2022ರ ನೆಕ್ಸಾನ್ ಇವಿ ಬಿಡುಗಡೆಗೂ ಮುನ್ನ ದರ ಹೆಚ್ಚಿಸಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು ಮಾದರಿಯ ನೆಕ್ಸಾನ್ ಇವಿ ಮಾದರಿಯನ್ನು ಉನ್ನತೀಕರಿಸಿದ ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಡುಗಡೆಗೆ ಸಿದ್ದುಗೊಳ್ಳುತ್ತಿದ್ದು, ಹೊಸ ಮಾದರಿಯ ಬಿಡುಗಡೆಗೂ ಮುನ್ನ ಟಾಟಾ ಕಂಪನಿಯು ನೆಕ್ಸಾನ್ ಇವಿ ಮಾದರಿಯ ದರ ಹೆಚ್ಚಿಸಿದೆ.

ಹೆಚ್ಚುತ್ತಿರುವ ಬಿಡಿಭಾಗಗಳ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆ ಹೆಚ್ಚಿಸುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಹ ಇದೀಗ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಟಾಟಾ ಪ್ರಮುಖ ಕಾರುಗಳ ವಿವಿಧ ವೆರಿಯೆಂಟ್‌ಗಳ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಹೆಚ್ಚಳ ಮಾಡಲಾಗಿದ್ದು, ಹೊಸ ದರ ಪಟ್ಟಿಯಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಕೂಡಾ ಹೆಚ್ಚಿನ ಮಟ್ಟದ ದರ ಏರಿಕೆಯಾಗಿದೆ.

ಹೊಸ ದರ ಪಟ್ಟಿಯಲ್ಲಿ ನೆಕ್ಸಾನ್ ಇವಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.54 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.15 ಲಕ್ಷ ಬೆಲೆ ಹೊಂದಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 25 ಸಾವಿರದಷ್ಟು ದುಬಾರಿಯಾಗಿದೆ.

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ.

ನೆಕ್ಸಾನ್ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ 2022ರ ಆವೃತ್ತಿಯಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಬಹುದಾಗಿದೆ.

ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸದಂತೆ 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ಪ್ರಸ್ತುತ ಮಾರುಕಟ್ಟೆಯಲ್ಲಿನ ನೆಕ್ಸಾನ್ ಇವಿ ಕಾರು ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 2022ರ ಆವೃತ್ತಿಯಲ್ಲಿನ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್‌ಗೆ ಗರಿಷ್ಠ 400 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ ಎನ್ನಲಾಗಿದೆ.

ನೆಕ್ಸಾನ್ ಇವಿ ಮಾದರಿಯಲ್ಲಿ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಮಾದರಿಗಾಗಿ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಸಿದ್ದಪಡಿಸಿದೆ.

ಜೊತೆಗೆ ನೆಕ್ಸಾನ್ ಇವಿ ಕಾರಿನ ಎಲೆಕ್ಟ್ರಿಕ್ ಮೋಟಾರ್ ಉನ್ನತೀಕರಿಸುವ ಮೂಲಕ ಕಾರಿನ ಪರ್ಫಾಮೆನ್ಸ್ ಹೆಚ್ಚಿಸಲಾಗುತ್ತಿದ್ದು, ಉನ್ನತೀಕರಿಸಿದ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ 7 ಬಿಎಚ್‌ಪಿ ಹೆಚ್ಚುವರಿ ಶಕ್ತಿ ಪೂರೈಕೆಯೊಂದಿಗೆ ಕಾರಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಮಾದರಿಯು 127 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗುತ್ತಿರುವ ಹೊಸ ಮಾದರಿಯು ಪ್ರಸ್ತುತ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ 95kW ಎಲೆಕ್ಟ್ರಿಕ್ ಮೋಟಾರ್ ಮೂಲಕವೇ 134 ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆ ಹೊಂದಿರಲಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಸೇಫ್ಟಿ ಫೀಚರ್ಸ್‌ಗಳನ್ನು ಉನ್ನತೀಕರಿಸುತ್ತಿದ್ದು, ಹೊಸ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡಿಸ್ಕ್ ಸೇರಿದಂತೆ ಕೆಲವು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದೆ.

ಇನ್ನು ಹೊಸ ನೆಕ್ಸಾನ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿಯಾಗಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಜಿಪ್‌ಟ್ರಾನ್ ತಂತ್ರಜ್ಞಾನವು ಟಾಟಾ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಯಲ್ಲಿ ಸಹಕಾರಿಯಾಗುತ್ತಿದೆ.

ನೆಕ್ಸಾನ್ ಇವಿ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ ಹೈ-ವೊಲ್ಟೆಜ್ ಆರ್ಕಿಟೆಕ್ಚರ್ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನವು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.

ಜೊತೆಗೆ ಜಿಪ್‌ಟ್ರಾನ್ ತಂತ್ರಜ್ಞಾನವು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿ ಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲದ ಬಾಳಿಕೆಗೆ ಸಹಕರಿಸಲಿದೆ.


Click it and Unblock the Notifications