ಇಂಧನಗಳ ಬೆಲೆ ಏರಿಕೆಯ ನಡುವೆ ಹೊಸ ವಾಹನಗಳ ಖರೀದಿ ಮತ್ತಷ್ಟು ದುಬಾರಿ..!
ದಿನಂಪ್ರತಿ ಹೆಚ್ಚುತ್ತಿರುವ ಇಂಧಗಳ ಬೆಲೆಯಿಂದಾಗಿ ಹೊಸ ವಾಹನಗಳ ಮಾರಾಟದಲ್ಲಿ ಕುಸಿತ ಭೀತಿ ಎದುರಾಗಿರುವ ಬೆನ್ನಲ್ಲೇ ವಾಹನ ಉತ್ಪಾದನೆಯ ವೆಚ್ಚ ನಿರ್ವಹಣೆಗಾಗಿ ವಾಹನ ತಯಾರಕ ಕಂಪನಿಗಳು ಬೆಲೆ ಹೆಚ್ಚಳಕ್ಕೆ ಮುಂದಾಗಿರುವುದು ಹೊಸ ವಾಹನಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಈ ವರ್ಷದ ಆರಂಭದಲ್ಲೇ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ಶೇ.1 ರಿಂದ ಶೇ. 3 ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಹೆಚ್ಚಳವಾಗಲಿರುವ ದರ ಪಟ್ಟಿಯಲ್ಲಿ ಪ್ರಯಾಣಿಕ ಬಳಕೆಯ ಕಾರುಗಳಷ್ಟೇ ಅಲ್ಲದೆ ದ್ವಿಚಕ್ರ ವಾಹನ ಮತ್ತು ವಾಣಿಜ್ಯ ವಾಹನಗಳ ದುಬಾರಿಯಾಗಲಿದ್ದು, ಹೊಸ ದರ ಮಾರ್ಚ್ ಆರಂಭದಲ್ಲೇ ಪ್ರಕಟವಾಗುವ ಸಾಧ್ಯತೆಗಳಿವೆ.

ಉತ್ಪಾದನಾ ವೆಚ್ಚದಲ್ಲಿ ನಿರಂತರವಾಗಿ ಹೆಚ್ಚಳ ಮತ್ತು ಹೊಸ ಮಾದರಿಯ ತಾಂತ್ರಿಕ ಅಂಶಗಳ ಜೋಡಣೆಯಿಂದ ಬೆಲೆ ಏರಿಕೆ ಅನಿವಾರ್ಯ ಎಂದಿರುವ ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ದರ ಪ್ರಕಟಿಸುವ ಸಿದ್ದತೆಯಲ್ಲಿವೆ.

ಕೇಂದ್ರ ಸರ್ಕಾರದ ಬಜೆಟ್ ನಂತರ ವಾಹನ ತಯಾರಿಕೆ ಬೇಕಿರುವ ಪ್ರಮುಖ ಬಿಡಿಭಾಗಗಳು ಮತ್ತು ಸ್ಟೀಲ್ ದರದಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ಐಷಾರಾಮಿ ಕಾರುಗಳ ಬಿಡಿಭಾಗಗಳ ಆಮದು ಮೇಲೂ ಹೆಚ್ಚಿನ ಆಮದು ಸುಂಕ ವಿಧಿಸಲಾಗುತ್ತಿದೆ.

ಈ ಹಿನ್ನಲೆ ವಾಹನ ಬೆಲೆ ಹೆಚ್ಚಳಕ್ಕಾಗಿ ಈಗಾಗಲೇ ಸಿದ್ದತೆ ನಡೆಸಿರುವ ಶೀಘ್ರದಲ್ಲೇ ಹೊಸ ವಾಹನಗಳನ್ನು ಹೊಸ ದರದಲ್ಲೇ ಮಾರಾಟ ಮಾಡುವ ಸಿದ್ದತೆಯಲ್ಲಿದ್ದು, ಹೊಸ ವಾಹನ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಮತ್ತಷ್ಟು ಹೊರೆಯಾಗಿ ಪರಿಣಮಿಸಲಿದೆ. ಒಂದು ಕಡೆ ಹೆಚ್ಚುತ್ತಿರುವ ಇಂಧನ ದರಗಳು ಮತ್ತು ದುಬಾರಿ ಬೆಲೆಯ ವಾಹನಗಳ ನಿರ್ವಹಣೆಯು ಆರ್ಥಿಕ ಸಂಕಷ್ಟಕ್ಕೆ ನುಕುವ ಸಂದರ್ಭಗಳು ಎದುರಾಗುತ್ತಿದ್ದು, ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ವಾಹನ ಮರಾಟದಲ್ಲೂ ತುಸು ಕುಸಿತ ಕಂಡುಬಂದಿದೆ.

ಇದೇ ಕಾರಣಕ್ಕೆ ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳಿಂತ ಬಳಕೆ ಮಾಡಿದ ವಾಹನಗಳ ಮರು ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಸಹ ಜೋರಾಗಿದ್ದು, ಇದರ ಜೊತೆಗೆ ವಾಹನಗಳ ನಿರ್ವಹಣಾ ವೆಚ್ಚ ತಗ್ಗಿಸಲು ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.
MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ದೇಶಾದ್ಯಂತ ಇಂಧನಗಳ ಬೆಲೆ ಹೆಚ್ಚಿದ ಪರಿಣಾಮ ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರು ಗಮನಹರಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಸಬ್ಸಡಿ ಒದಗಿಸುತ್ತಿದೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಹಾಗೆಯೇ ಕೇಂದ್ರದ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೆ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ರಾಜ್ಯದ ಸರ್ಕಾರದಿಂದ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.


Click it and Unblock the Notifications