ಭಾರತದಲ್ಲಿ10 ಲಕ್ಷದೊಳಗಿನ ಖರೀದಿಗೆ ಲಭ್ಯವಿರುವ ಸೇಫ್ಟಿ ಕಾರುಗಳು: ಟಾಟಾದಿಂದ ಹೋಂಡಾವರೆಗೆ...
ಪ್ರತಿಯೊಬ್ಬ ಕಾರು ಖರೀದಿದಾರರೂ ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. GNCAP (ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಭಾರತ ಸೇರಿದಂತೆ ಉದಯೋನ್ಮುಖ ಮಾರುಕಟ್ಟೆಗಳ ಹೊಸ ಕಾರುಗಳನ್ನು ಕ್ರ್ಯಾಶ್-ಟೆಸ್ಟ್ ಮಾಡುವ ಸಂಸ್ಥೆಯಾಗಿದ್ದು, ಕಾರುಗಳಿಗೆ ಸುರಕ್ಷತೆ ನಿರ್ಣಯಿಸಲು ಸ್ಟಾರ್ ರೇಟಿಂಗ್ ನೀಡುತ್ತದೆ. ದೇಶದಲ್ಲಿ ಲಭ್ಯವಿರುವ 10 ಲಕ್ಷದೊಳಗಿನ ಸೇಫ್ಟಿ ಕಾರುಗಳ ಮಾಹಿತಿ ಇಲ್ಲಿದೆ.
ಟಾಟಾ ಪಂಚ್:
ಭಾರತದ ಮಾರುಕಟ್ಟೆಯಲ್ಲಿ ಅಕ್ಟೋಬರ್ 18, 2021ರಂದು ಬಿಡುಗಡೆಯಾದ ಟಾಟಾ ಪಂಚ್ ಮೈಕ್ರೋ-ಎಸ್‌ಯುವಿ ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಹೊಂದಿದೆ ಎಂದು ಹೇಳಬಹುದು. ಈ ಕಾರು, ವಯಸ್ಕರ ರಕ್ಷಣೆಯ ವಿಭಾಗದಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದು ಗರಿಷ್ಠ 17 ಅಂಕಗಳಿಗೆ 16.45 ಅಂಕಗಳನ್ನು ಗಳಿಸಿದೆ. ಆದರೆ, ಮಕ್ಕಳ ರಕ್ಷಣೆಯ ವಿಭಾಗದಲ್ಲಿ ಮಾತ್ರ ಗರಿಷ್ಠ 49 ಅಂಕಗಳಲ್ಲಿ 40.89 ಪಡೆದುಕೊಳ್ಳುವ ಮೂಲಕ 4-ಸ್ಟಾರ್ ರೇಟಿಂಗ್ ಗಳಿಸಿದೆ.

ಟಾಟಾ ಪಂಚ್‌ನಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ಬ್ರೇಕ್ ಸ್ವೇ ಕಂಟ್ರೋಲ್, ಲೊ-ಟ್ರಾಕ್ಷನ್ ಮೋಡ್, ಸೀಟ್‌ಬೆಲ್ಟ್ ರಿಮೈಂಡರ್, ಹೈ-ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳನ್ನು ಒಳಗೊಂಡಿದೆ. ಈ ಕಾರು, 1.2-ಲೀಟರ್ NA, 3-ಸಿಲ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಆರಂಭಿಕ ಬೆಲೆಗಳು ರೂ.6 ಲಕ್ಷದಿಂದ ಶುರುವಾಗಲಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ. 9.54 ಲಕ್ಷದವರೆಗೆ (ಎಕ್ಸ್ ಶೋರೂಂ, ಭಾರತ) ಇದೆ.
ಮಹೀಂದ್ರಾ XUV300:
ದೇಶೀಯ ಮಾರುಕಟ್ಟೆಯಲ್ಲಿ XUV300, GNCAPನಿಂದ 5-ಸ್ಟಾರ್ ರೇಟಿಂಗ್ ಪಡೆದ ಮಹೀಂದ್ರಾದ ಮೊದಲ ಸಬ್-4-ಮೀಟರ್ ಎಸ್‌ಯುವಿ ಆಗಿದೆ. ಇದು ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್‌ಗಳನ್ನು (ಸ್ಕೋರಿಂಗ್ 16.42/17) ಪಡೆದುಕೊಂಡಿದ್ದು, ಮಕ್ಕಳ ರಕ್ಷಣೆ ವಿಭಾಗದಲ್ಲಿ 4- ಸ್ಟಾರ್ (ಸ್ಕೋರಿಂಗ್ (37.44/49) ಅನ್ನು ಗಳಿಸಿದೆ. ವಿಶೇಷವಾಗಿ ಅದರ ಪ್ರತಿಸ್ಪರ್ಧಿ ಕಂಪನಿ ಕಾರುಗಳಿಗೆ ಹೋಲಿಸಿದರೆ, ಸುರಕ್ಷತೆಯ ದೃಷ್ಟಿಯಿಂದ ಈ ಮಹೀಂದ್ರಾ XUV 300 ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ABS ಮತ್ತು EBD, ಮುಂಭಾಗ ಮತ್ತು ಹಿಂಭಾಗದಲ್ಲಿ ಫಾಗ್ ಲೈಟ್ಸ್, ISOFIX ಆಂಕಾರೇಜ್, ಸೀಟ್ ಬೆಲ್ಟ್ ರಿಮೈಂಡರ್, ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಮಹೀಂದ್ರಾ XUV300 ಬೆಲೆಗಳು ರೂ.8.41 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ಎಂಡ್ ಮಾದರಿ ಬೆಲೆ ರೂ.14.07 ಲಕ್ಷ (ಎಕ್ಸ್ ಶೋರೂಂ, ಭಾರತ) ಇದೆ.
ಟಾಟಾ ಆಲ್ಟ್ರೋಜ್:
ಗ್ಲೋಬಲ್ NCAPಯಿಂದ 5-ಸ್ಟಾರ್ ರೇಟಿಂಗ್ ಪಡೆದಿರುವ ಏಕೈಕ ಮೇಡ್ ಇನ್ ಇಂಡಿಯಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಟಾಟಾ ಆಲ್ಟ್ರೋಜ್ ಆಗಿದೆ. ಇದು ವಯಸ್ಕರ ರಕ್ಷಣೆ ವಿಭಾಗದಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಗರಿಷ್ಠ 17 ಅಂಕಗಳಿಗೆ 16.13 ಅಂಕಗಳನ್ನು ಗಳಿಸಿದೆ. ಆಲ್ಟ್ರೊಜ್ ಮಕ್ಕಳ ರಕ್ಷಣೆ ವಿಭಾಗದಲ್ಲಿ ಉತ್ತಮ ಸ್ಕೋರ್ ಮಾಡಲಿಲ್ಲ. ಕೇವಲ ಮೂರು ಸ್ಟಾರ್ (29/49) ಪಡೆದುಕೊಂಡಿದೆ. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಎರಡು ಏರ್‌ಬ್ಯಾಗ್, EBD ಜೊತೆಗೆ ABS ಅನ್ನು ಹೊಂದಿದೆ.
ಇಷ್ಟೇ ಅಲ್ಲದೆ, ಹಿಂಭಾಗದ ಪಾರ್ಕಿಂಗ್ ಸೆನ್ಸರ್ಸ್, ಹಿಂಬದಿಯ ಕ್ಯಾಮೆರಾ, ಮುಂಭಾಗದ ಆಸನಗಳಿಗೆ ಸೀಟ್-ಬೆಲ್ಟ್ ರೀಮೆಂಡರ್ ಮತ್ತು Isofix ಚೈಲ್ಡ್-ಸೀಟ್ ಮೌಂಟ್‌ಗಳನ್ನು ಒಳಗೊಂಡಿದೆ. ಟಾಟಾ ಆಲ್ಟ್ರೋಜ್ 1.2-ಲೀಟರ್ NA ಮತ್ತು ಟರ್ಬೊ ಪೆಟ್ರೋಲ್, 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಈ ಹೊಸ ಟಾಟಾ ಆಲ್ಟ್ರೋಜ್ ಆರಂಭಿಕ ಬೆಲೆಗಳು ರೂ.6.34 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ಎಂಡ್ ಮಾದರಿ ಬೆಲೆ 10.25 ಲಕ್ಷದವರೆಗೆ (ಎಕ್ಸ್ ಶೋರೂಂ, ಭಾರತ) ಇದೆ.
ಟಾಟಾ ನೆಕ್ಸನ್:
ಟಾಟಾದ ಮೊದಲ ಎಸ್‌ಯುವಿ ನೆಕ್ಸನ್, ಗ್ಲೋಬಲ್ NCAPಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಮೊದಲ ಮೇಡ್-ಇನ್-ಇಂಡಿಯಾ ಕಾರ್ ಆಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ (16.06/17) ಐದು ಸ್ಟಾರ್ ಗಳಿಸದೆ. ಆದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ ಕೇವಲ ಮೂರು ಸ್ಟಾರ್ (25/49) ಪಡೆದುಕೊಂಡಿದ್ದು. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಎರಡು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಬದಿಯ ಕ್ಯಾಮೆರಾ, ಚೈಲ್ಡ್-ಸೀಟ್ ಮೌಂಟ್‌ಗಳನ್ನು ಒಳಗೊಂಡಿದೆ. ಟಾಟಾ ನೆಕ್ಸಾನ್ ಆರಂಭಿಕ ಬೆಲೆಗಳು ರೂ.7.70 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ಎಂಡ್ ಮಾದರಿ ಬೆಲೆ ರೂ.14.18 ಲಕ್ಷದವರೆಗೆ ಇದೆ.
ಹೋಂಡಾ ಜಾಝ್:
ಈ ಹ್ಯಾಚ್‌ಬ್ಯಾಕ್ ವಯಸ್ಕರ ಸುರಕ್ಷತೆ ವಿಭಾಗದಲ್ಲಿ 4-ಸ್ಟಾರ್ (ಸ್ಕೋರಿಂಗ್ 13.89/17) ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ ನಾಲ್ಕು ಸ್ಟಾರ್‌ಗಳನ್ನು (ಸ್ಕೋರಿಂಗ್ (31.84/49) ಪಡೆದುಕೊಂಡಿದೆ. ಹೋಂಡಾ ಜಾಝ್ 1.2-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 90 hp ಪವರ್ ಹಾಗೂ 110 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಹೋಂಡಾ ಜಾಝ್‌ನ ಬೆಲೆಯು ರೂ.8.11 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ಎಂಡ್ ಮಾದರಿ ಬೆಲೆ ರೂ. 10.41 ಲಕ್ಷದವರೆಗೆ ಇದೆ.
ಟಾಟಾ ಟಿಯಾಗೊ & ಟಿಗೊರ್:
ಈ ಕಾರುಗಳು ಒಂದೇ ರೀತಿಯ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿವೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 17 ಅಂಕಗಳಿಗೆ 12.52 ಅಂಕಗಳನ್ನು ಗಳಿಸಿದ್ದು, ಮಕ್ಕಳ ರಕ್ಷಣೆ ವಿಭಾಗದಲ್ಲಿ 3-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿವೆ. 40 ಅಂಕಗಳಿಗೆ 34.15 ಅಂಕಗಳನ್ನು ಗಳಿಸಿವೆ. ಟಿಯಾಗೊ ಮತ್ತು ಟಿಗೊರ್ ಎರಡು ಕಾರುಗಳು 1.2-ಲೀಟರ್, ಮೂರು-ಸಿಲಿಂಡರ್ ರೆವೊಟ್ರಾನ್ ಎಂಜಿನ್ ಅನ್ನು ಹೊಂದಿವೆ. Tiago ಬೆಲೆಗಳು 5.45 ಲಕ್ಷದಿಂದ ಪ್ರಾರಂಭವಾಗುತ್ತದೆ. ಆದರೆ, Tigor ಬೆಲೆ 6.10 ಲಕ್ಷದಿಂದ (ಎಕ್ಸ್ ಶೋ ರೂಂ, ಭಾರತ) ಶುರುವಾಗಲಿದೆ.


Click it and Unblock the Notifications








