ಏಪ್ರಿಲ್ ತಿಂಗಳ ಕಾರು ಮಾರಾಟದಲ್ಲಿ ಶೇ.66 ರಷ್ಟು ಬೆಳವಣೆಗೆ ಸಾಧಿಸಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್(Tata Motors) ಕಂಪನಿಯು ಪ್ರಯಾಣಿಕರ ಕಾರು ಮಾರಾಟದಲ್ಲಿ ಹೆಚ್ಚಿನ ಮಟ್ಟದ ಬೆಳವಣಿಗೆ ಸಾಧಿಸುತ್ತಿದ್ದು, 2022ರ ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.66 ರಷ್ಟು ಬೆಳವಣಿಯೊಂದಿಗೆ ಸುಮಾರು 41 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ.

ಸೆಮಿಕಂಡಕ್ಟರ್ ಕೊರತೆ ಮತ್ತು ಕೋವಿಡ್‌ನಿಂದ ಉಂಟಾಗಿದ್ದ ಆರ್ಥಿಕ ಏರಿಳಿತದ ನಡುವೆ ಕಳೆದ ವರ್ಷದ ಏಪ್ರಿಲ್‌ನಲ್ಲಿ 25,095 ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಕಳೆದ ತಿಂಗಳ ಕಾರು ಮಾರಾಟದಲ್ಲಿ ಶೇ.66 ರಷ್ಟು ಬೆಳವಣಿಯೊಂದಿಗೆ ಪ್ರಮುಖ ಕಾರು ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ.

ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು 41,587 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಸಾಮಾನ್ಯ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾರಾಟದಲ್ಲೂ ಉತ್ತಮ ಬೆಳವಣಿಗೆ ಸಾಧಿಸಿದೆ.

2022ರ ಏಪ್ರಿಲ್ ಅವಧಿಯಲ್ಲಿನ ಒಟ್ಟು ವಾಹನ ಮಾರಾಟದಲ್ಲಿ ಶೇ.81 ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಬರೋಬ್ಬರಿ 71,467 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿ ಮಾರಾಟ ಮಾಡಿದ್ದ 39,401 ಯನಿಟ್ ವಾಹನಗಳಿಂತಲೂ ಇದು ಶೇ.81 ರಷ್ಟು ಹೆಚ್ಚಳವಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಎರಡು ವರ್ಷದಿಂದ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಪ್ರಯಾಣಿಕ ಕಾರು ಮಾರಾಟದಲ್ಲಿ ಮಾತ್ರವಲ್ಲದೆ ವಾಣಿಜ್ಯ ವಾಹನ ಮಾರಾಟದಲ್ಲೂ ಶೇ.87 ರಷ್ಟು ಮುನ್ನಡೆ ಸಾಧಿಸಿದೆ.

ಮಾರ್ಚ್ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು 30,838 ಯುನಿಟ್ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ 958 ವಾಣಿಜ್ಯ ವಾಹನಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತುಗೊಳಿಸಿದೆ.

ಕಳೆದ ಎರಡು ವರ್ಷದಿಂದ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಬದಲಾವಣೆ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಟಾಟಾ ಕಂಪನಿಯ ಕಾರು ಮಾರಾಟದಲ್ಲಿ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಅಗ್ರಸ್ಥಾನದಲ್ಲಿದ್ದು, ತದನಂತರದಲ್ಲಿ ಆಲ್‌ಟ್ರೊಜ್, ಟಿಯಾಗೋ, ಟಿಗೋರ್, ಪಂಚ್, ಹ್ಯಾರಿಯರ್ ಮತ್ತು ಸಫಾರಿ ಕಾರು ಮಾದರಿಗಳು ಸಹ ಉತ್ತಮ ಬೇಡಿಕೆ ಪಡೆದುಕೊಂಡಿವೆ.

ನಿಕಟ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಕಂಪನಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಭಾರತದಲ್ಲಿ ಕಾರು ಉತ್ಪಾದನೆಯನ್ನು ಆರಂಭಿಸಿದ 31 ವರ್ಷಗಳ ನಂತರ ಕಂಪನಿಯು ವಾರ್ಷಿಕವಾಗಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.

ಇನ್ನು ಹೆಚ್ಚುತ್ತಿರುವ ಬಿಡಿಭಾಗಗಳ ನಿರ್ವಹಣಾ ವೆಚ್ಚ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಿಸುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ಇತ್ತೀಚೆಗೆ ತನ್ನ ಹೊಸ ಕಾರುಗಳ ಬೆಲೆಯಲ್ಲಿ ದರ ಹೆಚ್ಚಳ ಘೋಷಿಸಿದೆ.

ಹೊಸ ದರಪಟ್ಟಿಯಲ್ಲಿ ಟಿಯಾಗೋ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.37 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.44 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.97 ಲಕ್ಷದಿಂದ ರೂ. 8.26 ಲಕ್ಷ ಬೆಲೆ ಹೊಂದಿದೆ.

ಹಾಗೆಯೇ ಟಿಯಾಗೋ ಎನ್‌ಆರ್‌ಜಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.77 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.32 ಲಕ್ಷ ಬೆಲೆ ಹೊಂದಿದ್ದರೆ ಟಿಯಾಗೋ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ ಕಾರು ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.27 ಲಕ್ಷದಿಂದ ರೂ. 8.56 ಲಕ್ಷ ಬೆಲೆ ಹೊಂದಿವೆ.

ಹೊಸ ದರಪಟ್ಟಿಯಲ್ಲಿ ಆಲ್‌ಟ್ರೊಜ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.20 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.15 ಲಕ್ಷ ಬೆಲೆ ಹೊಂದಿದ್ದು, ನೆಕ್ಸಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.54 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.90 ಲಕ್ಷ ಬೆಲೆ ಹೊಂದಿದೆ.

ಇದರೊಂದಿಗೆ ಪಂಚ್ ಕಾರು ಮಾದರಿಯು ಹೊಸ ದರಪಟ್ಟಿಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.5.83 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದ್ದು, ಹ್ಯಾರಿಯರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.65 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.95 ಲಕ್ಷ ಬೆಲೆ ಹೊಂದಿದೆ.

ಇತ್ತೀಚೆಗೆ ಬಿಡುಗಡೆಯಾದ ಸಫಾರಿ ಎಸ್‌ಯುವಿ ಮಾದರಿಯು ಬಿಡುಗಡೆಯಾದ ಒಂದು ವರ್ಷದ ಅಂತರದಲ್ಲಿ ಸುಮಾರು ಮೂರು ಬಾರಿ ಬೆಲೆ ಪಡೆದುಕೊಂಡಿದ್ದು, ಹೊಸ ದರ ಪಟ್ಟಿಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.25 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.46 ಲಕ್ಷ ಬೆಲೆ ಹೊಂದಿದೆ.


Click it and Unblock the Notifications