ಒಂದು ಟ್ರಿಲಿಯನ್ ಡಾಲರ್ ಗಡಿ ದಾಟಿದ Tesla ಮಾರುಕಟ್ಟೆ ಮೌಲ್ಯ
ಅಮೆರಿಕಾ ಮೂಲದ Tesla ಕಂಪನಿಯು ವಿಶ್ವದ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ವಿಶ್ವದ ಯಾವುದೇ ಕಂಪನಿಯು Tesla ಕಂಪನಿಯ ರೀತಿಯಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿಲ್ಲ. ಇತ್ತೀಚಿಗೆ Tesla ಕಂಪನಿಯು ತನ್ನ ಆಸ್ತಿ ಮೌಲ್ಯದ ವಿವರಗಳನ್ನು ಬಿಡುಗಡೆ ಮಾಡಿದೆ. ಈ ಲೇಖನದಲ್ಲಿ ಇದಕ್ಕೆ ಸಂಬಂಧಿಸಿದ ವಿವರಗಳನ್ನು ನೋಡೋಣ.

Tesla ಕಂಪನಿಯ ಕಾರುಗಳು ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ. Tesla ಕಂಪನಿಯು ವಿಶ್ವಾದಾದ್ಯಂತ 1 ಟ್ರಿಲಿಯನ್ ಡಾಲರ್ ಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದೆ. ಅಮೆರಿಕಾದ ಜನಪ್ರಿಯ ಬಾಡಿಗೆ ಕಾರು ಕಂಪನಿಯಾದ ಹರ್ಟ್ಜ್ Tesla ಕಂಪನಿಯಿಂದ 1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ. ಇದಾದ ನಂತರ Tesla ಕಂಪನಿಯ ಆಸ್ತಿ ಮೌಲ್ಯವು 1 ಟ್ರಿಲಿಯನ್ ಡಾಲರ್ ಗಳನ್ನು ಮೀರಿದೆ.

ಪ್ರಪಂಚದಾದ್ಯಂತದ ಎಲೆಕ್ಟ್ರಿಕ್ ಕಾರುಗಳನ್ನು ವೈಯಕ್ತಿಕ ಬಳಕೆದಾರರು ಹಾಗೂ ಹರ್ಟ್ಜ್‌ನಂತಹ ಬಾಡಿಗೆ ಕಾರು ಕಂಪನಿಗಳು ಹೆಚ್ಚು ಖರೀದಿಸುತ್ತಿದ್ದಾರೆ. ಇದರಿಂದಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. Tesla ಕಂಪನಿಯು ಸದಾ ಕಾಲ ಕ್ರಿಯಾಶೀಲರಾಗಿರುವುದರಿಂದ ಹರ್ಟ್ಜ್‌ನಂತಹ ಹೊಸ ಕಂಪನಿಗಳೊಂದಿಗೆ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿದೆ.

Tesla ಹಾಗೂ ಹರ್ಟ್ಜ್ ನಡುವಿನ ಒಪ್ಪಂದವು 4 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. Tesla ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಬೆಲೆ ಅಮೆರಿಕಾದಲ್ಲಿ 40,000 ಡಾಲರ್ ಗಳಾಗಿದೆ. ಈ ಮೂಲಕ Tesla ಹಾಗೂ ಹರ್ಟ್ಜ್ ನಡುವೆ 4 ಬಿಲಿಯನ್ ಡಾಲರ್ ಒಪ್ಪಂದವೇರ್ಪಟ್ಟಿದ್ದು, Tesla ಕಂಪನಿಯ ಆಸ್ತಿ ಮೌಲ್ಯವು 1 ಟ್ರಿಲಿಯನ್ ಡಾಲರ್ ದಾಟಿದೆ.

ಈ ಸುದ್ದಿ Tesla ಕಂಪನಿಯ ಷೇರುಗಳನ್ನು ಖರೀದಿಸಿದವರಿಗೆ ಸಿಹಿ ನೀಡಿದೆ. ಇದರಿಂದ Tesla ಕಂಪನಿಯ ಷೇರು ಬೆಲೆ 1,024.86 ಡಾಲರ್ ಗಳಿಗೆ ಏರಿಕೆಯಾಗಿದೆ. ಅಂದರೆ ಮೊದಲಿಗಿಂತ 13% ನಷ್ಟು ಏರಿಕೆಯಾಗಿದೆ. Tesla ಕಂಪನಿಯ ಸಿಇಒ ಎಲಾನ್ ಮಸ್ಕ್ ರವರು ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 255.8 ಬಿಲಿಯನ್ ಡಾಲರ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.

ಎಲಾನ್ ಮಸ್ಕ್ ರವರ ಆಸ್ತಿ ಮೌಲ್ಯವು 11.4% ನಷ್ಟು ಹೆಚ್ಚಾಗಿದೆ. ಅಂದ ಹಾಗೆ Tesla ಕಂಪನಿಯು ಈ ವರ್ಷದ ಜನವರಿಯಲ್ಲಿ ತನ್ನ ಕಚೇರಿಯನ್ನು ನಮ್ಮ ಬೆಂಗಳೂರಿನಲ್ಲಿ ನೋಂದಾಯಿಸಿತ್ತು. ಭಾರತೀಯ ಗ್ರಾಹಕರು Tesla ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದಾರೆ. Tesla ಕಂಪನಿಯ ಮಾಡೆಲ್ 3 ಕಾರ್ ಅನ್ನು ಭಾರತದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷಿಸಲಾಗಿದೆ.

ಇತ್ತೀಚೆಗೆ ಎಲಾನ್ ಮಸ್ಕ್'ರವರು ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಭಾರತದಲ್ಲಿ Tesla ಕಂಪನಿಯ ಕಾರುಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ಆಮದು ಸುಂಕ ವಿಧಿಸಲಾಗುತ್ತಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. Tesla ಕಂಪನಿಯ ಕಾರುಗಳು ದುಬಾರಿ ಬೆಲೆಯನ್ನು ಹೊಂದಿವೆ.

Tesla ಕಂಪನಿಯ ಕಾರುಗಳ ಮೇಲೆ ವಿಧಿಸಲಾಗುವ ಆಮದು ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರವು ಹೇಳಿದೆ. ಇದರಿಂದ Tesla ಎಲೆಕ್ಟ್ರಿಕ್ ಕಾರುಗಳ ಮಾರಾಟವು ಶೀಘ್ರದಲ್ಲೇ ಭಾರತದಲ್ಲಿ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಎಲಾನ್ ಮಸ್ಕ್'ರವರು ಭಾರತದಲ್ಲಿ ಹೆಚ್ಚಿನ ಆಮದು ಸುಂಕವನ್ನು ವಿಧಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

Tesla ಕಾರುಗಳು ಭಾರತದಲ್ಲಿಯೇ ಉತ್ಪಾದನೆಯಾದಾಗ ಮಾತ್ರ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಆಲೋಚನೆಯನ್ನು ಪರಿಗಣಿಸಬಹುದು ಎಂದು ಕಂಪನಿ ಹೇಳಿದೆ. ತಮ್ಮ ಕಾರುಗಳನ್ನು ಐಷಾರಾಮಿ ಕಾರುಗಳಂತೆ ಪರಿಗಣಿಸಬಾರದು ಎಂದು Tesla ಕಂಪನಿಯು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಎಕನಾಮಿಕ್ ಟೈಮ್ಸ್'ಗೆ ಮಾಹಿತಿ ನೀಡಿದ್ದರು.

ಈ ಬಗ್ಗೆ ಮಾತನಾಡಿರುವ ಅವರು, Tesla ಕಂಪನಿಯು ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವುದನ್ನು ಪರಿಗಣಿಸಲು ನಾವು ಸಿದ್ಧರಿದ್ದೇವೆ. ಆದರೆ ಈ ವಿಷಯದ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಒಂದು ನಿರ್ದಿಷ್ಟ ಕಂಪನಿಗೆ ಮಾತ್ರವಲ್ಲದೆ ಇಡೀ ವಲಯಕ್ಕೆ ಅನ್ವಯಿಸುತ್ತದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಿಗೆ ಸಬ್ಸಿಡಿ ನೀಡುವುದು ಸಹ ಸೇರಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) 12% ರಿಂದ 5% ಗಳಿಗೆ ಇಳಿಸಲಾಗಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವವರಿಗೆ ವಿನಾಯಿತಿಯನ್ನು ಸಹ ನೀಡುತ್ತಿದೆ. ಆದರೆ ಆಮದು ಮಾಡುವ ವಾಹನಗಳನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಯಾವುದೇ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ Tesla ಕಂಪನಿಯು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.


Click it and Unblock the Notifications








