ಅಂತಾರಾಜ್ಯ ವಾಹನಗಳ ವರ್ಗಾವಣೆಗೆ BH ಸೀರಿಸ್ ನೋಂದಣಿ ಪರಿಚಯಿಸಿದ ಕೇಂದ್ರ ಸಾರಿಗೆ ಇಲಾಖೆ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶಾದ್ಯಂತ ಚಾಲ್ತಿಯಲ್ಲಿ ವಾಹನ ನೋಂದಣಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಪರಿಚಯಿಸಿದ್ದು, ಹೊಸ ಯೋಜನೆ ಅಡಿ ಅಂತಾರಾಜ್ಯ ವಾಹನಗಳ ವರ್ಗಾವಣೆಯನ್ನು ಮತ್ತಷ್ಟು ಸರಳಗೊಳಿಸಲು ಹೊಸ ಕ್ರಮ ಪ್ರಕಟಿಸಿದೆ.

ಪ್ರಸ್ತುತ ಮೋಟಾರ್ ವಾಹನಗಳ ಕಾಯ್ದೆಯಲ್ಲಿ ಯಾವುದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿ ಅಲ್ಲಿಯೇ ನೆಲೆಯೂರುವ ವಾಹನ ಮಾಲೀಕರು ನಿಗದಿತ ಅವಧಿಯ ನಂತರ ಆ ರಾಜ್ಯದ ನೋಂದಣಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಚಾಲ್ತಿಯಲ್ಲಿ ಅಂತಾರಾಜ್ಯ ವಾಹನ ವರ್ಗಾವಣೆ ಪ್ರಕ್ರಿಯೆಯು ಹಲವಾರು ಗೊಂದಲಗಳಿಂದಾಗಿ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿರುವುದಕ್ಕೆ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗಿದೆ.

ಅಂತಾರಾಜ್ಯ ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿರುವ ರಸ್ತೆ ಸಾರಿಗೆ ಸಚಿವಾಲಯವು ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 47ರ ಅಡಿಯಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಒಂದು ರಾಜ್ಯದ ವಾಹನವನ್ನು ಮತ್ತೊಂದು ರಾಜ್ಯಕ್ಕೆ ವರ್ಗಾವಣೆಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಯತ್ನಿಸಿದೆ.

ಯಾವುದೇ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಆ ವಾಹನ ಮಾಲೀಕರು ಸ್ಥಳಾಂತರಗೊಂಡ ರಾಜ್ಯದಲ್ಲಿ 12 ತಿಂಗಳ ಒಳಗಾಗಿ ಮರು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಆದರೆ ರಸ್ತೆ ಸಾರಿಗೆ ಇಲಾಖೆ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಭಾರತ್ ಸೀರಿಸ್(BH Series) ವಾಹನ ನೋಂದಣಿ ವ್ಯವಸ್ಥೆಯು ಅಂತಾರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ವಾಹನದ ನೋಂದಣಿಯನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವುದನ್ನು ಸುಲಭಗೊಳಿಸಲು ವಾಹನ ಮಾಲೀಕರಿಗೆ ಸಹಕಾರಿಯಾಗಲಿದೆ.

BH Series ನೋಂದಣಿ ಸಂಖ್ಯೆಯ ಮೂಲಕ ವಾಹನ ಮಾಲೀಕರು ಒಂದೇ ಬಾರಿಗೆ ರಸ್ತೆ ತೆರಿಗೆ ಪಾವತಿಸುವ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಸಂಚರಿಸಬಹುದಾಗಿದ್ದು, BH ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ತಡೆರಹಿತವಾಗಿ ಸಂಚರಿಸಬಹುದಾಗಿದೆ.

ಹೊಸ BH Series ನೋಂದಣಿಯನ್ನು ಮೊದಲ ಹಂತದಲ್ಲಿ ರಕ್ಷಣಾ ಸಿಬ್ಬಂದಿ ವಾಹನಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (ಪಿಎಸ್‌ಯು) ಪರಿಚಯಿಸಲಾಗಿದೆ.

ಜೊತೆಗೆ ಐದು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕಾರ್ಪೊರೇಟ್ ಕಚೇರಿಗಳನ್ನು ಹೊಂದಿರುವ ಖಾಸಗಿ ವಲಯದ ಕಂಪನಿಗಳಿಗೂ ಸಹ ಹೊಸ ನೋಂದಣಿ ಸೌಲಭ್ಯವು ಲಭ್ಯವಿರಲಿದ್ದು, ಹೊಸ ನೋಂದಣಿ ಪ್ರಕ್ರಿಯೆಯೂ ಸೆಪ್ಟೆಂಬರ್ 15ರಿಂದ ಚಾಲನೆ ಪಡೆದುಕೊಳ್ಳಲಿದೆ.

ಪ್ರಸ್ತುತ ಅಂತಾರಾಜ್ಯ ವಾಹನ ನೋಂದಣಿ ವರ್ಗಾವಣೆ ಪ್ರಕ್ರಿಯೆಯು ತುಂಬಾ ಜಟಿಲವಾಗಿದ್ದು, ಮೂಲ ರಾಜ್ಯದಿಂದ ಹೊಸ ರಾಜ್ಯದಲ್ಲಿ ಮರುನೋಂದಣಿಗೆ ಎನ್‌ಒಸಿ ಪಡೆಯುವುದು ಒಳಗೊಂಡಂತೆ ರಸ್ತೆ ತೆರಿಗೆಯನ್ನು ಮರುಪಾವತಿಸುವ ಅರ್ಜಿಯನ್ನು ಸಹ ಒಳಗೊಂಡಿದೆ.

ಈ ಹಿನ್ನಲೆ 'BH' ಸರಣಿ ಮೂಲಕ ಒಂದೇ ಬಾರಿ ನೋಂದಣಿ ಮಾಡಿದ್ದಲ್ಲಿ ದೇಶಾದ್ಯಂತ ಯಾವುದೇ ರಾಜ್ಯಗಳಿಗೆ ಮುಕ್ತವಾಗಿ ಸಂಚರಿಸಬಹುದಾಗಿದ್ದು, ಏಕರೂಪದ ನೋಂದಣಿಯನ್ನು ಪ್ರತಿ ಎರಡು ವರ್ಷಗಳಿಗೆ ಒಂದು ಬಾರಿ ನವೀಕರಿಸುವ ಸೌಲಭ್ಯ ಒಳಗೊಂಡಿದೆ.

ಹೊಸ ನೋಂದಣಿ ಪ್ರಕ್ರಿಯೆಯನ್ನು ಜಾರಿಗೊಳಿಸುವ ಮುನ್ನ ವಿವಿಧ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿರುವ ಕೇಂದ್ರ ಸಾರಿಗೆ ಇಲಾಖೆಯು BH ಸರಣಿ ಪರಿಚಯಿಸಿದ್ದು, ಕೇಂದ್ರ ಸರ್ಕಾರವು ಆರಂಭದಲ್ಲಿ ಹೊಸ ಯೋಜನೆಗೆ IN ಸರಣಿ ನೋಂದಣಿ ಸಂಖ್ಯೆ ನೀಡುವ ಬಗ್ಗೆ ಸುಳಿವು ನೀಡಿತ್ತು.

ಇದೀಗ ವಿವಿಧ ರಾಜ್ಯಗಳ ಸರ್ಕಾರದ ಅಭಿಪ್ರಾಯದ ಮೇಲೆ ಹೊಸ ಯೋಜನೆಗಾಗಿ BH ಸರಣಿ ನೋಂದಣಿ ಸಂಖ್ಯೆಯನ್ನು ಪರಿಚಯಿಸಲಾಗುತ್ತಿದ್ದು, BH ಸರಣಿ ವಾಹನಗಳನ್ನು ಅಂತಾರಾಜ್ಯ ವಾಹನಗಳೆಂದು ಸುಲಭವಾಗಿ ಗುರುತಿಸಬಹುದಾಗಿದೆ.

ಪ್ರಸ್ತುತ ಮೋಟಾರ್ ವಾಹನ ಕಾಯ್ದೆಯಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಹೊಸ ವಾಹನವನ್ನು ನೋಂದಾಯಿಸಿದ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಹೊರತುಪಡಿಸಿ ಇತರೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಗರಿಷ್ಠ 12 ತಿಂಗಳುಗಳ ಕಾಲ ಆ ವಾಹನಗಳ ಬಳಕೆ ಮಾಡಲು ಅವಕಾಶವಿದೆ.

ನಿಗದಿತ 12 ತಿಂಗಳ ಅವಧಿ ಮುಗಿಯುವ ಮುನ್ನ ಮಾಲೀಕರು ತಮ್ಮ ವಾಹನದ ಮರು ನೋಂದಣಿಯನ್ನು ಕಡ್ಡಾಯವಾಗಿ ವಾಸಲು ಇರುವ ಬಯಸುವ ರಾಜ್ಯಗಳಲ್ಲಿ ಮರುನೋಂದಣಿ ಮಾಡಿಕೊಳ್ಳಬೇಕಿದ್ದು, ಭಾರತ್ ಸಿರೀಸ್ (ಬಿಎಚ್-ಸಿರೀಸ್) ನೋಂದಣಿ ಹೊಂದಿರುವ ವಾಹನಗಳು ಮತ್ತೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆಯಿರುವುದಿಲ್ಲ.

ಹೊಸ ವ್ಯವಸ್ಥೆಯಿಂದ ರಾಜ್ಯಗಳ ಜಿಎಸ್‌ಟಿ ಪಾಲಿಗೆ ಹೊಡೆತ?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಾರಿಗೆ ತಂದಿರುವ ಹೊಸ ಮಾದರಿಯ ನೋಂದಣಿ ಪ್ರಕ್ರಿಯೆಯಿಂದ ಬರುವ ಆದಾಯದ ಹಂಚಿಯಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಮಟ್ಟದ ಜಿಎಸ್‌ಟಿ ಪಾಲು ಹೋಗಲಿದೆ ಎನ್ನುವ ಚರ್ಚೆಗಳು ಆರಂಭವಾಗಿದ್ದು, ಹೊಸ ಯೋಜನೆಗೆ ಒಪ್ಪಿಗೆ ನೀಡಿರುವ ವಿವಿಧ ರಾಜ್ಯಗಳು ಕೇಂದ್ರದೊಂದಿಗೆ ಜಿಎಸ್‌ಟಿ ಹಂಚಿಕೆ ಕುರಿತಂತೆ ಯಾವ ರೀತಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿಗಳಿಲ್ಲ.


Click it and Unblock the Notifications