ಬಿಡುಗಡೆಗೂ ಮುನ್ನ ಭಾರತದಲ್ಲಿ ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಆರಂಭಿಸಿದ ಟೆಸ್ಲಾ
ಅಮೆರಿಕದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾಗಿರುವ ಟೆಸ್ಲಾ ಇದೇ ವರ್ಷಾಂತ್ಯಕ್ಕೆ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ತನ್ನ ಕೇಂದ್ರ ಕಚೇರಿ ತೆರೆಯಲು ಉದ್ದೇಶಿಸಿರುವ ಟೆಸ್ಲಾ ಕಂಪನಿಯು ಮಾಡೆಲ್ 3 ಕಾರು ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಮೂಲಕ ಟೆಸ್ಲಾ ಕಂಪನಿಯು ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಟೆಸ್ಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರು ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿದ್ದು, ಅಗಸ್ಟ್ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಹೊಸ ಕಾರು ವಿತರಣೆಗೆ ಅಧಿಕೃತ ಚಾಲನೆ ನೀಡುವುದಾಗಿ ಖಚಿತಪಡಿಸಿದೆ.

ಭಾರತದಲ್ಲಿ ಟೆಸ್ಲಾ ನಿರ್ಮಾಣದ ಮಾಡೆಲ್ 3 ಕಾರು ಮಾದರಿಯು ಮೊದಲ ಹಂತದಲ್ಲಿ ಬಿಡುಗಡೆಯಾಗಲಿದ್ದು, ಮಾಡೆಲ್ 3 ನಂತರ ಮಾಡೆಲ್ ಎಸ್, ಮಾಡೆಲ್ ವೈ ಸರಣಿ ಎಲೆಕ್ಟ್ರಿಕ್ ಕಾರು ಮಾದರಿಗಳು ಭಾರತವನ್ನು ಪ್ರವೇಶಿಸಲಿವೆ.

ಮಾಡೆಲ್ 3 ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 500ಕಿ.ಮೀ ಗೂ ಹೆಚ್ಚು ಮೈಲೇಜ್ ಹೊಂದಿದ್ದು, ಬೆಲೆಯಲ್ಲೂ ಇದು ತುಸು ದುಬಾರಿಯಾಗಿರಲಿದೆ. ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ. 55 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಆರಂಭಿಕವಾಗಿ ಸಿಬಿಯು ಆಮದು ನೀತಿಯಡಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನ ಮಾರಾಟ ಮಾಡಲಿರುವ ಟೆಸ್ಲಾ ಕಂಪನಿಯು 2023ರ ವೇಳೆಗೆ ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಯನ್ನು ಆರಂಭಿಸುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಹೊಸ ವಾಹನಗಳ ಮಾರಾಟಕ್ಕಾಗಿ ಮುಂಬೈ, ಬೆಂಗಳೂರು ಮತ್ತು ದೆಹಲಿ ಆಯ್ದಕೊಂಡಿರುವ ಟೆಸ್ಲಾ ಕಂಪನಿಯು ಮುಂಬೈನಲ್ಲಿ ಕೇಂದ್ರ ಕಚೇರಿಯೊಂದಿಗೆ ಮಾರಾಟ ಮಳಿಗೆಯನ್ನು ನಮ್ಮ ಬೆಂಗಳೂರಿನಲ್ಲಿ ಆರ್‌ಡಿ ಕಚೇರಿ ಜೊತೆ ಮಾರಾಟ ಮಳಿಗೆಯನ್ನು ಮತ್ತು ದೆಹಲಿಯಲ್ಲಿ ಮಾರಾಟ ಮಳಿಗೆಯನ್ನು ತೆರೆಯುತ್ತಿದೆ.

ಸದ್ಯಕ್ಕೆ ಸಿಬಿಯು ಮೂಲಕ ಮತ್ತು 2023ರಿಂದ ಸಿಕೆಡೆ ಆಮದು ನೀತಿ ಅಡಿಯಲ್ಲಿ ವಾಹನ ಮಾರಾಟ ಕೈಗೊಳ್ಳಲಿರುವ ಟೆಸ್ಲಾ ಕಂಪನಿಯು ಹೊಸ ಯೋಜನೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಭವಿಷ್ಯದ ವಾಹನಗಳ ಮೇಲೆ ಟೆಸ್ಲಾ ಕಂಪನಿಯು ಭಾರೀ ನೀರಿಕ್ಷೆಯಿಟ್ಟುಕೊಂಡಿದೆ.

ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಲ್ಲೇ ಸಿದ್ದವಾಗಿರುವ ಬರುವ ಸಿಬಿಯು ಆಮದು ನೀತಿಯಡಿಯಲ್ಲಿ ಮಾರಾಟವಾಗುವ ವಾಹನಗಳಿಂತಲೂ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟವಾಗುವ ವಾಹನಗಳಿಂದ ಸ್ಥಳೀಯವಾಗಿ ಹೂಡಿಕೆ, ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ.

ಹೊಸ ವಾಹನ ಉತ್ಪಾದನಾ ಘಟಕವು ಯಾವುದೇ ರಾಜ್ಯದಲ್ಲಿ ಸ್ಥಾಪನೆಯಾಗುವುದಾದರೇ ಸ್ಥಳೀಯ ಸರ್ಕಾರಗಳೊಂದಿಗೆ ಮೂಲಭೂತ ಸೌಕರ್ಯಗಳಿಗಾಗಿ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆಯಿದ್ದು, ಮೂಲಭೂತ ಸೌಕರ್ಯಗಳಿಗೆ ಪರ್ಯಾಯವಾಗಿ ಸ್ಥಳೀಯರಿಗೆ ಹೆಚ್ಚಿನ ಮಟ್ಟದ ಉದ್ಯೋಗ ಅವಕಾಶವನ್ನು ನೀಡಬೇಕಾಗುತ್ತದೆ.

ಈ ಹಿನ್ನಲೆಯಲ್ಲಿ ಸಿಕೆಡಿ ಮೂಲಕ ಭಾರತದಲ್ಲಿ ಕಾರು ಮಾರಾಟ ಪ್ರಕ್ರಿಯೆ ಆರಂಭಿಸುತ್ತಿರುವ ಟೆಸ್ಲಾ ಕಂಪನಿಯ ಹೊಸ ಯೋಜನೆಗಾಗಿ ಕರ್ನಾಟಕವನ್ನು ಆಯ್ದಕೊಂಡಿರುವುದು ರಾಜ್ಯದಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಮಟ್ಟದ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ ಎನ್ನಬಹುದು.


Click it and Unblock the Notifications