ದ್ವಿಚಕ್ರ ವಾಹನಗಳಿಗಾಗಿ ಪೆಟ್ರೋಲ್ ಖರೀದಿ ಮೇಲೆ ಪ್ರತಿ ಲೀಟರ್‌ಗೆ ರೂ.25 ಸಬ್ಸಡಿ ಘೋಷಣೆ
ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ತತ್ತರಿಸಿರುವ ಜನತೆಗೆ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೊರೆನ್ ಪೆಟ್ರೋಲ್ (Petrol) ಬೆಲೆಯಲ್ಲಿ ಭಾರೀ ಇಳಿಕೆ ಮಾಡಲಾಗುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.

ಕಳೆದ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಆಮದು ಸುಂಕವನ್ನು ರೂ. 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ರೂ. 10 ತಗ್ಗಿಸುವ ಮೂಲಕ ದೇಶದ ಜನತೆಗೆ ಸಿಹಿಸುದ್ದಿ ನೀಡಿತ್ತು. ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಕರ್ನಾಟಕ ಸೇರಿದಂತೆ ಪ್ರಮುಖ ಬಿಜೆಪಿ ಆಡಳಿತವಿರುವ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಾಕಷ್ಟು ಇಳಿಕೆ ಮಾಡಿ ಜನತೆಗೆ ಸಿಹಿ ನೀಡಿದ್ದವು.

ಕೇಂದ್ರ ಸರ್ಕಾರದ ಸಲಹೆ ನಂತರವೂ ಕೆಲವು ಬಿಜೆಪಿಯೇತರ ಸರ್ಕಾರಗಳು ಇಂಧನಗಳ ಬೆಲೆ ಇಳಿಕೆಗೆ ಹಿಂದೇಟು ಹಾಕಿದ್ದವು. ಇಂಧನಗಳ ಬೆಲೆ ಇಳಿಕೆಗೆ ಹೀಂದೇಟು ಹಾಕಿದ್ದ ಪ್ರಮುಖ ರಾಜ್ಯಗಳಲ್ಲಿ ಜಾರ್ಖಂಡ್‌ವು ಕೂಡಾ ಒಂದಾಗಿದ್ದು, ಆದರೆ ಇದೀಗ ಜಾರ್ಖಂಡ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಮನವಿ ಮೇರೆಗೆ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಇಳಿಕೆಗೆ ಮುಂದಾಗಿದೆ.

ಜಾರ್ಖಂಡ್ ಸರ್ಕಾರವು ತನ್ನ ರಾಜ್ಯದ ಜನತೆಗೆ ಸಬ್ಸಡಿ ದರದಲ್ಲಿ ಪೆಟ್ರೋಲ್ ಒದಗಿಸುವ ಉದ್ದೇಶದೊಂದಿಗೆ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 25 ಸಬ್ಸಡಿ ಘೋಷಣೆ ಮಾಡಿದೆ.

ಬಡ ಮತ್ತು ಮಧ್ಯಮ ವರ್ಗದ ಪಡಿತರ ಚೀಟಿದಾರರಿಗೆ ಈ ಸಬ್ಸಿಡಿ ಯೋಜನೆಯು ಸಾಕಷ್ಟು ಸಹಕಾರಿಯಾಗಿದ್ದು, ಸಬ್ಸಿಡಿಯನ್ನು ನೇರವಾಗಿ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಗರಿಷ್ಠ 10 ಲೀಟರ್ ಪೆಟ್ರೋಲ್ ಖರೀದಿಯ ಮೇಲೆ ಈ ಸಬ್ಸಿಡಿ ಅನ್ವಯವಾಗಲಿದ್ದು, ಹೊಸ ಸಬ್ಸಡಿ ಯೋಜನೆಯು ಜನವರಿ 26, 2022ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ವ್ಯಾಟ್ ಕಡಿತಗೊಳಿಸುವಂತೆ ಜಾರ್ಖಂಡ್ ಸರ್ಕಾರಕ್ಕೆ ಅಲ್ಲಿನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕೆಲವು ತಿಂಗಳಿನಿಂದ ಮನವಿ ಸಲ್ಲಿಸಿತ್ತು. ಆದರೆ ಆರಂಭದಲ್ಲಿ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಮನವಿಯನ್ನು ತಿರಸ್ಕಾರ ಮಾಡಿದ್ದ ಜಾರ್ಖಂಡ್ ಸರ್ಕಾರವು ಇದೀಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡನೇ ವರ್ಷದ ವಿಶೇಷವಾಗಿ ಇಂಧನಗಳ ಖರೀದಿಗೆ ಸಬ್ಸಡಿ ಘೋಷಣೆ ಮಾಡಿದೆ.

ನೆರೆ ರಾಜ್ಯಗಳಿಂತಲೂ ಜಾರ್ಖಂಡ್‌ದಲ್ಲಿ ಇಂಧನ ಬೆಲೆ ಹೆಚ್ಚಿರುವುದರಿಂದ ಪಕ್ಕದ ರಾಜ್ಯಗಳಲ್ಲಿ ಪೆಟ್ರೋಲ್ ಮಾರಾಟವು ಹೆಚ್ಚಿದ್ದು, ಇದು ಜಾರ್ಖಂಡ ರಾಜ್ಯದಲ್ಲಿನ ಪೆಟ್ರೋಲ್ ಬಂಕ್ ಗಳ ಮಾಲೀಕರಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿನ ಇಂಧನ ಬೆಲೆಯನ್ನು ತಗ್ಗಿಸಿ ಇಂಧನ ಮಾರಾಟವನ್ನು ಯಥಾಸ್ಥಿತಿ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಯ ಸಮರದಿಂದಾಗಿ ದುಬಾರಿಯಾಗುತ್ತಿರುವ ಇಂಧನ ಬೆಲೆಯನ್ನು ನಿಯಂತ್ರಿಸಲು ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹೆಚ್ಚಿಸುತ್ತಿದೆ.

2023ರ ವೇಳೆಗೆ ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣವನ್ನು ಶೇ. 20ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆಗೆ ಕಡಿವಾಣ ಹಾಕಲು ಎಥೆನಾಲ್ ಮಿಶ್ರಣ ಪ್ರಮಾಣವನ್ನು ನಿಗದಿತ ಅವಧಿಯೊಳಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರಸಕ್ತ ವರ್ಷದ ಎಥೆನಾಲ್ ಪೂರೈಕೆಯಲ್ಲಿ ಭಾರತ ಸರ್ಕಾರವು ಶೇಕಡಾ 10ರಷ್ಟು ಸಂಯೋಜಿತ ಎಥೆನಾಲ್ ಪೆಟ್ರೋಲ್ ಪೂರೈಕೆ ಮಾಡುವ ಗುರಿ ಹೊಂದಿದ್ದು, ಸಂಯೋಜಿತ ಇಂಧನಕ್ಕಾಗಿ ಕನಿಷ್ಠ 4 ಬಿಲಿಯನ್ ಲೀಟರ್ ಎಥೆನಾಲ್ ಅಗತ್ಯವಿದೆ.

ಸಾಮಾನ್ಯವಾಗಿ ಎಥೆನಾಲ್ ತೈಲಕ್ಕೆ ಬೃಹತ್ ಕೈಗಾರಿಕೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚುವರಿ ಸಕ್ಕರೆ ಉತ್ಪಾದನೆಯಿಂದಾಗಿ ನಷ್ಟವಾಗುವ ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳನ್ನು ಎಥೆನಾಲ್ ಆಗಿ ಪರಿವರ್ತಿಸಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿಯೇ ಸುಮಾರು 50 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ನಿತ್ಯ ಈ ಕಾರ್ಖಾನೆಗಳ ಮೂಲಕ ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಎಥೆನಾಲ್‌ನ್ನು ಉತ್ಪಾದಿಸಿ 400 ಮಿಲಿಯನ್ ಲೀಟರ್ ಎಥೆನಾಲ್ ಸಂಗ್ರಹಿಸುವ ಸಿದ್ದತೆ ನಡೆದಿದೆ.

ಪ್ರಸ್ತುತ ಕರ್ನಾಟಕ ಒಂದರಲ್ಲೇ 30-35 ಮಿಲಿಯನ್ ಲೀಟರ್(ಶೇ.5)ರಷ್ಟು ಎಥೆನಾಲ್‌ನ್ನು ಮಾತ್ರ ಪೆಟ್ರೋಲ್ ಮಿಶ್ರಣಕ್ಕೆ ಬಳಕೆಯಾಗುತ್ತಿದ್ದು, ಉಳಿದಂತೆ ಉತ್ಪಾದನೆಯು ನೆರೆ ರಾಜ್ಯಗಳಲ್ಲಿನ ತೈಲ ಮಿಶ್ರಣಕ್ಕೆ ಉಪಯೋಗವಾಗುತ್ತಿದೆ. ಶರ್ಕರಾಂಶವಿರುವ ಸಸ್ಯಗಳು, ಕೃಷಿ ತ್ಯಾಜ್ಯಗಳು, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯಗಳು, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳು, ಗೇರು ಹಣ್ಣು ಇತ್ಯಾದಿಗಳಿಂದ ಜೈವಿಕ ಎಥೆನಾಲ್ ಉತ್ಪಾದಿಸಲು ಸಾಧ್ಯವಿದ್ದು, ವಿವಿಧ ರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಮೂಲಕ ಅಗತ್ಯವಿರುವ 4 ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಈಗಾಗಲೇ ತಜ್ಞರು ದೃಡಪಡಿಸಿದ್ದಾರೆ. ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ರೈತರಿಗೆ ಸಹ ಪ್ರಯೋಜನವಾಗಲಿದೆ ಎಂಬುದು ಗಮನಾರ್ಹವಾಗಿದ್ದು, ಎಥೆನಾಲ್ ಜೊತೆಗೆ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನಗಳಾದ ಸಿಎನ್‌ಜಿ ಹಾಗೂ ಎಲ್‌ಎನ್‌ಜಿ ಬಳಕೆಯನ್ನು ಸಹ ಉತ್ತೇಜಿಸುತ್ತಿದೆ.

ಇವುಗಳ ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಧಾನವಾಗಿ ಹೆಚ್ಚಾಗುತ್ತಿದೆ. ಕಚ್ಚಾ ತೈಲ ಆಮದು ಹಾಗೂ ವಾಯುಮಾಲಿನ್ಯ ಕಡಿತಗೊಳಿಸಲು ಎಲೆಕ್ಟ್ರಿಕ್ ವಾಹನಗಳು ನೆರವಾಗಲಿವೆ. ಕೇಂದ್ರ ಸರ್ಕಾರ ಮಾತ್ರವಲ್ಲದೇ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.


Click it and Unblock the Notifications








