ದರ ಹೆಚ್ಚಳ: ಭಾರತದಲ್ಲಿ Toyota ಕಾರುಗಳ ಬೆಲೆ ಮತ್ತಷ್ಟು ದುಬಾರಿ!
ಆಟೋ ಬಿಡಿಭಾಗಗಳ ವೆಚ್ಚವು ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಕಂಪನಿಯು ಕೂಡಾ ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದೆ.

ಹೊಸ ವಾಹನಗಳ ಉತ್ಪಾದನಾ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಟೊಯೊಟಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಯ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ, ಫಾರ್ಚೂನರ್ ಸೇರಿದಂತೆ ಎಲ್ಲಾ ಕಾರುಗಳ ಬೆಲೆ ಹೆಚ್ಚಳ ಮಾಡಿದ್ದು, ಹೊಸ ದರ ಪಟ್ಟಿಯಲ್ಲಿ ವಿವಿಧ ಮಾದರಿಗಳಿಗೆ ಅನುಗುಣವಾಗಿ ಶೇ.1.50ರಿಂದ ಶೇ.2 ರಷ್ಟು ಹೆಚ್ಚಳ ಮಾಡಲಾಗಿದೆ.

ಹೊಸ ದರಪಟ್ಟಿಯಲ್ಲಿ ಕಂಪನಿಯ ಎಂಟ್ರಿ ಲೆವಲ್ ಕಾರು ಮಾದರಿಯಾದ ಗ್ಲಾಂಝಾ ಕಾರಿನ ಬೆಲೆಯಲ್ಲಿ ರೂ. 15 ಸಾವಿರದಷ್ಟು ದುಬಾರಿಯಾದಲ್ಲಿ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಾದ ಅರ್ಬನ್ ಕ್ರೂಸರ್ ಮಾದರಿಯ ಬೆಲೆಯಲ್ಲಿ ಗರಿಷ್ಠ ರೂ. 10 ಸಾವಿರದಷ್ಟು ಹೆಚ್ಚಳವಾಗಿದೆ.

ಹಾಗೆಯೇ ಇನೋವಾ ಕ್ರಿಸ್ಟಾ ಎಂಪಿವಿ ಕಾರು ಮಾದರಿಯ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಗರಿಷ್ಠ ರೂ. 36 ಸಾವಿರ ಏರಿಕೆಯಾಗಿದ್ದು, ಹೈಬ್ರಿಡ್ ಕಾರು ಮಾದರಿಯಾದ ಕ್ಯಾಮ್ರಿ ಕಾರು ಮಾದರಿಯ ಬೆಲೆಯಲ್ಲಿ ರೂ. 61 ಸಾವಿರ ಏರಿಕೆಯಾಗಿದೆ.

ಹೊಸ ದರ ಪಟ್ಟಿಯಲ್ಲಿ ಫಾರ್ಚೂನರ್ ಕಾರು ಮಾದರಿಯ ಬೆಲೆಯು ಕೂಡಾ ಹೆಚ್ಚಳವಾಗಿದ್ದು, ಹೊಸ ದರಪಟ್ಟಿಯಲ್ಲಿ ಗರಿಷ್ಠ ರೂ.39 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ. ಆದರೆ ಹೊಸ ದರ ಪಟ್ಟಿಯಲ್ಲಿ ಕಂಪನಿಯು ವೆಲ್‌ಫೈರ್ ಐಷಾರಾಮಿ ಕಾರಿನ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.

ಕೋವಿಡ್ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ ಟೊಯೊಟಾ ಕಂಪನಿಯು ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಮೂರರಿಂದ ನಾಲ್ಕು ಬಾರಿ ದರ ಹೆಚ್ಚಿಸಿವೆ.

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 60 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಇನ್ನು ಕೋವಿಡ್ ಪರಿಣಾಮ ಸುರಕ್ಷಿತ ವಾಣಿಜ್ಯ ವ್ಯವಹಾರಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಕೋವಿಡ್ 2ನೇ ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ವಾಣಿಜ್ಯ ವ್ಯವಹಾರಗಳು ಇದೀಗ ಮತ್ತೆ ವೈರಸ್ ಭೀತಿ ಎದುರಿಸುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೂ ಹೊಸ ಸುರಕ್ಷಾ ಕ್ರಮಗಳೊಂದಿಗೆ ಸುರಕ್ಷಿತ ವ್ಯವಹಾರಕ್ಕೆ ಆದ್ಯತೆ ನೀಡುತ್ತಿವೆ.

ದೇಶಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಏರಿಳಿತ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವೈರಸ್ ಪರಿಣಾಮ ನಿರಂತರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಾಹನ ಉತ್ಪಾದನಾ ಕಂಪನಿಗಳು ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ವಾಹನಗಳ ಮಾರಾಟವನ್ನು ಸುಧಾರಿಸುವತ್ತ ಹೊಸ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿವೆ.

ಕೋವಿಡ್ ಪರಿಣಾಮ ಗ್ರಾಹಕರನ್ನು ನೇರವಾಗಿ ಶೋರೂಂ ಭೇಟಿಯನ್ನು ತಪ್ಪಿಸಲು ಬಹುತೇಕ ವಾಹನ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ವಾಹನ ಕಂಪನಿಗಳ ಹೊಸ ಉಪಕ್ರಮಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆತ್ತಿದೆ.

ಇದರ ಜೊತೆಗೆ ಹೊಸ ವಾಹನಗಳ ವೀಕ್ಷಣೆಗಾಗಿ ಮತ್ತೊಂದು ಪ್ರಮುಖ ಹೆಜ್ಜೆಯಿರಿಸಿರುವ ಆಟೋ ಉತ್ಪದನಾ ಕಂಪನಿಗಳು ವರ್ಚುವಲ್ ಶೋರೂಂಗಳನ್ನು ಸಹ ತೆರೆಯುತ್ತಿದ್ದು, ಇದು ಸಾಮಾನ್ಯ ವೆಬ್‌ತಾಣಗಳಲ್ಲಿ ಸಿಗುವ ವಾಹನಗಳ ಮಾಹಿತಿಗಿಂತಲೂ ಪ್ರಸ್ತುತಪಡಿಸುವ ಶೈಲಿ ವಿಭಿನ್ನವಾಗಿರುತ್ತದೆ.

ವರ್ಚುವಲ್ ಶೋರೂಂಗಳು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿಯಾದ ಅನುಭವವನ್ನೇ ನೀಡಲಿದ್ದು, ಹೊಸ ಮಾರಾಟ ಸೌಲಭ್ಯಕ್ಕೆ ಟೊಯೊಟಾ ಇಂಡಿಯಾ ಕಂಪನಿಯು ಕೂಡಾ ಇದೀಗ ಚಾಲನೆ ನೀಡಿದೆ. ಇದಕ್ಕಾಗಿ ಪ್ರತ್ಯೇಕ ವೆಬ್‌ತಾಣವನ್ನು ತೆರೆದಿದ್ದು, ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದೆ.


Click it and Unblock the Notifications