ಡೀಲರ್ಸ್ ಮಟ್ಟದಲ್ಲಿ ಟಾಟಾ ಹೊಸ ಟಿಗೋರ್ ಮತ್ತು ಟಿಯಾಗೋ ಸಿಎನ್‌ಜಿ ಬುಕ್ಕಿಂಗ್ ಆರಂಭ
ದುಬಾರಿ ಇಂಧನಗಳ ಪರಿಣಾಮ ಮಾರುಕಟ್ಟೆಯಲ್ಲಿ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲಾಗುತ್ತಿದ್ದು, ಬಹುತೇಕ ವಾಹನ ಮಾರಾಟ ಕಂಪನಿಗಳು ಕೂಡಾ ಭವಿಷ್ಯದ ವಾಹನ ಮಾದರಿಗಳ ಬಗೆಗೆ ಹೆಚ್ಚಿನ ಒತ್ತು ನೀಡುತ್ತಿವೆ.

ಹೊಸ ಕಾರುಗಳ ಮಾರಾಟದಲ್ಲಿ ಈಗಾಗಲೇ ಹಲವಾರು ಬದಲಾವಣೆಗಳನ್ನು ಪರಿಚಯಿಸಿ ಯಶಸ್ವಿಯಾಗಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಸಹ ತನ್ನ ಪ್ರಮುಖ ಕಾರುಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಗಮನಸೆಳೆಯುತ್ತಿದೆ.

ಪ್ರಮುಖ ಕಾರುಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಆವೃತ್ತಿಯನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಟಿಗೋರ್ ಮತ್ತು ಟಿಯಾಗೋ ಮಾದರಿಗಳಲ್ಲಿ ಸಿಎನ್‌ಜಿ(CNG) ಆವೃತ್ತಿಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಿದೆ.

ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ತಂತ್ರಜ್ಞಾನವನ್ನು ಅಳವಡಿಸಿ ಈಗಾಗಲೇ ಟಿಗೋರ್ ಮತ್ತು ಟಿಯಾಗೋ ಹೊಸ ಕಾರುಗಳನ್ನು ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಸಿಎನ್‌ಜಿ ಆವೃತ್ತಿಗಳು ಅತಿ ಕಡಿಮೆ ಮಾಲಿನ್ಯ ಉತ್ಪತ್ತಿಯೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹಿಂದಿರುಗಿಸಲಿವೆ.

ಸದ್ಯ ಮಾರುಕಟ್ಟೆ ಸಿಎನ್‍ಜಿ ತಂತ್ರಜ್ಞಾನ ಪ್ರೇರಿತ ವಾಹನ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳಿಗೆ ಪೂರಕವಾಗಿ ಸಿಎನ್‌ಜಿ ಪೂರೈಕೆಯ ಕೇಂದ್ರಗಳನ್ನು ಸಹ ಹೆಚ್ಚಿಸುತ್ತಿರುವುದು ಹೊಸ ಮಾದರಿಗಳತ್ತ ಗ್ರಾಹಕರು ಗಮನಹರಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯಾದ ಟಿಯಾಗೋ ಮತ್ತು ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಟಿಗೋರ್ ಆವೃತ್ತಿಗಳಲ್ಲಿ ಸಿಎನ್‌ಜಿ ತಂತ್ರಜ್ಞಾನವನ್ನು ಅಳವಡಿಸಲು ನಿರ್ಧರಿಸಿದ್ದು, ಹೊಸ ಕಾರುಗಳು 2022ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗಲಿವೆ.

ಹೊಸ ಸಿಎನ್‌ಜಿ ಟಿಯಾಗೋ ಮತ್ತು ಟಿಗೋರ್ ಕಾರುಗಳ ಖರೀದಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಆರಂಭಿಸಿದ್ದು, ರೂ. 11 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ದಾಖಲಿಸಬಹುದಾಗಿದೆ.

ಸಿಎನ್ಜಿ ಮಾದರಿಗಳಿಗಾಗಿ ಕಂಪನಿಯು ಇನ್ನು ಅಧಿಕೃತ ಬುಕ್ಕಿಂಗ್ ಆರಂಭ ಮಾಡಿಲ್ಲವಾದರೂ ಆಸಕ್ತ ಗ್ರಾಹಕರು ಹೊಸ ಕಾರು ಶೀಘ್ರದಲ್ಲೇ ಬಿಡುಗಡೆಯಾಗಬಹುದೆಂಬ ನೀರಿಕ್ಷೆಯೊಂದಿಗೆ ಬುಕ್ಕಿಂಗ್ ಸಲ್ಲಿಕೆಯನ್ನು ಮಾಡುತ್ತಿದ್ದು, ಹೊಸ ಆವೃತ್ತಿಗಳು ಪೆಟ್ರೋಲ್ ಮಾದರಿಗಿಂತಲೂ ರೂ. 1 ಲಕ್ಷದಷ್ಟು ದುಬಾರಿಯಾಗಿರಲಿವೆ ಎನ್ನಬಹುದು.

ಟಿಯಾಗೋ ಮತ್ತು ಟಿಗೋರ್ ಕಾರುಗಳ ಟಾಪ್ ಎಂಡ್ ಮಾದರಿಗಳಲ್ಲಿ ಹೊಸ ಸಿಎನ್‌ಜಿ ಮಾದರಿಯನ್ನು ಅಳವಡಿಸಬಹುದಾಗಿದ್ದು, ಹೊಸ ಆವೃತ್ತಿಗಳು ಉತ್ತಮ ಮೈಲೇಜ್ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿವೆ.

ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಸದ್ಯಕ್ಕೆ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಬಿಎಸ್ 6 ಜಾರಿ ನಂತರ ಡೀಸೆಲ್ ಎಂಜಿನ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಹೊಸ ಕಾರುಗಳ ಡೀಸೆಲ್ ಎಂಜಿನ್ ಸ್ಥಗಿತದ ನಂತರ ಪೆಟ್ರೋಲ್ ಮಾದರಿಗಳನ್ನು ಸಹ ಮುಂಬರುವ ಕೆಲವೇ ವರ್ಷಗಳಲ್ಲಿ ಹಂತ-ಹಂತವಾಗಿ ಸ್ಥಗಿತಗೊಳಿಸುವ ನಿರ್ಧರಿಸಿರುವ ಕಾರು ಕಂಪನಿಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ನೈಸರ್ಗಿಕ ಅನಿಲಗಳಿಂದ ಚಾಲನೆ ಮಾಡಬಹುದಾದ ವಿವಿಧ ತಂತ್ರಜ್ಞಾನ ಪ್ರೇರಣೆಯ ವಾಹನಗಳನ್ನು ಬಿಡುಗಡೆ ಮಾಡುವ ಇರಾದೆಯಲ್ಲಿವೆ.

ಟಿಗೋರ್ ಮತ್ತು ಟಿಯಾಗೋ ಎರಡು ಮಾದರಿಗಳಲ್ಲೂ ಟಾಟಾ ಮೋಟಾರ್ಸ್ ಕಂಪನಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಹೊಸದಾಗಿ ಪರಿಚಯಿಸಲಿರುವ ಸಿಎನ್‌ಜಿ ಆಯ್ಕೆಯು ಹೊಸ ಕಾರಿನ ಮಾರಾಟವನ್ನು ಹೆಚ್ಚಿಸಲಿದೆ.

ಸಿಎನ್ಜಿ ಆವೃತ್ತಿಯನ್ನು ಟಿಗೋರ್ ಮತ್ತು ಟಿಯಾಗೋ ಕಾರಿನ ಮಧ್ಯಮ ಕ್ರಮಾಂಕದ ಮಾದರಿಗಳಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಹೊಸ ಕಾರು ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ದುಬಾರಿಯಾದರೂ ಉತ್ತಮ ಇಂಧನ ದಕ್ಷತೆಯೊಂದಿಗೆ ನಿರ್ವಹಣಾ ವೆಚ್ಚವನ್ನು ತಗ್ಗಿಸಲಿವೆ.

ಸದ್ಯ ಟಿಯಾಗೋ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.07 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.67 ಲಕ್ಷದಿಂದ ರೂ. 7.84 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರುಗಳು ಸಿಎನ್‌ಜಿ ಕಿಟ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿಯೇ ಬಹುತೇಕ ತಾಂತ್ರಿಕ ಅಂಶಗಳನ್ನು ಹೊಂದಿರಲಿದ್ದು, ಮಾಲಿನ್ಯ ತಗ್ಗಿಸುವುವಲ್ಲಿ ಸಿಎನ್‌ಜಿ ಕಾರುಗಳು ಪ್ರಮುಖ ಪಾತ್ರವಹಿಸಲಿವೆ.


Click it and Unblock the Notifications