ಹೊಸ ಕಾರುಗಳೊಂದಿಗೆ ಶೀಘ್ರದಲ್ಲೇ ಮತ್ತಷ್ಟು ಮಾರಾಟ ಮಳಿಗೆಗಳನ್ನು ತೆರೆಯಲಿದೆ ಕಿಯಾ ಇಂಡಿಯಾ
ದಕ್ಷಿಣ ಕೊರಿಯಾ ಕಿಯಾ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಮೂಲಕ ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳೊಂದಿಗೆ ಪ್ರತಿಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

2019ರಲ್ಲಿ ಭಾರತದಲ್ಲಿ ತನ್ನ ಮೊದಲ ಕಾರು ಮಾದರಿಯನ್ನ ಬಿಡುಗಡೆ ಮಾಡಿದ ನಂತರ ಕಿಯಾ ಕಂಪನಿಯು ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಮೊದಲ ಕಾರು ಮಾದರಿಯಾದ ಸೆಲ್ಟೊಸ್ ಎಸ್‌ಯುವಿ, ಎರಡನೇ ಕಾರು ಮಾದರಿಯಾಗಿ ಕಾರ್ನಿವಾಲ್ ಎಂಪಿವಿ ಮತ್ತು ಮೂರನೇ ಕಾರು ಮಾದರಿಯಾಗಿ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಿತ್ತು.

ಕಿಯಾ ಕಂಪನಿಯು ಕಾರು ಮಾರಾಟ ಆರಂಭದಲ್ಲಿ ದಿನಗಳಲ್ಲಿ ಕೆಲವೇ ಕೆಲವು ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿತ್ತು. ಇದುವರೆಗೆ ಕಂಪನಿಯು ವಿವಿಧ ಹಂತದ ಹೂಡಿಕೆಯೊಂದಿಗೆ ಸುಮಾರು 100 ನಗರಗಳಲ್ಲಿ 180 ಕಾರು ಮಾರಟ ಮಳಿಗೆಗಳನ್ನು ತೆರೆದಿದೆ.

ಪ್ರೀಮಿಯಂ ಕಾರುಗಳ ಮಾರಾಟ ಹೆಚ್ಚುತ್ತಿರುವುದರಿಂದ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದ್ದು, 2022ರ ವೇಳೆಗೆ ಕಂಪನಿಯು 225 ಮಾರಾಟ ಮಳಿಗೆಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದು, ಕೇವಲ ಮಹಾನಗರಗಳಲ್ಲಿ ಮಾತ್ರವಲ್ಲ ಟೈರ್ 1 ಮತ್ತು ಟೈರ್ 2 ನಗರಗಳಲ್ಲೂ ಹೆಚ್ಚಿನ ಮಾರಾಟ ಮಳಿಗೆಗಳನ್ನು ವಿಸ್ತರಿಸುವುದಾಗಿ ಹೇಳಿಕೊಂಡಿದೆ.

ಕಿಯಾ ಕಂಪನಿಯ ಕಾರು ಮಾರಾಟ ಆರಂಭಿಸಿದ ನಂತರ ಇದುವರೆಗೆ ಭಾರತದಲ್ಲಿ 4 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದು, ಹೊಸ ಮಾರಾಟ ಮಳಿಗೆಗಳನ್ನು ಹೆಚ್ಚಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕಿಯಾ ಕಂಪನಿಯು ಭಾರತದಲ್ಲಿ ಸುಮಾರು ರೂ. 8 ಸಾವಿರ ಕೋಟಿ ಹೂಡಿಕೆಯೊಂದಿಗೆ ಕಾರು ಉತ್ಪಾದನೆಯನ್ನು ಆರಂಭಿಸಿದ್ದು, ವಾರ್ಷಿಕವಾಗಿ ಮೂರು ಲಕ್ಷ ಕಾರುಗಳ ಉತ್ಪಾದನಾ ಸಾಮರ್ಥ್ಯದ ಉತ್ಪಾದನಾ ಘಟಕವನ್ನು ತೆರೆದಿದೆ.

ಸದ್ಯ ಕಿಯಾ ಕಂಪನಿಯು ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಮಾತ್ರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮತ್ತಷ್ಟು ಬೇಡಿಕೆ ತಂದುಕೊಡಲಿವೆ.

ಕಿಯಾ ಕಂಪನಿಯು ಸದ್ಯ ಸೆಲ್ಟೊಸ್, ಸೊನೆಟ್ ಮತ್ತು ಕಾರ್ನಿವಾಲ್ ಕಾರುಗಳೊಂದಿಗೆ ಕಾರು ಮಾರಾಟದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಿರುವ ಕಾರೆನ್ಸ್ ಕಾರು ಇನ್ನಷ್ಟು ಬೇಡಿಕೆ ತಂದುಕೊಡಲಿದೆ.

ಹೊಸ ಕಾರೆನ್ಸ್ ಎಸ್‌ಯುವಿಯ ಉತ್ಪಾದನಾ ಮಾದರಿಯನ್ನು ಸದ್ಯ ಅನಾವರಣಗೊಳಿಸಿ ಬುಕ್ಕಿಂಗ್ ಆರಂಭಿಸಿರುವ ಕಿಯಾ ಇಂಡಿಯಾ ಕಂಪನಿಯು 2022ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅಧಿಕೃತವಾಗಿ ಮಾರಾಟ ಆರಂಭಿಸಲಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಮೂರು ಸಾಲಿನ ಆಸನ ಸೌಲಭ್ಯ ಹೊಂದಿರುವ ಮಧ್ಯಮ ಕ್ರಮಾಂಕದ ಕಾರುಗಳಿಂತಲೂ ಉತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಕಾರೆನ್ಸ್ ಕಾರು ಮಾದರಿಯು ಎಂಪಿವಿ ಕಾರು ಮಾದರಿಗಳಿಗೂ ಪೈಪೋಟಿ ನೀಡಲಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಗಳಲ್ಲಿಯೇ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್ ಮತ್ತು ಟಾಟಾ ಸಫಾರಿ ಕಾರು ಮಾದರಿಗಳಿಗೆ ಇದು ನೇರ ಪೈಪೋಟಿಯಾಗಲಿದ್ದು, ಬೆಲೆ ಮತ್ತು ಫೀಚರ್ಸ್ ವಿಚಾರವಾಗಿ ಎಂಪಿವಿ ಆವೃತ್ತಿಯಾಗಿರುವ ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಹೊಸ ಕಾರು ಸೆಲ್ಟೊಸ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದ್ದು, ಹೊಸ ಕಾರು ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರಲಿದೆ.

ಹೊಸ ಕಾರಿನಲ್ಲಿ ಕಿಯಾ ಕಂಪನಿಯು ಸೆಲ್ಟೊಸ್ ಮಾದರಿಯಲ್ಲಿಯೇ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಹೊಸ ಕಾರನ್ನು 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

ಈ ಮೂಲಕ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 12 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಹೊಸ ಕಾರು ಆಕರ್ಷಕ ಬೆಲೆ ಮತ್ತು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಮಾರುತಿ ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವಿನ ಸ್ಥಾನವನ್ನು ತುಂಬುವ ಸಹಕಾರಿಯಾಗಿದೆ ಎನ್ನಬಹುದು.


Click it and Unblock the Notifications








