ವಾರದ ಸುದ್ದಿ: ವಾಹನ ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ, ಇಂಧನ ಮತ್ತಷ್ಟು ದುಬಾರಿ, ಇವಿ ವಾಹನಗಳಿಗೆ ಬೇಡಿಕೆ!
ಕೋವಿಡ್ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಆಟೋ ಉದ್ಯಮವು ಕೂಡಾ ಸಾಕಷ್ಟು ನಷ್ಟ ಅನುಭವಿಸಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೂ ಕೂಡಾ ಸದ್ಯ ಆರ್ಥಿಕ ಬಿಕ್ಕಟ್ಟು ಸುಧಾರಿಸಲು ಇನ್ನು ಕೆಲ ತಿಂಗಳುಗಳು ಬೇಕಾಗಬಹುದೆಂದು ಅಂದಾಜಿಸಲಾಗಿದ್ದು, ಹಂತ-ಹಂತವಾಗಿ ಆಟೋ ಉದ್ಯಮ ಚಟುವಟಿಕೆಗಳು ಪುನಾರಂಭಗೊಂಡಿವೆ.

ಆಟೋ ಉತ್ಪಾದನಾ ಕಂಪನಿಗಳಿಗೆ ಕೋವಿಡ್ ಎರಡನೇ ಅಲೆಯಿಂದ ಭಾರೀ ನಷ್ಟ ಉಂಟಾಗಿರುವುದರ ಜೊತೆಗೆ ಇದೀಗ ಇಂಧನಗಳ ಬೆಲೆ ಏರಿಕೆ ಕೂಡಾ ಹೊಸ ವಾಹನಗಳ ಖರೀದಿಗೆ ಮೇಲೆ ಪರಿಣಾಮ ಬೀರುತ್ತಿದೆ. ಕೋವಿಡ್ ಅಬ್ಬರದ ನಡುವೆಯೂ ಪ್ರಮುಖ ವಾಹನ ಕಂಪನಿಗಳು ಗ್ರಾಹಕರ ಸೆಳೆಯುವ ವಿಶ್ವಾಸದೊಂದಿಗೆ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡದ್ದು, ವಾಹನ ಮಾಲೀಕರಿಗೆ ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ ಮಾಡಿರುವುದು ಈ ವಾರದ ಸುದ್ದಿಗಳಲ್ಲಿ ಪ್ರಮುಖವಾಗಿದೆ. ಹಾಗಾದ್ರೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಯಾವೆಲ್ಲಾ ಸುದ್ದಿಗಳಿವೆ ಎಂಬುವುದರ ಹೈಲೈಟ್ಸ್ ತಿಳಿಯೋಣ.

ವಾಹನ ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ
ದೇಶಾದ್ಯಂತ ಕರೋನಾ ವೈರಸ್ 2ನೇ ಅಲೆ ಹೆಚ್ಚಿರುವ ಪರಿಣಾಮ ಲಾಕ್‌ಡೌನ್ ವಿಸ್ತರಣೆಯಾಗುತ್ತಿರುವುದು ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ವಾಹನ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಕೆಲವು ಪ್ರಮುಖ ವಿನಾಯ್ತಿಗಳನ್ನು ನೀಡಿದೆ.

ಈ ತಿಂಗಳು 30ಕ್ಕೆ ಮುಕ್ತಾಯಗೊಳ್ಳಲಿರುವ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಎಫ್‌ಸಿ ಮಾನ್ಯತಾ ಅವಧಿಯನ್ನು ಸೆಪ್ಟೆಂಬರ್ 31ರ ತನಕ ವಿಸ್ತರಣೆ ಮಾಡಿದ್ದು, ಮಾನ್ಯತಾ ಅವಧಿ ಮುಗಿದಿರುವ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಎಫ್‌ಸಿ ಕಾರಣಕ್ಕೆ ವಾಹನ ಸವಾರರಿಗೆ ಯಾವುದೇ ದಂಡವಿಧಿಸುವಂತಿಲ್ಲವೆಂದು ಸ್ಪಷ್ಟಪಡಿಸಿದೆ.

ಶತಕ ಪೂರೈಸಿದ ಇಂಧನ ಬೆಲೆ
ದೇಶಾದ್ಯಂತ ಇಂಧನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ವಾಹನ ಸವಾರರು ಇಂಧನ ಬೆಲೆ ಹೊಡೆತಕ್ಕೆ ಹೈರಾಣಾಗಿ ಹೋಗಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.100 ದಾಟಿದ್ದು, ಡೀಸೆಲ್ ಬೆಲೆಯು ಕೂಡಾ ವಿವಿಧ ನಗರಗಳಲ್ಲಿ ರೂ.91 ರಿಂದ ರೂ. 93 ಬೆಲೆ ಹೊಂದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ಕೂಡಾ ಹೊಸ ವಾಹನಗಳ ಮಾರಾಟದಲ್ಲಿ ಕುಸಿತ ಕಾಣಲು ಪ್ರಮುಖ ಕಾರಣವಾಗುತ್ತಿದ್ದು, ಇಂಧನ ಬೆಲೆ ಇಳಿಕೆಗಾಗಿ ಕೇಂದ್ರ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿದ ಬೇಡಿಕೆ
ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರವು ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗುತ್ತಿರುವ ಫೇಮ್ 2 ಸಬ್ಸಡಿಯನ್ನು ದ್ವಿಚಕ್ರ ವಾಹನಗಳಿಗಾಗಿ ಹೆಚ್ಚಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಈ ಕಾರಣಕ್ಕಾಗಿ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಫೇಮ್ 2 ಸಬ್ಸಡಿ ಯೋಜನೆಗೆ ಹೊಸ ತಿದ್ದುಪಡಿಯ ತರುವ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸಬ್ಸಿಡಿ ಪ್ರಮಾಣವನ್ನು ಬ್ಯಾಟರಿ ಪ್ಯಾಕ್ ಆಧರಿಸಿ ಪ್ರತಿ ಕಿಲೋವ್ಯಾಟ್‌ಗೆ ರೂ.5 ಸಾವಿದಿಂದ ರೂ.30 ಸಾವಿರ ತನಕ ಏರಿಕೆ ಮಾಡಲಾಗಿದೆ. ಹೊಸ ತಿದ್ದುಪಡಿಯ ನಂತರ ಪ್ರತಿ ಇವಿ ಸ್ಕೂಟರ್ ಬೆಲೆ ಸಾಕಷ್ಟು ತಗ್ಗಿದ್ದು, ಹೊಸ ಸಬ್ಸಡಿ ನಿರ್ಧಾರದಿಂದಾಗಿ ಭರ್ಜರಿ ಬೇಡಿಕೆ ಹರಿದುಬರುತ್ತಿದೆ.

ಹ್ಯುಂಡೈ ಅಲ್ಕಾಜರ್ ಬಿಡುಗಡೆ
ಬಹುನೀರಿಕ್ಷಿತ ಅಲ್ಕಾಜರ್ ಕಾರು 6 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯದೊಂದಿಗೆ ಪ್ಲ್ಯಾಟಿನಂ, ಪ್ರೆಸ್ಟೀಜ್, ಸಿಗ್ನೆಚೆರ್, ಪ್ಲ್ಯಾಟಿನಂ ಆಪ್ಷನ್, ಪ್ರೆಸ್ಟೀಜ್ ಆಪ್ಷನ್ ಮತ್ತು ಸಿಗ್ನೆಚೆರ್ ಆಪ್ಷನ್ ಎನ್ನುವ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.99 ಲಕ್ಷ ಬೆಲೆ ಹೊಂದಿದೆ.

ಹೊಸ ಅಲ್ಕಾಜರ್ ಕಾರು ಅತ್ಯುತ್ತಮ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಬಿಡುಗಡೆ
ಐಷಾರಾಮಿ ಕಾರು ತಯಾರಕ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ತನ್ನ ಜನಪ್ರಿಯ ಎಸ್-ಕ್ಲಾಸ್ ಸೆಡಾನ್ ಮಾದರಿಯ ನ್ಯೂ ಜನರೇಷನ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.17 ಕೋಟಿ ಬೆಲೆ ಹೊಂದಿದೆ.

ಹೊಸ ಎಸ್-ಕ್ಲಾಸ್ ಮಾದರಿಯನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಎಸ್ 400ಡಿ ಲಾಂಚ್ ಎಡಿಷನ್ (ರೂ. 2.17 ಕೋಟಿ) ಮತ್ತು ಎಸ್ 450 ಲಾಂಚ್ ಎಡಿಷನ್ (ರೂ. 2.19 ಕೋಟಿ) ಎನ್ನುವ ವೆರಿಯೆಂಟ್‌ಗಳಲ್ಲಿ ಪರಿಚಯಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಖರೀದಿಗೆ ಲಭ್ಯವಿದೆ.

ಹ್ಯುಂಡೈ ಕ್ರೆಟಾ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಆವೃತ್ತಿ ಬಿಡುಗಡೆ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಹೊಸ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದ್ದು, ಎಸ್ಎಕ್ಸ್ ಮಾದರಿಗಿಂತಲೂ ಕೆಳಸ್ಥಾನದಲ್ಲಿ ಮಾರಾಟಗೊಳ್ಳಲಿರುವ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 13.18 ಲಕ್ಷ ಬೆಲೆ ಹೊಂದಿದೆ.

ಇದು ಸ್ಟ್ಯಾಂಡರ್ಡ್ ಎಸ್ಎಕ್ಸ್ ಮಾದರಿಗಿಂತಲೂ ರೂ.78 ಸಾವಿರದಷ್ಟು ಕಡಿಮೆ ಬೆಲೆ ಹೊಂದಿದ್ದು, ಮಧ್ಯಮ ಕ್ರಮಾಂಕದಲ್ಲಿ ಎಸ್ಎಕ್ಸ್ ವೆರಿಯೆಂಟ್ ಬೇಡಿಕೆ ಹೆಚ್ಚಿಸಲು ಕೆಲವು ಬದಲಾವಣೆಗಳೊಂದಿಗೆ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಬಿಡುಗಡೆ ಮಾಡಲಾಗಿದೆ. ಹೊಸ ಆವೃತ್ತಿಯು ಪೆಟ್ರೋಲ್(ರೂ. 13.18 ಲಕ್ಷ) ಮತ್ತು ಡೀಸೆಲ್( ರೂ. 14.18 ಲಕ್ಷ) ಆವೃತ್ತಿಗಳಲ್ಲಿ ಖರೀದಿ ಮಾಡಬಹುದಾಗಿದೆ.

ಯಮಹಾ ಎಫ್‍ಜೆಡ್-ಎಕ್ಸ್ ಬೈಕ್ ಬಿಡುಗಡೆ
ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಹೊಸ ಎಫ್‍ಜೆಡ್-ಎಕ್ಸ್ ಬೈಕ್ ನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಎಫ್‍ಜೆ ಡ್-ಎಕ್ಸ್ ಬೈಕಿನ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.1.16 ಲಕ್ಷಗಳಾಗಿದೆ.

149 ಸಿಸಿ ಎಂಜಿನ್‌ನೊಂದಿಗೆ ಹೊಸ ಯಮಹಾ ಎಫ್‍ಜೆಡ್-ಎಕ್ಸ್ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಇದರ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.1,16,800 ಗಳಾದರೆ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ ರೂಪಾಂತರದ ಬೆಲೆಯು ರೂ.1,19,800 ಗಳಾಗಿದೆ.


Click it and Unblock the Notifications