ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಡಿಸಿಟಿ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ
ಟಾಟಾ ಮೋಟಾರ್ಸ್(Tata Motors) ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್(ಡಿಸಿಟಿ) ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.09 ಲಕ್ಷ ಬೆಲೆ ಹೊಂದಿದೆ.

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ರೂ.21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಸಹ ಚಾಲನೆ ನೀಡಿದ್ದು, ಹೊಸ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಡಿಸಿಎ ಮಾದರಿಯು ಪ್ರಮುಖ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಹೊಸ ಆಟೋಮ್ಯಾಟಿಕ್ ಆವೃತ್ತಿಯು ಎಕ್ಸ್‌ಟಿಎ, ಎಕ್ಸ್‌ಜೆಡ್ಎ, ಎಕ್ಸ್‌ಜೆಡ್ಎ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಡಾರ್ಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.09 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.89 ಲಕ್ಷ ಬೆಲೆ ಹೊಂದಿದೆ.

ಆಟೋಮ್ಯಾಟಿಕ್ ಆವೃತ್ತಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಮ್ಯಾನುವಲ್ ಮಾದರಿಗಿಂತಲೂ ರೂ. 60 ಸಾವಿರದಿಂದ ರೂ. 1.07 ಲಕ್ಷ ಹೆಚ್ಚುವರಿ ಬೆಲೆ ಹೊಂದಿದ್ದು, ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಹೊಸ ಮಾದರಿಯನ್ನು ಪರಿಚಯಿಸಲಾಗಿದೆ.

ಹೊಸ ಆಟೋಮ್ಯಾಟಿಕ್ ಆವೃತ್ತಿಗಳು 1.2 ಲೀಟರ್ ನ್ಯಾಚುರಲಿ ಆಸ್ಪೆರೆಟಡ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಆಟೋಮ್ಯಾಟಿಕ್ ಆವೃತ್ತಿಯು 6-ಸ್ಪೀಡ್ ಡ್ಯುಯಚ್ ಕ್ಲಚ್ ಗೇರ್‌ಬಾಕ್ಸ್ ಮೂಲಕ 86 ಬಿಎಚ್‌ಪಿ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಆಲ್‌ಟ್ರೊಜ್ ಹೊಸ ಡಿಸಿಟಿ ಮಾದರಿಯು ಶಿಫ್ಟ್ ಬೈ ವೈರ್ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಇದು ಬಂಪರ್ ಟು ಬಂಪರ್ ಟ್ರಾಫಿಕ್ ಹೊಂದಿರುವ ನಗರ ಪ್ರದೇಶಗಳಲ್ಲಿನ ಸಂಚಾರಕ್ಕೆ ಇದು ಉತ್ತಮವಾಗಿದೆ. ಇದರ ಹೊರತಾಗಿ ಹೊಸ ಆವೃತ್ತಿಗಳಲ್ಲಿ ಕಂಪನಿಯು ಮ್ಯಾನುವಲ್ ಮಾದರಿಗಳಲ್ಲಿ ಇರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಮುಂದುವರಿಸಿದ್ದು, ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ಎ ಪ್ಲಸ್ ಡಾರ್ಕ್ ಎಡಿಷನ್‌ನಲ್ಲಿ ಹೆಚ್ಚಿನ ಮಟ್ಟದ ಫೀಚರ್ಸ್ ಜೋಡಣೆ ಮಾಡಲಾಗಿದೆ.

ಹೊಸ ಮಾದರಿಯನ್ನು ಹೊರತುಪಡಿಸಿ ಆಲ್‌ಟ್ರೊಜ್ ಹೊಸ ಕಾರು ಮಾದರಿಯು ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಜೊತೆಗೆ ಡೀಸೆಲ್ ಮಾದರಿಯಲ್ಲೂ ಖರೀದಿಗೆ ಲಭ್ಯವಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳಲ್ಲೂ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪ್ರತಿ ಮಾದರಿಯಲ್ಲೂ ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಿದ್ದ ಟಾಟಾ ಕಂಪನಿಯು ಇದೀಗ ಮೊದಲ ಬಾರಿಗೆ 7-ಸ್ಪೀಡ್ ಡ್ಯುಯಚ್ ಕ್ಲಚ್ ಗೇರ್‌ಬಾಕ್ಸ್ ಪರಿಚಯಿಸಿದೆ.

ಆಲ್‌ಟ್ರೊಜ್ 1.2 ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಸಹ 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಜೊತೆಗೆ ಆಲ್‌ಟ್ರೊಜ್ ಆಟೋಮ್ಯಾಟಿಕ್ ಆವೃತ್ತಿಗಳಿಗಾಗಿ ವಿಶೇಷ ಬಣ್ಣದ ಆಯ್ಕೆ ನೀಡಲಾಗಿದ್ದು, ಈ ಹಿಂದಿನ ರೆಡ್, ವೈಟ್, ಗ್ರೆ, ಬ್ಲ್ಯೂ ಮತ್ತು ಡಾರ್ಕ್ ಜೊತೆಗೆ ಹೊಸದಾಗಿ ಒಪೆರಾ ಬ್ಲ್ಯೂ ಬಣ್ಣ ಪರಿಚಯಿಸಲಾಗಿದೆ.

ಆಲ್‌ಟ್ರೊಜ್ ಮಾದರಿಯಲ್ಲಿ ಟಾಟಾ ಕಂಪನಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರು ಇದೀಗ ಹೊಸ ಆವೃತ್ತಿಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಆರಂಭಿಕವಾಗಿ ರೂ. 6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದಂತಾಗಿದೆ.

ಹೊಸ ಡಿಸಿಟಿ ಆಲ್‌ಟ್ರೊಜ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಹೊಸ ಮಾರುತಿ ಸುಜುಕಿ ಬಲೆನೊ ಎಎಂಟಿ, ಹ್ಯುಂಡೈ ಐ20 1.0 ಲೀಟರ್ ಡಿಸಿಟಿ, ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್ಐ ಆಟೋಮ್ಯಾಟಿಕ್, ಹೋಂಡಾ ಜಾಝ್ ಆಟೋಮ್ಯಾಟಿಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಆಲ್‌ಟ್ರೊಜ್ ಮಾದರಿಯಲ್ಲಿ 7.0 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಐರಾ(iRA) ಕಾರ್ ಕನೆಕ್ಟ್ ಟೆಕ್ನಾಲಜಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲೈಟ್ಸ್, ರೈನ್ ಸೆನ್ಸಿಂಗ್ ವೈಪರ್, ಲೆದರ್ ಆಸನಗಳು ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದೆ.

ಹೊಸ ಕಾರಿನ ಡಾರ್ಕ್ ಎಡಿಷನ್ ಮಾದರಿಗಾಗಿ ಕಂಪನಿಯು ಸಂಪೂರ್ಣ ಕಪ್ಪು ಮಿಶ್ರಿತವಾದ ಅಲಾಯ್ ವ್ಹೀಲ್, ಡಾರ್ಕ್ ಕ್ರೊಮ್, ಆಲ್ ಬ್ಲ್ಯಾಕ್ ಇಂಟಿರಿಯರ್ ನೀಡಲಾಗಿದ್ದು, ಹೊಸ ಮಾದರಿಯನ್ನು ಕಂಪನಿಯು ಇಂದಿನಿಂದಲೇ ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.


Click it and Unblock the Notifications