ವಾರದ ಸುದ್ದಿ: ಹೊಸ ಟ್ಯೂಸಾನ್ ಮತ್ತು ಸ್ವಿಫ್ಟ್ ಸಿಎನ್‌ಜಿ ಬಿಡುಗಡೆ, ಸ್ಕಾರ್ಪಿಯೋ ಕ್ಲಾಸಿಕ್ ಅನಾವರಣ..
ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಹೊಸ ಕಾರುಗಳ ಬಿಡುಗಡೆಯ ಜೊತೆ ಅನಾವರಣ ಸುದ್ದಿಗಳು ಪ್ರಮುಖವಾಗಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಹೊಸ ಹ್ಯುಂಡೈ ಟ್ಯೂಸಾನ್ ಬಿಡುಗಡೆ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಫುಲ್ ಸೈಜ್ ಪ್ರೀಮಿಯಂ ಎಸ್‌ಯುವಿ ಮಾದರಿಯಾದ ಟ್ಯೂಸಾನ್ 2022ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 27.70 ಲಕ್ಷ ಬೆಲೆ ಹೊಂದಿದೆ.
ಹೊಸ ಕಾರು ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆ ನೀಡಿದ್ದು, ಹೈ ಎಂಡ್ ಡೀಸೆಲ್ ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಮಲ್ಟಿ ಟೆರೇನ್ ಮೋಡ್(ಸ್ನೋ, ಮಡ್, ಸ್ಯಾಂಡ್) ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುವ ಬದಲು ಆಯ್ಕೆ ರೂಪದಲ್ಲಿ ನೀಡಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಪ್ರೀಮಿಯಂ ಎಸ್‌ಯುವಿ ಫ್ಲ್ಯಾಗ್‌ಶಿಪ್ ಮಾರಾಟ ಹೊಂದಿರುವ ಹ್ಯುಂಡೈ ಕಂಪನಿಯು ಟ್ಯೂಸಾನ್ ಹೊಸ ಮಾದರಿಯನ್ನು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಗ್ರಾಹಕರ ಬೇಡಿಕೆ ಆಧರಿಸಿ ಪ್ಲ್ಯಾಟಿನಂ ಮತ್ತು ಸಿಗ್ನೆಚರ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಾದರಿಯು ಮೊದಲ ಬಾರಿಗೆ ಎಡಿಎಎಸ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಸ್ವಿಫ್ಟ್ ಸಿಎನ್‌ಜಿ ಬಿಡುಗಡೆ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಎಸ್-ಸಿಎನ್‌ಜಿ ಮಾದರಿಯನ್ನು ಬಿಡುಗಡೆಗೊಳಿಸಿದ್ದು ಈ ಹೊಸ ಸಿಎನ್‌ಜಿ ಕಾರು ಆರಂಭಿಕವಾಗಿ ರೂ. ಎಕ್ಸ್ ಶೋರೂಂ ಪ್ರಕಾರ ರೂ. 7.77 ಲಕ್ಷವಾಗಿದೆ. ಡಿಜೈರ್ ಸಿಎನ್‌ಜಿಯಂತೆ ಸ್ವಿಫ್ಟ್ ಕಾರಿನಲ್ಲಿ ಅದೇ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿಯೊಂದಿಗೆ ಹಂಚಿಕೊಳ್ಳುತ್ತವೆ.

ಹೊಸ ಸ್ವಿಫ್ಟ್ ಸಿಎನ್‌ಜಿ ಕಾರು VXI ಮತ್ತು ZXI ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ VXI ಮತ್ತು ZXI ಎಂಬ ಎರಡು ರೂಪಾಂತರಗಳ ಬೆಲೆಯು ಕ್ರಮವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 7.77 ಲಕ್ಷ ಮತ್ತು ರೂ. 8.45 ಲಕ್ಷವಾಗಿದೆ. ಹೊಸ ಮಾರುತಿ ಸ್ವಿಫ್ಟ್ ಸಿಎನ್‌ಜಿ ರೂಪಾಂತರಗಳು ಆಯಾ ಪೆಟ್ರೋಲ್ ಆವೃತ್ತಿಗಳಿಗಿಂತ ಸುಮಾರು ರೂ. 96,000 ದುಬಾರಿಯಾಗಿದೆ.

ಸಿಎನ್‌ಜಿ ತಂತ್ರಜ್ಞಾನ. 26 ಲಕ್ಷಕ್ಕೂ ಹೆಚ್ಚು ಸ್ವಿಫ್ಟ್ ಪ್ರಿಯರನ್ನು ತನ್ನ ಕಾರ್ಯಕ್ಷಮತೆ, ಸ್ಟೈಲಿಂಗ್ ಮತ್ತು ರಸ್ತೆಯ ಉಪಸ್ಥಿತಿಯಿಂದ ಆಕರ್ಷಿಸಿದ ನಂತರ, ಸ್ವಿಫ್ಟ್ ಈಗ ಎಸ್-ಸಿಎನ್‌ಜಿ ಯೊಂದಿಗೆ ತನ್ನ ನಂಬಲಾಗದ ಇಂಧನ ದಕ್ಷತೆ 30.90 Km/kg ನೊಂದಿಗೆ ಗ್ರಾಹಕರನ್ನು ಆನಂದಿಸಲು ಲಭ್ಯವಿದೆ. ಇದು ಸಿಎನ್‌ಜಿ ಕೊಡುಗೆಯೊಂದಿಗೆ ನಮ್ಮ ಪೋರ್ಟ್‌ಫೋಲಿಯೊದಲ್ಲಿ 9ನೇ ಮಾದರಿಯಾಗಿದೆ.

ಸ್ಕಾರ್ಪಿಯೋ ಕ್ಲಾಸಿಕ್ ಅನಾವರಣ
ಮಹೀಂದ್ರಾ ಕಂಪನಿಯು ತನ್ನ ನವೀಕೃತ ಸೌಲಭ್ಯಗಳನ್ನು ಒಳಗೊಂಡ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು ಇದೇ ತಿಂಗಳು 20ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಎಸ್ ಮತ್ತು ಎಸ್11 ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರಲಿರುವ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹಳೆಯ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ವಿನ್ಯಾಸದಲ್ಲಿ ತುಸು ಹೊಸ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ
ಜೀಪ್ ಕಂಪಾಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಕಂಪಾಸ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿ 5 ವರ್ಷಗಳನ್ನು ಪೂರೈಸಿದ್ದು, 5ನೇ ವರ್ಷದ ಸಂಭ್ರಮಕ್ಕಾಗಿ ಕಂಪನಿಯು ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದೆ. ಕಂಪಾಸ್ ಎಸ್‌ಯುವಿಯನ್ನು ಮೊದಲ ಬಾರಿಗೆ 2017ರಲ್ಲಿ ಬಿಡುಗಡೆ ಮಾಡಿದ್ದ ಜೀಪ್ ಕಂಪನಿಯು ಈಗಾಗಲೇ ಹಲವಾರು ಬದಲಾವಣೆಗಳೊಂದಿಗೆ ಪ್ರಮುಖ ಆವೃತ್ತಿಗಳಲ್ಲಿ ಮಾರಾಟಗೊಳಿಸುತ್ತಿದ್ದು, ಇದೀದ 5ನೇ ವರ್ಷದ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದೆ.

ಹೊಸ ಆ್ಯನಿವರ್ಸರಿ ಎಡಿಷನ್ ಮಾದರಿಯು ಹೈ ಎಂಡ್ ಮಾದರಿಯನ್ನು ಆಧರಿಸಿ ಬಿಡುಗಡೆ ಮಾಡಲಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಆವೃತ್ತಿಯು ರೂ. 24.44 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಆ್ಯನಿವರ್ಸರಿ ಎಡಿಷನ್‌ನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಪ್ರಮುಖ ಫೀಚರ್ಸ್‌ಗಳೊಂದಿಗೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ನೀಡಿದ್ದು, 5ನೇ ವಾರ್ಷಿಕೋತ್ಸವದ ಬ್ಯಾಡ್ಜಿಂಗ್ ಗಮನಸೆಳೆಯುತ್ತದೆ.

ಟಿಗೋರ್ ಎಕ್ಸ್‌ಎಂ ಐಸಿಎನ್‌ಜಿ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಟಿಗೋರ್ ಎಕ್ಸ್‌ಎಂ ಐಸಿಎನ್‌ಜಿ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಾಟಾ ಟಿಗೋರ್ ಎಕ್ಸ್‌ಎಂ ಐಸಿಎನ್‌ಜಿ ವೆರಿಯೆಂಟ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.7,39,900 ಆಗಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಟಿಗೋರ್ ಐಸಿಎನ್‌ಜಿ ಶ್ರೇಣಿಯು 26.49 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಕಂಪನಿಯು CNG ಲೈನ್-ಅಪ್‌ಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆಯುತ್ತಿದೆಎಂದು ಹೇಳಿಕೊಂಡಿದೆ.

ಸಿಎನ್‌ಜಿ ಚಾಲಿತ ಟಾಟಾ ಟಿಗೋರ್‌ನ ಹೊಸ ಎಕ್ಸ್‌ಎಂ ಆವೃತ್ತಿಯು ಸೆಡಾನ್‌ನ ನ್ಯಾಚುರಲ್ ಅನಿಲ-ಚಾಲಿತ ಹಲವು ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಎಕ್ಸ್‌ಎಂ ಟಿಗೋರ್‌ನ ಐಸಿಎನ್‌ಜಿ ಆವೃತ್ತಿಯ ಹೊಸ ಎಂಟ್ರಿ ಲೆವೆಲ್ ರೂಪಾಂತರವಾಗಿದೆ. ಟಾಟಾ ಟಿಗೊರ್ ಐಸಿಎನ್‌ಜಿ 1.2-ಲೀಟರ್ ನೈಸರ್ಗಿಕವಾಗಿ ಆಕಾಂಕ್ಷೆಯ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ
ವಿಶ್ವ ಜೈವಿಕ ಇಂಧನ ದಿನಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರವು ಎಥೆನಾಲ್ ಉತ್ಪಾದನೆ ಹೆಚ್ಚಳಕ್ಕಾಗಿ ಇಂದು ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು, ಹರಿಯಾದ ಪಾಣಿಪತ್‌ನಲ್ಲಿ ನಿರ್ಮಿಸಲಾದ ಎರಡನೇ ತಲೆಮಾರಿನ ಎಥೆನಾಲ್ ಉತ್ಪಾದನಾ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಕ್ಕೆ ಸಮರ್ಪಿಸಿದ್ದಾರೆ.

ಹೊಸ ಘಟಕದ ನಿರ್ಮಾಣಕ್ಕಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಕಂಪನಿಯು ರೂ. 900 ಕೋಟಿ ವೆಚ್ಚದಲ್ಲಿ ಈ ಜೈವಿಕ ಇಂಧನ ಘಟಕವನ್ನು ನಿರ್ಮಿಸಿದ್ದು, ದೇಶದಲ್ಲಿ ಜೈವಿಕ ಇಂಧನಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ಬಲಪಡಿಸುವ ಉದ್ದೇಶದಿಂದ ಈ ಹೊಸ ಸ್ಥಾವರವನ್ನು ಸ್ಥಾಪಿಸಲಾಗಿದೆ. ಜೈವಿಕ ಇಂಧನವನ್ನು ಉತ್ಪಾದಿಸಲು ಕೃಷಿ-ಬೆಳೆ ಅವಶೇಷಗಳನ್ನು ಅವಲಂಭಿಸಿದ್ದು, ಇದು ರೈತರನ್ನು ಸಬಲಗೊಳಿಸುವುದಲ್ಲದೇ ಹೊಸ ಉದ್ಯಮ ಕಾರ್ಯಾಚರಣೆಯು ರೈತರಿಗೂ ಹೆಚ್ಚುವರಿ ಆದಾಯವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತದೆ.

ಹೆಚ್ಚಿದ ಎಲೆಕ್ಟ್ರಿಕ್ ವಾಹನಗಳ ನೋಂದಣಿ
ದೇಶದಲ್ಲಿ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ತೈಲ ಬೆಲೆ ಏರಿಕೆ ಹಾಗೂ ಇಂಧನ ಚಾಲಿತ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಳದಿಂದಾಗಿ ಜನರು ಇವಿ ವಾಹಗಳತ್ತ ಮುಖ ಮಾಡುತ್ತಿದ್ದಾರೆ. ವಾಹನ ಪೋರ್ಟಲ್‌ನ ಮಾಹಿತಿಯ ಪ್ರಕಾರ, 3 ಆಗಸ್ಟ್ 2022 ರಂತೆ ದೇಶದಲ್ಲಿ 13,92,265 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ವ್ಯವಹಾರಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಅವರು ಎಲೆಕ್ಟ್ರಿಕ್ ವಾಹನಗಳ ಕುರಿತು ಮಾಹಿತಿ ನೀಡಿ, ತ್ರಿಚಕ್ರ ವಾಹನಗಳು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿವೆ ಎಂದು ತಿಳಿಸಿದರು.

ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ
ಪೋಲಾರಿಸ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಎಟಿವಿ(ಆಲ್ ಟೆರೆನ್ ವೆಹಿಕಲ್) ಬಿಡುಗಡೆ ಮಾಡಿದ್ದು, ಹೊಸ ವಾಹನವು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 59 ಲಕ್ಷ ಬೆಲೆ ಹೊಂದಿದೆ.

ಅಮೆರಿಕದ ಮುಂಚೂಣಿ ಆಫ್ ರೋಡ್ ವಾಹನಗಳ ತಯಾರಿಕಾ ಕಂಪನಿಯಾಗಿರುವ ಪೋಲಾರಿಸ್ ಇಂಡಸ್ಟ್ರೀಸ್ ಈಗಾಗಲೇ ಹಲವಾರು ಹಲವಾರು ಆಲ್ ಟೆರೆನ್ ವಾಹನಗಳನ್ನು ಭಾರತದಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಇದೀಗ ಬಹು ಉಪಯೋಗಿ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಎಟಿವಿ ಬಿಡುಗಡೆ ಮಾಡಿದೆ.

ಪಂಚ್ ಮೈಕ್ರೊ ಎಸ್‌ಯುವಿ ಹೊಸ ಮೈಲಿಗಲ್ಲು
ಪಂಚ್ ಮೈಕ್ರೊ ಎಸ್‌ಯುವಿ ಕಾರು ಮಾದರಿಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ನಂತರ ಟಾಟಾ ನಿರ್ಮಾಣದ ಎರಡನೇ ಅತಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಕಳೆದ ವರ್ಷ ಅಕ್ಟೋಬರ್ ಕೊನೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಪಂಚ್ ಕಾರು ಮಾದರಿಯು ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಬುಕ್ಕಿಂಗ್ ಪಡೆದುಕೊಂಡಿದ್ದು, ಇದುವರೆಗೆ ಸುಮಾರು 1 ಲಕ್ಷ ಯುನಿಟ್ ವಿತರಣೆ ಉತ್ಪಾದನೆ ಪೂರ್ಣಗೊಳಿಸಲಾಗಿದೆ. ಟಾಟಾ ಕಂಪನಿಯ ಇತ್ತೀಚಿನ ಮಾಹಿತಿ ಪ್ರಕಾರ ಪಂಚ್ ಕಾರು 1 ಲಕ್ಷ ಯುನಿಟ್ ಉತ್ಪಾದನೆ ಪೂರ್ಣಗೊಳ್ಳುವ ಮೂಲಕ ಗ್ರಾಹಕರಿಗೆ ವಿತರಣೆ ಮಾಡಿರುವುದಾಗಿ ಹೇಳಿಕೊಂಡಿದೆ.

ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ
ಎಲೆಕ್ಟ್ರಿಕ್ ವಾಹನಗಳಿಗೆ ಸಮರ್ಥವಾದ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಲು ಪ್ರಮುಖ ಕಂಪನಿಗಳು ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಬ್ಯಾಟರಿ ವಿನಿಯಮ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಹೋಂಡಾ ಅಂಗಸಂಸ್ಥೆಯಾದ ಹೋಂಡಾ ಪವರ್‌ಪ್ಯಾಕ್ ಎನರ್ಜಿ ಕಂಪನಿಯು ಇದೀಗ ಬ್ಯಾಟರಿ ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಿದೆ.

ಹೋಂಡಾ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಹೋಂಡಾ ಪವರ್‌ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್(HEID) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಹಯೋಗದಲ್ಲಿ ಬ್ಯಾಟರಿ ವಿನಿಮಯ ಸೇವೆಯನ್ನು ನಮ್ಮ ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದೆ. ಪ್ರಸ್ತುತ ಬ್ಯಾಟರಿ ಸ್ವಾಪ್ ಸೇವೆಯನ್ನು ಹೋಂಡಾ ಕಂಪನಿಯು ಇ-ರಿಕ್ಷಾ ಮಾತ್ರ ಮಾತ್ರ ಒದಗಿಸಲಾಗುತ್ತಿದ್ದು, ಹಂತ-ಹಂತವಾಗಿ ಇದು ಇವಿ ಸ್ಕೂಟರ್ ಮತ್ತು ಬೈಕ್ ಮಾದರಿಗಳಿಗೂ ವಿಸ್ತರಿಸಬಹುದಾಗಿದೆ.


Click it and Unblock the Notifications