ಮಾರ್ಚ್ ಅವಧಿಯಲ್ಲಿ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನದೊಂದಿಗೆ ಟಾಟಾ ಹೊಸ ದಾಖಲೆ
ಟಾಟಾ ಮೋಟಾರ್ಸ್(Tata Motors) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿದ್ದು, ಕಂಪನಿಯು ಸಾಮಾನ್ಯ ಕಾರುಗಳ ಮಾರಾಟದ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಮುಂಚೂಣಿ ಸಾಧಿಸುತ್ತಿದೆ.

ಪ್ರಯಾಣಿಕರ ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಕಂಪನಿಯು ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಹ್ಯುಂಡೈ ಕಂಪನಿಯು ಮುಂದುವರೆದಿದೆ. ತದನಂತರ ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಹ್ಯುಂಡೈ ಕಂಪನಿಯ ಕಾರುಗಳ ಮಾರಾಟಕ್ಕೆ ತೀವ್ರ ಪೈಪೋಟಿ ನೀಡುತ್ತಿದ್ದು, ಇವಿ ಕಾರುಗಳ ಮಾರಾಟದಲ್ಲಿ ಮಾತ್ರ ಇತರೆ ಕಂಪನಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ(Nexon EV), ಟಿಗೋರ್ ಇವಿ(Tigor EV) ಮತ್ತು ಎಕ್ಸ್‌ಪ್ರೆಸ್-ಟಿ ಇವಿ(XPres-T EV) ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ದಾಖಲೆಗಳಿಗೆ ಕಾರಣವಾಗಿದೆ.

ಟಾಟಾ ಕಂಪನಿಯು ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕರ ಬಳಕೆಯ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯು ಕೂಡಾ ಕ್ಯಾಬ್ ಸೇವಾ ವಿಭಾಗಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಮಾರ್ಚ್ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು 42,293 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ 3,357 ಯುನಿಟ್ ಎಲೆಕ್ಟ್ರಿಕ್ ಕಾರು ಮಾದರಿಗಳಾಗಿವೆ. ಮಾರ್ಚ್ ಅವಧಿಯಲ್ಲಿನ ಇವಿ ಕಾರು ಮಾರಾಟವು ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿನ 492 ಯುನಿಟ್ ಮಾರಾಟಕ್ಕೆ ಹೋಲಿಕೆ ಮಾಡಿದರೆ ಕಳೆದ ತಿಂಗಳು ಶೇ.432 ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದೆ.

ಮಾರ್ಚ್ ಅವಧಿಯಲ್ಲಿನ ಇವಿ ಕಾರು ಮಾರಾಟದಲ್ಲಿ ನೆಕ್ಸಾನ್ ಇವಿ ಮಾದರಿಯು 2 ಸಾವಿರಕ್ಕಿಂತಲೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ತದನಂತರ ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್-ಟಿ ಇವಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ.

ಈ ಮೂಲಕ ಕಂಪನಿಯು 2021-22ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 9095 ಯುನಿಟ್ ಇವಿ ಕಾರು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಅವಧಿಯಲ್ಲಿ ಇವಿ ಕಾರು ಮಾರಾಟಕ್ಕಿಂತ ಶೇ.353 ರಷ್ಟು ಬೆಳವಣಿಗೆ ಸಾಧಿಸಿದೆ.

ಇನ್ನು ನೆಕ್ಸಾನ್ ಇವಿ ಮಾದರಿಯು 2019ರಲ್ಲಿ ಮೊದಲ ಬಿಡುಗಡೆಯಾದ ನಂತರ ಹಲವಾರು ಹೊಸ ಬದಲಾವರಣೆಗಳೊಂದಿಗೆ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದಕೊಂಡಿದ್ದು, ಬಿಡುಗಡೆಯ ನಂತರ ನೆಕ್ಸಾನ್ ಇವಿ ಇದುವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಂತಾಗಿದೆ.

ದಿನೇ ದಿನೇ ದುಬಾರಿಯಾಗುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ವಾಹನ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಇವಿ ವಾಹನ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಇವಿ ವಾಹನಗಳ ಮಾರಾಟವು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿವೆ.

ನೆಕ್ಸಾನ್ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ 2022ರ ನೆಕ್ಸಾನ್ ಇವಿ ಆವೃತ್ತಿಯನ್ನು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡಲು ಸಿದ್ದಗೊಳ್ಳುತ್ತಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾದರಿಗಿಂತಲೂ ಹೆಚ್ಚಿನ ಮೈಲೇಜ್‌ನೊಂದಿಗೆ ಹೆಚ್ಚುವರಿ ಫೀಚರ್ಸ್ ಪಡೆದುಕೊಳ್ಳಲಿದೆ.

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ. ನೆಕ್ಸಾನ್ ಇವಿ ಕಾರಿನಲ್ಲಿ 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, 2020ರ ಆವೃತ್ತಿಯು 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದಾಗಿದೆ.

ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸದಂತೆ 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ನೆಕ್ಸಾನ್ ಇವಿ ಕಾರು ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 2022ರ ಆವೃತ್ತಿಯಲ್ಲಿ ಮೈಲೇಜ್ ರೇಂಜ್ ಪ್ರಮಾಣವು ಪ್ರತಿ ಚಾರ್ಜ್ 400 ಕಿ.ಮೀ ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಹೊಸ ನೆಕ್ಸಾನ್ ಇವಿ ಮಾದರಿಯಲ್ಲಿ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಮಾದರಿಗಾಗಿ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಸಿದ್ದಪಡಿಸಿದೆ.

ಜೊತೆಗೆ ನೆಕ್ಸಾನ್ ಇವಿ ಕಾರಿನ ಎಲೆಕ್ಟ್ರಿಕ್ ಮೋಟಾರ್ ಉನ್ನತೀಕರಿಸುವ ಮೂಲಕ ಕಾರಿನ ಪರ್ಫಾಮೆನ್ಸ್ ಹೆಚ್ಚಿಸಲಾಗುತ್ತಿದ್ದು, ಉನ್ನತೀಕರಿಸಿದ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ 7 ಬಿಎಚ್‌ಪಿ ಹೆಚ್ಚುವರಿ ಶಕ್ತಿ ಪೂರೈಕೆಯೊಂದಿಗೆ ಕಾರಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಮಾದರಿಯು 127 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗುತ್ತಿರುವ ಹೊಸ ಮಾದರಿಯು ಪ್ರಸ್ತುತ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ 95kW ಎಲೆಕ್ಟ್ರಿಕ್ ಮೋಟಾರ್ ಮೂಲಕವೇ 134 ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆ ಹೊಂದಿರಲಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಸೇಫ್ಟಿ ಫೀಚರ್ಸ್‌ಗಳನ್ನು ಉನ್ನತೀಕರಿಸುತ್ತಿದ್ದು, ಹೊಸ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡಿಸ್ಕ್ ಸೇರಿದಂತೆ ಕೆಲವು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದೆ.


Click it and Unblock the Notifications