ಕೋವಿಡ್ ಇಳಿಮುಖ: ಕಾರು ಉತ್ಪಾದನೆಯನ್ನು ಪುನಾರಂಭಿಸಿದ ಹ್ಯುಂಡೈ
ದೇಶಾದ್ಯಂತ ಕೋವಿಡ್ 2ನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್‌ಡೌನ್ ವಿಧಿಸಿದ್ದು, ಲಾಕ್‌ಡೌನ್ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿವೆ.

ಕಳೆದ ವರ್ಷದ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಸಹ ಇದೀಗ ವಿಸ್ತರಿತ ಲಾಕ್‌ಡೌನ್ ಪರಿಣಾಮ ಭಾರೀ ನಷ್ಟ ಅನುಭವಿಸುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಕೋವಿಡ್ ಹೆಚ್ಚಳವಾದ ನಂತರ ದೇಶದ ಪ್ರಮುಖ ಆಟೋ ಕಂಪನಿಗಳು ಕಳೆದ 15 ದಿನದಿಂದಲೇ ವಾಹನ ಉತ್ಪಾದನೆಯನ್ನು ಬಂದ್ ಮಾಡಿದ್ದು, ಕೋವಿಡ್ ತುಸು ತಗ್ಗಿರುವುದರಿಂದ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಪ್ರಮುಖ ವಾಹನ ಕಂಪನಿಗಳು ಹೊಸ ಸುರಕ್ಷಾ ಕ್ರಮಗಳೊಂದಿಗೆ ಉತ್ಪಾದನೆಯನ್ನು ಹಂತ-ಹಂತವಾಗಿ ಹೆಚ್ಚಳಕ್ಕೆ ಸಿದ್ದತೆ ನಡೆಸಿವೆ.

ಹ್ಯುಂಡೈ ಕಂಪನಿಯು ಸಹ ಕೋವಿಡ್ ಪರಿಣಾಮ ಕಳೆದ ಒಂದು ವಾರದಿಂದ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಕಂಪನಿಯು ಹೊಸ ಸುರಕ್ಷಾ ಮಾರ್ಗಸೂಚಿ ಅನುಸಾರವಾಗಿ ಕಾರು ಉತ್ಪಾದನೆಯನ್ನು ಪುನಾರಂಭಿಸಿದ್ದು, ಒಂದನೇ ಮತ್ತು ಎರಡನೇ ಶಿಫ್ಟ್‌ನಲ್ಲಿ ಮಾತ್ರವೇ ಉತ್ಪಾದನೆ ಕೈಗೊಳ್ಳುತ್ತಿದೆ.

ನೈಟ್ ಶಿಫ್ಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಹ್ಯುಂಡೈ ಕಂಪನಿಯು ಮೊದಲ ಎರಡು ಶಿಫ್ಟ್‌ಗಳಲ್ಲೂ ಕೂಡಾ ಕನಿಷ್ಠ ಉದ್ಯೋಗಿಗಳೊಂದಿಗೆ ಉತ್ಪಾದನೆ ಕೈಗೊಳ್ಳುತ್ತಿದ್ದು, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದೆ.

ಇನ್ನು ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕೂಡಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ವೈರಸ್ ಹರಡುವಿಕೆ ತೀವ್ರವಾಗಿರುವುದರಿಂದ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ವಿವಿಧ ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಆಟೋ ಮೊಬೈಲ್ ಕಂಪನಿಗಳು ಸಹ ಸಾಕಷ್ಟು ಸಹಕಾರ ನೀಡುತ್ತಿದೆ.
MOST READ: ತಾಯಿಯ ಸಾವಿನ ಸುದ್ದಿ ಕೇಳಿಯೂ ಕರ್ತವ್ಯ ಮುಂದುವರೆಸಿದ ಆಂಬ್ಯುಲೆನ್ಸ್ ಚಾಲಕ

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಹ್ಯುಂಡೈ ಮೋಟಾರ್ಸ್ ಕೂಡಾ ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡಿದೆ.

ಕಳೆದ ವರ್ಷ ಕೋವಿಡ್ ಹೆಚ್ಚಳವಾಗಿದ್ದ ಸಂದರ್ಭದಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ಸುಮಾರು ರೂ. 15 ಕೋಟಿ ಆರ್ಥಿಕ ನೆರವು ನೀಡಿದ್ದ ಹ್ಯುಂಡೈ ಕಂಪನಿಯು ಇದೀಗ 2ನೇ ಅಲೆಯ ಸಂದರ್ಭದಲ್ಲೂ ವಿವಿಧ ರೀತಿಯ ಸಹಕಾರ ನೀಡುತ್ತಿದ್ದು, ಆಕ್ಸಿಜನ್ ಉತ್ಪಾದನೆಗೆ ಸಹಕರಿಸಿರುವುದಲ್ಲದೆ ತಮಿಳುನಾಡು ಸರ್ಕಾರಕ್ಕೆ ರೂ.5 ಕೋಟಿ ದೇಣಿಗೆ ನೀಡಿದೆ.
MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಹಾಗೆಯೇ ವೈದ್ಯಕೀಯ ಸೇವೆಗಳನ್ನು ಸರಳಗೊಳಿಸಲು ಆರೋಗ್ಯ ಕೇಂದ್ರಗಳಿಗೆ ವೆಂಟಿಲೇಟರ್ ಮತ್ತು ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಸಹ ದೇಣಿಗೆ ನೀಡಲಾಗುತ್ತಿದ್ದು, ನಿನ್ನೆಯಷ್ಟೇ ಶ್ರೀಪೆರಂಬೂರು ಜಿಲ್ಲಾಸ್ಪತ್ರೆಗಾಗಿ 50 ಆಕ್ಸಿಜನ್ ಕಾನ್ಸನ್ಟ್ರೇಟರ್ ವಿತರಣೆ ಮಾಡಿದೆ.


Click it and Unblock the Notifications