ಇಂಧನ ಚಾಲಿತ ವಾಹನಗಳ ನಿಷೇಧಕ್ಕಾಗಿ ಮಹತ್ವದ ನಿರ್ಧಾರ ಪ್ರಕಟ
ವಿಶ್ವಾದ್ಯಂತ ಇಂಧನ ಚಾಲಿತ ವಾಹನಗಳನ್ನು ತಗ್ಗಿಸಲು ಮತ್ತು ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾಲು ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಕ್ರಮಗಳನ್ನು ಪ್ರಕಟಿಸಲಾಗುತ್ತಿದೆ.

ಇಂಗಾಲ ಉತ್ಪಾದನೆ ಅತಿದೊಡ್ಡ ಕೊಡುಗೆ ಹೊಂದಿರುವ ಪ್ರಯಾಣಿಕರ ಬಳಕೆಯ ಕಾರು ಮಾದರಿಗಳನ್ನು ಗಣನೀಯವಾಗಿ ತಗ್ಗಿಸುವತ್ತ ಯುರೋಪಿನ ಪ್ರಮುಖ ರಾಷ್ಟ್ರಗಳು ಈಗಾಗಲೇ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಪರಿಣಾಮಕಾರಿಯಾದ ಇವಿ ವಾಹನ ಅಳವಡಿಕೆಗಾಗಿ ಕಂಪನಿಯು ಇದೀಗ ಯುರೋಪಿನ್ ಒಕ್ಕೂಟವು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

2030ರ ವೇಳೆಗೆ ಶೇ.50ರಷ್ಟು ಇವಿ ವಾಹನ ಬಳಕೆಯ ಗುರಿಯೊಂದಿಗೆ ಇಂಧನ ಚಾಲಿತ ವಾಹನಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದ ಇವಿ ವಾಹನಗಳ ಮಾರಾಟವು ದಾಖಲಾಗಿದೆ.

ಆದರೆ ಇಂಧನ ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಬಳಕೆಯು ಇನ್ನು ಕೂಡಾ ಸಾಕಷ್ಟು ಸುಧಾರಿಸಬೇಕಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿರುವ ಯುರೋಪಿಯನ್ ಒಕ್ಕೂಟವು 2035ರ ವೇಳೆಗೆ ಶೇ.100 ರಷ್ಟು ಇಂಧನ ಚಾಲಿತ ವಾಹನಗಳನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದೆ.

ಹೊಸ ಉಪಕ್ರಮಗಳ ಪರಿಣಾಮ ಈ ದಶಕದ ಅಂತ್ಯಕ್ಕೆ ಕಾರ್ಬನ್ ಡೈಆಕ್ಸೈಡ್ (CO2) ಹೊರಸೂಸುವಿಕೆ ಪ್ರಮಾಣವು ಸರಾಸರಿ 37.5 ಪ್ರತಿಶತದಷ್ಟು ಕಡಿಮೆಯಾಗುವ ಸಾಧ್ಯತೆಗಳಿದ್ದು, ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ಶೇ. 12ರಷ್ಟು ಕಾರುಗಳೇ ಕಾರಣ ಎನ್ನಲಾಗಿದೆ.

ಇದೇ ಕಾರಣಕ್ಕೆ ಇಂಧನ ಚಾಲಿತ ವಾಹನ ತಗ್ಗಿಸುವ ನಿಟ್ಟಿನಲ್ಲಿ 27 ದೇಶಗಳನ್ನು ಒಳಗೊಂಡಿರುವ ಯುರೋಪಿಯನ್ ಒಕ್ಕೂಟವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಮತ್ತು ವಿದ್ಯುದ್ದೀಕರಣದಲ್ಲಿ ಹೆಚ್ಚಿನ ಹೂಡಿಕೆಗೆ ಸಹಕಾರಿಯಾಗುವಂತೆ ಹೊಸ ನಿರ್ಣಯ ಪ್ರಕಟಿಸಿದೆ.

ಯುರೋಪಿಯನ್ ಒಕ್ಕೂಟದ ನಿರ್ಣಯಕ್ಕೆ ಪ್ರಮುಖ ಕಾರು ತಯಾರಕ ಕಂಪನಿಗಳು ಈಗಾಗಲೇ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದು, ನಿಗದಿತ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಪೂರ್ಣಪ್ರಮಾಣದಲ್ಲಿ ಉತ್ಪಾದನೆ ಬದಲಿಸಲು ಸಾಧ್ಯವಿಲ್ಲವೆಂದು ಇನ್ನು ಕೆಲವು ಕಾರು ಉತ್ಪಾದನಾ ಕಂಪನಿಗಳು ಯುರೋಪಿಯನ್ ಒಕ್ಕೂಟದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದೆ.

2035ರ ವೇಳೆಗೆ ಸಂಪೂರ್ಣವಾಗಿ ಇವಿ ವಾಹನಗಳನ್ನು ಅಳಡಿಸಿಕೊಳ್ಳಲು ಹೊಸ ನಿರ್ಣಯ ಪ್ರಕಟಿಸಿರುವ ಯುರೋಪಿಯನ್ ಒಕ್ಕೂಟವು ಲಾಭಿ ನಡೆಸುತ್ತಿದೆ ಎಂದು ಪ್ರಮುಖ ಕಾರು ತಯಾರಕ ಕಂಪನಿಗಳು ಆಪಾದನೆ ಮಾಡಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆಯು ವರದಿ ಮಾಡಿದ್ದು, ಕಾರು ಉತ್ಪಾದನಾ ಕಂಪನಿಗಳ ವಿರೋಧದ ನಡುವೆಯೂ ಯುರೋಪಿಯನ್ ಒಕ್ಕೂಟವು 2035ರ ವೇಳೆಗೆ ಸಂಪೂರ್ಣವಾಗಿ ಪರಿಸರ ಸ್ನೇಹಿ ವಾಹನಗಳನ್ನು ಅಳವಡಿಸಿಕೊಳ್ಳುವ ನಿರ್ಣಯ ಪ್ರಕಟಿಸಿದೆ.

ಯುರೋಪಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಪ್ರಕಾರ ಕಳೆದ ವರ್ಷ ಯುರೋಪಿನ ಒಕ್ಕೂಟ ರಾಷ್ಟ್ರಗಳಲ್ಲಿ ಮಾರಾಟವಾದ ಒಟ್ಟಾರೆ ಹೊಸ ಪ್ರಯಾಣಿಕ ಕಾರುಗಳಲ್ಲಿ ಎಲೆಕ್ಟ್ರಿಕ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಕಾರುಗಳೇ ಶೇ.18 ರಷ್ಟು ಪಾಲು ಹೊಂದಿದ್ದು, ಸೆಮಿಕಂಡಕ್ಟರ್ ಕೊರತೆಯ ಹೊರತಾಗಿಯೂ ಇವಿ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಂಡಿದೆ.

ಇದೀಗ ಐರೋಪಿಯನ್ ಒಕ್ಕೂಟವು ಪ್ರಕಟಿಸಿರುವ ಹೊಸ ನಿರ್ಣಯವು ಇವಿ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲಿದ್ದು, ಇವಿ ವಾಹನಗಳ ಜೊತೆಗೆ ಇವಿ ವಾಹನಗಳಿಗೆ ಅಗತ್ಯವಾಗಿ ಬೇಕಿರುವ ಸಾರ್ವಜನಿಕ ಒಳಕೆಯ ಫಾಸ್ಟ್ ಇವಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೂ ಸಹಕಾರಿಯಾಗಲಿದೆ.

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಲು ವಿವಿಧ ರಾಷ್ಟ್ರಗಳಲ್ಲಿ ಈಗಾಗಲೇ ಹಲವಾರು ಹೊಸ ಉಪಕ್ರಮ ಯೋಜನೆಗಳನ್ನು ಅಳವಡಿಸಿಕೊಂಡಿದ್ದು, ಭಾರತದಲ್ಲೂ ಇವಿ ವಾಹನಗಳ ಉತ್ತೇಜನಕ್ಕಾಗಿ ಸಬ್ಸಡಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಇವಿ ವಾಹನ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಸಹ ಕ್ರಮ ಕೈಗೊಳ್ಳಲಾಗುತ್ತಿದೆ.

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆಯನ್ನು ಆರಂಭಿಸುತ್ತಿವೆ.


Click it and Unblock the Notifications