ಜೂನ್ ತಿಂಗಳಿನಲ್ಲಿ ಬಿಡುಗಡೆಗೊಂಡ ಹೊಸ ಕಾರು ಮಾದರಿಗಳಿವು!
ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಮಾರಾಟವು ಕಳೆದ ತಿಂಗಳಿನಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಕಾರು ಮಾದರಿಗಳು ಮಾರಾಟ ಪ್ರವೇಶಿಸುತ್ತಿವೆ.
Recommended Video
ಕಳೆದ ತಿಂಗಳು ಜೂನ್‌ನಲ್ಲೂ ಕೂಡಾ ಹಲವು ಕಾರು ಮಾದರಿಗಳು ಬಿಡುಗಡೆಯಾಗಿದ್ದು, ಹೊಸ ಕಾರುಗಳ ಬೆಲೆ, ಎಂಜಿನ್ ಮತ್ತು ಇತರೆ ತಾಂತ್ರಿಕ ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ.

ಮಹೀಂದ್ರಾ ಸ್ಕಾರ್ಪಿಯೋ-ಎನ್
ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕಾರು ಮಾದರಿಯು 2.0-ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರನ್ನು ಗ್ರಾಹಕರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಖರೀದಿ ಮಾಡಬಹುದಾಗಿದ್ದು, ಹೊಸ ಕಾರಿನ ಹೈಎಂಡ್ ಮಾದರಿಗಳಲ್ಲಿ 4x4 ಡ್ರೈವ್ ಸಿಸ್ಟಂ ನೀಡಲಾಗಿದೆ. ವ್ಹೀಲ್‌ಬೇಸ್ ಸೌಲಭ್ಯವು ಪ್ರಸ್ತುತ ಮಾದರಿಗಿಂತಲೂ 70 ಎಂಎಂ ಹೆಚ್ಚು ಉದ್ದವಾಗಿರುವುದರಿಂದ ಮೂರನೇ ಸಾಲಿನ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಒದಗಿಸಿದ್ದು, ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಫೋಕ್ಸ್‌ವ್ಯಾಗನ್ ವರ್ಟಸ್ ಬಿಡುಗಡೆ
ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಬಹುನಿರೀಕ್ಷಿತ ವರ್ಟಸ್ ಸೆಡಾನ್ ಕಾರು ಮಾದರಿಯನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು, ಈ ಹೊಸ ಸೆಡಾನ್ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.21 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 17.91 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರು ಸ್ಕೋಡಾ ಸ್ಲಾವಿಯಾ ಮಾದರಿಯೊಂದಿಗೆ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಹಂಚಿಕೊಂಡಿದ್ದು, ಹೊಸ ಕಾರು ಎಂಜಿನ್ ಆಯ್ಕೆಗೆ ಅನುಗುಣವಾಗಿ ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್ ವೆರಿಯೆಂಟ್ ಹೊಂದಿದೆ. 1.0 ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯುತ್ತಿದೆ.

ಕಿಯಾ ಇವಿ6 ಬಿಡುಗಡೆ
ಕಿಯಾ ಇಂಡಿಯಾ ಕಂಪನಿಯು ಇವಿ6 ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಜಿಟಿ ಲೈನ್ ಫ್ರಂಟ್ ವ್ಹೀಲ್ ಡ್ರೈವ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 59.95 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ಜಿಟಿ ಲೈನ್ ಆಲ್ ವ್ಹೀಲ್ ಡ್ರೈವ್ ಮಾದರಿಯು ರೂ. 64.95 ಲಕ್ಷ ಬೆಲೆ ಹೊಂದಿದೆ.

ಹೊಸ ಇವಿ6 ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್(E-GMP) ಅನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಇದು ಬ್ರ್ಯಾಂಡ್‌ನ ಭವಿಷ್ಯದ ಶ್ರೇಣಿಯ ಎಲೆಕ್ಟ್ರಿಕ್ ಕೊಡುಗೆಗಳ ಆಧಾರವಾಗಿದೆ. ಹೊಸ ಕಾರಿನಲ್ಲಿ ಕಂಪನಿಯು 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಅತ್ಯಧಿಕ ಮೈಲೇಜ್ ನೀಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ ಮೈಲೇಜ್ ರೇಂಜ್ ಖಚಿತಪಡಿಸುತ್ತದೆ.

2022ರ ಹ್ಯುಂಡೈ ವೆನ್ಯೂ
ಹೊಸ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ಇ, ಎಸ್, ಎಸ್(ಒ), ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.57 ಲಕ್ಷ ಬೆಲೆ ಹೊಂದಿದೆ.

ಹ್ಯುಂಡೈ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ನವೀಕೃತ ವಿನ್ಯಾಸದೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

2022ರ ಮಾರುತಿ ಸುಜುಕಿ ಬ್ರೆಝಾ
ಮಾರುತಿ ಸುಜುಕಿ ಕಂಪನಿಯು 2022ರ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿಯನ್ನು ಭಾರೀ ಬದಲಾವಣೆಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 13.96 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯ ಎಲ್ಎಕ್ಸ್‌ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ವೆಂಟ್‌ಗಳನ್ನು ಹೊಂದಿದ್ದು, 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ಹೊಸ ಕಾರು 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 104.6 ಬಿಎಚ್‌ಪಿ ಮತ್ತು 137 ಎನ್ಎಂ ಉತ್ಪಾದನೆ ಮೂಲಕ ಉತ್ತಮ ಇಂಧನ ದಕ್ಷತೆ ಕಾಯ್ದುಕೊಂಡಿದೆ. ಜೊತೆಗೆ ಹೊಸ ಕಾರು ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ಸೇರಿದಂತೆ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದು, ಕನೆಕ್ಟೆಡ್ ಫೀಚರ್ಸ್ ಮೂಲಕ 9.0-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಟಚ್‌ಸ್ಕ್ರೀನ್ ಅಳವಡಿಸಲಾಗಿದೆ.

ಔರಾ ಎಸ್ಎಕ್ಸ್ ಸಿಎನ್‌ಜಿ ಬಿಡುಗಡೆ
ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಔರಾ ಸಿಎನ್‌ಜಿ ಆವೃತ್ತಿಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಗ್ರಾಹಕರ ಬೇಡಿಕೆಗೆ ತಕ್ಕಂತೆ ಔರಾ ಸಿಎನ್‌ಜಿ ಮಾದರಿಯಲ್ಲಿ ಎಸ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಔರಾ ಸಿಎನ್‌ಜಿ ಎಸ್ ವೆರಿಯೆಂಟ್ ಮಾತ್ರ ಹೊಂದಿದ್ದ ಕಂಪನಿಯು ಇದೀಗ ಎಸ್ಎಕ್ಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.57 ಲಕ್ಷ ಬೆಲೆ ಹೊಂದಿದೆ. ಔರಾ ಎಸ್ ಸಿಎನ್‌ಜಿ ಮಾದರಿಗಿಂತ ಹೊಸ ವೆರಿಯೆಂಟ್ ಸುಮಾರು ರೂ. 79 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್‌ನಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದೆ.

ಸ್ಕೋಡಾ ಕುಶಾಕ್ ಎನ್ಎಸ್ಆರ್ ವೆರಿಯೆಂಟ್
ಸ್ಕೋಡಾ ಕಂಪನಿಯು ಕುಶಾಕ್ ಮಾದರಿಯಲ್ಲಿನ ಪ್ರಮುಖ ವೆರಿಯೆಂಟ್‌ಗಳಲ್ಲಿನ ಫೀಚರ್ಸ್ ಬದಲಾವಣೆಗೊಳಿಸಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಾಗುತ್ತಿದ್ದು, ಇದೀಗ ಕಂಪನಿಯು ಕುಶಾಕ್ ಟಾಪ್ ಎಂಡ್ ಮಾದರಿಯಾದ 1.0 ಟಿಎಸ್ಐ ಸ್ಟೈಲ್ ಮಾದರಿಯನ್ನು ಆಧರಿಸಿ ಹೊಸ ಟಿಎಸ್ಐ ಸ್ಟೈಲ್ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಹೊಸ ಟಿಎಸ್ಐ ಸ್ಟೈಲ್ ಎನ್ಎಸ್ಆರ್ ವೆರಿಯೆಂಟ್ ಸ್ಟ್ಯಾಂಡರ್ಡ್ ಟಿಎಸ್ಐ ಸ್ಟೈಲ್ ಮಾದರಿಗಿಂತಲೂ ರೂ. 20 ಸಾವಿರದಷ್ಟು ಕಡಿಮೆ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 15.09 ಲಕ್ಷಕ್ಕೆ ಬಿಡುಗಡೆ ಮಾಡಿದೆ. ಬೆಲೆ ಕಡಿತದೊಂದಿಗೆ ಹೊಸ ಎನ್ಎಸ್ಆರ್ ವೆರಿಯೆಂಟ್‌ನಲ್ಲಿ ಕಂಪನಿಯು ಎಲೆಕ್ಟ್ರಿಕ್ ಸನ್‌ರೂಫ್, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಮತ್ತು ರೈನ್-ಸೆನ್ಸಿಂಗ್ ವೈಪರ್‌ಗಳನ್ನು ತೆಗೆದುಹಾಕಿದ್ದು, 16-ಇಂಚಿನ ಅಲಾಯ್ ಚಕ್ರಗಳ ಬದಲಾಗಿ 15 ಇಂಚಿನ ಅಲಾಯಲ್ ಚಕ್ರಗಳನ್ನು ನೀಡಲಾಗುತ್ತಿದೆ.

ಅಲ್ಟಿಮೇ ರೋಡ್‌ಸ್ಟರ್ ವಿತರಣೆ ಆರಂಭ
ಇಟಾಲಿಯನ್ ಸೂಪರ್ ಕಾರು ತಯಾರಕ ಕಂಪನಿಯಾಗಿರುವ ಲಂಬೋರ್ಗಿನಿಯು ತನ್ನ ಹೊಸ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಕಾರಿನ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಮೊದಲ ಯುನಿಟ್ ಅನ್ನು ಭಾರತದಲ್ಲಿ ವಿತರಣೆ ಮಾಡಿದೆ.

ಅವೆಂಟಡಾರ್ ಅಲ್ಟಿಮೇ ಮಾದರಿಯನ್ನು ಲಂಬೋರ್ಗಿನಿ ಕಂಪನಿಯು ರೋಡ್‌ಸ್ಟರ್ ಮತ್ತು ಕೂಪೆ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹೊಸ ಕಾರು ಮಾದರಿಯು ಮೊದಲ ಬಾರಿಗೆ ಭಾರತದಲ್ಲಿ ವಿತರಣೆಗೊಂಡಿವೆ. ಹೊಸ ಕಾರು 6.5-ಲೀಟರ್ ವಿ12 ಎಂಜಿನ್ ಅನ್ನು ಪಡೆದುಕೊಂಡಿದ್ದು, ಹೊಸ ಕಾರು 7-ಸ್ಪೀಡ್ ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್‌ಮಿಷನ್ ಮೂಲಕ 770 ಬಿಎಚ್‌ಪಿ ಮತ್ತು 720 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್
ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಅನ್ನು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಕೋಟಿಗೆ ಬಿಡುಗಡೆಗೊಳಿಸಿದ್ದು, ಸದ್ಯಕ್ಕೆ ಕಂಪನಿಯು ಹೊಸ ಕಾರಿನ ಎರಡು ಯುನಿಟ್‌ಗಳನ್ನು ಮಾತ್ರ ಭಾರತದಲ್ಲಿ ವಿತರಣೆ ಮಾಡುತ್ತಿದೆ.

ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಎರಡು ಯುನಿಟ್‌ಗಳು ಈಗಾಗಲೇ ಮಾರಾಟಗೊಂಡಿದ್ದು, ಹೊಸ ಕಾರು ಬಿಡುಗಡೆಯ ದಿನದಂದೆ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. ಮೊದಲ ಯುನಿಟ್ ಅನ್ನು ನಮ್ಮ ಬೆಂಗಳೂರಿನ ಬ್ರೆನ್ ಗ್ಯಾರೇಜ್ ಮಾಲೀಕ ಭೂಪೇಶ್ ರೆಡ್ಡಿ ಖರೀದಿಸಿದ್ದು, ಹೊಸ ಕಾರು 720 ಬಿಎಚ್‌ಪಿ ಉತ್ಪಾದನಾ ಪ್ರೇರಿತ ಫ್ಲಾಟ್-ಪ್ಲೇನ್ ಕ್ರ್ಯಾಂಕ್ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್ ಜೋಡಣೆ ಹೊಂದಿದೆ.


Click it and Unblock the Notifications