರಿಚಯಿಸಲಾಯ್ತ.

ಜಂಟಿ ಉದ್ಯಮದ ಮೂಲಕ ಮಾರುಕಟ್ಟೆ ಅಧಿಪತ್ಯಕ್ಕಾಗಿ ಹವಣಿಸುತ್ತಿದ್ದ ಫೋರ್ಡ್ ಕಂಪನಿಯು 1998ರ ವೇಳೆಗೆ ಜಂಟಿ ಉದ್ಯಮದಲ್ಲಿ ಶೇ. 78 ರಷ್ಟು ಷೇರುಗಳ ಮೂಲಕ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಮರುನಾಮಕರಣಗೊಂಡಿತು.

2001ರ ವೇಳೆಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆ ವಿಸ್ತರಣೆ ಕೈಗೊಂಡ ಫೋರ್ಡ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮೊದಲ ಕಾರು ಮಾದರಿಯಾಗಿ 1996ರಲ್ಲಿ ಎಸ್ಕಾರ್ಟ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಿತ್ತು. ಚೆನ್ನೈ ಮತ್ತು ಗುಜರಾತ್‌ನಲ್ಲಿ ಎರಡು ಕಾರು ಉತ್ಪಾದನಾ ಘಟಕಗಳನ್ನು ಹೊಂದಿದ್ದ ಫೋರ್ಡ್ ಕಂಪನಿಯು ಚೆನ್ನೈ ಘಟಕದಲ್ಲಿ ಕಾರು ಮಾದರಿಗಳನ್ನು ಮತ್ತು ಗುಜರಾತ್‌ನ ಸನಂದಾ ಘಟಕದಲ್ಲಿ ಕಾರುಗಳ ಜೊತೆಗೆ ಎಂಜಿನ್ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿತ್ತು.

ಹೊಸ ಬಂಡವಾಳದೊಂದಿಗೆ ಉತ್ಪಾದನೆಗೊಳ್ಳುತ್ತಿದ್ದ ಹೊಸ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಮಾರುತಿ ಸುಜುಕಿ, ಹ್ಯುಂಡೈ ನಿರ್ಮಾಣದ ಹೊಸ ಹ್ಯಾಚ್‌ಬ್ಯಾಕ್, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ ಪೈಪೋಟಿಯು ಫೋರ್ಡ್ ಕಂಪನಿಗೆ ಭಾರೀ ಹೊಡೆತ ನೀಡಿದವು. ಇದರ ಜೊತೆಗೆ ಇತ್ತೀಚೆಗೆ ಮಾರುಕಟ್ಟೆಗೆ ಪ್ರವೇಶಿದ ಹೊಸ ಕಾರು ಕಂಪನಿಗಳ ಅಬ್ಬರವು ಕೂಡಾ ಫೋರ್ಡ್ ಕಂಪನಿಗೆ ನಿರಂತರವಾಗಿ ಹಿನ್ನಡೆ ಉಂಟುಮಾಡಿದವು.


Click it and Unblock the Notifications








