ಭಾರತದಲ್ಲಿ ಪ್ರಮುಖ ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ಟೆಸ್ಲಾ
ಅಮೆರಿಕ ಜನಪ್ರಿಯ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯಾದ ಟೆಸ್ಲಾ ಭಾರತದಲ್ಲೂ ತನ್ನ ಉದ್ಯಮ ವ್ಯವಹಾರ ವಿಸ್ತರಿಸುವ ಸಿದ್ದತೆಯಲಿದ್ದು, ಕಾರು ಮಾರಾಟಕ್ಕಾಗಿ ಈಗಾಗಲೇ ಅಗತ್ಯ ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಪ್ರಮುಖ ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಟೆಸ್ಲಾ ಇಂಡಿಯಾ ಕಂಪನಿಯು ಈಗಾಗಲೇ ಸಿಇಓ ಮತ್ತು ಆಡಳಿತ ಮಂಡಳಿಯಲ್ಲಿನ ಪ್ರಮಖ ಹುದ್ದೆಗಳನ್ನ ಭರ್ತಿ ಮಾಡಿದ್ದು, ಇದೀಗ ಮಾರಾಟ ವಿಭಾಗ ಮತ್ತು ಗ್ರಾಹಕ ಸೇವಾ ವಿಭಾಗದಲ್ಲಿನ ವಿವಿಧ ಹುದ್ದೆಗಳಿಗಾಗಿ ಸದ್ಯ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಕಂಪನಿಯು ಶೀಘ್ರದಲ್ಲೇ ದೇಶದ ಪ್ರಮುಖ ಮೂರು ಮಾಹಾನಗರಗಳಾದ ಮುಂಬೈ, ಬೆಂಗಳೂರು ಮತ್ತು ದೆಹಲಿಯಲ್ಲಿ ಹೊಸ ಶೋರೂಂ ತೆರೆಯುತ್ತಿದ್ದು, ಅಗಸ್ಟ್ ಹೊತ್ತಿಗೆ ಎಲೆಕ್ಟ್ರಿಕ್ ಕಾರು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲಿದೆ.

ಮುಂಬೈನ ಪ್ರತಿಷ್ಠಿತ ಲೋವರ್ ಪ್ಯಾರೆಲ್-ವರ್ಲಿಯಲ್ಲಿ ಟೆಸ್ಲಾ ಮೊದಲ ಶೋರೂಂ ಆರಂಭಗೊಳ್ಳುತ್ತಿದ್ದು, ನಮ್ಮ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯ ಜೊತೆಗೆ ಪ್ರತ್ಯೇಕವಾಗಿ ಮಾರಾಟ ಮಳಿಗೆಯನ್ನು ಸಹ ತೆರೆಯಲಾಗುತ್ತಿದೆ.

ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಟೆಸ್ಲಾವನ್ನು ನೋಂದಾಯಿಸಲಾಗಿದ್ದು, ಟೆಸ್ಲಾ ಕಂಪನಿಯು ಭಾರತದಲ್ಲಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದೆ.

ಸಿಕೆಡಿ ಆಮದು ನೀತಿ ಅಡಿಯಲ್ಲಿ ವಾಹನ ತಯಾರಕ ಕಂಪನಿಗಳು ವಿದೇಶಿ ಮಾರುಕಟ್ಟೆಗಳಿಂದಲೇ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಸ್ಥಳೀಯ ಘಟಕದಲ್ಲಿ ಜೋಡಣೆ ಮಾಡಿ ಮಾರಾಟ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿವೆ. ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಲ್ಲೇ ಸಿದ್ದವಾಗಿರುವ ಬರುವ ಸಿಬಿಯು ಆಮದು ನೀತಿಯಡಿಯಲ್ಲಿ ಮಾರಾಟವಾಗುವ ವಾಹನಗಳಿಂತಲೂ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟವಾಗುವ ವಾಹನಗಳಿಂದ ಸ್ಥಳೀಯವಾಗಿ ಹೂಡಿಕೆ, ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ.

ಹೊಸ ವಾಹನ ಉತ್ಪಾದನಾ ಘಟಕವು ಯಾವುದೇ ರಾಜ್ಯದಲ್ಲಿ ಸ್ಥಾಪನೆಯಾಗುವುದಾದರೇ ಸ್ಥಳೀಯ ಸರ್ಕಾರಗಳೊಂದಿಗೆ ಮೂಲಭೂತ ಸೌಕರ್ಯಗಳಿಗಾಗಿ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆಯಿದ್ದು, ಮೂಲಭೂತ ಸೌಕರ್ಯಗಳಿಗೆ ಪರ್ಯಾಯವಾಗಿ ಸ್ಥಳೀಯರಿಗೆ ಹೆಚ್ಚಿನ ಮಟ್ಟದ ಉದ್ಯೋಗ ಅವಕಾಶವನ್ನು ನೀಡಬೇಕಾಗುತ್ತದೆ.

ಈ ಹಿನ್ನಲೆಯಲ್ಲಿ ಸಿಕೆಡಿ ಮೂಲಕ ಭಾರತದಲ್ಲಿ ಕಾರು ಮಾರಾಟ ಪ್ರಕ್ರಿಯೆ ಆರಂಭಿಸುತ್ತಿರುವ ಟೆಸ್ಲಾ ಕಂಪನಿಯ ಹೊಸ ಯೋಜನೆಗಾಗಿ ಕರ್ನಾಟಕವನ್ನು ಆಯ್ದಕೊಂಡಿರುವುದು ರಾಜ್ಯದಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಮಟ್ಟದ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ ಎನ್ನಬಹುದು.

ಟೆಸ್ಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರು ಖರೀದಿಗಾಗಿ ಶೀಘ್ರದಲ್ಲೇ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಿದ್ದು, ಅಗಸ್ಟ್ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಹೊಸ ಕಾರು ವಿತರಣೆಗೆ ಅಧಿಕೃತ ಚಾಲನೆ ನೀಡುವುದಾಗಿ ಖಚಿತಪಡಿಸಿದೆ.

ಭಾರತದಲ್ಲಿ ಟೆಸ್ಲಾ ನಿರ್ಮಾಣದ ಮಾಡೆಲ್ 3 ಕಾರು ಮಾದರಿಯು ಮೊದಲ ಹಂತದಲ್ಲಿ ಬಿಡುಗಡೆಯಾಗಲಿದ್ದು, ಮಾಡೆಲ್ 3 ನಂತರ ಮಾಡೆಲ್ ಎಸ್, ಮಾಡೆಲ್ ವೈ ಸರಣಿ ಎಲೆಕ್ಟ್ರಿಕ್ ಕಾರು ಮಾದರಿಗಳು ಭಾರತವನ್ನು ಪ್ರವೇಶಿಸಲಿವೆ.

ಮಾಡೆಲ್ 3 ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 500ಕಿ.ಮೀ ಗೂ ಹೆಚ್ಚು ಮೈಲೇಜ್ ಹೊಂದಿದ್ದು, ಬೆಲೆಯಲ್ಲೂ ಇದು ತುಸು ದುಬಾರಿಯಾಗಿರಲಿದೆ. ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ. 55 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಆರಂಭಿಕವಾಗಿ ಸಿಬಿಯು ಆಮದು ನೀತಿಯಡಿಯಲ್ಲಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನ ಮಾರಾಟ ಮಾಡಲಿರುವ ಟೆಸ್ಲಾ ಕಂಪನಿಯು 2023ರ ವೇಳೆಗೆ ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಯನ್ನು ಆರಂಭಿಸುವ ಸಿದ್ದತೆಯಲ್ಲಿದೆ.


Click it and Unblock the Notifications








