ಟಾಟಾ ಕಾರುಗಳ ಖರೀದಿ ಮೇಲೆ ಜುಲೈ ಅವಧಿಯ ಆಫರ್ ಘೋಷಣೆ
ಕೋವಿಡ್ ಎರಡನೇ ಅಲೆಯ ಪರಿಣಾಮ ತಗ್ಗಿರುವ ಹೊಸ ವಾಹನಗಳ ಖರೀದಿಯ್ನು ಸುಧಾರಿಸಲು ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರಿಗೆ ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ಜುಲೈ ಅವಧಿಗಾಗಿ ವಿವಿಧ ಆಫರ್‌ಗಳನ್ನು ಘೋಷಿಸಿದೆ.

ಹೊಸ ವರ್ಷದ ಆರಂಭದಲ್ಲಿ ಹಲವಾರು ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಕೋವಿಡ್ ಎರಡನೇ ಅಲೆಯಿಂದಾಗಿ ಮತ್ತೆ ಹೊಸ ವಾಹನ ಮಾರಾಟ ಸಾಕಷ್ಟು ಇಳಿಕೆಯಾಗಿದೆ. ಹೀಗಾಗಿ ಟಾಟಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಾದ ಟಿಯಾಗೊ, ಟಿಗೋರ್, ನೆಕ್ಸಾನ್, ಮತ್ತು ಹ್ಯಾರಿಯರ್ ಕಾರು ಮೇಲೆ ಆಫರ್ ನೀಡುತ್ತಿದ್ದು, ಈ ತಿಂಗಳಾಂತ್ಯವರೆಗೂ ಹೊಸ ಆಫರ್‌ಗಳು ಲಭ್ಯವಿರಲಿವೆ.

ಟಾಟಾ ಮೋಟಾರ್ಸ್ ಕಂಪನಿಯು ಘೋಷಣೆ ಮಾಡಿರುವ ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಕನಿಷ್ಠ ರೂ. 15 ಸಾವಿರದಿಂದ ಗರಿಷ್ಠ ರೂ. 65 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಆರಂಭಿಕ ಕಾರು ಮಾದರಿಯಾದ ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ರೂ. 25 ಸಾವಿರ ಆಫರ್ ಘೋಷಿಸಲಾಗಿದ್ದು, ರೂ.25 ಸಾವಿರದಲ್ಲಿ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 10 ಸಾವಿರ ಎಕ್ಸ್‌ಚೆಂಜ್ ಆಫರ್ ಒಳಗೊಂಡಿದೆ.

ಟಿಯಾಗೋ ನಂತರ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೂ ಟಾಟಾ ಮೋಟಾರ್ಸ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ನೀಡುತ್ತಿದ್ದು, ಟಿಗೋರ್ ಕಾರು ಖರೀದಿಯ ಮೇಲೆ ಗ್ರಾಹಕರು ರೂ.30 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ರೂ.30 ಸಾವಿರದಲ್ಲಿ ರೂ. 15 ಸಾವಿರ ಕ್ಯಾಶ್‌ಬ್ಯಾಕ್ ಮತ್ತು ರೂ.15 ಸಾವಿರ ಡಿಸ್ಕೌಂಟ್ ಒಳಗೊಂಡಿದ್ದು, ಟಿಗೋರ್ ಮತ್ತು ಟಿಯಾಗೋ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ.

ಸದ್ಯ ಟಿಯಾಗೋ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.95 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.59 ಲಕ್ಷದಿಂದ ರೂ. 7.73 ಲಕ್ಷ ಬೆಲೆ ಹೊಂದಿದೆ.

ಇನ್ನು ಟಾಟಾ ಹೊಸ ಆಫರ್‌ಗಳಲ್ಲಿ ಜನಪ್ರಿಯ ಕಾರು ಮಾದರಿಯಾದ ನೆಕ್ಸಾನ್ ಆವೃತ್ತಿಯ ಡೀಸೆಲ್ ಮಾದರಿಯ ಮೇಲೆ ಕಂಪನಿಯು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ಮಾತ್ರ ನೀಡುತ್ತಿದೆ. ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ನೆಕ್ಸಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.23 ಲಕ್ಷ ಬೆಲೆ ಹೊಂದಿರುವ ನೆಕ್ಸಾನ್ ಕಾರು ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

ಹ್ಯಾರಿಯರ್ ಎಸ್‌ಯುವಿ ಕಾರು ಮಾದರಿಯ ಮೇಲೂ ಟಾಟಾ ಕಂಪನಿಯು ರೂ. 65 ಸಾವಿರ ಆಫರ್ ನೀಡುತ್ತಿದ್ದು, ರೂ.65 ಸಾವಿರದಲ್ಲಿ ರೂ. 25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 40 ಸಾವಿರ ಎಕ್ಸ್‌ಚೆಂಜ್ ಆಫರ್ ಒಳಗೊಂಡಿದೆ.

ಹ್ಯಾರಿಯರ್ ಕಾರು ಮಾದರಿಯು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.29 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.21.09 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಖರೀದಿ ಮೇಲೆ ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತದೆ.


Click it and Unblock the Notifications








