ಎಕ್ಸ್‌ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್‌ಯುವಿ500
ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಎಕ್ಸ್‌ಯುವಿ500 ಕಾರು ಮಾದರಿಯನ್ನು ಎಕ್ಸ್‌ಯುವಿ700 ಮಾದರಿಯಾಗಿ ಮಾರಾಟ ಮಾಡುವ ನಿರ್ಧಾರ ಪ್ರಕಟಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯು ಎಕ್ಸ್‌ಯುವಿ700 ಬಿಡುಗಡೆ ನಂತರ ಕೆಲವು ದಿನಗಳ ಮಾರಾಟದಿಂದ ಸ್ಥಗಿತಗೊಳ್ಳಲಿದೆ.

ಪ್ರತಿಸ್ಪರ್ಧಿ ಕಾರು ಮಾದರಿಗಳಿಗಾಗಿ ಎಕ್ಸ್‌ಯುವಿ500 ಮಾದರಿಯಲ್ಲಿ ಕೆಲವು ಮಹತ್ವದ ಬದಲಾವಣೆ ತರಲು ನಿರ್ಧರಿಸಿರುವ ಮಹೀಂದ್ರಾ ಕಂಪನಿಯು ಸದ್ಯ ಬಿಡುಗಡೆಯಾಗಬೇಕಿರುವ ಎಕ್ಸ್‌ಯುವಿ500 ನ್ಯೂ ಜನರೇಷನ್ ಮಾದರಿಯನ್ನೇ ಹೊಸ ಬದಲಾವಣೆಗಳೊಂದಿಗೆ ಎಕ್ಸ್‌ಯುವಿ700 ಮಾದರಿಯಾಗಿ ಮತ್ತು ಎಕ್ಸ್‌ಯುವಿ500 ಮಾದರಿಯನ್ನು ಎಕ್ಸ್‌ಯುವಿ700 ಮಾದರಿಗಿಂತ ಕೆಳ ಸ್ಥಾನದಲ್ಲಿ ಮಾರಾಟಮಾಡಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯು 7 ಸೀಟರ್ ಸೌಲಭ್ಯವನ್ನು ಹೊಂದಿದ್ದರು ಹಿಂಬದಿ ಆಸನಗಳು ವಯಸ್ಕ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಹೀಗಾಗಿ ಎಕ್ಸ್‌ಯುವಿ700 ಮಾದರಿಯನ್ನು ವಿಸ್ತರಿತ ವೀಲ್ಹ್‌ಬೆಸ್ ಮೂಲಕ ಮೂರನೇ ಸಾಲಿನ ಆಸನವನ್ನು ಹೆಚ್ಚಿಸಿ ಅಭಿವೃದ್ದಿಗೊಳಿಸಲಾಗಿದೆ.

ಎಕ್ಸ್‌ಯುವಿ700 ಬಿಡುಗಡೆಯ ನಂತರ ಎಕ್ಸ್‌ಯುವಿ500 ಮಾದರಿಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು ಸದ್ಯ ಲಭ್ಯವಿರುವಂತಹ 7 ಸೀಟರ್ ಸೌಲಭ್ಯವನ್ನು ತೆಗೆದುಹಾಕಿ ಆರಾಮದಾಯಕ ಕ್ಯಾಬಿನ್ ರೂಂ ಹೊಂದಿರುವ 5 ಸೀಟರ್ ಮಾದರಿಯನ್ನಾಗಿ ಮರುಬಿಡುಗಡೆ ಮಾಡಲಿದೆ.

ಈ ಮೂಲಕ 5 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ500 ಮತ್ತು 7 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ700 ಮಾರಾಟ ಮಾಡಲಿದ್ದು, ಇತ್ತೀಚೆಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಈ ಬದಲಾವಣೆ ತಂದಿದೆ. ಇನ್ನು ಮಹೀಂದ್ರಾ ಕಂಪನಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ500, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ನೋಂದಣಿಯನ್ನು ಕೂಡಾ ಮಾಡಲಾಗಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಕಳೆದ ವಾರವಷ್ಟೇ ಎಕ್ಸ್‌ಯುವಿ ಸರಣಿಯಲ್ಲಿ ಹೊಸದಾಗಿ ಎಕ್ಸ್‌ಯುವಿ700 ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿಯೇ ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯು ಇದೀಗ ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಮಾದರಿಯ ಜೊತೆಗೆ ಎಕ್ಸ್‌ಯುವಿ900, ಎಕ್ಸ್‌ಯುವಿ400 ಮತ್ತು ಎಕ್ಸ್‌ಯುವಿ100 ಸೇರಿದಂತೆ ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸ್ಥಗಿತಗೊಳ್ಳಲಿರುವ ಅಲ್ಟುರಾಸ್ ಜಿ4 ಸ್ಥಾನಕ್ಕಾಗಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ900 ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಸುಮಾರು 5 ಮೀಟರ್ ಉದ್ದಳತೆಯೊಂದಿಗೆ ಫುಲ್ ಸೈಜ್ ಮಾದರಿಯಾಗಿರುವ ಎಕ್ಸ್‌ಯುವಿ900 ಮಾದರಿಯು ಫಾರ್ಚೂನರ್, ಎಂಡೀವರ್ ಮತ್ತು ಗ್ಲೊಸ್ಟರ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications