ಗ್ಲೊಬಲ್ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ಹೊಸ ಕಾರುಗಳಿವು!
ಹೊಸ ಕಾರುಗಳ ಖರೀದಿಯ ವೇಳೆ ಗ್ರಾಹಕರು ಇತ್ತೀಚೆಗೆ ಅಗ್ಗದ ಬೆಲೆಯ ಕಾರು ಮಾದರಿಗಳಿಂತಲೂ ಸುರಕ್ಷಿತ ಹೊಂದಿರುವ ಕಾರುಗಳ ಖರೀದಿಗೆ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಾರು ಉತ್ಪಾದನಾ ಕಂಪನಿಗಳು ಸುರಕ್ಷಾ ಮಾನದಂಡಗಳನ್ನು ಉನ್ನತೀಕರಿಸುತ್ತಿವೆ.

ಆಧುನಿಕ ಕಾಲಘಟ್ಟದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದು, ಇದರ ಭಾಗವಾಗಿ ಕಾರುಗಳ ಸುರಕ್ಷತಾ ಗುಣಮಟ್ಟವು ಕೂಡಾ ಸಾಕಷ್ಟು ಸುಧಾರಿಸಿದೆ. ಇನ್ನೊಂದೆಡೆ ಯುರೋಪ್ ಎನ್‌ಸಿಎಪಿ ಮಾದರಿಯಲ್ಲಿ ಭಾರತೀಯ ಪ್ರಯಾಣಿಕ ಕಾರುಗಳಿಗೂ ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸಲು ಹೊರಟಿರುವ ಭಾರತ ಸರ್ಕಾರವು 2019ರ ಅಕ್ಟೋಬರ್ 1ರಿಂದ ಪ್ರತಿ ಕಾರಿಗೂ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಕಡ್ಡಾಯಗೊಳಿಸಿದ್ದು, ಸುರಕ್ಷತೆ ಇಲ್ಲದ ಕಾರುಗಳಿಗೆ ಮಾರಾಟದ ವಿರುದ್ದ ಕ್ರಮಕೈಗೊಳ್ಳಲಾಗುತ್ತಿದೆ.

ಕಳೆದ ಒಂದು ದಶಕದ ಅವಧಿಯಲ್ಲಿ ಪ್ರಯಾಣಿಕ ಕಾರುಗಳಲ್ಲಿ ಹಲವಾರು ಸುರಕ್ಷಾ ಮಾನದಂಡಗಳು ಸಾಕಷ್ಟು ಸುಧಾರಣೆಗೊಂಡಿದ್ದು, ಹೊಸ ವಾಹನಗಳಲ್ಲಿ ಗರಿಷ್ಠಿ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ವಾಹನಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು.

ಹೀಗಾಗಿ ಪ್ರಯಾಣಿಕ ವಾಹನಗಳ ಸುರಕ್ಷತೆ ಕುರಿತು ಜಾಗತಿಕ ಮಟ್ಟದ ಅಭಿಯಾನ ಕೈಗೊಂಡಿರುವ ಗ್ಲೊಬಲ್ ಎಸ್‌ಸಿಎಪಿ ಸಂಸ್ಥೆಯು ಭಾರತದಲ್ಲಿ #SAFERCARSFORINDIA ಅಭಿಯಾನದಡಿ ಹೊಸ ಕಾರುಗಳ ಸುರಕ್ಷತೆಯನ್ನು ಸುಧಾರಿಸುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್ ಮೂಲಕ ರೇಟಿಂಗ್ಸ್ ನೀಡುತ್ತಿರುವುದು ಕಾರುಗಳ ಜಾತಕವನ್ನು ಬಯಲು ಮಾಡಲಾಗುತ್ತಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸುರಕ್ಷಾ ಕಾರು ಮಾದರಿಯಾಗಿ ಗುರುತಿಸಲು ಕನಿಷ್ಠ 3 ಅಂಕಗಳು ಅವಶ್ಯವಿದ್ದು, 5 ಅಂಕಗಳನ್ನು ಗಿಟ್ಟಿಸಿಕೊಂಡಿರುವ ಕಾರುಗಳನ್ನು ಅತ್ಯುತ್ತಮ ಕಾರು ಮಾದರಿ ಎಂದು ಗುರುತಿಸಲಾಗುತ್ತದೆ. ಕೇಂದ್ರ ಸರ್ಕಾರದ ಹೊಸ ಮಾನದಂಡಗಳ ನಂತರ ಇತ್ತೀಚೆಗೆ ಬಿಡುಗಡೆಯಾದ ಬಜೆಟ್ ಬೆಲೆಯ ಕಾರುಗಳು ಸಹ 5 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಗಳಾದ ಮಹೀಂದ್ರಾ ಮತ್ತು ಟಾಟಾ ಕಂಪನಿಗಳು ಈ ವಿಚಾರದಲ್ಲಿ ಅಗ್ರಸ್ಥಾನದಲ್ಲಿವೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಕುರಿತಾಗಿ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಇದೀಗ 2022ರ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಹೊಸ ಪಟ್ಟಿಯಲ್ಲಿ ಈ ಹಿಂದೆ ಕಳಪೆ ಮಾದರಿಯಾಗಿ ಗುರುತಿಸಿಕೊಂಡಿದ್ದ ಪ್ರಮುಖ ಕಾರುಗಳು ಇದೀಗ ಹೊಸ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಗಮನಸೆಳೆದಿವೆ.

ಮಹೀಂದ್ರಾ ಎಕ್ಸ್‌ಯುವಿ700
ಮಹೀಂದ್ರಾ ನಿರ್ಮಾಣದ ಹೊಸ ಕಾರುಗಳು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಹೊಸ ದಾಖಲೆಗೆ ಕಾರಣವಾಗುತ್ತಿದ್ದು, ಎಕ್ಸ್‌ಯುವಿ700 ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 17 ಅಂಕಗಳಲ್ಲಿ 16.03 ಅಂಕಗಳನ್ನು ಮತ್ತು ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಲ್ಲಿ 41.66 ಅಂಕಗಳೊಂದಿಗೆ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ.

ಟಾಟಾ ಪಂಚ್
ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ನಂತರ ಎಲ್ಲಾ ಕಾರು ಮಾದರಿಗಳಲ್ಲೂ ಗರಿಷ್ಠ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಪಂಚ್ ಮೈಕ್ರೊ ಎಸ್‌ಯುವಿ ಮಾದರಿಯಲ್ಲೂ ಸಹ ಗರಿಷ್ಠ ಮಟ್ಟದ ಸುರಕ್ಷಾ ಫೀಚರ್ಸ್‌ಗಳೊಂದಿಗೆ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ300
ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದ್ದು, ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ಸ್‌ನೊಂದಿಗೆ ಬಜೆಟ್ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಕಾರು ಮಾದರಿಯಾಗಿದೆ.

ಟಾಟಾ ಆಲ್‌ಟ್ರೊಜ್
ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡ ಟಾಟಾ ಕಾರುಗಳಲ್ಲಿ ಆಲ್‌ಟ್ರೊಜ್ ಕೂಡಾ ಪ್ರಮುಖ ಕಾರು ಮಾದರಿಯಾಗಿದ್ದು, ಇದು ಕೂಡಾ ನೆಕ್ಸಾನ್ ಮಾದರಿಯಲ್ಲೇ ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 3 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ.

ಟಾಟಾ ನೆಕ್ಸಾನ್
ಟಾಟಾ ನಿರ್ಮಾಣದ ನೆಕ್ಸಾನ್ ಮಾದರಿಯು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಅತ್ಯುತ್ತಮ ಬಜೆಟ್ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 3 ಸ್ಟಾರ್ ರೇಟಿಂಗ್ಸ್ ಹೊಂದಿದೆ.

ಮಹೀಂದ್ರಾ ಥಾರ್
ನ್ಯೂ ಜನರೇಷನ್ ಥಾರ್ ಎಸ್‌ಯುವಿ ಕಾರು ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 5 ಅಂಕಗಳಿಗೆ 4 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಮೂಲಕ ಒಟ್ಟಾರೆ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.

ಹೋಂಡಾ ಸಿಟಿ ಸೆಡಾನ್
ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಈ ಬಾರಿ ಹೋಂಡಾ ನಿರ್ಮಾಣದ ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಮಾದರಿಯು ಕೂಡಾ ಉತ್ತಮ ರೇಂಟಿಂಗ್ಸ್ ಪಡೆದುಕೊಂಡಿದ್ದು, ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ಸ್ ಹೊಂದಿದೆ.

ಟಾಟಾ ಟಿಗೋರ್ ಇವಿ
ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಹೊಸ ಟಾಟಾ ಟಿಗೋರ್ ಇವಿ ಕಾರು ಕೂಡಾ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಸುರಕ್ಷತೆಯಲ್ಲಿ ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ಸ್ ಹೊಂದಿದೆ.

ಟಾಟಾ ಟಿಯಾಗೋ ಮತ್ತು ಟಿಗೋರ್
ಟಾಟಾ ಟಿಯಾಗೋ ಮತ್ತು ಟಿಗೋರ್ ಪೆಟ್ರೋಲ್ ಕಾರುಗಳು ಕೂಡಾ ಸುರಕ್ಷತೆಯಲ್ಲಿ ಗಮನಸೆಳೆಯುತ್ತಿದ್ದು, ಎರಡು ಕಾರುಗಳು ಒಟ್ಟಾರೆ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿವೆ. ಹೊಸ ಕಾರುಗಳು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 3 ಸ್ಟಾರ್ ರೇಟಿಂಗ್ಸ್ ಹೊಂದಿದೆ.

ಹೋಂಡಾ ಜಾಝ್
ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹೋಂಡಾ ನಿರ್ಮಾಣದ ಸಿಟಿ ಸೆಡಾನ್ ನಂತರ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಕೂಡಾ ಉತ್ತಮ ರೇಂಟಿಂಗ್ಸ್ ಪಡೆದುಕೊಂಡಿದ್ದು, ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 3 ಸ್ಟಾರ್ ರೇಟಿಂಗ್ಸ್‌ನೊಂದಿಗೆ ಒಟ್ಟಾರೆ ನಾಲ್ಕು ರೇಟಿಂಗ್ಸ್ ಹೊಂದಿದೆ.

ತದನಂತರದ ಸೇಫ್ಟಿ ರೇಟಿಂಗ್ಸ್ ಪಟ್ಟಿಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಹ್ಯಾಚ್‌ಬ್ಯಾಕ್, ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್, ನಿಸ್ಸಾನ್ ಮ್ಯಾಗ್ನೈಟ್, ಮಹೀಂದ್ರಾ ಮರಾಜೋ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರುಗಳು 4 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿವೆ.

ಆದರೆ ಸೇಫ್ಟಿ ರೇಟಿಂಗ್ಸ್ ಪಟ್ಟಿಯಲ್ಲಿ ಪ್ರಮುಖ ಕಾರುಗಳು ಕನಿಷ್ಠ ಮಟ್ಟದ ರೇಟಿಂಗ್ಸ್ ಪಡೆದುಕೊಂಡಿದ್ದು, ಕಿಯಾ ಸೆಲ್ಟೊಸ್, ಮಾರುತಿ ಎರ್ಟಿಗಾ, ರೆನಾಲ್ಟ್ ಡಸ್ಟರ್ ಕಾರುಗಳು 5 ಸ್ಟಾರ್ ರೇಟಿಂಗ್ಸ್‌ನಲ್ಲಿ 3 ಸ್ಟಾರ್ ರೇಟಿಂಗ್ಸ್ ಮಾತ್ರ ಪಡೆದುಕೊಂಡಿದೆ.

ಸೇಫ್ಟಿ ರೇಟಿಂಗ್ಸ್ ಪಟ್ಟಿಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ಸುಜುಕಿ ವ್ಯಾಗನ್‌ಆರ್, ಹ್ಯುಂಡೈ ಸ್ಯಾಂಟ್ರೊ, ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರು ಮಾದರಿಗಳು ಕೇವಲ 2 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ರೆನಾಲ್ಟ್ ಕ್ವಿಡ್ ಕಾರು ಕೇವಲ 1 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.


Click it and Unblock the Notifications