ಇನ್ನೋವಾ ಹೈಕ್ರಾಸ್ VS ಮಹೀಂದ್ರಾ XUV700: ಬೆಲೆ, ವಿನ್ಯಾಸ, ವೈಶಿಷ್ಟ್ಯ, ಸುರಕ್ಷತೆಯಲ್ಲಿ ಗೆಲ್ಲೋದು ಯಾರು?
ಭಾರತದಲ್ಲಿ MPV ವಿಭಾಗದಲ್ಲಿ ಕ್ರಾಂತಿ ಸೃಷ್ಟಿಸಿದ ಟೊಯೊಟಾ ಇನ್ನೋವಾ ತನ್ನ ಮುಂದಿನ ಹಂತವಾಗಿ ಹೊಸ ಟೊಯೋಟಾ ಹೈಕ್ರಾಸ್ ಅನ್ನು ಇದೀಗ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ಹೈಕ್ರಾಸ್‌ನ ವಿನ್ಯಾಸ ಮತ್ತು ಐಷಾರಾಮಿ ವಿಭಾಗದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರಾ XUV700 ಹಲವು ವಿಧಗಳಲ್ಲಿ ಒಂದೇ ಆಗಿದ್ದರೂ, ತುಸು ವಿಭಿನ್ನವಾಗಿದೆ.
ಎರಡೂ ಕಾರುಗಳು ಆಯಾ ಕಂಪನಿಗಳ ಪ್ರಮುಖ ಮಾದರಿಗಳಾಗಿದ್ದು, ಮಹೀಂದ್ರಾ XUV700 ಈಗಾಗಲೇ ಹೆಚ್ಚು ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನು ಟೊಯೊಟಾ ವಿಷಯಕ್ಕೆ ಬಂದರೆ ಇನ್ನೋವಾ ಕ್ರಿಸ್ಟಾ ಕಂಪನಿಯ ಮಾರಾಟದ ಪ್ರಮುಖ ಉತ್ಪನ್ನವಾಗಿದ್ದು, ಈ ಸ್ಥಾನವನ್ನು ಈಗ ಹೈಕ್ರಾಸ್ ಭರ್ತಿ ಮಾಡಲಿದೆ. ಈ ನಿಟ್ಟಿನಲ್ಲಿ ಎರಡೂ ಕಾರುಗಳ ವಿನ್ಯಾಸ, ಪ್ಲಾಟ್‌ಫಾರ್ಮ್ ಮತ್ತು ವೈಶಿಷ್ಟ್ಯಗಳು, ಎಂಜಿನ್ ವಿಶೇಷತೆಗಳು ಮತ್ತು ಇತರ ಹೆಚ್ಚಿನ ವಿಷಯಗಳಲ್ಲಿ ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ವಿರುದ್ಧ ಮಹೀಂದ್ರಾ XUV700 ಅನ್ನು ಹೋಲಿಕೆ ಮಾಡೋಣ.

ವಿನ್ಯಾಸ
ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್, ಮೊದಲ ಬಾರಿಗೆ ಮೊನೊಕೊಕ್ ಚಾಸಿಸ್ ಅನ್ನು ಆಧರಿಸಿದೆ. ಕ್ರಿಸ್ಟಾಗೆ ಹೋಲಿಸಿದರೆ ಆಯಾಮದಲ್ಲಿ ದೊಡ್ಡದಾಗಿದೆ. ಹೈಕ್ರಾಸ್ ದೊಡ್ಡದಾದ ನೇರವಾದ ಗ್ರಿಲ್ ವಿನ್ಯಾಸ, ನಯವಾದ ಎಲ್‌ಇಡಿ ಹೆಡ್‌ಲೈಟ್‌ಗಳು, ಮಸ್ಕ್ಯುಲರ್ ಬಾನೆಟ್ ಮತ್ತು ಒಟ್ಟಾರೆಯಾಗಿ ಕ್ರಿಸ್ಟಾಗೆ ಹೋಲಿಸಿದರೆ ಹೆಚ್ಚು ಮಸ್ಕುಲರ್ ಮತ್ತು ಉನ್ನತ ಡಿಸೈನ್‌ನೊಂದಿಗೆ ಎಂಟ್ರಿ ನೀಡಿದೆ. ಅಲ್ಲದೇ ಈ ಬಾರಿ ಎಂಪಿವಿ ಲುಕ್‌ಗಿಂತ ಎಸ್‌ಯುವಿ ಲುಕ್‌ನಲ್ಲಿ ಕಾಣುತ್ತಿದೆ.
ಮಹೀಂದ್ರಾ XUV700 ಸಹ ಹೈಕ್ರಾಸ್‌ನಂತೆಯೇ ಮೊನೊಕಾಕ್ ಚಾಸಿಸ್ ಅನ್ನು ಆಧರಿಸಿದೆ. XUV700 ದೊಡ್ಡದಾದ ನೇರವಾದ ಮುಂಭಾಗದ ಗ್ರಿಲ್ ಅನ್ನು ಹೊಂದಿದೆ, ಜೊತೆಗೆ ಎರಡೂ ಬದಿಗಳಲ್ಲಿಯೂ ಕೂಡ ಫ್ಯೂಚರಿಸ್ಟಿಕ್ ಲ್ಯಾಂಪ್‌ಗಳನ್ನು ನೋಡಬಹುದು. XUV700 ಸಹ ಮಸ್ಕುಲರ್, ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಅಲ್ಲದೇ ಮುಂಭಾಗದ ಲುಕ್ ನೋಡಿದಾಗ ಹೆಚ್ಚು ಮಸ್ಕುಲರ್ ಆಗಿ ಕಾಣುತ್ತದೆ. Hycross ಮತ್ತು XUV700 ವಿಭಿನ್ನ ವಿನ್ಯಾಸದಲ್ಲಿರೂ ವೈಶಿಷ್ಟ್ಯಗಳನ್ನು ಬಹುತೇಕ ಒಂದೇ ರೀತಿ ಹೊಂದಿವೆ.
ವೈಶಿಷ್ಟ್ಯಗಳು
ಬಾಹ್ಯ ವೈಶಿಷ್ಟ್ಯಗಳ ವಿಷಯದಲ್ಲಿ Innova Hycross ಪೂರ್ಣ LED ಲೈಟಿಂಗ್, 18-ಇಂಚಿನ ಅಲಾಯ್ ವೀಲ್‌ಗಳು, ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಆಟೋ ಹೆಡ್ಲ್ಯಾಂಪ್‌ಗಳು, ಹಿಂಭಾಗದ ಸ್ಪಾಯ್ಲರ್, ಬಾಡಿ-ಕಲರ್ ORVM ಗಳನ್ನು ಹೊಂದಿದೆ. ಇಂಟೀರಿಯರ್‌ನಲ್ಲಿ ಹೈಕ್ರಾಸ್ ಮೊದಲ ಬಾರಿಗೆ ಪನೋರಮಿಕ್ ಸನ್‌ರೂಫ್, ಡ್ಯುಯಲ್-ಟೋನ್ ಸೀಟ್‌ಗಳು, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 10.0-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಬ್ ವೂಫರ್‌ನೊಂದಿಗೆ 9-JBL ಸ್ಪೀಕರ್ ಆಡಿಯೋ ಸಿಸ್ಟಮ್, ಕ್ರೂಸ್ ಕಂಟ್ರೋಲ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.
ಮಹೀಂದ್ರಾ XUV700 ಪೂರ್ಣ LED ಲೈಟಿಂಗ್ ಸಿಸ್ಟಮ್, 18-ಇಂಚಿನ ಅಲಾಯ್ ವೀಲ್‌ಗಳು, ಎಲ್ಲಾ ನಾಲ್ಕು ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ರೈನ್-ಸೆನ್ಸಾರ್ ವೈಪರ್‌ಗಳು ಮತ್ತು ಆಟೋ ಹೆಡ್‌ಲೈಟ್ಗಳನ್ನು ಹೊಂದಿದೆ. ಇಂಟೀರಿಯರ್‌ನಲ್ಲಿ XUV700 ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12-ಸ್ಪೀಕರ್ ಆಡಿಯೊ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಹೆಚ್ಚಿನದನ್ನು ಒಳಗೊಂಡಿದೆ. ಎರಡೂ ವಾಹನಗಳು ಈ ಬೆಲೆಯಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿವೆ.
ಎಂಜಿನ್
ಟೊಯೊಟಾ ಇನ್ನೋವಾ ಹೈಕ್ರಾಸ್ 2.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ, ಹಾಗೆಯೇ ಇನ್ನೋವವನ್ನು ಮೊದಲ ಬಾರಿಗೆ ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ನೀಡಲಾಗುತ್ತದೆ. ಹಾಗೆಯೇ ಇನ್ನೋವಾ ಹೈಕ್ರಾಸ್‌ನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇಲ್ಲ. ಮತ್ತೊಂದೆಡೆ ಮಹೀಂದ್ರಾ XUV700 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ, ಆದರೆ ಯಾವುದೇ ಹೈಬ್ರಿಡ್ ಕೊಡುಗೆಯನ್ನು ಮಹೀಂದ್ರಾ ಕಂಪನಿ ನೀಡುವುದಿಲ್ಲ. ಎರಡೂ ಕೂಡ ತಮ್ಮದೇ ವಿಭಿನ್ನ ಆಯ್ಕೆಯನ್ನು ಹೊಂದಿವೆ.
ಸುರಕ್ಷತಾ ವೈಶಿಷ್ಟ್ಯಗಳು
ಹೈಕ್ರಾಸ್ 6 ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಮುಂಭಾಗ 360 ಕ್ಯಾಮೆರಾಗಳು ಮತ್ತು ಹಿಮ್ಮುಖ ಪಾರ್ಕಿಂಗ್ ಸೆನ್ಸಾರ್‌ಗಳು, ಟೊಯೊಟಾ ಸೇಫ್ಟಿ ಸೆನ್ಸ್ ಸಿಸ್ಟಮ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಇ-ಕಾಲ್ SOS ವೈಶಿಷ್ಟ್ಯವನ್ನು ಹೊಂದಿರುವುದರಿಂದ ಸುರಕ್ಷತೆಯ ವಿಷಯದಲ್ಲಿ ಹೈಕ್ರಾಸ್ ಹೆಚ್ಚಿನ ಅಂಕಗಳನ್ನು ಗಳಿಸುತ್ತದೆ. ಮಹೀಂದ್ರಾ XUV700 ಮುಂಭಾಗದ ಕೊಲಿಷನ್ ವಾರ್ನಿಂಗ್, ಆಟೋ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ADAS ವ್ಯವಸ್ಥೆಯನ್ನು ಪಡೆಯುತ್ತದೆ. ಜೊತೆಗೆ ವೇರಿಯಂಟ್ ಅವಲಂಬಿಸಿ 7 ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ.
ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಸುರಕ್ಷತೆಯ ವಿಷಯದಲ್ಲಿ ಎರಡೂ ವಾಹನಗಳು ಮುಖಾಮುಖಿಯಾಗಿ, ಡ್ರೈವ್‌ಟ್ರೇನ್ ಪ್ರಕಾರವನ್ನು ಹೊರತುಪಡಿಸಿ ನಿರ್ಧಾರಗಳಿಗೆ ಬೆಲೆಯು ಪ್ರಮುಖ ಅಂಶವಾಗಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಬೆಲೆಯನ್ನು ಜನವರಿ 2023 ರಲ್ಲಿ ಬಹಿರಂಗಪಡಿಸಲಾಗುವುದು. ನಮ್ಮ ಪ್ರಕಾರ 20ಲಕ್ಷ ರೂ. ಆರಂಭಿಕ ಎಕ್ಸ್ ಶೋರೂಂ ಬೆಲೆಯಲ್ಲಿ ಹೈಕ್ರಾಸ್ ಲಭ್ಯವಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ ಮಹೀಂದ್ರಾ XUV700 ಒಟ್ಟು 23 ರೂಪಾಂತರಗಳಲ್ಲಿ ಲಭ್ಯವಿದ್ದು, 13.44 ಲಕ್ಷ ರೂ ಮತ್ತು 24.94 ಲಕ್ಷ ರೂ. ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications