Tata Motors ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೆ ಬರೋಬ್ಬರಿ ರೂ. 7,500 ಕೋಟಿ ಹೂಡಿಕೆ
ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಮತ್ತಷ್ಟು ಇವಿ ವಾಹನಗಳ ಬಿಡುಗಡೆಗೆ ಬೃಹತ್ ಯೋಜನೆ ರೂಪಿಸಿದ್ದು, ಭವಿಷ್ಯ ಯೋಜನೆಗಾಗಿ ಕಂಪನಿಯು ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದೆ.

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ನೆಕ್ಸಾನ್ ಇವಿ(Nexon EV), ಟಿಗೋರ್ ಇವಿ(Tigor EV) ಮತ್ತು ಎಕ್ಸ್‌ಪ್ರೆಸ್-ಟಿ ಇವಿ(XPres-t EV) ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ಮೈಲಿಗಲ್ಲು ಸಾಧಿಸುತ್ತಿದ್ದು, ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ವಾಹನಗಳೊಂದಿಗೆ ಇವಿ ವಾಹನ ಉದ್ಯಮದಲ್ಲಿ ಅಧಿಪತ್ಯ ಹೊಂದುವ ನೀರಿಕ್ಷೆಯಲ್ಲಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯ ಪ್ರಮಾಣಕ್ಕೆ ಕಡಿವಾಣ ಹಾಕಲು ಇವಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಟಾಟಾ ಮೋಟಾರ್ಸ್ ಕಂಪನಿಯು ವಿವಿಧ ಮಾದರಿಯ ಇವಿ ವಾಹನ ಉತ್ಪಾದನೆಯೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮೂರು ಇವಿ ಕಾರು ಮಾದರಿಗಳನ್ನು ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಹತ್ತು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಟಾಟಾ ಮೋಟಾರ್ಸ್ ಕಂಪನಿಯ ಬೃಹತ್ ಯೋಜನೆಗಾಗಿ ಕೈಜೋಡಿಸಿರುವ ಟಿಪಿಜಿ ರೈಸ್ ಕ್ಲೈಮೆಟ್ ಕಂಪನಿಯು ಹೊಸ ಯೋಜನೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಅಸ್ತು ಎಂದಿದ್ದು, ಮುಂದಿನ 2022ರ ಕೊನೆಯ ವೇಳೆಗೆ ವಿವಿಧ ಹಂತದಲ್ಲಿ ಒಟ್ಟು 1 ಬಿಲಿಯನ್ ಡಾಲರ್(ಅಂದಾಜು ರೂ. 7,500 ಕೋಟಿ) ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ.

ಅಮೆರಿಕದ ಟಿಪಿಜಿ ರೈಸ್ ಕ್ಲೈಮೆಟ್ ಕಂಪನಿಯು ತನ್ನ ಅಂಗಸಂಸ್ಥೆಯಾದ ಎಡಿಕ್ಯೂ ಇನ್ವೆಸ್ಟ್ ಕಂಪನಿಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯ ಹೊಸ ಇವಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ದು, ಹೊಸ ಬಂಡವಾಳ ಹೂಡಿಕೆಯೂ ಟಾಟಾ ಮೋಟಾರ್ಸ್ ಕಂಪನಿಯ ಇವಿ ವಾಹನ ಉತ್ಪಾದನಾ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿಲಿದೆ.

ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನ ಉತ್ಪಾದನೆಗಾಗಿ ಸದ್ಯ ಸಾಮಾನ್ಯ ಕಾರುಗಳ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳಿಸಿ ಉತ್ಪಾದನೆ ಕೈಗೊಳ್ಳುತ್ತಿದ್ದು, ಕಂಪನಿಯು ಇವಿ ವಾಹನ ಉತ್ಪಾದನೆಗಾಗಿಯೇ ಪ್ರತ್ಯೇಕ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾಗಿದೆ.

ಜೊತೆಗೆ ಇವಿ ವಾಹನಗಳ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನದೇ ಅಧೀನದಲ್ಲಿ ಮತ್ತೊಂದು ಇವಿ ವಾಹನಗಳ ಅಂಗ ಸಂಸ್ಥೆಯನ್ನು ತೆರೆಯುವ ಸಿದ್ದತೆಯಲ್ಲಿದ್ದು, 2022ರ ಆರಂಭದಲ್ಲಿ ಹೊಸ ಪ್ಲ್ಯಾಟ್‌ಫಾರ್ಮ್ ಕುರಿತಾಗಿ ಮಾಹಿತಿ ಹಂಚಿಕೊಳ್ಳಲಿದೆ ಎನ್ನಲಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ಮುಂದಿನ ಐದು ವರ್ಷಗಳ ಹೊಸ ಯೋಜನೆಗಾಗಿ ಒಟ್ಟು ರೂ.16,500 ಬಂಡವಾಳ ಹೂಡಿಕೆಗೆ ಸಿದ್ದತೆ ನಡೆಸುತ್ತಿದ್ದು, ಟಿಪಿಜಿ ರೈಸ್ ಕ್ಲೈಮೆಟ್ ಕಂಪನಿಯು ರೂ.7,500 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಹೊಸ ಇವಿ ಪ್ಲ್ಯಾಟ್‌ಫಾರ್ಮ್‌ನಲ್ಲಿ ಶೇ.15 ರಷ್ಟು ಸ್ಟಾಕ್ ಖಾತ್ರಿಪಡಿಸಿಕೊಂಡಿದೆ.

ಈ ಮೂಲಕ ಹೊಸ ಯೋಜನೆಯ ಅನುಷ್ಠಾನವನ್ನು ಖಾತ್ರಿಪಡಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ನೀರಿಕ್ಷೆಯೊಂದಿಗೆ ಇವಿ ವಾಹನಗಳನ್ನು ಅಭಿವೃದ್ದಿಗೊಳಿಸಲಿದ್ದು, ಹೊಸ ಯೋಜನೆ ಅಡಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಸಹ ಹೆಚ್ಚಿಸಲು ನಿರ್ಧರಿಸಲಾಗಿದೆ.

ಇನ್ನು ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ವಾಹನಗಳ ಮೂಲಕ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

2019ರಲ್ಲಿ ಮೊದಲ ಬಾರಿಗೆ ಪ್ರಯಾಣಿಕ ಬಳಕೆಯ ಎಲೆಕ್ಟ್ರಿಕ್ ಕಾರು ಪರಿಚಯಿಸಿದ ನಂತರ ಕಂಪನಿಯು ಇದುವರೆಗೆ ಸುಮಾರು 11 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ನೆಕ್ಸಾನ್ ಇವಿ ಕಾರು ಟಾಟಾ ಕಂಪನಿಯ ಇವಿ ವಾಹನ ಉತ್ಪಾದನಾ ಯೋಜನೆಗೆ ಹೊಸ ಆಯಾಮ ನೀಡಿದೆ.

ಆರಂಭದಲ್ಲಿ ಟಿಗೋರ್ ಇವಿ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ತದನಂತರ ನೆಕ್ಸಾನ್ ಇವಿ ಮಾದರಿಯನ್ನು ಪರಿಚಯಿಸಿದ್ದು, ಕಂಪನಿಯು ಇತ್ತೀಚೆಗೆ ವಾಣಿಜ್ಯ ಬಳಕೆದಾರರಿಗಾಗಿ ಹೊಸದಾಗಿ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯ ಮಾರಾಟಕ್ಕೆ ಚಾಲನೆ ನೀಡಿದೆ.

ಟಾಟಾ ಮೋಟಾರ್ಸ್ ಕಂಪನಿಯ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ನೆಕ್ಸಾನ್ ಇವಿ ಕಾರು ಅಗ್ರಸ್ಥಾನದಲ್ಲಿದ್ದು, ಕಂಪನಿಯು ಮಾರಾಟಗೊಳಿಸಿರುವ 11 ಸಾವಿರ ಇವಿ ಕಾರುಗಳಲ್ಲಿ ಶೇ. 70ರಷ್ಟು ಪಾಲು ನೆಕ್ಸಾನ್ ಇವಿ ಹೊಂದಿದೆ.

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನಕ್ಕೇರಿರುವ ಟಾಟಾ ಕಂಪನಿಯು ನೆಕ್ಸಾನ್ ಇವಿ ಕಾರು ಮಾದರಿಯೊಂದಿಗೆ ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇಂಧನಗಳ ಬೆಲೆ ಹೆಚ್ಚುತ್ತಿರುವುದರಿಂದ ಎಲೆಕ್ಟ್ರಿಕ್ ಕಾರಿಗೆ ಬೇಡಿಕೆಯಲ್ಲಿ ಸಾಕಷ್ಟು ಏರಿಕೆಯಾಗುತ್ತಿದೆ.

ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವು ಹೈ ವೊಲ್ಟೆಜ್ ಸಿಸ್ಟಂನೊಂದಿಗೆ ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳು ಟಾಟಾ ಮೋಟಾರ್ಸ್ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.


Click it and Unblock the Notifications