ಉತ್ಪಾದನಾ ವೆಚ್ಚ ಹೆಚ್ಚಳ- ಶೀಘ್ರದಲ್ಲಿಯೇ ಹೊಸ ವಾಹನಗಳ ಬೆಲೆ ಮತ್ತಷ್ಟು ದುಬಾರಿ..
ಹೆಚ್ಚುತ್ತಿರುವ ಆಟೋ ಬಿಡಿಭಾಗಗಳ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಹೊಸ ವಾಹನಗಳ ಬೆಲೆ ಹೆಚ್ಚಿಸುತ್ತಿದ್ದು, ಏಪ್ರಿಲ್ ಆರಂಭದಲ್ಲಿ ಹೊಸ ವಾಹನಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಉತ್ಪಾದನಾ ವೆಚ್ಚವನ್ನು ಸರಿದೂಗಿಸಲ ದರ ಹೆಚ್ಚಿಸಲಾಗುತ್ತಿದೆ. ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದ್ದು, ಕಳೆದ ಜನವರಿಯಲ್ಲಿ ದರ ಹೆಚ್ಚಿಸಿದ್ದ ಪ್ರಮುಖ ವಾಹನ ಉತ್ಪಾದನಾ ಕಂಪನಿಯು ಇದೀಗ ವರ್ಷದಲ್ಲಿ ಎರಡನೇ ಬಾರಿಗೆ ಏಪ್ರಿಲ್ ಆರಂಭದಲ್ಲಿ ದರ ಹೆಚ್ಚಳಕ್ಕೆ ಸಜ್ಜಾಗಿವೆ.

ಟಾಟಾ ಮೋಟಾರ್ಸ್ ಸೇರಿದಂತೆ ಕೆಲ ಕಂಪನಿಯು ಈಗಾಗಲೇ ಎರಡನೇ ಹಂತದ ಬೆಲೆ ಏರಿಕೆ ಘೋಷಣೆ ಮಾಡಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಹೊಸ ದರ ಪಟ್ಟಿ ಪ್ರಕಟಗೊಳಿಸಲು ಸಜ್ಜಾಗುತ್ತಿವೆ.

ಹೊಸ ದರಪಟ್ಟಿಯಲ್ಲಿ ಎಂಟ್ರಿ ಲೆವಲ್ ಕಾರುಗಳ ಬೆಲೆಯು ರೂ. 5 ಸಾವಿರದಿಂದ ರೂ. 15 ಸಾವಿರ ತನಕ ಹೆಚ್ಚಳವಾಗಲಿದ್ದರೆ, ಮಧ್ಯಮ ಕ್ರಮಾಂಕದ ಕಾರುಗಳ ಬೆಲೆಯಲ್ಲಿ ರೂ. 10 ಸಾವಿರದಿಂದ ರೂ. 30 ಸಾವಿರ ತನಕ ಮತ್ತು ರೂ. 20 ಲಕ್ಷ ಮೌಲ್ಯ ಮೇಲ್ಪಟ್ಟ ಎಸ್‌ಯುವಿ ಕಾರುಗಳ ಬೆಲೆಯಲ್ಲಿ ರೂ.40 ಸಾವಿರ ರೂ.70 ಸಾವಿರ ತನಕ ದರ ಹೆಚ್ಚಳವಾಗಲಿವೆ.

ಐಷಾರಾಮಿ ಕಾರುಗಳ ಬೆಲೆಗಳಲ್ಲೂ ಕೂಡಾ ವಿವಿಧ ಮಾದರಿಗಳನ್ನು ಆಧರಿಸಿ ಶೇ.1 ರಿಂದ ಶೇ.3 ರ ತನಕ ದರ ಹೆಚ್ಚಳವಾಗಬಹುದಾಗಿದ್ದು, ರೂ.50 ಸಾವಿರದಿಂದ ರೂ. 2 ಲಕ್ಷದ ತನಕ ದರ ಹೆಚ್ಚಳವಾಗಬಹುದಾಗಿದೆ.

ಹಾಗೆಯೇ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಕಮ್ಯೂಟರ್ ಮಾದರಿಗಳ ಬೆಲೆ ರೂ. 2 ಸಾವಿರದಿಂದ ರೂ. 5 ಸಾವಿರ ತನಕ ದರ ಹೆಚ್ಚಳವಾಗಲಿದ್ದರೆ ಪ್ರೀಮಿಯಂ ಬೈಕ್‌ಗಳ ಬೆಲೆಯಲ್ಲಿ ರೂ.5 ಸಾವಿರದಿಂದ ರೂ.10 ಸಾವಿರ ತನಕ ದರ ಹೆಚ್ಚಳವಾಗಬಹುದಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಈ ಹಿಂದೆ ಪ್ರತಿ ಆರು ತಿಂಗಳಿಗೆ ಒಂದು ಬಾರಿದ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ವಾಹನ ಉತ್ಪಾದನಾ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿವೆ.

ಹೊಸ ವಾಹನಗಳ ದರ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲಿ ಸೆಮಿಕಂಡಕ್ಟರ್ ಕೊರೆತೆ ಪ್ರಮುಖವಾಗಿದ್ದು, ಹೊಸ ಕಾರಿನ ಬೇಡಿಕೆಯು ಹೆಚ್ಚಿರುವ ಸಂದರ್ಭದಲ್ಲಿಯೇ ಆಟೋ ಕಂಪನಿಗಳಿಗೆ ಸೆಮಿಕಂಡಕ್ಟರ್ ಕೊರತೆಯು ತೀವ್ರವಾಗಿ ಕಾಡುತ್ತಿದೆ.

ಕೋವಿಡ್ ನಂತರ ಆರ್ಥಿಕ ಬೆಳವಣಿಗೆ ಸುಧಾರಿಸುತ್ತಿರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದೆ. ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವೇ ಇಲ್ಲ ಎನ್ನಬಹುದು. ಹೊಸ ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್ ಕಂಟ್ರೋಲ್, ಆಟೋ ಫೋಲ್ಡಿಂಗ್ ಒಆರ್‌ವಿಎಂ, ಡಿಜಿಟಲ್ ಕೀ ಮತ್ತು ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳು ಕಾರ್ಯನಿರ್ವಹಿಸಲು ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಲ್ಯಾಪ್‌ಟಾಪ್, ಮೊಬೈಲ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತದಲ್ಲೂ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ ಪ್ರಮುಖ ಕಂಪನಿಗಳ ಕಾರುಗಳ ಉತ್ಪಾದನೆಗೆ ಸಾಕಷ್ಟು ಹೊಡೆತ ನೀಡಿದೆ.


Click it and Unblock the Notifications