ಇವಿ ಕಾರು ಮಾರಾಟ ಆರಂಭಿಸಿದ ನಂತರ ಭಾರತದಲ್ಲಿ ಇದುವರೆಗೆ 450 ಯುನಿಟ್ ಇ6 ಕಾರು ವಿತರಿಸಿದ ಬಿವೈಡಿ
ಎಲೆಕ್ಟ್ರಿಕ್ ಕಾರು ಮಾರಾಟವು ತೀವ್ರವಾಗಿ ಬೆಳವಣಿಗೆ ಹೊಂದುತ್ತಿದ್ದು, ಬಿವೈಡಿ ಕಂಪನಿಯು ಕೂಡಾ ತನ್ನ ಹೊಸ ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಕಳೆದ ವರ್ಷದ ಕೊನೆಯಲ್ಲಿ ಚಾಲನೆ ನೀಡಿದ್ದ ಬಿವೈಡಿ ಕಂಪನಿಯು ಆರಂಭದಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಗಳ ಜೊತೆಗೂಡಿ ಕೇವಲ ಬಿ ಟು ಬಿ ಉದ್ದೇಶಕ್ಕಾಗಿ ಹೊಸ ಕಾರು ಮಾರಾಟ ಆರಂಭಿಸಿತ್ತು. ಇದೀಗ ಕಂಪನಿಯು ವೈಯಕ್ತಿಕ ಕಾರು ಬಳಕೆದಾದರಿಗೂ ಹೊಸ ಇವಿ ಕಾರಿನ ವಿತರಣೆಯನ್ನು ಆರಂಭಿಸಿದ್ದು, ಇದಕ್ಕಾಗಿ ಕಂಪನಿಯು ಪ್ರತ್ಯೇಕ ಮಾರಾಟ ಸೌಲಭ್ಯಕ್ಕಾಗಿ ಅಧಿಕೃತ ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ.

ಹೊಸ ಮಾರಾಟ ಮಳಿಗೆಗಳೊಂದಿಗೆ ಬಿವೈಡಿ ಕಂಪನಿಯು ಇದುವರೆಗೆ ಸುಮಾರು 450ಕ್ಕೂ ಹೆಚ್ಚು ಇ6 ಎಂಪಿವಿ ವಿತರಿಸಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಹೊಸ ಮಾರಾಟ ಮಳಿಗೆಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಎಂಪಿವಿ ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟೊಯೊಟಾ ಇನೋವಾ ಕ್ರಿಸ್ಟಾ ಮಾದರಿಗೆ ಉತ್ತಮ ಪೈಪೋಟಿ ನೀಡಿರುವ ಹೊಸ ಕಾರು ಮಾದರಿಯು ದುಬಾರಿ ಬೆಲೆಯಲ್ಲೂ ಉತ್ತಮ ಬೇಡಿಕೆ ಹೊಂದಿದ್ದು, ಶೀಘ್ರದಲ್ಲಿಯೇ ಹೊಸ ಕಾರು ದೇಶದ ಪ್ರಮುಖ ನಗರಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

2024ರ ವೇಳೆಗೆ ದೇಶಾದ್ಯಂತ ಬಿವೈಡಿ ಕಂಪನಿಯು ಒಟ್ಟು 18 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸುವ ಭರವಸೆ ನೀಡಿದ್ದು, ಹೆಚ್ಚುತ್ತಿರುವ ಇವಿ ವಾಹನಗಳಿಗೆ ದೇಶದ ಯಾವುದೇ ಪ್ರದೇಶಗಳಿಗೂ ನಿಲುಗಡೆ ಮುಕ್ತ ಚಾರ್ಜಿಂಗ್ ಒದಗಿಸುವ ಗುರಿಹೊಂದಲಾಗಿದೆ.

ಇನ್ನು ಬಿವೈಡಿ ಹೊಸ ಕಾರು ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಅತ್ಯುತ್ತಮ ಫೀಚರ್ಸ್ ಮತ್ತು ಅತ್ಯಧಿಕ ಮೈಲೇಜ್ ರೇಂಜ್‌ನೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಆರಂಭದಲ್ಲಿ ಫ್ಲೀಟ್ ಆಪರೇಟರ್‌ಗಳು, ಹೋಟೆಲ್ ಉದ್ಯಮಗಳು ಮತ್ತು ಇತರೆ ಕಾರ್ಪೊರೇಟ್ ಸಂಸ್ಥೆಗಳು ಹೊಸ ಇ6 ಕಾರು ಮಾದರಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿಕೊಂಡಿವೆ.

ಇದೀಗ ಬಿವೈಡಿ ಕಂಪನಿಯು ಸಾಮಾನ್ಯ ಗ್ರಾಹಕರಿಗೂ ಹೊಸ ಇ6 ಕಾರು ಖರೀದಿಗೆ ಅವಕಾಶ ನೀಡಿದ್ದು, ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾದರಿಯಾಗಿರುವ ಇ6 ಇವಿ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಜಿಎಲ್ ಮತ್ತು ಜಿಎಲ್ಎಕ್ಸ್ ಎನ್ನುವ ಎರಡು ವೆರಿಯೆಂಟ್ ಹೊಂದಿರುವ ಹೊಸ ಇ6 ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.15 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, 71.6kWh 'ಬ್ಲೇಡ್' ಲಿಥಿಯಂ ಫೆರೋ ಫಾಸ್ಫೇಟ್ (LiFePO4) ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಹೊಸ ಕಾರಿನಲ್ಲಿ ಬ್ಲೇಡ್ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್ AC ಮತ್ತು DC ಫಾಸ್ಟ್ ಚಾರ್ಜಿಂಗ್ ಮಾನದಂಡಗಳನ್ನು ಬೆಂಬಲಿಸಲಿದ್ದು, WLTP ಮಾನದಂಡಗಳ ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 415 ಕಿ.ಮೀ ನಿಂದ ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹೊಸ ಕಾರಿನ ಮೈಲೇಜ್ ಪ್ರಮಾಣವು ಕಾರಿನಲ್ಲಿರುವ ವಿವಿಧ ಡ್ರೈವಿಂಗ್ ಮೋಡ್ ಆಧರಿಸಿ ನಿರ್ಧಾರವಾಗಲಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೊಸ ಕಾರಿನಲ್ಲಿರುವ ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಾಗ ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 6 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಿದ್ದರೆ ಡಿಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 35 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದೆ.

ಇ6 ಕಾರಿನಲ್ಲಿರುವ ಕೋಬಾಲ್ಟ್-ಮುಕ್ತ LiFePO4 ಬ್ಯಾಟರಿ ಪ್ಯಾಕ್ ಹೆಚ್ಚು ಸುರಕ್ಷಿತವಾಗಿದ್ದು, ಸ್ಫೋಟ ಮುಕ್ತವಾಗಿರುವ ಈ ಬ್ಯಾಟರಿ ಹೆಚ್ಚು ವಿಶ್ವಾರ್ಹತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಮೇಲೆ ಅಭಿವೃದ್ದಿಗೊಂಡಿದೆ.

ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಉತ್ತಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಕಾರು 4,695 ಎಂಎಂ ಉದ್ದ, 1,810 ಎಂಎಂ ಅಗಲ ಮತ್ತು 1,670 ಎಂಎಂ ಎತ್ತರ ಹೊಂದಿದ್ದು, 570 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದುಕೊಂಡಿದೆ.

ಹಾಗೆಯೇ ಸ್ಪೋರ್ಟಿ ವಿನ್ಯಾಸದೊಂದಿಗೆ ಹೊಸ ಇ6 ಎಂಪಿವಿ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಕ್ರೋಮ್ ಬಾರ್ ಒಳಗೊಂಡ ಬಿವೈಡಿ ಲೊಗೊ, ಆಕರ್ಷಕ ಸ್ಪಾಯ್ಲರ್, ಸ್ಲಿಕ್ ಎಲ್ಇಡಿ ಟೈಲ್‌ಲೈಟ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ.

ಹೊಸ ಕಾರಿನಲ್ಲಿ ಹೊರಭಾಗದಲ್ಲಿರುವಂತೆ ಒಳಭಾಗದಲ್ಲಿರುವ ಫೀಚರ್ಸ್‌ಗಳು ಕೂಡಾ ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ 10 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಲೆದರ್ ಸೀಟ್‌ಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಸೀಟ್‌ಗಳು ಮತ್ತು ಏರ್ ಫಿಲ್ಟರ್ ಸಿಸ್ಟಂ ಹೊಂದಿದೆ.


Click it and Unblock the Notifications