2023ರ ಆಟೋ ಎಕ್ಸ್‌ಪೋ ಅನಾವರಣಗೊಳ್ಳಲಿರುವ ಎಲೆಕ್ಟ್ರಿಕ್ ಕಾರುಗಳು: ಟಾಟಾದಿಂದ ಹುಂಡೈ...
ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿ) ಪ್ರಾಬಲ್ಯವನ್ನು ಸಾಧಿಸುತ್ತಿವೆ. ಇವಿ ಬೇಡಿಕೆ ಹಠಾತ್ ಹೆಚ್ಚಾಗಿದ್ದು, ವಾಹನ ತಯಾರಕರು ಸಹ ಇದಕ್ಕೆ ಸ್ಪಂದಿಸುತ್ತಿದ್ದಾರೆ. ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಪ್ರಸ್ತುತ ಟಾಟಾ ಮೋಟಾರ್ಸ್ ಮೊದಲನೇ ಸ್ಥಾನದಲ್ಲಿದ್ದು, 80% ಪಾಲನ್ನು ಹೊಂದಿದೆ. ಇಲ್ಲಿ 2023 ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿಸಿಕೊಡಲಾಗಿದೆ.
ಮಾರುತಿ ಸುಜುಕಿ ಎಸ್‌ಯುವಿ:
ಮಾರುತಿ ಸುಜುಕಿ ತನ್ನ ಮುಂಬರಲಿರುವ ಎಸ್‌ಯುವಿ ಇವಿ ಪರಿಕಲ್ಪನೆಯನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ. ಇದು 'YY8' ಕೋಡ್ ನೇಮ್ ಹೊಂದಿದೆ. ಈ ಎಲೆಕ್ಟ್ರಿಕ್ ಕಾರನ್ನು 2025ರಲ್ಲಿ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ. ಇದು ಟೊಯೊಟಾದ 27PL ಪ್ಲಾಟ್‌ಫಾರ್ಮ್ ಆಧರಿಸಿದೆ. ಹೊಸ ಮಾದರಿಯು ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರಬಹುದು. ಒಂದೇ ಚಾರ್ಜಿನಲ್ಲಿ 48kWh ಬ್ಯಾಟರಿ ಪ್ಯಾಕ್ 400km ಮೈಲೇಜ್ ನೀಡಲಿದ್ದು, 59kWh ಬ್ಯಾಟರಿ ಪ್ಯಾಕ್ 500km ಮೈಲೇಜ್ ನೀಡಬಹುದು. ಇದು ಟೂ-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಲೇಔಟ್ ಆಯ್ಕೆಗಳನ್ನು ಹೊಂದಿರಲಿದೆ.

ಎಂಜಿ ಇವಿಗಳು:
2023ರ ಆಟೋ ಎಕ್ಸ್‌ಪೋದಲ್ಲಿ ಎಂಜಿ ಮೋಟಾರ್ ಇಂಡಿಯಾ 'ಏರ್ 2-ಡೋರ್' ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಲಿದೆ. ಜೊತೆಗೆ ಕಂಪನಿಯು ಎಂಜಿ 4 ಇವಿಯನ್ನು ಪ್ರದರ್ಶಿಸಲಿದೆ. ಈ ಎಲೆಕ್ಟ್ರಿಕ್ ಕಾರು, ಯುರೋ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದ್ದು, SAICನ ಮಾಡ್ಯುಲರ್ ಸ್ಕೇಲೆಬಲ್ ಪ್ಲಾಟ್‌ಫಾರ್ಮ್ (MSP) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ಹೇಳಬಹುದು. ಹೊಸ ಎಂಜಿ 4 ಇವಿ 51kWh ಮತ್ತು 64kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರಲಿದೆ.
ಇದು ಕ್ರಮವಾಗಿ 170 bhp ಮತ್ತು 203 bhp ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡು ಆವೃತ್ತಿಗಳು ಸಿಂಗಲ್-ಮೋಟಾರ್, RWD ಸಿಸ್ಟಮ್ ಹೊಂದಿದ್ದು, ಗರಿಷ್ಠ 250 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 51kWh ಬ್ಯಾಟರಿ ಪ್ಯಾಕ್ ಆವೃತ್ತಿಯು 350km ಮೈಲೇಜ್ ನೀಡಿದರೆ, 64kWh ಬ್ಯಾಟರಿ ಪ್ಯಾಕ್ 452km ನೀಡುವ ಸಾಮರ್ಥ್ಯ ಹೊಂದಿದೆ. 'ಏರ್ 2-ಡೋರ್' ಇವಿ ಚೀನಾ-ಸ್ಪೆಕ್ ವುಲಿಂಗ್ ಏರ್ ಇವಿಯನ್ನು ಆಧರಿಸಿದೆ. ಇದು 20kWh - 25kWh ನಡುವಿನ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ಹುಂಡೈ ಇವಿಗಳು:
ಹ್ಯುಂಡೈ ಕಂಪನಿ ಆಟೋ ಎಕ್ಸ್‌ಪೋದಲ್ಲಿ Ioniq 5 ಎಲೆಕ್ಟ್ರಿಕ್ ಕಾರಿನ ಬೆಲೆಗಳನ್ನು ಪ್ರಕಟಿಸಲಿದೆ. ಆಸಕ್ತ ಖರೀದಿದಾರರು, ಹೊಸ ಇವಿಯನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ನಲ್ಲಿ ರೂ.1 ಲಕ್ಷ ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಇದು ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ಅನ್ನು ಆಧರಿಸಿದೆ. ಅಲ್ಲದೆ, ಕಿಯಾ ಇವಿ6ಗೆ ಹೋಲುತ್ತದೆ. ಇದನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಅವುಗಳೆಂದರೆ, 72.6kWh ಮತ್ತು 58kWh. ಇವು ಕ್ರಮವಾಗಿ ಸುಮಾರು 384km ಮತ್ತು 481km ಮೈಲೇಜ್ ನೀಡಬಹುದು.
ಹ್ಯುಂಡೈ ಇತ್ತೀಚೆಗೆ ಅನಾವರಣಗೊಳಿಸಲಾದ Ioniq 6 ಎಲೆಕ್ಟ್ರಿಕ್ ಸೆಡಾನ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುತ್ತದೆ. ಇದು E-GMP ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್ ಅನ್ನು ಆಧರಿಸಿದ್ದು, ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಾಗಲಿದೆ. ಅವುಗಳೆಂದರೆ, 53kWh ಮತ್ತು 77kWh. ಇನ್ನು, 53kWh ಬ್ಯಾಟರಿಯೊಂದಿಗೆ ರಿಯರ್-ವೀಲ್ ಡ್ರೈವ್ ಆವೃತ್ತಿಯು ಒಂದೇ ಚಾರ್ಜಿಗೆ 429km ಮೈಲೇಜ್ ನೀಡಲಿದೆ. ಆದರೆ, 77.4kwh ಹೊಂದಿರುವ ರೇರ್- ವೀಲ್ ಡ್ರೈವ್ (RWD) ಆವೃತ್ತಿಯು 614km ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.
ಟಾಟಾ ಇವಿಗಳು:
ಪ್ರಸ್ತುತ ಇವಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್, ಮುಂದಿನ ಒಂದೆರಡು ವರ್ಷಗಳಲ್ಲಿ ಅನೇಕ ಹೊಸ ಮಾದರಿಗಳನ್ನು ಪರಿಚಯಿಸುವ ಮೂಲಕ ಈ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಗುರಿ ಹೊಂದಿದೆ. ಈ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಹಲವು ಇವಿಗಳನ್ನು ಪ್ರದರ್ಶಿಸಬಹುದು. ಸದ್ಯ ಉತ್ಪಾದನೆಗೆ ಸಿದ್ಧವಾಗಿರುವ ಆಲ್ಟ್ರೋಜ್ ಇವಿಯನ್ನು ಅನಾವರಣಗೊಳಿಸಬಹುದು. ಇದರ ಜೊತೆಗೆ, ಮೈಕ್ರೋ ಇವಿ ಎಸ್‌ಯುವಿ ಪಂಚ್ ಅನ್ನು ಪ್ರದರ್ಶಿಸಬಹುದು. ಅಲ್ಲದೆ, Curvv ಮತ್ತು Avinya ಇವಿ ಪರಿಕಲ್ಪನೆಯನ್ನು ಪರಿಚಯಿಸಬಹುದು.
BYD ಇವಿಗಳು:
ಚೀನಾದ ವಾಹನ ತಯಾರಕ ಬಿಲ್ಡ್ ಯುವರ್ ಡ್ರೀಮ್ಸ್ ಅಥವಾ BYD, ತನ್ನ ಹೊಸ 'Atto 3' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ. ಇದರ ಬೆಲೆ 33.99 ಲಕ್ಷ ಇದ್ದು, ಎಂಜಿ ZS ಇವಿ ಮತ್ತು ಹುಂಡೈ ಕೋನಾ ಇವಿಯಂತಹ ಪ್ರೀಮಿಯಂಗಳಿಗೆ ಪೈಪೋಟಿ ನೀಡಲಿದೆ. 60kWh ಬ್ಲೇಡ್ ಬ್ಯಾಟರಿ ಪ್ಯಾಕ್ ಹೊಂದಿರುವ Atto 3 ಒಂದೇ ಚಾರ್ಜ್‌ನಲ್ಲಿ 521km ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ. ಕೇವಲ Atto 3 ಮಾತ್ರವಲ್ಲದೆ, ಹಲವು ಇವಿಗಳನ್ನು BYD ಈ ಈವೆಂಟ್‌ನಲ್ಲಿ ಪ್ರದರ್ಶಿಸಬಹುದು.


Click it and Unblock the Notifications








