ಬಿಎಸ್-6 ಗೂರ್ಖಾ ಆಫ್ ರೋಡ್ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ ಫೋರ್ಸ್ ಮೋಟಾರ್ಸ್
ಬಹುನೀರಿಕ್ಷಿತ ಫೋರ್ಸ್ ಮೋಟಾರ್ಸ್ ಕಂಪನಿಯ ಬಿಎಸ್-6 ಗೂರ್ಖಾ ಎಸ್‌ಯುವಿ ಕಾರು ಮಾದರಿಯು ಭಾರತದಲ್ಲಿ ಬಿಡುಗಡೆಗಾಗಿ ಅಂತಿಮ ಸಿದ್ದತೆ ನಡೆಸುತ್ತಿದ್ದು, ಹೊಸ ಆಫ್ ರೋಡ್ ಎಸ್‌ಯುವಿ ಕಾರಿನ ಬಿಡುಗಡೆ ಕುರಿತು ಕಂಪನಿಯು ಹೊಸ ಟೀಸರ್ ಪ್ರಕಟಿಸಿದೆ.

ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಫೋರ್ಸ್ ಗೂರ್ಖಾ ಬಿಎಸ್-6 ಆವೃತ್ತಿಯನ್ನು ಕೋವಿಡ್ ಪರಿಸ್ಥಿತಿಯಿಂದಾಗಿ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲೂ ಹೊಸ ಕಾರು ಬಿಡುಗಡೆಗೆ ಪೂರಕವಾದ ಮಾರುಕಟ್ಟೆ ಇಲ್ಲವಾದರೂ ಹೊಸ ನೀರಿಕ್ಷೆಯೊಂದಿಗೆ ಬಿಎಸ್-6 ಗೂರ್ಖಾ ಮಾದರಿಯನ್ನು ಕಂಪನಿಯು ರಸ್ತೆಗಿಳಿಸುತ್ತಿದೆ.

ಹೊಸ ಗೂರ್ಖಾ ಮಾದರಿಯನ್ನು ಜುಲೈ ಕೊನೆಯಲ್ಲಿ ಇಲ್ಲವೇ ಅಗಸ್ಟ್ ಆರಂಭದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿರುವ ಕಂಪನಿಯು ಹೊಸ ಟೀಸರ್ ಪ್ರಕಟಿಸಿದ್ದು, ಬಿಎಸ್-6 ಗೂರ್ಖಾ ಮಾದರಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ಶೀಘ್ರದಲ್ಲೇ ಎನ್ನುವ ಮೂಲಕ ಬಿಡುಗಡೆಯ ಸುಳಿವು ಕೊಟ್ಟಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಗೂರ್ಖಾ ಎಸ್‌ಯುವಿಯನ್ನು ಫೋರ್ಸ್ ಮೋಟಾರ್ಸ್ ಕಂಪನಿಯು ಉನ್ನತೀಕರಿಸಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಸುಧಾರಣೆಗೊಂಡಿದೆ.

ಬಿಎಸ್-6 ಎಮಿಷನ್ ನಿಯಮದೊಂದಿಗೆ ಉನ್ನತೀಕರಣಗೊಂಡಿರುವ ಫೋರ್ಸ್ ಗೂರ್ಖಾ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರಲಿದ್ದು, ಆಫ್ ರೋಡ್ ಕೌಶಲ್ಯತೆಗೆ ಪೂರಕವಾದ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಹೊಸ ಎಮಿಷನ್ ನಿಯಮದಿಂದಾಗಿ ಹೊಸ ಕಾರಿನ ಎಂಜಿನ್ ಆಯ್ಕೆಯಲ್ಲಿ ಮಾತ್ರವಲ್ಲದೇ ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾವಣೆ ಹೊಂದಿದ್ದು, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ನೊಂದಿಗೆ ಆಫ್ ರೋಡ್ ಪ್ರಿಯರನ್ನು ಸೆಳೆಯಲಿದೆ.

ಜೊತೆಗೆ ಕಾರಿನ ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮೇಲೆ ನೀಡಲಾಗಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್ ಗಮನಸೆಳೆಯಲಿದೆ.

ಬಲಿಷ್ಠವಾದ ಬಾಡಿ ಕ್ಲ್ಯಾಡಿಂಗ್ ಸೌಲಭ್ಯವು ಆಫ್ ರೋಡ್ ಕಾರಿನ ಪರ್ಫಾಮೆನ್ಸ್‌ಗೆ ಸಾಕಷ್ಟು ಸಹಕಾರಿಯಾಗಿದ್ದು, ಹೊಸ ಕಾರು ಹಳೆಯ ಮಾದರಿಗಿಂತಲೂ ಉತ್ತಮ ಹೊರವಿನ್ಯಾಸದೊಂದಿಗೆ ಪ್ರೀಮಿಯಂ ಮಾದರಿಯಾಗಿ ಮಿಂಚಲಿದೆ.

ಹೊಸ ಕಾರಿನಲ್ಲಿ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಮತ್ತು ವಿವಿಧ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ಇದರೊಂದಿಗೆ ಹೊಸ ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಗೂರ್ಖಾದಲ್ಲಿ ನೀಡಲಾಗಿದೆ.


Click it and Unblock the Notifications








