ವಾರದ ಸುದ್ದಿ: ಹೊಸ ಆಲ್ಟೊ ಕೆ10 ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಬಿಡುಗಡೆ, ಬಿಎಂಟಿಸಿಗೆ 921 ಇವಿ ಬಸ್..
ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಹೊಸ ಕಾರುಗಳ ಬಿಡುಗಡೆಯ ಜೊತೆ ಇವಿ ಕಾರುಗಳ ಅನಾವರಣ ಸುದ್ದಿಗಳು ಪ್ರಮುಖವಾಗಿವೆ.
Recommended Video
ಜೊತೆಗೆ ಆಟೋಮೊಬೈಲ್ ವಲಯದಲ್ಲಿ ಜರುಗಿದ ಈ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಸ್ಕಾರ್ಪಿಯೋ ಕ್ಲಾಸಿಕ್ ಬಿಡುಗಡೆ
ಮಹೀಂದ್ರಾ ಕಂಪನಿಯು ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯನ್ನು ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದು, ವಿವಿಧ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರಿನ ಎಸ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದ್ದರೆ ಎಸ್11 ಟಾಪ್ ಎಂಡ್ ಮಾದರಿಯು ರೂ. 15.49 ಲಕ್ಷ ಬೆಲೆ ಹೊಂದಿದೆ.

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಇದರಲ್ಲಿ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿಲ್ಲ. ಸ್ಕಾರ್ಪಿಯೋ-ಎನ್ ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿದ್ದರೆ ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯು ಈ ಹಿಂದಿನ ತಲೆಮಾರಿನ ವೈಶಿಷ್ಟ್ಯತೆಗಳಲ್ಲಿಯೇ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಮಾರುತಿ ಆಲ್ಟೋ ಕೆ10 ಬಿಡುಗಡೆ
ಮಾರುತಿ ಸುಜುಕಿ ಆಲ್ಟೋ ಕಳೆದ 22 ವರ್ಷಗಳಿಂದ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚಿನ ಬೇಡಿಕೆಯ ಕಾರು ಮಾದರಿಯಾಗಿದೆ. ಮಾರುತಿ ಆಲ್ಟೋ ಈಗಾಗಲೇ 4.32 ಮಿಲಿಯನ್ (43.2 ಲಕ್ಷ) ಗ್ರಾಹಕರೊಂದಿಗೆ ಕುಟುಂಬದ ನೆಚ್ಚಿನ ಕಾರು ಮಾದರಿಯಾಗಿದ್ದು, ಇದೀಗ ಹೊಸ ನವೀಕರಣಗಳೊಂದಿಗೆ ಮತ್ತೊಮ್ಮೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಮಾರುತಿ ಸುಜುಕಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.83 ಲಕ್ಷ ಬೆಲೆ ಹೊಂದಿದ್ದು, ಹೊಸ ಆಲ್ಟೋ ಕೆ10 ಹೊಸ ಮಾದರಿಯು ಸುಧಾರಿತ ವಿನ್ಯಾಸ, ಹೆಚ್ಚು ಪ್ರೀಮಿಯಂ ಒಳಾಂಗಣ ಮತ್ತು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೊಸ ಕಾರು 1.0-ಲೀಟರ್ K10C ಮೂರು-ಸಿಲಿಂಡರ್ ಡ್ಯುಯಲ್ ಜೆಟ್ ಡ್ಯುಯಲ್ VVT ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು ಪ್ರತಿ ಲೀಟರ್‌ಗೆ 24.90 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಐದು ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು ಅನಾವರಣ
ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮಹೀಂದ್ರಾ ಕಂಪನಿಯು ಬಾರ್ನ್ ಇವಿ ಕಾನ್ಸೆಪ್ಟ್ ಆಧರಿಸಿ ಒಟ್ಟು ಐದು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದೆ. ಹೊಸ ಇವಿ ಕಾರು ಮಾದರಿಗಳನ್ನು ಕಂಪನಿಯು ಎಕ್ಸ್‌ಯುವಿ.ಇ(XUV.e) ಮತ್ತು ಬಿಇ (BE) ಎನ್ನುವ ಎರಡು ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡಲಿದ್ದು, ಹೊಸ ಇವಿ ಕಾರುಗಳಲ್ಲಿ ಮೂರು ಎಸ್‌ಯುವಿ ಮಾದರಿಗಳಾಗಿದ್ದರೆ ಎರಡು ಎಸ್‌ಯುವಿ ಕೂಪೆ ಶೈಲಿಯಲ್ಲಿ ಆಧರಿಸಿರಲಿವೆ.

ಎಕ್ಸ್‌ಯುವಿ.ಇ(XUV.e) ಬ್ರಾಂಡ್ ಅಡಿಯಲ್ಲಿ ಎಕ್ಸ್‌ಯುವಿ.ಇ8(XUV.E8) ಮತ್ತು ಎಕ್ಸ್‌ಯುವಿ.ಇ9(XUV.E9) ಮಾರಾಟಗೊಳ್ಳಲಿದ್ದರೆ ಬಿಇ(BE) ಬ್ರಾಂಡ್ ಅಡಿಯಲ್ಲಿ ಬಿಇ.05(BE.05). ಬಿಇ.07(BE.07) ಮತ್ತು ಬಿಇ.09(BE.09) ಕಾರುಗಳು ಮಾರಾಟಗೊಳ್ಳಲಿವೆ. 2024ರ ಕೊನೆಯಲ್ಲಿ ಎಕ್ಸ್‌ಯುವಿ.ಇ ಕಾರುಗಳ ಮಾರಾಟ ಆರಂಭವಾಗಲಿದ್ದರೆ ಬಿಇ ಬ್ರಾಂಡ್ ಕಾರುಗಳ ಮಾರಾಟವು 2025ರ ಕೊನೆಯಲ್ಲಿ ಆರಂಭವಾಗಲಿವೆ.

ಬಿಎಂಟಿಸಿ ಸೇರ್ಪಡೆಯಾಗಲಿವೆ 921 ಎಲೆಕ್ಟ್ರಿಕ್ ಬಸ್
ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗಾಗಿ ಇವಿ ಬಸ್ ಟೆಂಡರ್ ಘೋಷಿಸುತ್ತಿದೆ. ಸಿಇಎಸ್ಎಲ್ ಟೆಂಡರ್‌ನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಬಿಎಂಟಿಸಿ ಸಂಸ್ಥೆಗೆ ಒದಗಿಸಲಾಗುತ್ತಿರುವ ಎಲೆಕ್ಟ್ರಿಕ್ ಬಸ್ ಟೆಂಡರ್ ಅನ್ನು ತನ್ನದಾಗಿಸಿಕೊಂಡಿದೆ.

ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಟೆಂಡರ್‌ನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಬಿಎಂಟಿಸಿ ಸಾರಿಗೆ ಸಂಸ್ಥೆಗೆ ಒಟ್ಟು 921 ಎಲೆಕ್ಟ್ರಿಕ್ ಬಸ್ ಒದಗಿಸುವ ಟೆಂಡರ್ ಪಡೆದುಕೊಂಡಿದ್ದು, ಹೊಸ ಯೋಜನೆಯಡಿ ಟಾಟಾ ಮೋಟಾರ್ಸ್ ಕಂಪನಿಯು 921 ಸ್ಟಾರ್ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಿದೆ. ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಟೆಂಡರ್‌ನಲ್ಲಿ ದೆಹಲಿ ಸಾರಿಗೆ ಸಂಸ್ಥೆಗಾಗಿ 1500 ಎಲೆಕ್ಟ್ರಿಕ್ ಬಸ್‌ಗಳನ್ನು ಮತ್ತು 1,180 ಎಲೆಕ್ಟ್ರಿಕ್ ಬಸ್‌ಗಳನ್ನು ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಗೆ ಒದಗಿಸುವ ಟೆಂಡರ್ ಸಹ ಪಡೆದುಕೊಂಡಿದೆ.

ಇನೋವಾ ಕ್ರಿಸ್ಟಾ ಡೀಸೆಲ್ ವೆರಿಯೆಂಟ್ ಬುಕಿಂಗ್ ಬಂದ್
ಟೊಯೊಟಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಇನೋವಾ ಕ್ರಿಸ್ಟಾ ಹೊಸ ತಲೆಮಾರಿನ ಆವೃತ್ತಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಮಾದರಿಯ ಬಿಡುಗಡೆಗೂ ಮುನ್ನ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿನ ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.

ಹೌದು, ಎಂಪಿವಿ ವಿಭಾಗದಲ್ಲಿ ಅಗ್ರಸ್ಥಾನ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಮಾದರಿಯು ಶೀಘ್ರದಲ್ಲಿಯೇ ಹೊಸ ತಲೆಮಾರಿನ ಆವೃತ್ತಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದ್ದು, ಹೊಸ ಆವೃತ್ತಿಯ ಬಿಡುಗಡೆಗೂ ಮುನ್ನ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಯ ಡೀಸೆಲ್ ವೆರಿಯೆಂಟ್ ಬುಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಡಬಲ್ ಡೆಕ್ಕರ್ ಬಸ್ ಅನಾವರಣ
ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಪುನಾರಂಭಿಸಲು ಮುಂದಾಗಿರುವ ಮುಂಬೈ ನಗರ ಸಾರಿಗೆ ಸಂಸ್ಥೆಯ ಬೃಹತ್ ಯೋಜನೆಗಾಗಿ ಸ್ವಿಚ್ ಮೊಬಿಲಿಟಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಬಸ್ ಮಾದರಿಗಳನ್ನು ಅನಾವರಣಗೊಳಿಸಿದೆ. ಭಾರತದಲ್ಲಿ ಕಳೆದ ಏಳು ದಶಕಗಳಿಂದ ಡಬಲ್ ಡೆಕ್ಕರ್ ಬಸ್ ಸೇವೆಗಳೊಂದಿಗೆ ಜನಪ್ರಿಯತೆ ಹೊಂದಿರುವ ಮುಂಬೈನ ನಗರ ಸಾರಿಗೆ ಸಂಸ್ಥೆಯು (ಬೆಸ್ಟ್) ಆಧುನಿಕ ತಂತ್ರಜ್ಞಾನ ಪ್ರೇರಿತ ಬಸ್ ಮಾದರಿಗಳಿಗೆ ಆದ್ಯತೆ ನೀಡುತ್ತಿದ್ದು, ಪ್ರವಾಸಿಗರಿಗೆ ನಗರದ್ಯಾಂತ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಡಬಲ್ ಡೆಕ್ಕರ್ ಬಸ್‌ಗಳನ್ನು ಅಳವಡಿಸಿಕೊಳ್ಳುತ್ತಿದೆ.

ಸುಧಾರಿತ ಮತ್ತು ಎಲೆಕ್ಟ್ರಿಕ್ ತಂತ್ರಜ್ಞಾನ ಉತ್ಪನ್ನದ ಮೂಲಕ ಸಾಂಪ್ರದಾಯಿಕ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಪುನಾರಂಭಿಸಲು ಉತ್ಸುಕವಾಗಿರುವ ಮುಂಬೈ ನಗರ ಸಾರಿಗೆ ಸಂಸ್ಥೆಯು ಹೊಸ ಯೋಜನೆಗಾಗಿ ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾಗಿರುವ ಸ್ವಿಚ್ ಮೊಬಿಲಿಟಿ ಜೊತೆ ಪಾಲುದಾರಿಕೆ ಪ್ರಕಟಿಸಿದೆ. ಹೊಸ ಯೋಜನೆ ಅಡಿಯಲ್ಲಿ ಒಟ್ಟು 200 ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ಹೊಸ ಯೋಜನೆಗಾಗಿ ಜಾಗತಿಕ ಅನುಭವ ಬಳಸಿಕೊಂಡು ಭಾರತದಲ್ಲಿಯೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ‘ಸ್ವಿಚ್ ಇಐವಿ 22' ಇವಿ ಬಸ್ ನಿರ್ಮಾಣ ಮಾಡಲಾಗಿದೆ.

ಬಿವೈಡಿ ಇ6 ಖರೀದಿ ಪ್ರಕ್ರಿಯೆ ಆರಂಭ
ಬಿವೈಡಿ ಕಂಪನಿಯು ಭಾರತದಲ್ಲಿ ತನ್ನ ಹೊಸ ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಹೊಸ ಕಾರನ್ನು ವೈಯಕ್ತಿಕ ಕಾರು ಬಳಕೆದಾರರಿಗೂ ಖರೀದಿಗೆ ಅವಕಾಶ ನೀಡಿದೆ.

ಇ6 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದ ಆರಂಭದಲ್ಲಿ ಕಂಪನಿಯು ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗೆ ಮಾತ್ರ ಖರೀದಿಗೆ ಅವಕಾಶ ನೀಡಿತ್ತು. ಕಂಪನಿಯು ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವ್ಯಯಕ್ತಿಕ ಕಾರು ಖರೀದಿದಾರರಿಗೂ ಖರೀದಿಗೆ ಅವಕಾಶ ನೀಡಿದ್ದು, ಆಸಕ್ತ ಗ್ರಾಹಕರು ಇದೀಗ ಬುಕಿಂಗ್ ಮಾಡಬಹುದಾಗಿದೆ.


Click it and Unblock the Notifications