2023ಕ್ಕೆ ದೇಶದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿ ಆಗುತ್ತಾ.. ಬರಲಿವೆ 8 ಇವಿಗಳು!
ದೇಶದ ವಾಹನ ಮಾರುಕಟ್ಟೆಯಲ್ಲಿ 2022ರಲ್ಲಿ ಅನೇಕ ಎಲೆಕ್ಟ್ರಿಕ್ ವಾಹನಗಳು (EV) ಬಿಡುಗಡೆಯಾಗಿವೆ. ಆದರೂ ಇವಿಗಳು ಮೂಲಸೌಕರ್ಯ ವಿಷಯದಲ್ಲಿ ಭಾರತವು ಇನ್ನೂ ಹಿಂದುಳಿದಿವೆ. ಅದೇನೇ ಇದ್ದರೂ, ಜನರು ನಿಧಾನವಾಗಿ ICE ಕಾರುಗಳಿಗೆ ಬದಲಾಗಿ ಇವಿಗಳನ್ನು ಖರೀದಿಸಲು ಪ್ರಾರಂಭಿಸುತ್ತಿದ್ದಾರೆ. 2023ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿಯೋಣ.
ಮಹೀಂದ್ರಾ XUV 400:
ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯ 'XUV 400' ಎಲೆಕ್ಟ್ರಿಕ್ ಎಸ್‌ಯುವಿ ಇತ್ತೀಚೆಗೆ ಅನಾವರಣಗೊಂಡಿದೆ. ಕಂಪನಿಯು ಜನವರಿ 2023ರಲ್ಲಿ ಈ ಎಸ್‌ಯುವಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಗ್ರಾಹಕರು, ಹೊಸ ಮಹೀಂದ್ರಾ XUV400 ಜನವರಿಯಿಂದಲೇ ಆನ್‌ಲೈನ್‌ನಲ್ಲಿ ಅಥವಾ ಅವರ ಹತ್ತಿರದ ಮಹೀಂದ್ರಾ ಡೀಲರ್‌ಶಿಪ್‌ನಲ್ಲಿ ಬುಕ್ ಮಾಡಬಹುದು. ಆರಂಭದಲ್ಲಿ, ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‌ಯುವಿ ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಪುಣೆ, ಅಹಮದಾಬಾದ್, ಗೋವಾ, ಜೈಪುರ, ಸೂರತ್, ಚಂಡೀಗಢ, ಕೊಚ್ಚಿ ಸೇರಿದಂತೆ 16 ನಗರಗಳಲ್ಲಿ ಲಭ್ಯವಿರುತ್ತದೆ.

ಮಹೀಂದ್ರಾ XUV400 ಐದು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೇ, ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಾಪೋಲಿ ಬ್ಲಾಕ್ ಮತ್ತು ಇನ್ಫಿನಿಟಿ ಬ್ಲೂ. ಈ ಹೊಸ ಮಹೀಂದ್ರಾ XUV400, IP 67 ಕಂಪ್ಲೈಂಟ್ 39.5 kWh ಬ್ಯಾಟರಿ ಪ್ಯಾಕ್ ಮತ್ತು PSM ಮೋಟಾರ್ ಅನ್ನು ಹೊಂದಿದೆ. ಇದು 149.5PS ಗರಿಷ್ಠ ಪವರ್ ಮತ್ತು 310Nm ಟಾರ್ಕ್ ಉತ್ಪಾದಿಸುತ್ತದೆ. ಗಂಟೆಗೆ 150 ಕಿ.ಮೀ ಟಾಪ್ ಸ್ವೀಡ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 456 ಕಿ.ಮೀ ಮೈಲೇಜ್ ನೀಡುತ್ತದೆ.
ಹುಂಡೈ ಅಯೋನಿಕ್ 5:
ಹ್ಯುಂಡೈನ ಪ್ರಮುಖ ಎಲೆಕ್ಟ್ರಿಕ್ ಕಾರು IONIQ 5 ಕೆಲವು ದಿನಗಳ ಹಿಂದೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಮುಂಬರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು IONIQ 5 ಇವಿಯನ್ನು ಬಿಡುಗಡೆ ಮಾಡಲಿದ್ದು, ಬುಕ್ಕಿಂಗ್ ತೆರೆದಿದೆ. ಗ್ರಾಹಕರು 1 ಲಕ್ಷ ರೂಪಾಯಿ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಆರ್ಡರ್ ಮಾಡಬಹುದು. ಹ್ಯುಂಡೈನ ಎಲೆಕ್ಟ್ರಿಕ್ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ)ನಲ್ಲಿ ನಿರ್ಮಿಸಲಾದ ಅಯೋನಿಕ್ 5 ಇವಿ, 4,635ಎಂಎಂ ಉದ್ದ, 1,890ಎಂಎಂ ಅಗಲ ಮತ್ತು 1,625ಎಂಎಂ ಎತ್ತರ ಹಾಗೂ 3,000ಎಂಎಂ ವ್ಹೀಲ್‌ಬೇಸ್ ಹೊಂದಿದೆ.
ಹುಂಡೈ ಅಯೋನಿಕ್ 5 ಅಲಾಯ್ ವೀಲ್ಸ್, DRLಗಳೊಂದಿಗೆ LED ಹೆಡ್‌ಲ್ಯಾಂಪ್‌ಗಳು, LED ಟೈಲ್-ಲ್ಯಾಂಪ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು, ಶಾರ್ಕ್-ಫಿನ್ ಆಂಟೆನಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಎರಡು ಬ್ಯಾಟರಿ ಆಯ್ಕೆಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ 58 kWh ಮತ್ತು 72.6 kWh ಬ್ಯಾಟರಿ. ಬರೋಬ್ಬರಿ 480 ಕಿಮೀ ಮೈಲೇಜ್ ನೀಡಬಹುದು. ಇದು ಒಂದೇ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದ್ದು, ಅದು 165 bhp ಪವರ್ ಮತ್ತು 350nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಎಂಜಿ ಏರ್ ಇವಿ:
ಎಂಜಿ ಮೋಟಾರ್ ಇಂಡಿಯಾ ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಎಂಜಿ ಏರ್ ಇವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಏರ್ ಇವಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುತ್ತದೆ. ಇದು 2-ಡೋರ್, 4-ಸೀಟ್ ವಾಹನವಾಗಿದೆ. ಡ್ಯುಯಲ್-ಬ್ಯಾರೆಲ್ ಹೆಡ್‌ಲೈಟ್‌ಗಳು, 12-ಇಂಚಿನ ಸ್ಟೀಲ್ ವೀಲ್ಸ್, ಹಿಂಭಾಗದಲ್ಲಿ LED ಬಾರ್ ಅನ್ನು ಒಳಗೊಂಡಿದೆ. ಇನ್ಫೋಟೈನ್‌ಮೆಂಟ್ ಮತ್ತು ಕ್ಲಸ್ಟರ್ ಎರಡಕ್ಕೂ 10.25-ಇಂಚಿನ ಡಿಜಿಟಲ್ ಸ್ಕ್ರೀನ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಕನೆಕ್ಟ್ದ್ ಕಾರ್ ಟೆಕ್ ಅನ್ನು ಒಳಗೊಂಡಿದೆ.
ಎಂಜಿ ಏರ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಬಹುದು. ಅವುಗಳೆಂದರೆ, 17.3kWh ಮತ್ತು 26.7kWh. ದೊಡ್ಡ ಬ್ಯಾಟರಿಯು ಒಂದೇ ಚಾರ್ಜಿಗೆ 300 km ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದರೆ, ಚಿಕ್ಕ ಬ್ಯಾಟರಿ ಪ್ಯಾಕ್ ಹೊಂದಿರುವ ಆವೃತ್ತಿಯು 200 kmನಷ್ಟು ಮೈಲೇಜ್ ನೀಡಲಿದೆ. ಈ ಬ್ಯಾಟರಿಗಳನ್ನು 38bhp ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಬಹುದು. ಈ ಇವಿ ಬೆಲೆ 8-10 ಲಕ್ಷ ರೂ.ವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಮಾರುಕಟ್ಟೆಗೆ ಬಂದ ಮೇಲೆ ಟಾಟಾ ಟಿಯಾಗೊ ಇವಿ, ಸಿಟ್ರೊಯೆನ್ C3 ಇವಿಗೆ ಪೈಪೋಟಿ ನೀಡಬಹುದು.
ಟಾಟಾ ಪಂಚ್ ಇವಿ:
ಟಿಯಾಗೊ ಇವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಟಾಟಾ ಮೋಟಾರ್ಸ್ 2023ರಲ್ಲಿ ಪಂಚ್ ಇವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಮುಂಬರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಟಾಟಾ ಪಂಚ್ ಇವಿಯನ್ನು ಪ್ರದರ್ಶಿಸಬಹುದು ಎಂದು ನಿರೀಕ್ಷಿಸಲಾಗಿದ್ದು, ಸೆಪ್ಟೆಂಬರ್ 2023ರಲ್ಲಿ ಮಾರುಕಟ್ಟೆಗೆ ಬರಬಹುದು. ಟಾಟಾ ಪಂಚ್ ಇವಿ ಆಲ್ಟ್ರೊಜ್ ಹ್ಯಾಚ್‌ಬ್ಯಾಕ್‌ಗೆ ಆಧಾರವಾಗಿರುವ ALFA ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಪಂಚ್ ಇವಿಯು ಜಿಪ್ಟ್ರಾನ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ನಿಂದ ಪವರ್ ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ.
ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಟಾಟಾ ಪಂಚ್ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗಬಹುದು. ಅವುಗಳೆಂದರೇ ಮೀಡಿಯಂ ರೇಂಜ್ ಮತ್ತು ಲಾಂಗ್ ರೇಂಜ್. ಒಳಭಾಗದ ವಿನ್ಯಾಸವು ಬಹುತೇಕ ಪೆಟ್ರೋಲ್ ರೂಪಾಂತರದಂತೆ ಇರಲಿದೆ. ಇದು ಇತರೆ ಟಾಟಾ ಇವಿಗಳಲ್ಲಿ ಕಂಡುಬರುವಂತೆ ಟ್ರೈ-ಆರೋ ಪ್ಯಾಟರ್ನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಪ್ಯಾನೆಲ್, AC ವೆಂಟ್‌ಗಳು, ಡಾರ್ಕ್-ಟೋನ್ಡ್ ಒಳಾಂಗಣವನ್ನು ಪಡೆಯುತ್ತದೆ. ಇದರ ಬೆಲೆ 10 ಲಕ್ಷದಿಂದ 14 ಲಕ್ಷದವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ (ಎಕ್ಸ್ ಶೋ ರೂಂ).
ಸಿಟ್ರೊಯೆನ್ eC3:
C3 ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು eC3 ಎಂದು ಕರೆಯಲಾಗುತ್ತದೆ ಎಂದು ಸಿಟ್ರೊಯೆನ್ ಇಂಡಿಯಾ ಇತ್ತೀಚೆಗೆ ದೃಢಪಡಿಸಿದೆ. ಇದು ಭಾರತದಲ್ಲಿ ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಜನವರಿ 2023ರ ಮಧ್ಯದಲ್ಲಿ ಅನಾವರಣಗೊಂಡು, ಫೆಬ್ರವರಿ 2023ರ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಬಹುದು. ಈ ಎಲೆಕ್ಟ್ರಿಕ್ ಆವೃತ್ತಿಯು ಸುಮಾರು 10 ಲಕ್ಷ ರೂಪಾಯಿ ಬೆಲೆಯನ್ನು ಹೊಂದಿರಬಹುದು. ಇದು ಎರಡು ಬ್ಯಾಟರಿ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. 50kWh ಬ್ಯಾಟರಿ ಪ್ಯಾಕ್ 350km ಮೈಲೇಜ್ ನೀಡಬಹುದು. ಇದು 136bhp ಪವರ್ ಮತ್ತು 260Nm ಟಾರ್ಕ್ ಉತ್ಪಾದಿಸುತ್ತದೆ.
ವೋಲ್ವೋ C40 ರೀಚಾರ್ಜ್:
ಭಾರತೀಯ ಮಾರುಕಟ್ಟೆಯಲ್ಲಿ XC40 ರೀಚಾರ್ಜ್ ಅನ್ನು ಬಿಡುಗಡೆ ಮಾಡಿದ ನಂತರ, ಕಂಪನಿಯು C40 ರೀಚಾರ್ಜ್ ಕೂಪ್ ಎಸ್‌ಯುವಿಯನ್ನು 2023ರಲ್ಲಿ ಭಾರತೀಯ ಮಾರುಕಟ್ಟೆಗೆ ತರುವುದಾಗಿ ಕಂಪನಿ ಘೋಷಿಸಿದೆ. C40 ರೀಚಾರ್ಜ್ ಕೂಪ್ ಎಲೆಕ್ಟ್ರಿಕ್ ಎಸ್‌ಯುವಿ XC40 ರೀಚಾರ್ಜ್ ಅನ್ನು ಆಧರಿಸಿದೆ. ಇದು 78-kWh ಬ್ಯಾಟರಿಯಿಂದ ಚಾಲಿತವಾಗಲಿದ್ದು, 420 ಕಿ.ಮೀ ಮೈಲೇಜ್ ನೀಡಲಿದೆ ಎಂದು ವೋಲ್ವೋ ಹೇಳಿಕೊಂಡಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 408bhp ಪವರ್ ಮತ್ತು 660 Nm ಟಾರ್ಕ್ ಉತ್ಪಾದಿಸುತ್ತದೆ. ವೋಲ್ವೋ ಈ ಎಸ್‌ಯುವಿ ಬೆಲೆ 60 ಲಕ್ಷ ಇರಬಹುದು.
ಸ್ಕೋಡಾ ಎನ್ಯಾಕ್ ಇವಿ:
ಮುಂಬರಲಿರುವ ಸ್ಕೋಡಾ ಎನ್ಯಾಕ್ IV ಎಲೆಕ್ಟ್ರಿಕ್ ಕಾರು, ಎನ್ಯಾಕ್ MEB ಮಾಡ್ಯುಲರ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಒಂದೇ ಚಾರ್ಜಿಗೆ ಬರೋಬ್ಬರಿ 513 km ಮೈಲೇಜ್ ನೀಡಬಹುದು. 125kW DC ವೇಗದ ಚಾರ್ಜಿಂಗ್ ಗೆ ಸಪೋರ್ಟ್ ಮಾಡುವ 82kWh ಬ್ಯಾಟರಿ ಪಡೆಯುವ ಸಾಧ್ಯತೆಯಿದೆ. ಇದು ಹೆಡ್-ಅಪ್ ಡಿಸ್ಪ್ಲೇ ಮತ್ತು ಕನೆಕ್ಟ್ದ್ ಕಾರ್ ತಂತ್ರಜ್ಞಾನದೊಂದಿಗೆ 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ರೆಕಗ್ನಿಷನ್ ಮತ್ತು ಒಂಬತ್ತು ಏರ್‌ಬ್ಯಾಗ್‌ಗಳನ್ನು ಹೊಂದಿರಲಿದೆಯಂತೆ.
ವೋಕ್ಸ್‌ವ್ಯಾಗನ್ ID.4:
ಭಾರತೀಯ ರಸ್ತೆಗಳಲ್ಲಿ ವೋಕ್ಸ್‌ವ್ಯಾಗನ್ ID.4 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರೀಕ್ಷಿಸಲಾಗುತ್ತಿದ್ದು, ಈ ಕಾರು, ಕಂಪನಿಯ ಮಾಡ್ಯುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್ (MEB) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಬಹುನಿರಿಕ್ಷಿತ ವೋಕ್ಸ್‌ವ್ಯಾಗನ್ ID.4, GTX 77 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಒಂದು ಸಂಪೂರ್ಣ ಚಾರ್ಜ್‌ನಲ್ಲಿ 496 ಕಿಮೀ ಮೈಲೇಜ್ ನೀಡುವ ಸಾಮರ್ಥ್ಯ ಎಲೆಕ್ಟ್ರಿಕ್ ಎಸ್‌ಯುವಿ ಗಂಟೆಗೆ 180 ಕಿ.ಮೀ ಟಾಪ್ ಸ್ವೀಡ್ ಅನ್ನು ಹೊಂದಿರಲಿದೆ.


Click it and Unblock the Notifications








