2040ರ ವೇಳೆಗೆ ಸಂಪೂರ್ಣವಾಗಿ ಇವಿ ಕಾರುಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಘೋಷಿಸಿದ ಕಿಯಾ
ಹೆಚ್ಚುತ್ತಿರುವ ಮಾಲಿನ್ಯ ತಡೆ ಮತ್ತು ಇಂಧನಗಳ ಮೇಲಿನ ಅವಲಂಬನೆ ತಗ್ಗಿಸಲು ವಿವಿಧ ರಾಷ್ಟ್ರಗಳು 2030ರಿಂದ ಹಂತ-ಹಂತವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ಹೊಸ ನಿರ್ಣಯಗಳಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

2020ರಲ್ಲೇ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಡೀಸೆಲ್ ಕಾರುಗಳ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದೆ.

ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧ ವಿಧಿಸುತ್ತಿರುವ ಯುರೋಪ್ ಒಕ್ಕೂಟವು ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಡೀಸೆಲ್ ಜೊತೆಗೆ ಪೆಟ್ರೋಲ್ ವಾಹನಗಳ ಬಳಕೆಯನ್ನು ನಿರ್ಬಂಧಿಸುವತ್ತ ಹಲವಾರು ಹೊಸ ನೀತಿಗಳನ್ನು ಜಾರಿಗೆ ತರಲಾಗುತ್ತಿದ್ದು, ಇವಿ ವಾಹನಗಳ ಅಭಿವೃದ್ದಿ ಕುರಿತಂತೆ ಕಿಯಾ ಕಂಪನಿಯು ಕೂಡಾ ಹೊಸ ನಿರ್ಣಯ ಕೈಗೊಂಡಿದೆ.

ಜಗತ್ತಿನ ಎಂಟನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿಯು ಕೂಡಾ 2040ರ ವೇಳೆಗೆ ಸಂಪೂರ್ಣವಾಗಿ ಇವಿ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದು, ಹೊಸ ಗುರಿಸಾಧನೆಗಾಗಿ ಈಗಿನಿಂದಲೇ ಹೊಸ ಯೋಜನೆಗಳತ್ತ ಗಮನಹರಿಸಿದೆ.

2025ರ ವೇಳೆ ವಿವಿಧ ರಾಷ್ಟ್ರಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಭಾರತದಲ್ಲೂ ಕಿಯಾ ಕಂಪನಿಯು ವಿವಿಧ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಸೊಲ್, ನಿರೋ ಮತ್ತು ಇವಿ6 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಸೀಮಿತ ಮಾರುಕಟ್ಟೆಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಪ್ರಸ್ತುತ ಇವಿ ಮಾದರಿಗಳು ಶೀಘ್ರದಲ್ಲೇ ವಿವಿಧ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿವೆ.

ಚಾರ್ಜಿಂಗ್ ಸೌಲಭ್ಯಗಳ ಆಧಾರದ ಮೇಲೆ ಇವಿ ವಾಹನ ಮಾರಾಟವನ್ನು ವಿಸ್ತರಿಸುತ್ತಿರುವ ಕಾರು ಕಂಪನಿಗಳು ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೆ ಎದುರು ನೋಡುತ್ತಿದ್ದು, 2030ರ ವೇಳೆಗೆ ಭಾರತದಲ್ಲಿ ಸುಮಾರು ಶೇ.60 ರಷ್ಟು ಇವಿ ಮಾರಾಟವು ಹೆಚ್ಚಳವಾಗುವ ನೀರಿಕ್ಷೆಯಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಹೊಸ ಯೋಜನೆಗಳ ಪರಿಣಾಮ ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬರುತ್ತಿದೆ.

ಕಿಯಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನಿರೋ ಎಲೆಕ್ಟ್ರಿಕ್ ಮತ್ತು ಸೊಲ್ ಎಲೆಕ್ಟ್ರಿಕ್ ಈಗಾಗಲೇ ಚೀನಾ, ಕೊರಿಯಾ ಮತ್ತು ಯುರೋಪಿನ ಪ್ರಮುಖ ಮಾರಾಟಗೊಳಿಸುತ್ತಿದ್ದು, ಭಾರತದಲ್ಲೂ ಹೊಸ ಕಾರು ಬಿಡುಗಡೆಯಾಗುತ್ತಿರುವುದು ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಹೊಸ ನಿರೋ ಕಾರು ಪ್ರತಿ ಚಾರ್ಜ್‌ಗೆ 450 ಕಿ.ಮೀ ಮೈಲೇಜ್‌ನೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಕೇವಲ 90 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಈ ಕಾರಿನಲ್ಲಿದೆ.

ಹೊಸ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಿಂದಾಗಿ ನಿರೋ ಇವಿ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಭಾರತೀಯ ಮಾರುಕಟ್ಟೆಗಾಗಿ ಕೆಲವು ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ.

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗಾಗಿ ಹ್ಯುಂಡೈ ಜೊತೆಗೂಡಿರುವ ಕಿಯಾ ಕಂಪನಿಯು ಸ್ವತಂತ್ರವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡಲಿದ್ದರೂ, ಕೆಲವು ತಂತ್ರಜ್ಞಾನಗಳನ್ನು ಎರವಲು ಪಡೆದುಕೊಳ್ಳಲಿವೆ.

ಕಿಯಾ ಕಂಪನಿಯು ಹೊಸ ನಿರೋ ಕಾರು ಬಿಡುಗಡೆಗೂ ಮುನ್ನ ಮತ್ತೊಂದು ಬಹುನೀರಿಕ್ಷಿತ ಸೊಲ್ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಹೊಸ ವೈಶಿಷ್ಟ್ಯತೆಯುಳ್ಳ ಸೊಲ್ ಇವಿ 2022ರ ಮಧ್ಯಂತರದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಅಭಿವೃದ್ದಿಗೊಂಡಿರುವ ಇವಿ6 ಕ್ರಾಸ್ ಓವರ್ ಎಸ್‌ಯುವಿ ಮಾದರಿಯು ಇ-ಜಿಎಂಪಿ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದ್ದು, 576-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಹೊಸ ಕಾರು 400ವಿ ಮತ್ತು 800ವಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿದೆ.

ಸೊಲ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮಾದರಿಯು ರೂ. 12 ಲಕ್ಷದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿ ನಿರೊ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ರೂ.22 ಲಕ್ಷದಿಂದ ರೂ.27 ಲಕ್ಷ ಬೆಲೆ ಅಂತರದಲ್ಲಿ ಮತ್ತು ಇವಿ6 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಐಷಾರಾಮಿ ಸೌಲಭ್ಯಗಳೊಂದಿಗೆ ರೂ. 35 ಲಕ್ಷದಿಂದ ರೂ. 40 ಲಕ್ಷ ಬೆಲೆ ಅಂತದರಲ್ಲಿ ಮಾರಾಟಗೊಳ್ಳಬಹುದಾಗಿದೆ.


Click it and Unblock the Notifications








