ಹೊಸ ಕಾರುಗಳ ಮಧ್ಯದ ಆಸನಗಳಿಗೂ ಶೀಘ್ರದಲ್ಲಿಯೇ ಕಡ್ಡಾಯವಾಗಲಿದೆ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಅಳವಡಿಕೆ
ಪ್ರಯಾಣಿಕರ ಬಳಕೆಯ ಕಾರುಗಳ ಸುರಕ್ಷಾ ಮಾನದಂಡಗಳನ್ನು ಸತತವಾಗಿ ಉನ್ನತೀಕರಿಸುತ್ತಿರುವ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಮತ್ತೊಂದು ಹೊಸ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಸಿದ್ದವಾಗಿದ್ದು, ಹೊಸ ಕಾರುಗಳ ಎರಡನೇ ಸಾಲುಗಳಲ್ಲೂ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಅಳವಡಿಕೆಯನ್ನು ಕಡ್ಡಾಯಗೊಳಿಸುತ್ತಿದೆ.

ಹೊಸ ವಾಹನಗಳ ಉತ್ಪಾದನೆ ಮತ್ತು ಸುರಕ್ಷಾ ಫೀಚರ್ಸ್‌ಗಳ ಅಳವಡಿಕೆಯಲ್ಲಿ ನಿರಂತರವಾಗಿ ಬದಲಾಗುತ್ತಿದ್ದು, ಹೊಸದಾಗಿ ಕಡ್ಡಾಯಗೊಳ್ಳುತ್ತಿರುವ ಪ್ರಮುಖ ಸುರಕ್ಷಾ ಸೌಲಭ್ಯಗಳಿಂದಾಗಿ ಅಪಘಾತಗಳ ತೀವ್ರತೆಯನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.
ಹೀಗಾಗಿ ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಾಹನ ಸುರಕ್ಷಾ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಏರ್‌ಬ್ಯಾಗ್ ಅಳವಡಿಕೆ ಹೆಚ್ಚಳದ ನಂತರ ಹೊಸ ಕಾರುಗಳ ಮಧ್ಯದ ಆಸನಗಳಲ್ಲೂ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಇತ್ತೀಚೆಗಷ್ಟೇ ಎಂ1 ವಿಭಾಗದ ಎಲ್ಲಾ ಹೊಸ ಕಾರಿಗಳಿಗೂ 6 ಏರ್‌ಬ್ಯಾಗ್ ಸೌಲಭ್ಯವನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರವು ಇದೀಗ ಹೊಸ ಕಾರುಗಳ ಮಧ್ಯದ ಆಸನಗಳಲ್ಲಿ ಹೆಚ್ಚಿನ ಸುರಕ್ಷತೆಗಾಗಿ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಅಳವಡಿಕೆಯನ್ನು ಕಡ್ಡಾಯಗೊಳಿಸುತ್ತಿದೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಳವಡಿಕೆಗಾಗಿ ಶೀಘ್ರದಲ್ಲಿಯೇ ಕರಡು ಅಧಿಸೂಚನೆ ಹೊರಡಿಸಲು ಸಿದ್ದವಾಗಿರುವ ಕೇಂದ್ರ ಸರ್ಕಾರವು ಅಂತಿಮ ನಿಯಮ ಜಾರಿಗೂ ಮುನ್ನ ವಾಹನ ಉತ್ಪಾದನಾ ಕಂಪನಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಹೊಸ ಸುರಕ್ಷಾ ಸೌಲಭ್ಯ ಅಳವಡಿಕೆ ಕುರಿತಂತೆ ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಿ ಈ ನಿಯಮ ಜಾರಿಗೆ ತರುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಧ್ಯಮ ಗಾತ್ರದ ಬಹುತೇಕ ಕಾರುಗಳ ಎರಡನೇ ಸಾಲಿನ ಆಸನಗಳಲ್ಲಿ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಅಳವಡಿಕೆ ಮಾಡಲಾಗುತ್ತಿದ್ದರೂ ಎಂಟ್ರಿ ಲೆವಲ್ ಕಾರುಗಳಲ್ಲಿ ಟು ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವನ್ನು ನೀಡಲಾಗುತ್ತಿದೆ.

ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವು ಟು ಪಾಯಿಂಟ್ ಸೀಟ್ ಬೆಲ್ಟ್‌ಗಿಂತಲೂ ಹೆಚ್ಚು ಸುರಕ್ಷಿತವಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ಹೆಚ್ಚಿನ ಮಟ್ಟದಲ್ಲಿ ಉಂಟಾಗಬಹುದಾದ ಅಪಘಾತದ ತೀವ್ರತೆಯನ್ನು ತಗ್ಗಿಸಲು ನೆರವಾಗುತ್ತದೆ.

ಕಾರು ತಯಾಕ ಕಂಪನಿಗಳು ಕಾರುಗಳ ಬೆಲೆ ಆಧರಿಸಿ ಟು ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಫೋರ್ ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಅಳವಡಿಸುತ್ತಿದ್ದು, ಮಧ್ಯಮ ಗಾತ್ರದ ಕಾರುಗಳಲ್ಲಿ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಅಳವಡಿಕೆಯಾಗುತ್ತಿದ್ದರೂ ಫೋರ್ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವನ್ನು ಐಷಾರಾಮಿ ಕಾರುಗಳಲ್ಲಿ ಮತ್ತು ಸ್ಪೋರ್ಟ್ ಕಾರುಗಳಲ್ಲಿ ಅಳವಡಿಸಲಾಗಿರುತ್ತದೆ.

ಸಾಮಾನ್ಯ ಕಾರುಗಳಿಗೆ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವೇ ಸಾಕಷ್ಟು ಸುರಕ್ಷತೆ ನೀಡಲಿದ್ದು, ಟು ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವು ಹೆಚ್ಚಿನ ಸುರಕ್ಷತೆ ನೀಡುವಲ್ಲಿ ವಿಫಲವಾಗಿವೆ.

ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವಿದ್ದಲ್ಲಿ ಪ್ರಯಾಣಿಕರ ಎದೆ, ಭುಜ ಮತ್ತು ಸೊಂಟಕ್ಕೆ ಹೆಚ್ಚಿನ ಸುರಕ್ಷತೆ ನೀಡಲಿದ್ದು, ಅಪಘಾತದ ಸಂದರ್ಭದಲ್ಲಿ ಬಿಗಿ ಹಿಡಿತದೊಂದಿಗೆ ಪ್ರಯಾಣಿಕರ ಮುಖಭಾಗಕ್ಕೆ ಹೆಚ್ಚಿನ ಹಾನಿಯಾಗುವುದನ್ನು ತಡೆಯುತ್ತದೆ.

ಟು ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವು ಪ್ರಯಾಣಿಕರ ಸೊಂಟಕ್ಕೆ ಮಾತ್ರ ಬಿಗಿಯಾದ ಹಿಡಿತ ನೀಡಿದರೂ ಅಪಘಾತದ ರಭಸಕ್ಕೆ ಮುಖಭಾಗಕ್ಕೆ ಉಂಟಾಗಬಹುದಾದ ಹೊಡೆತ ತಪ್ಪಿಸಲು ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವು ಸಾಕಷ್ಟು ನೆರವಾಗಲಿದೆ.

ಕಾರುಗಳ ಸುರಕ್ಷತೆಯಲ್ಲಿ ಹಲವಾರು ಹೊಸ ಬದಲಾವಣೆಗಳಿಗೆ ಕಾರಣವಾಗಿರುವ ವೊಲ್ವ ಕಂಪನಿಯು 1959ರಲ್ಲಿ ಮೊದಲ ಬಾರಿಗೆ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವು ಅಭಿವೃದ್ದಿಪಡಿಸಿ ಪೇಟೆಂಟ್ ಹೊಂದಿದ್ದು, ಕಾರುಗಳ ಸುರಕ್ಷತೆಗಾಗಿ ಕಂಪನಿಯು ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಪೇಟೆಂಟ್ ಅನ್ನು ಮುಕ್ತಗೊಳಿಸಿ ಹೊಸ ಬದಲಾವಣೆ ಕಾರಣವಾಯ್ತು.

ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ಹೊಸ ಕಾರು ಮಾದರಿಗಳು ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯವನ್ನು ಹೊಂದಿದ್ದರೂ ಎಂಟ್ರಿ ಲೆವಲ್ ಕಾರುಗಳ ಸುರಕ್ಷತೆಯಲ್ಲಿ ನಿರಂತರವಾಗಿ ಬದಲಾವಣೆ ತರಲಾಗುತ್ತಿದ್ದು, ಈ ಮೂಲಕ ಹೊಸ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ ಹೆಚ್ಚಿಸಲು ಯೋಜಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ಕಾರುಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿನ ಪ್ರಯಾಣಿಕರ ಸುರಕ್ಷಾ ಸೌಲಭ್ಯಗಳು ಇನ್ನು ಸಾಕಷ್ಟು ಸುಧಾರಣೆಗೊಳ್ಳಬೇಕಿದೆ.

ಸುರಕ್ಷಾ ಫೀಚರ್ಸ್‌ಗಳಿಗೆ ಗ್ರಾಹಕರು ಒತ್ತು ನೀಡುತ್ತಿದ್ದರೂ ಕೂಡಾ ವಾಹನ ಉತ್ಪಾದನಾ ಕಂಪನಿಗಳು ಬಜೆಟ್ ಬೆಲೆಯ ಹೆಸರಿನಲ್ಲಿ ಕಳೆಪೆ ಗುಣಮಟ್ಟದ ವಾಹನಗಳ ಮಾರಾಟ ಮಾಡುತ್ತಿರುವುದು ಅಪಘಾತಗಳಲ್ಲಿ ಹೆಚ್ಚಿನ ಮಟ್ಟದ ಪ್ರಾಣಹಾನಿಗೆ ಕಾರಣವಾಗುತ್ತಿದೆ.

ಪ್ರತಿ ವರ್ಷ ರಸ್ತೆಗಳಿಯುವ ಲಕ್ಷಾಂತರ ಹೊಸ ವಾಹನಗಳ ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅಪಘಾತಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲವಾದರೂ ಅಪಘಾತಗಳಲ್ಲಿ ಪ್ರಯಾಣಿಕರ ಸಾವಿನ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ವಿವಿಧ ಸುರಕ್ಷಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ.


Click it and Unblock the Notifications