ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಕಾರುಗಳ ದರ ಹೆಚ್ಚಿಸಿದ ಟಾಟಾ ಮೋಟಾರ್ಸ್
ಹೆಚ್ಚುತ್ತಿರುವ ಬಿಡಿಭಾಗಗಳ ನಿರ್ವಹಣಾ ವೆಚ್ಚ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಿಸುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಹೊಸ ಕಾರುಗಳ ಬೆಲೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ದರ ಹೆಚ್ಚಳ ಘೋಷಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಹ ಇದೀಗ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ.

ಕಳೆದ ತಿಂಗಳು ಫೆಬ್ರವರಿ ಆರಂಭದಲ್ಲಿ ಪ್ರತಿ ಕಾರು ಬೆಲೆಯಲ್ಲಿ ಶೇ. 1ರಿಂದ ಶೇ.2 ಹೆಚ್ಚಳ ಘೋಷಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಏಪ್ರಿಲ್ 23ರಿಂದ ಜಾರಿಗೆ ಬರುವಂತೆ ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಶೇ.1.1 ರಷ್ಟು ಬೆಲೆ ಏರಿಕೆ ಮಾಡಿದೆ.

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಲೇ ಇದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಟಾಟಾ ಪ್ರಮುಖ ಕಾರುಗಳ ವಿವಿಧ ವೆರಿಯೆಂಟ್‌ಗಳ ಬೆಲೆಯಲ್ಲಿ ಸುಮಾರು ಗರಿಷ್ಠ ರೂ. 40 ಸಾವಿರ ತನಕ ಹೆಚ್ಚಳವಾಗಿದೆ.

ಹೊಸ ದರಪಟ್ಟಿಯಲ್ಲಿ ಟಿಯಾಗೋ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.22 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.67 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.82 ಲಕ್ಷದಿಂದ ರೂ. 8.44 ಲಕ್ಷ ಬೆಲೆ ಹೊಂದಿದೆ.

ಹಾಗೆಯೇ ಟಿಯಾಗೋ ಎನ್‌ಆರ್‌ಜಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.65 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.20 ಲಕ್ಷ ಬೆಲೆ ಹೊಂದಿದ್ದರೆ ಟಿಯಾಗೋ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ ಕಾರು ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.12 ಲಕ್ಷದಿಂದ ರೂ. 8.44 ಲಕ್ಷ ಬೆಲೆ ಹೊಂದಿವೆ.

ಹೊಸ ದರಪಟ್ಟಿಯಲ್ಲಿ ಆಲ್‌ಟ್ರೊಜ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದ್ದು, ನೆಕ್ಸಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.42 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.73 ಲಕ್ಷ ಬೆಲೆ ಹೊಂದಿದೆ.

ಇದರೊಂದಿಗೆ ಪಂಚ್ ಕಾರು ಮಾದರಿಯು ಹೊಸ ದರಪಟ್ಟಿಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.5.67 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.48 ಲಕ್ಷ ಬೆಲೆ ಹೊಂದಿದ್ದು, ಹ್ಯಾರಿಯರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.52 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.81 ಲಕ್ಷ ಬೆಲೆ ಹೊಂದಿದೆ.

ಇತ್ತೀಚೆಗೆ ಬಿಡುಗಡೆಯಾದ ಸಫಾರಿ ಎಸ್‌ಯುವಿ ಮಾದರಿಯು ಬಿಡುಗಡೆಯಾದ ಒಂದು ವರ್ಷದ ಅಂತರದಲ್ಲಿ ಸುಮಾರು ಮೂರು ಬಾರಿ ಬೆಲೆ ಪಡೆದುಕೊಂಡಿದ್ದು, ಹೊಸ ದರ ಪಟ್ಟಿಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.02 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.30 ಲಕ್ಷ ಬೆಲೆ ಹೊಂದಿದೆ.

ಕೇವಲ ಪ್ರಯಾಣಿಕರ ಕಾರುಗಳ ಮಾದರಿಗಳ ಬೆಲೆಯಲ್ಲಿ ಮಾತ್ರವಲ್ಲದೆ ವಾಣಿಜ್ಯ ವಾಹನಗಳ ಬೆಲೆಯಲ್ಲೂ ಹೆಚ್ಚಳ ಮಾಡಲಾಗಿದ್ದು, ವಾಣಿಜ್ಯ ವಾಹನಗಳ ಬೆಲೆಯಲ್ಲಿ ಕಂಪನಿಯು ಶೇ.2 ರಿಂದ ಶೇ.2.50 ರಷ್ಟು ದರ ಹೆಚ್ಚಿಸಿದೆ.

ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಕಾರುಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು 2022ರಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳೊಂದಿಗೆ ಗ್ರಾಹಕರ ಬೇಡಿಕೆ ಹೆಚ್ಚಳ ನೀರಿಕ್ಷೆಯಲ್ಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ನಂತರದ ಸೇವಾ ಜಾಲವನ್ನು ಸಹ ವಿಸ್ತರಿಸುತ್ತಿದೆ.

ಹೊಸ ಕಾರುಗಳ ಖರೀದಿ ನಂತರದ ಸೇವಾ ಸೌಲಭ್ಯಗಳ ಕುರಿತಂತೆ ಗ್ರಾಹಕರ ಅಸಮಾಧಾನದ ಬಗೆಗೆ ಗಮನಹರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ತನ್ನ ಅಧಿಕೃತ ಸೇವಾ ಕೇಂದ್ರಗಳ ಸಂಖ್ಯೆಯನ್ನು 705ಕ್ಕೆ ಹೆಚ್ಚಿಸುವ ಗುರಿಹೊಂದಿದೆ.

ಇದೀಗ ಹೊಸದಾಗಿ 160 ಅಧಿಕೃತ ಸೇವಾ ಕೇಂದ್ರಗಳೊಂದಿಗೆ 485 ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಹನಗಳು ಹೆಚ್ಚಿದಂತೆ ಅದಕ್ಕೆ ಪೂರಕವಾಗಿ ಸೇವಾ ಕೇಂದ್ರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತಿದೆ.

ಇದರ ಜೊತೆಗೆ ಕಂಪನಿಯು ಇಜೆಡ್‌ಸರ್ವ್(EzServe) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದು, ಇದು ವಿಶಿಷ್ಟವಾದ ಗ್ರಾಹಕ ಸ್ನೇಹಿ ದ್ವಿಚಕ್ರ ವಾಹನ ಆಧಾರಿತ ಸೇವೆಯಾಗಿದೆ. ಇದು ಗ್ರಾಹಕರಿಗೆ ಅವರ ಮನೆ ಬಾಗಿಲಿಗೆ ಸುರಕ್ಷಿತ ಮತ್ತು ತೊಂದರೆ-ಮುಕ್ತ ಸೇವಾ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.


Click it and Unblock the Notifications