ಈ ವರ್ಷಾಂತ್ಯಕ್ಕೆ ಭಾರತದಲ್ಲಿ ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಟೊಯೊಟಾ
ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲಿ ತನ್ನದೆ ಜನಪ್ರಿಯತೆ ಹೊಂದಿರುವ ಟೊಯೊಟಾ ಕಂಪನಿಯು ಭಾರತದಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಈ ವರ್ಷಾಂತ್ಯಕ್ಕೆ ಒಟ್ಟು ನಾಲ್ಕು ಹೊಸ ಕಾರುಗಳು ರಸ್ತೆಗಿಳಿಯಲಿವೆ.

2019ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿಯು ವಿದೇಶಿ ಕಾರು ಉತ್ಪಾದನಾ ಕಂಪನಿಗಳಿಗೆ ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಕಾರು ಕಂಪನಿಗಳು ವಾರ್ಷಿಕವಾಗಿ 2,500 ಯುನಿಟ್ ಕಾರುಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದು ಟೊಯೊಟಾ ಕಂಪನಿಗೂ ವರವಾಗಿದೆ.

ಟೊಯೊಟಾ ಕಂಪನಿಯು ಹೊಸ ಆಮದು ನೀತಿ ಅಡಿ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಪ್ರಮುಖ ಎರಡು ಕಾರುಗಳನ್ನು ಹೊಸ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದ್ದು, ಈಗಾಗಲೇ ಹೊಸ ಆಮದು ನೀತಿ ಅಡಿಯಲ್ಲಿ ವೆಲ್‌ಫೈರ್ ಐಷಾರಾಮಿ ಎಂಪಿವಿ ಮಾದರಿಯನ್ನು ಮಾರಾಟ ಮಾಡುತ್ತಿದೆ.

ಪ್ರಸಕ್ತ ವರ್ಷದ ಆಮದು ನೀತಿ ಅಡಿಯಲ್ಲಿ ಮತ್ತೆರಡು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಎರಡು ರೀಬ್ಯಾಡ್ಜ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಟೊಯೊಟಾ ಬಿಡುಗಡೆ ಮಾಡಲಿರುವ ನಾಲ್ಕು ಕಾರುಗಳಲ್ಲಿ ಎರಡು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾದ ಮಾದರಿಗಳಾದರೆ ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವದಲ್ಲಿ ಎರಡು ರೀಬ್ಯಾಡ್ಜ್ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಬಿಡುಗಡೆಯಾಗಲಿರುವ ಆಮದು ಮಾದರಿಗಳಲ್ಲಿ ರಾವ್4 ಎಸ್‌ಯುವಿ ಮತ್ತು ಹಿಲುಕ್ಸ್ ಪಿಕ್ಅಪ್ ಆವೃತ್ತಿ ಬಿಡುಗಡೆಯಾಗಲಿದ್ದು, ರೀಬ್ಯಾಡ್ಜ್ ಮಾದರಿಗಳಲ್ಲಿ ಮಾರುತಿ ಸುಜುಕಿಯ ಎರ್ಟಿಗಾ ಮತ್ತು ಸಿಯಾಜ್ ಕಾರುಗಳನ್ನೇ ಹೊಸ ಹೆಸರಿನೊಂದಿಗೆ ಬಿಡುಗಡೆ ಮಾಡುವ ಯೋಜನೆಯಿದೆ.

ಹೊಸ ರಾವ್4 ಕಾರು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಹೊಸ ಕಾರನ್ನು ಟೊಯೊಟಾ ಕಂಪನಿಯು ಹೊಚ್ಚ ಹೊಸ ಟಿಎನ್‌ಜಿಎ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣಗೊಳ್ಳುತ್ತಿದೆ. ರಾವ್4 ಕಾರು ಮಾದರಿಯಲ್ಲಿ ಟೊಯೊಟಾ ಕಂಪನಿಯು 2.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವನ್ನು ಜೋಡಣೆ ಮಾಡಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ರಾವ್4 ಕಾರು ಗ್ರಾಹಕರ ಗಮನಸೆಳೆಯಲಿದೆ.

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಐದನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿರುವ ರಾವ್4 ಎಸ್‌ಯುವಿ ಮಾದರಿಯು ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, 4,600-ಎಂಎಂ ಉದ್ದ, 1,855-ಎಂಎಂ ಅಗಲ, 1,685-ಎಂಎಂ ಎತ್ತರ ಮತ್ತು 2,690-ಎಂಎಂ ವೀಲ್ಹ್ ಬೆಸ್ ಹೊಂದಿದೆ.

ಹೊಸ ರಾವ್4 ಕಾರು ಮಾದರಿಯನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವುದರಿಂದ ಹೊಸ ಕಾರು ತುಸು ದುಬಾರಿಯಾಗಿರಲಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 49 ಲಕ್ಷದಿಂದ ರೂ. 55 ಲಕ್ಷ ಬೆಲೆ ಹೊಂದಲಿರುವ ಹೊಸ ಕಾರು ಮುಂಬರುವ ಜೂನ್ ಹೊತ್ತಿಗೆ ಬಿಡುಗಡೆಯಾಗಲಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹಾಗೆಯೇ ಮಧ್ಯಮ ಗಾತ್ರದ ಪಿಕ್ಅಪ್ ಎಸ್‌ಯುವಿ ಮಾದರಿಯಲ್ಲೇ ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹಿಲಕ್ಸ್ ವಾಹನ ಮಾದರಿಯು ವಿದೇಶಿ ಮಾರುಕಟ್ಟೆಯಲ್ಲಿ ವಿವಿಧ ಎಂಜಿನ್ ಮಾದರಿಯೊಂದಿಗೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಪ್ರಮುಖ ಎರಡು ಡೀಸೆಲ್ ಎಂಜಿನ್‌ನೊಂದಿಗೆ ರಸ್ತೆಗಿಳಿಯಲಿವೆ.

ಹೊಸ ಪಿಕ್ಅಪ್ ವಾಹನದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2.4-ಲೀಟರ್ ಡೀಸೆಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಬಿಡುಗಡೆ ಮಾಡಲಿದ್ದು, ಕಡಿಮೆ ಎಂಜಿನ್ ವೇಗದಲ್ಲೂ ಅತಿಹೆಚ್ಚು ಟಾರ್ಕ್ ಉತ್ಪಾದನಾ ಗುಣಹೊಂದಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ವೆರಿಯೆಂಟ್‌ಗಳೊಂದಿಗೆ ಮಾರಾಟವಾಗುತ್ತಿರುವ ಹಿಲುಕ್ಸ್ ಮಾದರಿಯು ಭಾರತದಲ್ಲಿ ವಿವಿಧ ಎಂಜಿನ್ ಆಯ್ಕೆಯೊಂದಿಗೆ ರೂ.20 ಲಕ್ಷದಿಂದ ರೂ. 25 ಲಕ್ಷ ಬೆಲೆ ಅಂತರದಲ್ಲಿನ ಕೆಲವೇ ವೆರಿಯೆಂಟ್‌ಗಳೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

ಇನ್ನು ಮಾರುತಿ ಸುಜುಕಿಯೊಂದಿನ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಎರಡನೇ ಹಂತದಲ್ಲಿ ಸಿಯಾಜ್ ಮತ್ತು ಎರ್ಟಿಗಾ ಕಾರುಗಳನ್ನು ಶೀಘ್ರದಲ್ಲೇ ಹೊಸ ಹೆಸರಿನೊಂದಿಗೆ ರಸ್ತೆಗಿಳಿಸುತ್ತಿದ್ದು, ರೀಬ್ಯಾಡ್ಜ್ ಕಾರುಗಳು ಮೂಲ ಮಾದರಿಗಳಿಂತಲೂ ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿಯುತ್ತಿವೆ.


Click it and Unblock the Notifications