ದುಬಾರಿ ಐಷಾರಾಮಿ ಕಾರುಗಳ ಒಡತಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಸದ್ಯ ಸೌತ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿರುವ 'ಮಿಷನ್ ಮಜ್ನು' ಜ.20ರಂದು Netflixನಲ್ಲಿ ರಿಲೀಸ್ ಆಗಲಿದೆ. 'ಗುಡ್ ಬೈ' ಶೂಟಿಂಗ್ ವೇಳೆಯೇ ಈ ಸಿನಿಮಾಗೂ ರಶ್ಮಿಕಾ ಸಹಿ ಮಾಡಿದ್ದರಂತೆ.
ರಶ್ಮಿಕಾ ಮಂದಣ್ಣ 2016ರಲ್ಲಿ ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ, ಟಾಲಿವುಡ್ ಪ್ರವೇಶಿಸಿದ ಅವರು ಕಡಿಮೆ ಅವಧಿಯಲ್ಲೇ ಟಾಪ್ ನಾಯಕಿ ಪಟ್ಟ ಗಿಟ್ಟಿಸಿಕೊಂಡರು. ಗೀತಾ ಗೋವಿಂದಂ, ಸರಿಲೇರು ನೀಕೆವ್ವರು ಸಿನಿಮಾಗಳ ನಂತರ ಅಲ್ಲುಅರ್ಜುನ್ ನಟನೆಯ 'ಪುಷ್ಪ'ದಲ್ಲಿ ಕಾಣಿಸಿಕೊಂಡು ಪ್ಯಾನ್ ಇಂಡಿಯಾ ನಟಿಯಾಗಿಯು ಗುರುತಿಸಿಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳು ಹೊಂದಿರುವಂತೆ ರಶ್ಮಿಕಾ ಸಹ ಐಷಾರಾಮಿ ಎಸ್‌ಯುವಿಗಳನ್ನು ಹೊಂದಿದ್ದಾರೆ. ಅವರ ಬಳಿ ಇರುವ ಕಾರುಗಳ ಬಗ್ಗೆ ತಿಳಿಯೋಣ.

ರೇಂಜ್ ರೋವರ್ ಎಸ್‌ಯುವಿ:
ಅನೇಕ ಸೆಲೆಬ್ರಿಟಿಗಳು ಈಗಾಗಲೇ ರೇಂಜ್ ರೋವರ್ ಕಾರುಗಳನ್ನು ಹೊಂದಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸಹ ಈ ವರ್ಷದ ಆರಂಭದಲ್ಲಿ ಹೊಸ ರೇಂಜ್ ರೋವರ್ ಎಸ್‌ಯುವಿ ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ಅಭಿಮಾನಿಗಳು ಲೈಕ್ ಮಾಡಿದ್ದರು. ಈ ಫೋಟೋದಲ್ಲಿ ರಶ್ಮಿಕಾ, ಕಪ್ಪು ಬಣ್ಣದ ರೇಂಜ್ ರೋವರ್ ಎಸ್‌ಯುವಿ ಪಕ್ಕದಲ್ಲಿ ನಿಂತುಕೊಂಡು ಸ್ಟೈಲಿಷ್ ಆಗಿ ಪೋಸ್ ನೀಡಿದ್ದರು. ಈ ಕಾರಿನ ಬೆಲೆ ಒಂದು ಕೋಟಿ ರೂಪಾಯಿ ಇದೆ.
ರಶ್ಮಿಕಾ ಅವರು ಖರೀದಿ ಮಾಡಿದ್ದ ಈ ಎಸ್‌ಯುವಿ, ಪೆಟ್ರೋಲ್ ಚಾಲಿತ ರೇಂಜ್ ರೋವರ್ ಸ್ಪೋರ್ಟ್‌ನ ಟಾಪ್-ಸ್ಪೆಕ್ HSE ರೂಪಾಂತರವಾಗಿದೆ. ಇದು 2.0-ಲೀಟರ್ ನಾಲ್ಕು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದ್ದು, ಇದನ್ನು 8-ಸ್ಪೀಡ್ ಅಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎಸ್‌ಯುವಿ 4-ವೀಲ್-ಡ್ರೈವ್ ಸಿಸ್ಟಮ್ ಅನ್ನು ಹೊಂದಿದ್ದು, ಇದರ ಎಂಜಿನ್ ಗರಿಷ್ಠ 300 Ps ಪವರ್ ಹಾಗೂ 400 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.
ಆಡಿ ಕ್ಯೂ3:
ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಖರೀದಿಸಿದ ಮೊದಲ ಕಾರು ಆಡಿ ಕ್ಯೂ3. 2018ರಲ್ಲಿ ಕೆಂಪು ಬಣ್ಣದ ಆಡಿ ಕ್ಯೂ3 ಅನ್ನು ಅವರು ಖರೀದಿಸಿದ್ದರು. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಡಿ ಕ್ಯೂ 3 ಕಾರನ್ನು ಶೋರೊಂನಿಂದ ಡೆಲಿವರಿ ಪಡೆಯುತ್ತಿದ್ದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅಲ್ಲದೆ, ಇದು ನಟಿ ರಶ್ಮಿಕಾ ಖರೀದಿಸಿದ ಮೊದಲ ಐಷಾರಾಮಿ ಕಾರು ಆಗಿತ್ತು. ಇದು Q3ಯ ಫೇಸ್‌ಲಿಫ್ಟೆಡ್ ಆವೃತ್ತಿಯಾಗಿತ್ತು. ಇದರ ಬೆಲೆ ರೂ.33.97 ಲಕ್ಷವಿತ್ತು. 2018ರ ಅಂತ್ಯದ ವೇಳೆಗೆ ಇದರ ಮಾರಾಟವನ್ನು ಸ್ಥಗಿತಗೊಳಿಸಲಾಯಿತು.
ರಶ್ಮಿಕಾ ಮಂದಣ್ಣ ಅವರ ಬಳಿ ಇರುವ ಆಡಿ ಕ್ಯೂ3 ಆವೃತ್ತಿಯು 35 ಟಿಡಿಐ ಕ್ವಾಟ್ರೋ ತಂತ್ರಜ್ಞಾನವನ್ನು ಹೊಂದಿದೆ. ಇದು ಫೇಸ್‌ಲಿಫ್ಟೆಡ್ ಮೊದಲ ತಲೆಮಾರಿನ ಆಡಿ ಕ್ಯೂ 3 ಶ್ರೇಣಿಯ-ಟಾಪ್ ರೂಪಾಂತರವಾಗಿದೆ. ಈ ಆವೃತ್ತಿಯು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಕ್ವಾಟ್ರೋ ಆಲ್-ವೀಲ್-ಡ್ರೈವ್ ಸಿಸ್ಟಮ್ ಅನ್ನು ಹೊಂದಿದ್ದು, 2.0-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಈ ಎಂಜಿನ್ 188 PS ಪವರ್ ಮತ್ತು 380 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.
ಹುಂಡೈ ಸಾಂಟಾ Fe:
ನಟಿ ರಶ್ಮಿಕಾ ಮಂದಣ್ಣ ಮೂಲತಃ ನಮ್ಮದೇ ಕೊಡಗು ಜಿಲ್ಲೆಯವರು. ಅಲ್ಲಿ ಅವರ ಪೋಷಕರ ಮನೆ ಇದ್ದು, ಕಪ್ಪು ಬಣ್ಣದ ಹುಂಡೈ ಸಾಂಟಾ Fe ಕಾರನ್ನು ಹೊಂದಿದ್ದಾರೆ. ಇದನ್ನು ಅವರ ಕುಟುಂಬ ಸದಸ್ಯರು ತಮ್ಮ ಸಂಚಾರಕ್ಕೆ ಬಳಸುತ್ತಾರೆ. ಒಂದು ಕಾಲದಲ್ಲಿ ಹುಂಡೈ ಸಾಂಟಾ ಫೆ ಭಾರತದಲ್ಲಿ ಹ್ಯುಂಡೈನ ಪ್ರಮುಖ ಉತ್ಪನ್ನವಾಗಿತ್ತು ಇದು ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿತ್ತು. 2017ರಲ್ಲಿ ಮಾರುಕಟ್ಟೆಯಿಂದ ದುರುವಾಯಿತು.
ರಶ್ಮಿಕಾ ಮಂದಣ್ಣ ಅವರ ಕುಟುಂಬದ ಒಡೆತನದ ಹ್ಯುಂಡೈ ಸಾಂಟಾ Fe ಎಸ್‌ಯುವಿಯ ಮೂಲ ರೂಪಾಂತರವಾಗಿದೆ. ಇದು ಫ್ರಂಟ್-ವೀಲ್-ಡ್ರೈವ್ ಸಿಸ್ಟಮ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ. ಇದು 2.2-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಪವರ್‌ಟ್ರೇನ್‌ನೊಂದಿಗೆ ಖರೀದಿಗೆ ಲಭ್ಯವಿತ್ತು. ಈ ರೂಪಾಂತರದಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಹೊಂದಿದ್ದು, ಇದು 197 PS ಗರಿಷ್ಠ ಪವರ್ ಮತ್ತು 421 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.


Click it and Unblock the Notifications








