ಹಬ್ಬದ ಸಂದರ್ಭದಲ್ಲಿ ಹೊಸ ಕಾರು ಖರೀದಿಗೆ ಎದುರಾಗಿರುವ ವಿಘ್ನಗಳಿವು
ಭಾರತದಲ್ಲಿ ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಆದರೆ ಈಗಿನ ಸನ್ನಿವೇಶದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಕಾರುಗಳನ್ನು ಖರೀದಿಸುವುದು ಸರಿಯಾದ ನಿರ್ಧಾರವೇ ಎಂಬ ಪ್ರಶ್ನೆ ಗ್ರಾಹಕರಲ್ಲಿ ಮೂಡುತ್ತಿದೆ. ಈ ಪ್ರಶ್ನೆ ಮೂಡಲು ಹಲವಾರು ಕಾರಣಗಳಿವೆ. ಈ ಕಾರಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹೆಚ್ಚುತ್ತಿರುವ ಕಾರುಗಳ ಬೆಲೆ, ಹೊಸ ಕಾರುಗಳ ವಿತರಣೆ ಪಡೆಯಲು ದೀರ್ಘ ಕಾಲ ಕಾಯುವಿಕೆ, ಹೊಸ ಸ್ಕ್ರ್ಯಾಪ್ ನಿಯಮಗಳು ಹಾಗೂ ಒಂದೇ ಸಮನೆ ಏರಿಕೆಯಾಗುತ್ತಿರುವ ಇಂಧನ ಬೆಲೆಗಳಿಂದ ಗ್ರಾಹಕರು ಹೊಸ ಕಾರ್ ಅನ್ನು ಖರೀದಿಸಲು ಯೋಚಿಸುವಂತಾಗಿದೆ. ಇವುಗಳ ಜೊತೆಗೆ ಜನರು ಇಂಧನ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ.

1. ಏರುತ್ತಿರುವ ಇಂಧನ ಬೆಲೆಗಳು
ದೇಶಾದ್ಯಂತ ಪ್ರತಿ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಬಹುತೇಕ ನಗರಗಳಲ್ಲಿ ಅವುಗಳ ಬೆಲೆ ರೂ. 100ರ ಗಡಿ ದಾಟಿದೆ. ಈ ಪರಿಸ್ಥಿತಿಯಲ್ಲಿ ಪೆಟ್ರೋಲ್ ವಾಹನ ಖರೀದಿಸಿದರೆ ಇನ್ನೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಪೆಟ್ರೋಲ್ ಬೆಲೆ ಪ್ರತಿ ನಿತ್ಯ ಹೊಸ ಎತ್ತರವನ್ನು ಮುಟ್ಟುತ್ತಿದೆ. ದೇಶದ ಹಲವು ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 117 ಗಳಾಗಿದೆ.

ಮುಂಬರುವ ದಿನಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡು ಬರುವ ಸಾಧ್ಯತೆಗಳಿಲ್ಲ. ಈ ಪರಿಸ್ಥಿತಿಯಲ್ಲಿ, ಹೊಸ ಕಾರನ್ನು ಖರೀದಿಸುವುದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗಬಹುದು. ಮೊದಲೇ ಕೋವಿಡ್ 19 ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ಇದು ಮತ್ತಷ್ಟು ಸಂಕಷ್ಟವನ್ನು ತಂದೊಡ್ಡುವ ಸಾಧ್ಯತೆಗಳಿವೆ.

2. ಏರುತ್ತಿರುವ ಕಾರು ಬೆಲೆಗಳು
ದೇಶದ ಬಹುತೇಕ ಕಾರು ಕಂಪನಿಗಳು ಈ ವರ್ಷ ತಮ್ಮ ಕಾರುಗಳ ಬೆಲೆಯನ್ನು ಮೂರು ಬಾರಿ ಹೆಚ್ಚಿಸಿವೆ. ಈ ಹಬ್ಬದ ಸೀಸನ್‌ಗೆ ಮೊದಲು ಅಥವಾ ನವೆಂಬರ್‌ನಲ್ಲಿ ಕಾರುಗಳ ಬೆಲೆ ಮತ್ತೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ವಾರ್ಷಿಕವಾಗಿ ಬೆಲೆ ಏರಿಸಲಾಗಿತ್ತು. ನಂತರ ಏಪ್ರಿಲ್ ತಿಂಗಳಿನಲ್ಲಿ ಹಾಗೂ ಅದಾದ ನಂತರ ಆಗಸ್ಟ್ - ಸೆಪ್ಟೆಂಬರ್ ಅವಧಿಯಲ್ಲಿ ಬೆಲೆ ಏರಿಕೆ ಮಾಡಲಾಯಿತು. ಇದು ಸಹ ಗ್ರಾಹಕರು ಹೊಸ ಕಾರು ಖರೀದಿಸಲು ಹಿಂದೇಟು ಹಾಕುವಂತಾಗಿದೆ.

3. ದೀರ್ಘ ಕಾಯುವ ಅವಧಿ
ಪ್ರಪಂಚದಾದ್ಯಂತ ಸೆಮಿ ಕಂಡಕ್ಟರ್ ಗಳ ಕೊರತೆಯಿಂದಾಗಿ ಕಾರುಗಳ ವಿತರಣೆ ಪಡೆಯಲು ಹೆಚ್ಚು ಕಾಲ ಕಾಯಬೇಕಾಗಿದೆ. ಸೆಮಿಕಂಡಕ್ಟರ್ ಗಳ ಕೊರತೆಯು ದೇಶಿಯ ಮಾರುಕಟ್ಟೆಯಲ್ಲಿನ ಹಲವು ಕಂಪನಿಗಳ ಮೇಲೂ ಪರಿಣಾಮ ಬೀರಿದೆ. ಜನಪ್ರಿಯ ಎಸ್‌ಯುವಿಗಳ ವಿತರಣೆ ಪಡೆಯಲು 3 - 6 ತಿಂಗಳ ಕಾಯಬೇಕಾಗಿದೆ. ಹಲವು ಮಾದರಿಗಳ ವಿತರಣೆ ಪಡೆಯಲು ಒಂದು ವರ್ಷದವರೆಗೆ ಕಾಯ ಬೇಕಾಗಿದೆ.

ಸೆಮಿಕಂಡಕ್ಟರ್ ಗಳ ಕೊರತೆಯು Mahindra XUV 700, MG Aster ನಂತಹ ಹೊಸ ಮಾದರಿಗಳ ಮೇಲೂ ಪರಿಣಾಮ ಬೀರಿದೆ. ಕಂಪನಿಗಳು ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡುತ್ತಿವೆ. ಆದರೆ ಕಂಪನಿಗಳು ವಾಹನಗಳನ್ನು ಉತ್ಪಾದಿಸಿ ಕಾರ್ಖಾನೆಯ ಯಾರ್ಡ್‌ಗಳಲ್ಲಿ ಇರಿಸಿವೆ. ಸೆಮಿಕಂಡಕ್ಟರ್‌ಗಳ ಕೊರತೆಯ ಕಾರಣಕ್ಕೆ ಅವುಗಳನ್ನು ಡೀಲರ್‌ಗಳಿಗೆ ಕಳುಹಿಸುತ್ತಿಲ್ಲ. ಮುಂದಿನ ಕೆಲವು ತಿಂಗಳುಗಳ ಕಾಲ ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆಗಳಿವೆ.

4. ಆದ್ಯತೆ ಪಡೆಯುತ್ತಿರುವ ಎಲೆಕ್ಟ್ರಿಕ್ ವಾಹನಗಳು
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಸರ್ಕಾರಗಳು ಹಲವು ಕೊಡುಗೆ ಹಾಗೂ ರಿಯಾಯಿತಿಗಳನ್ನು ನೀಡುತ್ತಿವೆ. ಫೇಮ್ 2 ಯೋಜನೆಯಡಿಯಲ್ಲಿ, ವಾಹನ ಖರೀದಿಯ ಮೇಲೆ ವಿನಾಯಿತಿ ನೀಡಲಾಗುತ್ತಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆಯ ಮೇಲೆ ವಿನಾಯಿತಿ, ಚಾರ್ಜರ್ ಮೇಲೆ ರಿಯಾಯಿತಿ ನೀಡಲಾಗುತ್ತಿದೆ.

5. ಕೊಡುಗೆಗಳಲ್ಲಿ ಇಳಿಕೆ
ಕಾರು ತಯಾರಕ ಕಂಪನಿಗಳು ಹಿಂದಿನ ದಿನಗಳಿಗೆ ಹೋಲಿಸಿದರೆ ಕೊಡುಗೆ ಹಾಗೂ ರಿಯಾಯಿತಿಗಳನ್ನು ಕಡಿಮೆ ಮಾಡಿದೆ. ಜಾಟೊ ಡೈನಾಮಿಕ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ 3 ವರ್ಷಗಳಲ್ಲಿ ಕಾರುಗಳ ಮೇಲಿನ ರಿಯಾಯಿತಿಗಳು ತೀವ್ರವಾಗಿ ಕಡಿಮೆಯಾಗಿವೆ. ಇದರಿಂದ ಹೊಸ ಗ್ರಾಹಕರು ಮೊದಲಿನಂತೆ ರಿಯಾಯಿತಿ ಪಡೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಹೆಚ್ಚು ಬೆಲೆ ಪಾವತಿಸಬೇಕಾಗುತ್ತದೆ.

ದೇಶಾದ್ಯಂತ ಕಾರು ಕಂಪನಿಗಳಿಂದ ಈಗಾಗಲೇ ಸಾಕಷ್ಟು ಆರ್ಡರ್‌ಗಳು ಬಾಕಿ ಉಳಿದಿವೆ. ಈ ಪರಿಸ್ಥಿತಿಯಲ್ಲಿ ಈಗ ಕಾರ್ ಆನ್ನು ಬುಕ್ ಮಾಡಲು ಹೆಚ್ಚು ಸಮಯ ಕಾಯಬೇಕಾಗಬಹುದು. ಉತ್ಪಾದನೆಯಲ್ಲಿನ ಕಡಿತದಿಂದಾಗಿ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ Maruti Suzuki 2.2 ಲಕ್ಷ ಆರ್ಡರ್‌ಗಳನ್ನು ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಹೆಚ್ಚು ಮಾರಾಟವಾಗುವ ಮಾದರಿಗಳನ್ನು ವೇಗವಾಗಿ ಉತ್ಪಾದಿಸುತ್ತಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಕಳೆದ ಕೆಲವು ತಿಂಗಳುಗಳಲ್ಲಿ ದೇಶದಲ್ಲಿ ಕಾರು ಮಾರಾಟವು ಕುಸಿತವನ್ನು ದಾಖಲಿಸಿದೆ. ಇದಕ್ಕೆ ಪ್ರಮುಖ ಕಾರಣ ಆರ್ಡರ್‌ಗಳ ಕೊರತೆಯಲ್ಲ, ಬದಲಿಗೆ ಉತ್ಪಾದನೆಯ ಕೊರತೆ. ಈ ಸನ್ನಿವೇಶದಲ್ಲಿ ಹೊಸ ಕಾರು ಖರೀದಿಸಲು ಬಯಸುವವರು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವುದು ಒಳ್ಳೆಯದು.


Click it and Unblock the Notifications