ವಾರದ ಸುದ್ದಿ: ಇವಿ ವಾಹನಗಳಿಗಾಗಿ ಹೊಸ ಯೋಜನೆ, ಹೊಸ ಕಾರುಗಳಿಗೆ ಕಡ್ಡಾಯವಾಗಲಿದೆ ಮತ್ತೊಂದು ಹೊಸ ನಿಯಮ..
ಭಾರತದಲ್ಲಿ ಇವಿ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇವಿ ವಾಹನ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಸೇರಿದಂತೆ ವಿವಿಧ ರಾಜ್ಯಗಳು ಹೊಸ ಯೋಜನೆ ಜಾರಿಗೆ ತಂದಿವೆ. . ಇದರ ಜೊತೆಗೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ವಿವಿಧ ಹೊಸ ವಾಹನಗಳ ಬಿಡುಗಡೆ ಸೇರಿದಂತೆ ಆಟೋ ಉದ್ಯಮದಲ್ಲಿನ ಪ್ರಮುಖ ಬೆಳವಣಿಗೆಗಳು ಕೂಡಾ ಪ್ರಮುಖವಾಗಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಒಂದೊಂದಾಗಿ ನೋಡೋಣ.

ಕಡ್ಡಾಯವಾಗಲಿದೆ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಅಳವಡಿಕೆ
ಪ್ರಯಾಣಿಕರ ಬಳಕೆಯ ಕಾರುಗಳ ಸುರಕ್ಷಾ ಮಾನದಂಡಗಳನ್ನು ಸತತವಾಗಿ ಉನ್ನತೀಕರಿಸುತ್ತಿರುವ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಮತ್ತೊಂದು ಹೊಸ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಸಿದ್ದವಾಗಿದ್ದು, ಹೊಸ ಕಾರುಗಳ ಎರಡನೇ ಸಾಲುಗಳಲ್ಲೂ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಅಳವಡಿಕೆಯನ್ನು ಕಡ್ಡಾಯಗೊಳಿಸುತ್ತಿದೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಳವಡಿಕೆಗಾಗಿ ಶೀಘ್ರದಲ್ಲಿಯೇ ಕರಡು ಅಧಿಸೂಚನೆ ಹೊರಡಿಸಲು ಸಿದ್ದವಾಗಿರುವ ಕೇಂದ್ರ ಸರ್ಕಾರವು ಅಂತಿಮ ನಿಯಮ ಜಾರಿಗೂ ಮುನ್ನ ವಾಹನ ಉತ್ಪಾದನಾ ಕಂಪನಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಹೊಸ ಸುರಕ್ಷಾ ಸೌಲಭ್ಯ ಅಳವಡಿಕೆ ಕುರಿತಂತೆ ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಿ ಈ ನಿಯಮ ಜಾರಿಗೆ ತರುತ್ತಿದೆ.

ಕಸ್ಟಮೈಸ್ ನ್ಯಾನೋ ಇವಿ ಕಾರು ವಿತರಣೆ ಪಡೆದುಕೊಂಡ ರತನ್ ಟಾಟಾ
ರತನ್ ಟಾಟಾ ಹೂಡಿಕೆ ಮಾಡಿರುವ ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾ ಅವರಿಗೆ ನೀಡಿದೆ. ಎಲೆಕ್ಟ್ರಾ ಇವಿ ಸ್ಟಾರ್ಟ್ಅಪ್ ಟಾಟಾ ಮೋಟಾರ್ಸ್ ಸಂಸ್ಥೆಯ ಜನಪ್ರಿಯ ನ್ಯಾನೋ ಆಧಾರಿತ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸಿದೆ.

ಎಲೆಕ್ಟ್ರಾ ಇವಿ ಹಳೆಯ ಇಂಧನ ಆಧರಿತ ವಾಹನಗಳನ್ನು ಎಲಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಲು ಬೇಕಾದ ವಿನೂತನ ಟೆಕ್ನಾಲಜಿ ಕಿಟ್ ಅಭಿೃದ್ಧಿಪಡಿಸುತ್ತಿದೆ. ಇದೆ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಿದೆ. ರತನ್ ಟಾಟಾಗೆ ನೀಡಲಾಗಿರುವ ಮಾಡಿಫಿಕೇಶನ್ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರ 160 ಕಿ.ಮೀವರೆಗೆ ಚಲಿಸಲಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಹೊಸ ಯೋಜನೆ
ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

ಇವಿ ವಾಹನಗಳಿಗೆ ಪೂರಕವಾಗಿ ಈಗಗಾಲೇ ನೂರಾರು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿರುವ ದೆಹಲಿ ಸರ್ಕಾರವು ಇದೀಗ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದು, ದೆಹಲಿಯಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.

ಸುಧಾರಿತ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದೆ 2022ರ ಜೆಡ್ಎಸ್ ಇವಿ
ಎಂಜಿ ಮೋಟಾರ್ ಕಂಪನಿಯು ತನ್ನ ನವೀಕೃತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಮುಂಬರುವ ಮಾರ್ಚ್ ಮಧ್ಯಂತರದಲ್ಲಿ ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ 2022ರ ಮಾದರಿಯ ಪ್ರಮುಖ ತಾಂತ್ರಿಕ ಮಾಹಿತಿಯನ್ನು ಬಹಿರಂಗಪಡಿಸಿದೆ.

2022ರ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯಲ್ಲಿ ಕಂಪನಿಯು ಬಾಹ್ಯ ವಿನ್ಯಾಸದಲ್ಲಿ ಕೆಲವೇ ಕೆಲವು ಬದಲಾವಣೆಗಳನ್ನು ಪರಿಚಯಿಸಿದ್ದು, 51 kWh ಬ್ಯಾಟರಿ ಪ್ಯಾಕ್ ಮೂಲಕ ಹೊಸ ಕಾರಿನ ಮೈಲೇಜ್ ರೇಂಜ್ ಇದೀಗ ಪ್ರತಿ ಚಾರ್ಜ್‌ಗೆ 480 ಕಿ.ಮೀ ಗೆ ಹೆಚ್ಚಳವಾಗಿದೆ. ಮೈಲೇಜ್ ಹೆಚ್ಚಳದೊಂದಿಗೆ ಕಾರಿನ ಪರ್ಫಾಮೆನ್ಸ್ ಕೂಡಾ ಸಾಕಷ್ಟು ಸುಧಾರಣೆಗೊಂಡಿರುವುದು ಎಲೆಕ್ಟ್ರಿಕ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದ್ದು, ಹೊಸ ಮಾದರಿಯು ಎಂಜಿ ಮೋಟಾರ್ ಕಂಪನಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ರೋಡ್ ಟೆಸ್ಟಿಂಗ್ ನಡೆಸಿದ 2022ರ ಟಾಟಾ ನೆಕ್ಸಾನ್ ಇವಿ
ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮಾದರಿಯನ್ನು ಉನ್ನತೀಕರಿಸುತ್ತಿದ್ದು, ಹೊಸ ಕಾರು ಮೊದಲ ಬಾರಿಗೆ ಸಾರ್ವಜನಿಕ ಸ್ಥಳಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ. ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಇತ್ತೀಚೆಗೆ ಆರಂಭವಾಗಿರುವ ಹಿನ್ನಲೆಯಲ್ಲಿ ಹೊಸ ಕಾರಿನ ಬಿಡುಗಡೆ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬಹುದಾಗಿದ್ದು, ಹೊಸ ಕಾರು 400 ಕಿ.ಮೀ ಹೆಚ್ಚು ಮೈಲೇಜ್ ನೀಡಲಿದೆ ಎನ್ನಲಾಗಿದೆ.

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ. ನೆಕ್ಸಾನ್ ಇವಿ ಕಾರಿನಲ್ಲಿ 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, 2022ರ ಆವೃತ್ತಿಯು 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದಾಗಿದೆ.

ಪೋರ್ಷೆ 911 ಜಿಟಿ3 ಮತ್ತು ಜಿಟಿ3 ಟೂರಿಂಗ್ ಬಿಡುಗಡೆ
ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಜರ್ಮನ್ ಬ್ರಾಂಡ್ ಪೋರ್ಷೆ ತನ್ನ ಜನಪ್ರಿಯ ಐಷಾರಾಮಿ ಸ್ಪೋರ್ಟ್ ಕಾರು ಮಾದರಿಗಳಾದ 911 ಜಿಟಿ3 ಮತ್ತು ಟೂರಿಂಗ್ ಆವೃತ್ತಿಯಾದ ಜಿಟಿ3 ಟೂರಿಂಗ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.50 ಕೋಟಿ ಬೆಲೆ ಹೊಂದಿದ್ದು, ಹೊಸ ಕಾರುಗಳು ಹಳೆಯ ಮಾದರಿಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಪೋರ್ಷೆ ಕಂಪನಿಯು ಹೊಸ 911 ಜಿಟಿ3 ಮತ್ತು ಜಿಟಿ3 ಟೂರಿಂಗ್ ಕಾರುಗಳಲ್ಲಿ 4.0-ಲೀಟರ್ ಫ್ಲ್ಯಾಟ್ ಸಿಕ್ಸ್ ಎಂಜಿನ್ ಜೋಡಣೆ ಮಾಡಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ ಪೋರ್ಷೆ ನಿರ್ಮಾಣದದ ಹೊಸ ಪಿಡಿಕೆ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಆಯ್ಕೆ ಹೊಂದಿದೆ.

ಬಿಎಂಡಬ್ಲ್ಯು ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಬಿಡುಗಡೆ
ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ.1.43 ಕೋಟಿಯಾಗಿದೆ.

ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಮಾದರಿಯು 4 ಸೀರಿಸ್ ಮಾದರಿಯ ವಿನ್ಯಾಸ ಶೈಲಿಯನ್ನು ಆಧರಿಸಿದೆ, ಎರಡರ ನಡುವೆ ವ್ಯತ್ಯಾಸವನ್ನುಂಟುಮಾಡಲು ಎಂ ನಿರ್ದಿಷ್ಟ ಬದಲಾವಣೆಗಳೊಂದಿಗೆ, ಇದು ಅದರ ಸ್ಟ್ಯಾಂಡರ್ಡ್ ಮಾದರಿಯ ಅನುಪಾತದಲ್ಲಿರುತ್ತದೆ. ಈ ಹೊಸ ಬಿಎಂಡಬ್ಲ್ಯು ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ 3.0-ಲೀಟರ್, ಟ್ವಿನ್-ಟರ್ಬೊ, ನೇರ-ಆರು ಎಂಜಿನ್ ಅನ್ನು ಹೊಂದಿದೆ.

ಆಲ್‌ಟ್ರೊಜ್ ಡಾರ್ಕ್ ಎಡಿಷನ್ ಉನ್ನತೀಕರಣ
ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಕಾರುಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ನಿರಂತವಾಗಿ ಉನ್ನತೀಕರಿಸುತ್ತಿದ್ದು, ಕಂಪನಿಯು ಇದೀಗ ಆಲ್‌ಟ್ರೊಜ್ ಕಾರಿನ ಡಾರ್ಕ್ ಎಡಿಷನ್ ಅನ್ನು ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಿದೆ.

ಆಲ್‌ಟ್ರೊಜ್ ಡಾರ್ಕ್ ಎಡಿಷನ್‌ನಲ್ಲಿರುವ ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಪ್ಲಸ್ ಡೀಸೆಲ್ ಮಾದರಿಯನ್ನು ಕೆಲವು ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಉನ್ನತೀಕರಿಸಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಉನ್ನತೀಕರಿಸಿದ ಮಾದರಿಗಳಲ್ಲಿ ವೆಂಟಿಲೆಟೆಡ್ ಲೆದರ್ ಆಸನಗಳು, ಹಿಂಭಾಗದ ಆಸನಗಳಲ್ಲೂ ಆರ್ಮ್‌ರೆಸ್ಟ್, ಡಾರ್ಕ್ ಟಿಂಟ್ ಹೈಪರ್-ಸ್ಟೈಲ್ ಚಕ್ರಗಳನ್ನು ನೀಡಲಾಗಿದೆ.
ಜೊತೆಗೆ ಉನ್ನತೀಕರಿಸಿದ ಡಾರ್ಕ್ ಎಡಿಷನ್‌ಗಳಲ್ಲಿ ಎತ್ತರವನ್ನು ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಹಿಂಭಾಗದಲ್ಲೂ ಹೆಡ್‌ರೆಸ್ಟ್, ಮುಂಭಾಗದಲ್ಲಿ ಹೊಂದಾಣಿಕೆಯ ಸೀಟ್ ಬೆಲ್ಟ್‌ಗಳು, ಲೆದರ್‌ನೊಂದಿಗೆ ಸುತ್ತಲಾಗಿರುವ ಸ್ಟೀರಿಂಗ್ ಚಕ್ರಗಳು, ಲೆದರ್‌ನಿಂದ ಸುತ್ತಲಾದ ಗೇರ್ ನಾಬ್ ಸೇರಿದಂತೆ ಪ್ರಮುಖ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

ಸ್ಲಾವಿಯಾ ಸೆಡಾನ್ ಬಿಡುಗಡೆ ಮಾಹಿತಿ ಬಹಿರಂಗ
ಸ್ಕೋಡಾ(Skoda) ಕಂಪನಿಯು ತನ್ನ ಬಹುನೀರಿಕ್ಷಿತ ಸ್ಲಾವಿಯಾ(Slavia) ಸೆಡಾನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಾರು ಇದೇ ತಿಂಗಳಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಸ್ಲಾವಿಯಾ ಕಾರು ಮಾದರಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, 1.0 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯನ್ನು ಇದೇ ತಿಂಗಳು 28ರಂದು ಬಿಡುಗಡೆ ಮಾಡಲಿರುವ ಸ್ಕೋಡಾ ಕಂಪನಿಯು ಹೈ ಎಂಡ್ ಆವೃತ್ತಿಯಾಗಿರುವ 1.5 ಲೀಟರ್ ಮಾದರಿಯನ್ನು ಮಾರ್ಚ್ 3ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಕಾರುಗಳ ಬೆಲೆ ಏರಿಕೆ
ಟೊಯೊಟಾ ಇಂಡಿಯಾ ಕಂಪನಿಯು ತನ್ನ ಪ್ರಮುಖ ರೀಬ್ಯಾಜ್ಡ್ ಕಾರು ಮಾದರಿಗಳಾದ ಗ್ಲಾಂಝಾ ಹ್ಯಾಚ್‌ಬ್ಯಾಕ್ ಮತ್ತು ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ 2022ರ ಆವೃತ್ತಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಆವೃತ್ತಿಗಳ ಬಿಡುಗಡೆಗೂ ಮುನ್ನ ಬೆಲೆ ಏರಿಕೆ ಘೋಷಿಸಿದೆ.

ಹೊಸ ದರ ಪಟ್ಟಿಯಲ್ಲಿ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಕಾರು ಮಾದರಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 4 ಸಾವಿರದಿಂದ ರೂ. 45 ಸಾವಿರ ತನಕ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ 2022ರ ಮಾದರಿಗಳು ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿವೆ.


Click it and Unblock the Notifications