ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಹ್ಯುಂಡೈ ಹಿಂದಿಕ್ಕಿದ ಟಾಟಾ ಮೋಟಾರ್ಸ್
ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಹ್ಯುಂಡೈ ಇಂಡಿಯಾ ಮತ್ತು ಟಾಟಾ ಮೋಟಾರ್ಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಮೇ ಅವಧಿಯಲ್ಲಿ ಪ್ರಯಾಣಿಕರ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹ್ಯುಂಡೈ ಕಂಪನಿಯನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದುಕೊಂಡಿದೆ.

ಪ್ರಯಾಣಿಕರ ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಕಂಪನಿಯು ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಎರಡನೇ ಸ್ಥಾನಕ್ಕಾಗಿ ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಹೊಸ ಕಾರು ಮಾದರಿಗಳ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಕೆಲ ತಿಂಗಳಿನಿಂದ ಹ್ಯುಂಡೈ ಹಿಂದಿಕ್ಕಲು ಪ್ರಯತ್ನಿಸುತ್ತಿದ್ದು, ಮೇ ಅವಧಿಯಲ್ಲಿ ಕಾರು ಮಾರಾಟದಲ್ಲಿ ಇದೀಗ ಟಾಟಾ ಮೋಟಾರ್ಸ್ ಎರಡನೇ ಸ್ಥಾನ ಅಲಂಕರಿಸಿದೆ.

ಮೇ ಅವಧಿಯಲ್ಲಿ ಹ್ಯುಂಡೈ ಕಂಪನಿಯು ಒಟ್ಟು 51,263 ಕಾರುಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ 42,293 ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮತ್ತು ಇನ್ನುಳಿದ 9 ಸಾವಿರ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ.

ಇದೇ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 43,341 ಕಾರುಗಳನ್ನು ಪೂರ್ಣ ಪ್ರಮಾಣದಲ್ಲಿ ದೇಶಿಯ ಮಾರುಕಟ್ಟೆಯಲ್ಲಿಯೇ ಮಾರಾಟಗೊಳಿಸಿದ್ದು, ಸತತ ಎರಡನೇ ಸ್ಥಾನದಲ್ಲಿರುತ್ತಿದ್ದ ಹ್ಯುಂಡೈ ಕಂಪನಿಗೆ ತೀವ್ರ ಪೈಪೋಟಿ ನೀಡಿದೆ.

ಕಳೆದ ಡಿಸೆಂಬರ್ ಅವಧಿಯಲ್ಲೂ ಕೂಡಾ ಹ್ಯುಂಡೈ ಕಂಪನಿಯ ಎರಡನೇ ಸ್ಥಾನವನ್ನು ಕಸಿದುಕೊಂಡಿದ್ದ ಟಾಟಾ ಮೋಟಾರ್ಸ್ ಕಂಪನಿಗೆ ಹ್ಯುಂಡೈ ಕಂಪನಿಯು ಹಲವು ಮಾರಾಟ ತಂತ್ರಗಳೊಂದಿಗೆ ಮತ್ತೆ ಎರಡನೇ ಸ್ಥಾನ ಮರಳಿ ಪಡೆದುಕೊಂಡಿತ್ತು.

ಇದೀಗ ಮೇ ತಿಂಗಳ ಅವಧಿಯಲ್ಲಿನ ಕಾರು ಮಾರಾಟದಲ್ಲಿ 43,341 ಕಾರುಗಳ ಮಾರಾಟದ ಮೂಲಕ ಶೇ.185 ರಷ್ಟು ಬೆಳವಣಿ ಸಾಧಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರುಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಭಾರತದಲ್ಲಿ ಕಾರು ಉತ್ಪಾದನೆಯನ್ನು ಆರಂಭಿಸಿದ 31 ವರ್ಷಗಳ ನಂತರ ಕಂಪನಿಯು ವಾರ್ಷಿಕವಾಗಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.

ನಿಕಟ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಕಂಪನಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಒಟ್ಟು ಕಾರು ಮಾರಾಟದಲ್ಲಿ ಶೇ. 10 ರಷ್ಟು ಪಾಲು ಇದೀಗ ಟಾಟಾ ಪಾಲಾಗುತ್ತಿದೆ.

ಶೇ. 45 ರಷ್ಟು ಪಾಲು ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಸದ್ಯ ಅಗ್ರಸ್ಥಾನ ಮುಂದುವರಿದಿದ್ದು, ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಹ್ಯುಂಡೈ ಅಥವಾ ಟಾಟಾ ಮೋಟಾರ್ಸ್ ಮತ್ತು ನಾಲ್ಕನೇ ಸ್ಥಾನದಲ್ಲಿ ಮಹೀಂದ್ರಾ ಮತ್ತು ಐದನೇ ಸ್ಥಾನದಲ್ಲಿ ಕಿಯಾ ಕಂಪನಿಗಳು ಸ್ಥಾನ ಪಡೆದುಕೊಂಡಿವೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಬದಲಾವಣೆ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರ ಕಾರು ಮಾರಾಟ ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಕಂಪನಿಯು 2021ರ ಅವಧಿಯಲ್ಲಿ ಒಟ್ಟು 3.31 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು.

ಭಾರತದಲ್ಲಿ ಕಾರು ಉತ್ಪಾದನೆಯನ್ನು ಆರಂಭಿಸಿದ 31 ವರ್ಷಗಳ ನಂತರ ಟಾಟಾ ಮೋಟಾರ್ಸ್ ಕಂಪನಿಯು ವಾರ್ಷಿಕವಾಗಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, 2021ರಲ್ಲಿ ಕಂಪನಿಯು 2020ರ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಶೇ. 94.6 ರಷ್ಟು ಬೆಳವಣಿಗೆ ಸಾಧಿಸಿದೆ.

2020ರಲ್ಲಿ 1,61,031 ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು 2021ರಲ್ಲಿ 3,31,182 ಕಾರುಗಳನ್ನು ಮಾರಾಟ ಮಾಡಿದೆ. ಟಾಟಾ ಕಾರುಗಳ ಮಾರಾಟದಲ್ಲಿ ಸದ್ಯ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಅಗ್ರಸ್ಥಾನದಲ್ಲಿದೆ.

2021ರಲ್ಲಿ ಟಾಟಾ ಕಂಪನಿಯು ಮಾರಾಟ ಮಾಡಿರುವ 3.31 ಲಕ್ಷ ಕಾರುಗಳಲ್ಲಿ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದೆ 1,08,577 ಯುನಿಟ್ ಒಳಗೊಂಡಿದ್ದು, ತದನಂತರದಲ್ಲಿ ಆಲ್‌ಟ್ರೊಜ್, ಟಿಯಾಗೋ, ಟಿಗೋರ್, ಪಂಚ್, ಹ್ಯಾರಿಯರ್ ಮತ್ತು ಸಫಾರಿ ಕಾರು ಮಾದರಿಗಳು ಸಹ ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಟಾಟಾ ಮೋಟಾರ್ಸ್ ಕಂಪನಿಯು 1991ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದ ಸಿಯೆರಾ ಕಾರು ಮಾದರಿಯ ನಂತರ ಎಸ್ಟೇಟ್, ಸುಮೊ, ಇಂಡಿಕಾ, ನ್ಯಾನೊ, ವಿಸ್ತಾ, ಇಂಡಿಗೋ ಮಾಂಜಾ, ಜೆಸ್ಟ್, ಆರಿಯಾ, ಸಫಾರಿ, ಬೊಲ್ಟ್, ಹೆಕ್ಸಾ ಕಾರುಗಳು ಕೂಡಾ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಟ್ಟರೂ ಪ್ರತಿಸ್ಪರ್ಧಿ ಮಾದರಿಗಳಿಂದ ತೀವ್ರ ಪೈಪೋಟಿ ಎದುರಿಸಿತ್ತು.

ಆದರೆ 2015ರ ನಂತರ ಮಾರುಕಟ್ಟೆಗೆ ಪ್ರವೇಶಿಸಿದ ಟಿಯಾಗೋ, ಟಿಗೋರ್ ತದನಂತರ 2017ರಲ್ಲಿ ಬಿಡುಗಡೆಯಾದ ನೆಕ್ಸಾನ್, 2019ರಲ್ಲಿ ಬಿಡುಗಡೆಯಾದ ಹ್ಯಾರಿಯರ್, 2020ರಲ್ಲಿ ಬಿಡುಗಡೆಯಾದ ಆಲ್‌ಟ್ರೊಜ್, ನೆಕ್ಸಾನ್ ಫೇಸ್‌ಲಿಫ್ಟ್, ನೆಕ್ಸಾನ್ ಇವಿ, 2021ರಲ್ಲಿ ಬಿಡುಗಡೆಯಾದ ನ್ಯೂ ಜನರೇಷನ್ ಸಫಾರಿ, ಪಂಚ್, ಟಿಗೋರ್ ಇವಿ ಕಾರು ಮಾದರಿಗಳು ಟಾಟಾ ಮೋಟಾರ್ಸ್ ಕಂಪನಿಯ ಕಾರು ಮಾರಾಟವನ್ನು ದುಪ್ಪಟ್ಟುಗೊಳಿಸಿವೆ.

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಟಿಯಾಗೋ, ಟಿಗೋರ್, ಪಂಚ್, ನೆಕ್ಸಾನ್, ಹ್ಯಾರಿಯರ್, ಸಫಾರಿ, ಟಿಗೋರ್ ಇವಿ ಮತ್ತು ನೆಕ್ಸಾನ್ ಇವಿ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳೊಂದಿಗೆ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳುವ ಭರವಸೆಯಲ್ಲಿದೆ.


Click it and Unblock the Notifications