ಮಹೀಂದ್ರಾ ಫಸ್ಟ್ ಚಾಯ್ಸ್ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಭರ್ಜರಿ ಬೇಡಿಕೆ!
ಬಳಕೆ ಮಾಡಿದ ಕಾರುಗಳ ಖರೀದಿ ಮತ್ತು ಮರು ಮಾರಾಟ ಪ್ರಕ್ರಿಯೆಯಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಫಸ್ಟಾ ಚಾಯ್ಸ್ ಕಂಪನಿಯು ಕಳೆದ ಒಂದೇ ವರ್ಷದಲ್ಲಿ ಶೇ. 40 ಕ್ಕಿಂತಲೂ ಹೆಚ್ಚು ಬೇಡಿಕೆ ದಾಖಲಿಸಿದ್ದು, ಸೆಕೆಂಡ್ ಹ್ಯಾಂಡ್ ವಾಹನ ಉದ್ಯಮ ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ.

ಕೋವಿಡ್ ಪರಿಣಾಮ ಆರ್ಥಿಕ ಹಿಂಜರಿತ ಮತ್ತು ಹೊಸ ವಾಹನ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವ ಹಿನ್ನಲೆ ಹೊಸ ವಾಹನಗಳ ನಿರ್ವಹಣೆಯು ಸಾಕಷ್ಟು ಹೊರೆಯಾಗಿ ಪರಿಣಮಿಸುತ್ತಿದ್ದು, ಮಧ್ಯಮ ಗಾತ್ರದ ಕಾರು ಖರೀದಿದಾರರು ಹೊಸ ವಾಹನಗಳಿಂತಲೂ ಬಳಕೆ ಮಾಡಿದ ವಾಹನಗಳ ಖರೀದಿಯತ್ತ ಆಸಕ್ತಿ ತೋರುತ್ತಿದ್ದಾರೆ.

ಆಟೋ ಉದ್ಯಮವು ಸದ್ಯ ಹಲವಾರು ಕಾರಣಗಳಿಂದ ಮಂದಗತಿಯಲ್ಲಿ ಸಾಗಿದ್ದು, ಹೊಸ ವಾಹನ ಖರೀದಿ ಯೋಜನೆಯಲ್ಲಿದ್ದ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ.

ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಉದ್ಯಮವು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳವಣಿಗೆ ಕಂಡಿದ್ದು, ಇದು ಮುಂದಿನ ಕೆಲ ವರ್ಷಗಳಲ್ಲಿ ಬಹುದೊಡ್ಡ ಉದ್ಯಮವಾಗಿ ಮಾರ್ಪಡಲಿದೆ ಎನ್ನಲಾಗಿದೆ.

ಹೀಗಾಗಿ ಸೆಕೆಂಡ್ ಹ್ಯಾಂಡ್ ವಾಹನ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಮಹೀಂದ್ರಾ ಕಂಪನಿಯು ಮಹೀಂದ್ರಾ ಫಸ್ಟ್ ಚಾಯ್ಸ್ ಪ್ಲ್ಯಾಟ್‌ಫಾರ್ಮ್ ಭಾರೀ ಪ್ರಮಾಣದ ವಹಿವಾಟು ನಡೆಸುತ್ತಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ 100 ಇದ್ದ ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳು ಇಂದು 1200ಕ್ಕೆ ತಲುಪಿದೆ.

2021ರ ಅಂತ್ಯಕ್ಕೆ ಕಂಪನಿಯು ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳನ್ನು 1200ರಿಂದ 1500ಕ್ಕೆ ಹೆಚ್ಚಿಸುವ ಗುರಿಹೊಂದಿದ್ದು, ಮಾಹಾನಗರಗಳಿಂತಲೂ ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ.

ದೀಪಾವಳಿ ಹಿನ್ನಲೆಯಲ್ಲಿಯೇ ಕಳೆದ ಒಂದು ವಾರದಿಂದ ಮಹೀಂದ್ರಾ ಫಸ್ಟ್ ಚಾಯ್ಸ್ ಮಾರಾಟ ಮಳಿಗೆಗಳ ಮೂಲಕವೇ ಸುಮಾರು 3 ಸಾವಿರ ಬಳಕೆ ಮಾಡಿದ ಕಾರುಗಳು ಮಾರಾಟಗೊಂಡಿದ್ದು, ಇದು ಈ ವಾರದ ಅಂತ್ಯಕ್ಕೆ 6 ಸಾವಿರ ಯುನಿಟ್‌ಗಳಿಗೆ ಹೆಚ್ಚಳವಾಗುವ ನೀರಿಕ್ಷೆಯಿದೆ.

ಮೆಟ್ರೊ ನಗರಗಳಿಂತಲೂ ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಪ್ರಮಾಣವು ದ್ವಿಗುಣಗೊಳ್ಳುತ್ತಿದ್ದು, ಹೊಸ ಎಂಟ್ರಿ ಲೆವಲ್ ಕಾರಿನ ಬೆಲೆಯಲ್ಲಿಯೇ ಬಳಕೆ ಮಾಡಿದ ಒಂದು ಉತ್ತಮ ಕಾರನ್ನೇ ಖರೀದಿ ಮಾಡಬಹುದೆಂಬ ಅಭಿಪ್ರಾಯಗಳು ಹೆಚ್ಚುತ್ತಿವೆ.

ಹೊಸ ಕಾರು ಮಾದರಿ ಅಲ್ಲದಿದ್ದರೂ ಕಾರು ಮಾಲೀಕತ್ವ ಪಡೆದುಕೊಳ್ಳುವ ಬಯಸುವ ಗ್ರಾಹಕರು ಸೆಕೆಂಡ್ ಹ್ಯಾಂಡ್ ಮಾದರಿಗಳ ಖರೀದಿ ಆದ್ಯತೆ ನೀಡುತ್ತಿದ್ದು, ಮಾರುಕಟ್ಟೆ ಅಧ್ಯಯನದೊಂದಿಗೆ ಮಹೀಂದ್ರಾ ಫಸ್ಟ್ ಚಾಯ್ಸ್ ಕಂಪನಿಯು ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ.

ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟವನ್ನು ವ್ಯವಸ್ಥಿತವಾಗಿ ಮಾರಾಟಗೊಳಿಸುವ ಗುರಿ ಯೋಜನೆ ಹೊಂದಿದೆ.

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಮೋಸ ವ್ಯವಹಾರಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಈ ನಿಟ್ಟಿನಲ್ಲಿ ಫಸ್ಟ್ ಚಾಯ್ಸ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿರುವ ಮಹೀಂದ್ರಾ ಕಂಪನಿಯು ಮುಂದಿನ 2 ವರ್ಷಗಳಲ್ಲಿ ಭಾರೀ ಪ್ರಮಾಣದ ವಹಿವಾಟು ನಡೆಸುವ ಯೋಜನೆಯಲ್ಲಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಹೊಸ ವಾಹನಗಳ ಮಾದರಿಯಲ್ಲೇ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ವಾರಂಟಿ ಮತ್ತು ಮಾರಾಟ ನಂತರ ಗ್ರಾಹಕರ ಸೇವೆಗಳನ್ನು ಖಾತ್ರಿಪಡಿಸುತ್ತಿರುವುದು ಮಹೀಂದ್ರಾ ಚಾಯ್ಸ್ ಕಾರುಗಳಿಗೆ ಉತ್ತಮ ಬೇಡಿಕೆ ದಾಖಲಾಗುತ್ತಿದೆ.

ಸೆಕೆಂಡ್ ಹ್ಯಾಂಡ್ ವಾಹನ ಉದ್ಯಮದಲ್ಲಿ ತೀವ್ರ ಬೆಳವಣಿಗೆ ವಿವಿಧ ಕಾರಣಗಳಿದ್ದು, ಕೋವಿಡ್ ಪರಿಣಾಮ ಸ್ವಂತ ವಾಹನಗಳ ಬಳಕೆಗೆ ಸಾರ್ವಜನಿಕರ ಆಸಕ್ತಿ ಒಂದಡೆಯಾದರೆ ಹೊಸ ಮಾದರಿಯ ವಾಹನಗಳ ನಿರ್ವಹಣಾ ವೆಚ್ಚವು ದಿನದಿಂದ ಹೆಚ್ಚುತ್ತಿರುವುದು ಸಹ ಬಜೆಟ್ ಬೆಲೆಯಲ್ಲಿ ದೊರೆಯಬಹುದಾದ ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಆದ್ಯತೆ ಹೆಚ್ಚುತ್ತಿದೆ.

ದುಬಾರಿ ಇಂಧನ ದರಗಳು ಮತ್ತು ಬಿಡಿಭಾಗಗಳು ದುಬಾರಿಯಾಗಿರುವುದರಿಂದ ಹೊಸ ವಾಹನಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮೊದಲ ಬಾರಿಗೆ ವಾಹನ ಖರೀದಿಸುತ್ತಿರುವ ಗ್ರಾಹಕರು ಸಹಜವಾಗಿ ಬಳಕೆ ಮಾಡಿದ ಬಜೆಟ್ ವಾಹನಗಳ ಮಾಲೀಕತ್ವಕ್ಕೆ ಆದ್ಯತೆ ನೀಡುತ್ತಿದ್ದಾರೆ.


Click it and Unblock the Notifications