2022 ಎಂಜಿ ಜೆಡ್‌ಎಸ್ ಇವಿ vs ಟಾಟಾ ನೆಕ್ಸಾನ್ ಇವಿ.. ಈ ಎರಡೂ ಕಾರುಗಳಲ್ಲಿ ಶಕ್ತಿಯುತ ಇವಿ ಯಾವುದು?
ಜನಪ್ರಿಯ ವಾಹನ ತಯಾರಕ ಎಂಜಿ ಮೋಟಾರ್ ಇಂಡಿಯಾ ಇತ್ತೀಚೆಗೆ ತನ್ನ 2022ರ ಎಂಜಿ ಜೆಡ್‌ಎಸ್ ಇವಿಯನ್ನು (2022 MG ZS EV) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಎಸ್‌ಯುವಿಯನ್ನು ತನ್ನ ಎರಡು ವೇರಿಯಂಟ್‌ಗಳಾದ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್‌ಗಳನ್ನು ಪರಿಚಯಿಸಿದೆ.

ಈ ಎಸ್‌ಯುವಿಯನ್ನು ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು ಹೊಸ ವಿನ್ಯಾಸ ಮತ್ತು ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿ ನಾವು ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿ ಆದ ಟಾಟಾ ನೆಕ್ಸನ್‌ನೊಂದಿಗೆ (SUV Tata Nexon) ಹೋಲಿಕೆ ಮಾಡಿದ್ದು ಎರಡರ ನಡುವಿನ ಭಿನ್ನತೆ, ಸಾಮ್ಯತೆ, ಶಕ್ತಿ ಹಾಗೂ ಪರ್ಫಾಮೆನ್ಸ್ ನೋಡುವುದಾದರೆ.

2022 ಎಂಜಿ ಜೆಡ್‌ಎಸ್ ಇವಿ ಹಾಗೂ ಟಾಟಾ ನೆಕ್ಸನ್ ಇವಿ ನಡುವಿನ ಬೆಲೆ
ಎಂಜಿ ಮೋಟಾರ್ ಇಂಡಿಯಾ ತನ್ನ 2022ರ ಎಂಜಿ ಜೆಡ್‌ಎಸ್ ಇವಿಯನ್ನು 22.00 ಲಕ್ಷ ರೂ.ಗಳ (ಎಕ್ಸ್ ಶೋ ರೂಮ್) ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ಅದರ ಟಾಪ್-ಸ್ಪೆಕ್ ವೇರಿಯಂಟ್ ಬೆಲೆ 25.88 ಲಕ್ಷ ರೂ.ಗಳಾಗಿದೆ (ಎಕ್ಸ್ ಶೋ ರೂಂ). ಮತ್ತೊಂದೆಡೆ, ಟಾಟಾ ನೆಕ್ಸನ್ ಇವಿ ಎಸ್‌ಯುವಿಯನ್ನು 14.29 ಲಕ್ಷ ರೂ.ಗಳಿಂದ 14.69 ಲಕ್ಷ ರೂ.ಗಳಿಗೆ (ಎಕ್ಸ್ ಶೋ ರೂಂ) ಮಾರಾಟ ಮಾಡಲಾಗುತ್ತಿದೆ.

ಎಂಜಿ ಜೆಡ್‌ಎಸ್ ಇವಿ ಹಾಗೂ ಟಾಟಾ ನೆಕ್ಸನ್ ಇವಿ ನಡುವಿನ ಗಾತ್ರ
2022 ಎಂಜಿ ಜೆಡ್‌ಎಸ್ ಇವಿ 4,323 ಮಿಮೀ ಉದ್ದ, 1,809 ಮಿಮೀ ಅಗಲ ಮತ್ತು ಎತ್ತರ 1,649 ಮಿ.ಮೀ ಇದೆ. ಇದರ ವೀಲ್ ಬೇಸ್ ಅನ್ನು 2,581 ಮಿಮೀನಲ್ಲಿ ಇಡಲಾಗಿದೆ. ಜೊತೆಗೆ 17-ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ. ಟಾಟಾ ನೆಕ್ಸನ್ ಇವಿ 3,993 ಮಿಮೀ ಉದ್ದ, 1,811 ಮಿಮೀ ಅಗಲ ಮತ್ತು 1,606 ಮಿಮೀ ಎತ್ತರವನ್ನು ಹೊಂದಿದೆ. ಇದರ ವೀಲ್ ಬೇಸ್ ಅನ್ನು 2,498 ಮಿಮೀ ನಲ್ಲಿ ಇಡಲಾಗಿದೆ.

ಜೆಡ್‌ಎಸ್ ಇವಿ ಹಾಗೂ ನೆಕ್ಸಾನ್ ಇವಿಯ ಮೋಟಾರ್, ಬ್ಯಾಟರಿ, ರೇಂಜ್..
ಎಂಜಿ ಜೆಡ್‌ಎಸ್ ಇವಿಯ ಎಲೆಕ್ಟ್ರಿಕ್ ಮೋಟಾರ್ ಬಗ್ಗೆ ಹೇಳುವುದಾದರೆ, ಶಾಶ್ವತ ಮ್ಯಾಗ್ನೆಟ್ ಸಿಂಕ್ರೋನಸ್ ಮೋಟಾರ್ ಅನ್ನು 2022 ಎಂಜಿ ಜೆಡ್‌ಎಸ್ ಇವಿಯಲ್ಲಿ ಬಳಸಲಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 176 ಬಿಎಚ್‌ಪಿ ಮತ್ತು ಗರಿಷ್ಠ ಟಾರ್ಕ್ 280 ಎನ್‌ಎಂ ಶಕ್ತಿಯನ್ನು ನೀಡಬಲ್ಲದು. ಇದಕ್ಕೆ 50 ಕಿಲೋವ್ಯಾಟ್ ಬ್ಯಾಟರಿಯನ್ನು ಬಳಸಲಾಗಿದೆ.

ಈ ಎಸ್‌ಯುವಿಯ ಬ್ಯಾಟರಿಯು ಪೂರ್ಣ ಚಾರ್ಜ್‌ನಲ್ಲಿ 461 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ, ಇದು ತನ್ನ ಹಿಂದಿನ ಫೇಸ್‌ಲಿಫ್ಟ್ ಮಾದರಿಗಿಂತ 42 ಕಿ.ಮೀ ಹೆಚ್ಚು. ಮತ್ತು ಅದರ ಬ್ಯಾಟರಿಯನ್ನು 50 ಕೆಡಬ್ಲ್ಯೂಡಿಸಿ ಫಾಸ್ಟ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಿದಲ್ಲಿ ಕೇವಲ 60 ನಿಮಿಷಗಳಲ್ಲಿ ಶೇ80ರ ವರೆಗೆ ಚಾರ್ಜ್ ಆಗುತ್ತದೆ.

ಟಾಟಾ ನೆಕ್ಸಾನ್ ಇವಿ ಬಗ್ಗೆ ಹೇಳುವುದಾದರೆ, ಈ ಎಸ್‌ಯುವಿಯಲ್ಲಿ, ಕಂಪನಿಯು ಶಾಶ್ವತ ಮ್ಯಾಗ್ನೆಟ್ ಸಿಂಕ್ರೋನಸ್ ಮೋಟಾರ್ ಅನ್ನು ಬಳಸಿದೆ. ಜೊತೆಗೆ ಇದರ ಎಲೆಕ್ಟ್ರಿಕ್ ಮೋಟಾರ್ 129 ಬಿಎಚ್‌ಪಿ ಪವರ್ ಮತ್ತು 245 ಎನ್‌ಎಂ ಟಾರ್ಕ್ ಅನ್ನು ನೀಡುತ್ತದೆ, ಇದು 2022 ಎಂಜಿ ಜೆಡ್‌ಎಸ್ ಇವಿಗಿಂತ ತುಂಬಾ ಕಡಿಮೆಯಾಗಿದೆ.

ಇನ್ನು, ಟಾಟಾ ನೆಕ್ಸಾನ್ ಇವಿಯಲ್ಲಿ ಕಂಡುಬರುವ ಬ್ಯಾಟರಿಯ ಬಗ್ಗೆ ಹೇಳುವುದಾದರೆ ಟಾಟಾ ಮೋಟಾರ್ಸ್ 30.2 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿಯನ್ನು ಬಳಸಿದೆ. ಈ ಬ್ಯಾಟರಿಯನ್ನು 25 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಿದಾಗ ಕೇವಲ 60 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು ಮತ್ತು 312 ಕಿ.ಮೀ ವರೆಗೆ ವ್ಯಾಪ್ತಿಯನ್ನು ಹೊಂದಿದೆ.

ಹೊಸ ಕಾರಿನಲ್ಲಿ ಎಂಜಿ ಮೋಟಾರ್ ಕಂಪನಿಯು ಫುಲ್ ಎಲ್‌ಇಡಿ ಯುನಿಟ್ ಹೊಂದಿರುವ ಹ್ವಾಕ್ ಐ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಫಾಗ್‌ಲ್ಯಾಂಪ್ ಹೊಂದಿದ್ದು, ಹಾಗೆಯೇ ಹೊಸ ಕಾರಿನಲ್ಲಿ ಈ ಹಿಂದಿನ ಗ್ರಿಲ್ ಅನ್ನು ಬಾಡಿ ಕಲರ್ ಕವರ್ಡ್ ಪ್ಲೇಟ್ ನಿಂದ ಬದಲಾಯಿಸಲಾಗಿದೆ. ಈ ರೀತಿಯಾಗಿ ಹೊಸ ಎಂಜಿ ಝಡ್‌ಎಸ್ ಇವಿ ಫೇಸ್‌ಲಿಫ್ಟ್ ಅನ್ನು ತನ್ನ ಎಲೆಕ್ಟ್ರಿಕ್ ಎಸ್‌ಯುವಿ ಪ್ರತಿಸ್ಪರ್ಧಿಗೆ ಹೋಲಿಸಲಾಗಿದೆ. ಈ ಕಾರು ನೈಜ ಜಗತ್ತಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ರಸ್ತೆಯಲ್ಲಿ ಓಡಿಸಿ ಪರೀಕ್ಷಿಸಿದ ನಂತರವಷ್ಟೇ ಹೇಳಬಹುದು.


Click it and Unblock the Notifications








