ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ Tata Motors ಹೊಸ ಮೈಲಿಗಲ್ಲು
ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ನೆಕ್ಸಾನ್ ಇವಿ(Nexon EV), ಟಿಗೋರ್ ಇವಿ(Tigor EV) ಮತ್ತು ಎಕ್ಸ್‌ಪ್ರೆಸ್-ಟಿ ಇವಿ(XPres-t EV ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ಮೈಲಿಗಲ್ಲು ಸಾಧಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯು ಕ್ಯಾಬ್ ಸೇವಾ ವಿಭಾಗಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ವಾಹನಗಳ ಮೂಲಕ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

2019ರಲ್ಲಿ ಮೊದಲ ಬಾರಿಗೆ ಪ್ರಯಾಣಿಕ ಬಳಕೆಯ ಎಲೆಕ್ಟ್ರಿಕ್ ಕಾರು ಪರಿಚಯಿಸಿದ ನಂತರ ಕಂಪನಿಯು ಇದುವರೆಗೆ ಸುಮಾರು 10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ನೆಕ್ಸಾನ್ ಇವಿ ಕಾರು ಕಂಪನಿಯ ಇವಿ ವಾಹನ ಉತ್ಪಾದನಾ ಯೋಜನೆಗೆ ಹೊಸ ಆಯಾಮ ನೀಡಿದೆ.

ಆರಂಭದಲ್ಲಿ ಟಿಗೋರ್ ಇವಿ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ತದನಂತರ ನೆಕ್ಸಾನ್ ಇವಿ ಮಾದರಿಯನ್ನು ಪರಿಚಯಿಸಿದ್ದು, ಕಂಪನಿಯು ಇತ್ತೀಚೆಗೆ ವಾಣಿಜ್ಯ ಬಳಕೆದಾರರಿಗಾಗಿ ಹೊಸದಾಗಿ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯ ಮಾರಾಟಕ್ಕೆ ಚಾಲನೆ ನೀಡಿದೆ.

ಟಿಗೋರ್ ಇವಿ ಮಾದರಿಯನ್ನು ಇತ್ತೀಚೆಗೆ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡಲಾಗಿದ್ದು, ಟಿಗೋರ್ ಇವಿ ಕಾರು ನೆಕ್ಸಾನ್ ಇವಿ ಮಾದರಿಯಲ್ಲೇ ಅತ್ಯುತ್ತಮ ಮೈಲೇಜ್, ಪರ್ಫಾಮೆನ್ಸ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಟಾಟಾ ಮೋಟಾರ್ಸ್ ಕಂಪನಿಯ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ನೆಕ್ಸಾನ್ ಇವಿ ಕಾರು ಅಗ್ರಸ್ಥಾನದಲ್ಲಿದ್ದು, ಕಂಪನಿಯು ಮಾರಾಟಗೊಳಿಸಿರುವ 10 ಸಾವಿರ ಇವಿ ಕಾರುಗಳಲ್ಲಿ ಶೇ. 70ರಷ್ಟು ಪಾಲು ನೆಕ್ಸಾನ್ ಇವಿ ಹೊಂದಿದೆ.

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನಕ್ಕೇರಿರುವ ಟಾಟಾ ನೆಕ್ಸಾನ್ ಕಾರು ಮಾದರಿಯು ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇಂಧನಗಳ ಬೆಲೆ ಹೆಚ್ಚುತ್ತಿರುವುದರಿಂದ ಎಲೆಕ್ಟ್ರಿಕ್ ಕಾರಿಗೆ ಬೇಡಿಕೆಯಲ್ಲಿ ಸಾಕಷ್ಟು ಏರಿಕೆಯಾಗುತ್ತಿದೆ.

ಹೊಸ ನೆಕ್ಸಾನ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿಯಾಗಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಈ ಮೊದಲು ಪ್ರತಿ ತಿಂಗಳಿಗೆ 300 ರಿಂದ 400 ಯುನಿಟ್ ಸರಾಸರಿಯಾಗಿ ಮಾರಾಟಗೊಳ್ಳುತ್ತಿದ್ದ ಟಾಟಾ ನೆಕ್ಸಾನ್ ಇವಿ ಕಾರು ಕಳೆದ ಜೂನ್ ಅವಧಿಯಲ್ಲಿ ಬರೋಬ್ಬರಿ 1 ಸಾವಿರ ಯುನಿಟ್ ಮಾರಾಟಗೊಳ್ಳುವ ಮೂಲಕ ಹೊಸ ದಾಖಲೆಗೆ ಕಾರಣವಾಗಿತ್ತು.

ನೆಕ್ಸಾನ್ ಇವಿ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.16.65 ಲಕ್ಷ ಬೆಲೆ ಪಡೆದುಕೊಂಡಿದ್ದು, ಮೂರು ಪ್ರಮುಖ ವೆರಿಯೆಂಟ್‌ಗಳೊಂದಿಗೆ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಮಾದರಿಯಲ್ಲಿ ಟಾಟಾ ಕಂಪನಿಯು 95kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, 30kWh ಲಿಥೀಯಂ ಅಯಾನ್ ಬ್ಯಾಟರಿ ಮೂಲಕ ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹಾಗೆಯೇ ಇತ್ತೀಚೆಗೆ ಹೊಸ ನವೀಕರಣ ಪಡೆದುಕೊಂಡ 2021ರ ಟಿಗೋರ್ ಇವಿ ಕಾರು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಪ್ರೀಮಿಯಂ, ಪವರ್‌ಪುಲ್ ಪವರ್‌ಟ್ರೈನ್ ಸೇರಿದಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 13.14 ಲಕ್ಷ ಬೆಲೆ ಹೊಂದಿದೆ.

ಹೊಸ ತಂತ್ರಜ್ಞಾನ ಪ್ರೇರಿತ 55kW ಎಲೆಕ್ಟ್ರಿಕ್ ಮೋಟಾರ್ ಮತ್ತು 26kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆಯು ಕಾರಿನ ಕಾರ್ಯಕ್ಷಮತೆ ಹೆಚ್ಚಳದೊಂದಿಗೆ ಮೈಲೇಜ್‌ನಲ್ಲೂ ಸಾಕಷ್ಟು ಸುಧಾರಣೆಗೊಂಡಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 306 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವನ್ನು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಹೊಸ ಪವರ್‌ಟ್ರೈನ್‌ನಲ್ಲಿ ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.

ಇನ್ನುಳಿದಂತೆ ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಕಾರು ಮಾದರಿಯನ್ನು ವಾಣಿಜ್ಯ ಬಳಕೆಗಾಗಿ ಮಾತ್ರ ಪರಿಚಯಿಸಲಾಗಿದ್ದು, ಈ ಎಲೆಕ್ಟ್ರಿಕ್ ಕಾರು 21.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ ಪ್ರತಿ ಚಾರ್ಜ್‌ಗೆ 213 ಕಿ.ಮೀ ಮೈಲೇಜ್ ಹೊಂದಿದೆ. ಸಬ್ಸಡಿ ಯೋಜನೆಯಡಿ ಬಜೆಟ್ ಬೆಲೆ ಹೊಂದಿರುವ ಈ ಕಾರು ಕನಿಷ್ಠ ಪ್ರಮಾಣದ ಫೀಚರ್ಸ್ ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 9.54 ಲಕ್ಷದಿಂದ ರೂ. 10.64 ಲಕ್ಷ ಬೆಲೆ ಹೊಂದಿದೆ.


Click it and Unblock the Notifications