ವಾರದ ಸುದ್ದಿ: ಹೊಸ ಜೆಡ್ಎಸ್ ಇವಿ, ಡಿಜೈರ್ ಸಿಎನ್‌ಜಿ ಬಿಡುಗಡೆ, ಹೊಸ ದಾಖಲೆ ನಿರ್ಮಿಸಿದ ಕಿಯಾ ಕಾರೆನ್ಸ್..
ದುಬಾರಿ ಇಂಧನ ಪರಿಣಾಮ ಎಲೆಕ್ಟ್ರಿಕ್ ಕಾರುಗಳ ಜೊತೆ ಸಿಎನ್‌ಜಿ ಕಾರುಗಳ ಮಾರಾಟ ಜೋರಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಅತ್ಯಧಿಕ ಮೈಲೇಜ್ ಪ್ರೇರಿತ ಇವಿ ಕಾರುಗಳು ಮತ್ತು ಸಿಎನ್‌ಜಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಜೊತೆಗೆ ಪ್ರಮುಖ ಕಾರು ಕಂಪನಿಗಳು ತಮ್ಮ ಸಾಮಾನ್ಯ ಕಾರು ಆವೃತ್ತಿಗಳ ಹೊಸ ಮಾದರಿಗಳನ್ನು ಕೂಡಾ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತೀಕರಿಸುತ್ತಿದ್ದು, ಈ ವಾರದ ಪ್ರಮುಖ ಸುದ್ದಿಗಳಲ್ಲಿ ವಿವಿಧ ಹೊಸ ವಾಹನಗಳ ಬಿಡುಗಡೆಯ ಮಾಹಿತಿ ಜೊತೆಗೆ ಆಟೋ ಉದ್ಯಮದಲ್ಲಿನ ಬೆಳವಣಿಗೆಗಳ ಕುರಿತು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಅತ್ಯಧಿಕ ಮೈಲೇಜ್ ಪ್ರೇರಿತ ಜೆಡ್ಎಸ್ ಇವಿ ಬಿಡುಗಡೆ
2022ರ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯು ಈ ಹಿಂದಿನಂತೆ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಹೊಸ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21,99,800 ರಿಂದ ಟಾಪ್ ಎಂಡ್ ಮಾದರಿಯು ರೂ. 25,88,000 ಬೆಲೆ ಹೊಂದಿದೆ.

ಎಂಜಿ ಮೋಟಾರ್ ಕಂಪನಿಯು ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಈ ಹಿಂದೆ ಪ್ರತಿ ಚಾರ್ಜ್‌ಗೆ 419 ಕಿ.ಮೀ ಒದಗಿಸುತ್ತಿದ್ದ 44.5 kWh ಬ್ಯಾಟರಿ ಪ್ಯಾಕ್ ಅನ್ನು 50.3 kWh ಅಡ್ವಾನ್ಸ್ ಬ್ಯಾಟರಿ ಪ್ಯಾಕ್‌ಗೆ ಉನ್ನತೀಕರಿಸಿದ್ದು, ಹೊಸ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್‌ಗೆ ಗರಿಷ್ಠ 461 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಕಾರು ಮಾದರಿಯು ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೊತೆ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಹೊಂದಿರುವ ರಿಯರ್ ಎಡಿಎಎಸ್ ಜೋಡಣೆ ಹೊಂದಿದೆ.

ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಅನಾವರಣ
ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಹೊಸ ವರ್ಟಸ್ ಮಿಡ್ ಸೈಜ್ ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ವರ್ಟಸ್ ಕಾರು ಡೈನಾಮಿಕ್ ಲೈನ್ ಮತ್ತು ಜಿಟಿ ಲೈನ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಕಾರು ಹೆಚ್ಚಿನ ಫೀಚರ್ಸ್ ಗಳನ್ನು ಸ್ಕೋಡಾ ಸ್ಲಾವಿಯಾದಿಂದ ಎರವಲು ಪಡೆದುಕೊಂಡಿದೆ.

ವರ್ಟಸ್ ಕಾರಿನಲ್ಲಿ 1.0 ಲೀಟರ್ 3-ಸಿಲಿಂಡರ್ TSI ಮತ್ತು 1.5 ಲೀಟರ್, 4-ಸಿಲಿಂಡರ್ TSI ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಹೊಸ ಕಾರು ಸ್ಲಾವಿಯಾ ಮಾದರಿಯೆಂತೆ ದಹೆಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.10 ಲಕ್ಷದಿಂದ ರೂ. 17 ಲಕ್ಷ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಡಿಜೈರ್ ಎಸ್-ಸಿಎನ್‌ಜಿ ಕಾರು ಬಿಡುಗಡೆ
ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ ಕಾರು ಉತ್ತಮ ಮೈಲೇಜ್ ಮತ್ತು ಆಕರ್ಷಕ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಕಿಟ್ ಅನ್ನು VXi ಮತ್ತು ZXi ರೂಪಾಂತರಗಳಲ್ಲಿ ನೀಡಲಾಗಿದ್ದು, ಇವುಗಳ ಬೆಲೆಯನ್ನು ಕ್ರಮವಾಗಿ ರೂ. 8.14 ಲಕ್ಷ ಮತ್ತು ರೂ. 8.82 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಸಿಎನ್‌ಜಿ ಆವೃತ್ತಿಯು ಪೆಟ್ರೋಲ್ ಮಾದರಿಗಿಂತ ಸ್ವಲ್ಪ ಕಡಿಮೆ ಪವರ್ ಮತ್ತು ಟಾರ್ಕ್ ಉತ್ಪಾದಿಸಲಿದ್ದು, ಹೊಸ ಡಿಜೈರ್ ಸಿಎನ್‌ಜಿ ರೂಪಾಂತರವು 31.12 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೀಗಾಗಿ ಇದು ದೇಶದ ಅತ್ಯಂತ ಮಿತವ್ಯಯ ಮತ್ತು ಶಕ್ತಿಯುತ ಸಿಎನ್‌ಜಿ ಸೆಡಾನ್ ಆಗಿದೆ.

ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿ ಬಿಡುಗಡೆ
ಹೊಸ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯು ಎಕ್ಸ್ಕ್ವಿಸೈಟ್, ಎಕ್ಸ್ಕ್ಲೂಸಿವ್ ಮತ್ತು ಎಫ್-ಸ್ಪೋರ್ಟ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಂಡಿದ್ದು, ಈ ಹೊಸ ಮಾದರಿಯು ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (TNGA-L) ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸಿದೆ. ಐದನೇ ತಲೆಮಾರಿನ ಟೊಯೊಟಾ ರಾವ್4 ನೊಂದಿಗೆ ಹಲವು ಅಂಶಗಳನ್ನು ಹಂಚಿಕೊಂಡಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 64.90 ಲಕ್ಷದಿಂದ ರೂ. 71.60 ಲಕ್ಷ ಬೆಲೆ ಹೊಂದಿದೆ.

2022ರ ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿಯಲ್ಲಿ 2.5-ಲೀಟರ್, 4-ಸಿಲಿಂಡರ್ ಎಂಜಿನ್ ಜೊತೆಗೆ 259-ವೋಲ್ಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಅದು ಒಟ್ಟಾಗಿ 236 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಇ-ಲಾಚ್ ಸಿಸ್ಟಮ್, ಸೇಫ್ ಎಕ್ಸಿಟ್ ಲೇನ್ ಅಸಿಸ್ಟ್, ಪನೊರೊಮಿಕ್ ವ್ಯೂ ಮಾನಿಟರ್, ರಿಮೋಟ್ ಫಂಕ್ಷನ್‌ನೊಂದಿಗೆ ಸುಧಾರಿತ ಪಾರ್ಕ್‌ನೊಂದಿಗೆ ಸುಧಾರಿತ ಡ್ರೈವಿಂಗ್ ಅಸಿಸ್ಟ್ ತಂತ್ರಜ್ಞಾನ ಪಡೆದುಕೊಳ್ಳುತ್ತದೆ.

ಬಿಎಂಡಬ್ಲ್ಯು ಎಕ್ಸ್4 ಎಸ್‍ಯುವಿ ಬಿಡುಗಡೆ
ಹೊಸ ಬಿಎಂಡಬ್ಲ್ಯು ಎಕ್ಸ್4 ಎಸ್‍ಯುವಿಯು ಪ್ರಮುಖ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಹೊಸ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ. ಹೊಸ ಎಕ್ಸ್4 ವಿಶೇಷವಾದ 'ಬ್ಲ್ಯಾಕ್ ಶ್ಯಾಡೋ' ಆವೃತ್ತಿಯು ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ ಮತ್ತು ಬ್ಲ್ಯಾಕ್ ಸಫೈರ್ ಮತ್ತು ಎಂ ಬ್ರೂಕ್ಲಿನ್ ಗ್ರೇ ಮೆಟಾಲಿಕ್ ಪೇಂಟ್‌ವರ್ಕ್‌ಗಳಲ್ಲಿ ಲಭ್ಯವಿದೆ.

ಹೊಸ ಬಿಎಂಡಬ್ಲ್ಯು ಎಕ್ಸ್4 ಎಸ್‍ಯುವಿಯ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.70.50 ಲಕ್ಷವಾಗಿದ್ದು, ಹೊಸ 3.0 ಲೀಟರ್ ಆರು-ಸಿಲಿಂಡರ್ ಡೀಸೆಲ್ ಎಂಜಿನ್, 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಡೀಸೆಲ್ ಮಾದರಿಯು 265 ಬಿಹೆಚ್‍ಪಿ, 620 ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಪೆಟ್ರೋಲ್ ಮಾದರಿಯು 252 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ದಾಖಲೆ ನಿರ್ಮಿಸಿದ ಕಿಯಾ ಕಾರೆನ್ಸ್
ಕಿಯಾ ಇಂಡಿಯಾ ಕಂಪನಿಯು ಹೊಸ ಕಾರೆನ್ಸ್ ಎಂಯುವಿ ಮಾದರಿಯನ್ನು ಬಿಡುಗಡೆಗೊಳಿಸಿ ವಿತರಣೆ ಆರಂಭಿಸಿದ್ದು, ಹೊಸ ಕಾರು ಆಕರ್ಷಕ ಬೆಲೆ ಮತ್ತು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 50 ಸಾವಿರ ಗ್ರಾಹಕರಿಂದ ಬುಕ್ಕಿಂಗ್ ಪಡೆದುಕೊಂಡಿದೆ. ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಹೊಸ ಕಾರು ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಹೊಸ ಕಾರು ಖರೀದಿಗೆ ಲಭ್ಯವಿದೆ. ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.99 ಲಕ್ಷ ಬೆಲೆ ಹೊಂದಿದ್ದು, ಇದು ಈ ವಿಭಾಗದ ಕಾರುಗಳಲ್ಲೇ ಇದು ಅತಿ ಕಡಿಮೆ ಬೆಲೆಯಾಗಿರುವುದರಿಂದ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ.

ವರ್ಷದ ಶ್ರೇಷ್ಠ ಕಾರು ಮಾದರಿಯಾಗಿ ಹೊರಹೊಮ್ಮಿದ ಎಕ್ಸ್‌ಯುವಿ700
ಹಲವಾರು ವಿಶೇಷತೆಗಳೊಂದಿಗೆ ಅತ್ಯುತ್ತಮ ಕಾರು ಮಾದರಿಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ಎಕ್ಸ್‌ಯುವಿ700 ಮಾದರಿಗೆ ಇದೀಗ ಇಂಡಿಯನ್ ಕಾರ್ ಆಫ್ ದಿ ಇಯರ್(ICOTY) ಪ್ರಶಸ್ತಿ ಬಾಚಿಕೊಂಡಿದೆ. 2022ರ ಇಂಡಿಯನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದ ಎಂಜಿ ಆಸ್ಟರ್, ಸ್ಕೋಡಾ ಆಕ್ಟಿವಿಯಾ, ಫೋರ್ಸ್ ಗೂರ್ಖಾ, ಸುಜುಕಿ ಸೆಲೆರಿಯೊ, ಸಿಟ್ರನ್ ಸಿ5, ಸ್ಕೋಡಾ ಕುಶಾಕ್, ರೆನಾಲ್ಟ್ ಕಿಗರ್, ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ಟಾಟಾ ಪಂಚ್ ಕಾರುಗಳನ್ನು ಹಿಂದಿಕ್ಕಿ ಎಕ್ಸ್‌ಯುವಿ700 ಮೊದಲ ಸ್ಥಾನ ಪಡೆದುಕೊಂಡಿದೆ.

ಹೊಸ ಕಾರುಗಳ ಎಂಜಿನ್ ಆಯ್ಕೆ, ಬೆಲೆ, ಕಾರ್ಯಕ್ಷಮತೆ, ತಾಂತ್ರಿಕ ಅಂಶಗಳು ಮತ್ತು ಉತ್ಪಾದನಾ ಗುಣಮಟ್ಟವನ್ನು ಆಧರಿಸಿ ಈ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದ್ದು, 125 ಅಂಕಗಳಲ್ಲಿ 101 ಅಂಕಗಳನ್ನು ಪಡೆದುಕೊಂಡ ಮಹೀಂದ್ರಾ ಎಕ್ಸ್‌ಯುವಿ700 ಮೊದಲ ಸ್ಥಾನ ಗಳಿಸಿದರೆ 89 ಅಂಕಗಳೊಂದಿಗೆ ಫೋಕ್ಸ್‌ವ್ಯಾಗನ್ ಟೈಗುನ್ ಎರಡನೇ ಸ್ಥಾನವನ್ನು ಮತ್ತು 71 ಅಂಕಗಳೊಂದಿಗೆ ಟಾಟಾ ಪಂಚ್ ಮೂರನೇ ಸ್ಥಾನಗಳಿಸಿದೆ.

ಬಿಡುಗಡೆಯಾಗಲಿದೆ ಹೊಸ ಮಾರುತಿ ಸುಜುಕಿ ಎಸ್-ಕ್ರಾಸ್
ಸುಜುಕಿ ಕಂಪನಿಯು ತನ್ನ ನ್ಯೂ ಜನರೇಷನ್ ಎಸ್-ಕ್ರಾಸ್ ಕಾರನ್ನು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದ್ದು, ಈ ಹೊಸ ಎಸ್-ಕ್ರಾಸ್(Suzuki S-Cross) ಸಮಗ್ರ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ನವೀಕರಣಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ಹೊಸ ಎಸ್-ಕ್ರಾಸ್ ಕಾರನ್ನು ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಗೊಳಿಸಬಹುದಾಗಿದ್ದು, ಹೊಸ ಕಾರುಗಳು ಸಾಕಷ್ಟು ನವೀಕೃತ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದೆ.

ಹೊಸ ಎಸ್-ಕ್ರಾಸ್ ಸಂಪೂರ್ಣವಾಗಿ ಪರಿಷ್ಕೃತ ಮುಂಭಾಗದ ಫಾಸಿಯಾದೊಂದಿಗೆ ಬರುತ್ತದೆ. ಇದು ಪಿಯಾನೋ-ಬ್ಲ್ಯಾಕ್ ಗ್ರಿಲ್ ಜೊತೆಗೆ ಹೊಸ ಬಂಪರ್, ಟ್ವೀಕ್ ಮಾಡಲಾದ ಟ್ರಿಪಲ್-ಬೀಮ್ ಹೆಡ್‌ಲ್ಯಾಂಪ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಅಸೆಂಬ್ಲಿಯನ್ನು ಕೂಡ ಒಳಗೊಂಡಿದೆ. ಇದರ ಬಾನೆಟ್ ಮೊದಲಿಗಿಂತ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಇದು ವಿಶಾಲವಾದ ಸೆಂಟ್ರಲ್ ಏರ್ ಇನ್ ಟೆಕ್ ಮತ್ತು ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಕೂಡಾ ಹೊಂದಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಸಿಟಿ ಹೈಬ್ರಿಡ್
ಹೋಂಡಾ ಪೂರ್ಣ ಹೈಬ್ರಿಡ್ ಎಂಜಿನ್ ಜೊತೆಗೆ ಸಿಟಿ ಹೈಬ್ರಿಡ್‌ನಲ್ಲಿ ಸೆನ್ಸಿಂಗ್ ತಂತ್ರಜ್ಞಾನವನ್ನು ಬಿಡುಗಡೆ ಮಾಡಲಿದೆ. ಹೋಂಡಾ ಸೆನ್ಸಿಂಗ್ ತಂತ್ರಜ್ಞಾನವು ಭಾರತದಲ್ಲಿ ಹೋಂಡಾ ಕಾರು ಮತ್ತು ಎಸ್‌ಯುವಿಯಲ್ಲಿ ಪ್ರಸ್ತುತ ಲಭ್ಯವಿಲ್ಲದ ಅನೇಕ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವ್ಯವಸ್ಥೆಗಳನ್ನು ಒಳಗೊಂಡಿರುವುದಾಗಿ ಕಂಪನಿ ತಿಳಿಸಿದೆ.

ಇದಲ್ಲದೆ, ಮುಂಬರುವ ಹೋಂಡಾ ಸಿಟಿ, ಹೈಬ್ರಿಡ್ ಸ್ಟ್ಯಾಂಡರ್ಡ್ ಸಿಟಿಯಲ್ಲಿ ಕಂಡುಬರುವ ಬಹುತೇಕ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ, ಇದರಲ್ಲಿ ತುರ್ತು ಬ್ರೇಕಿಂಗ್, ಫ್ರಂಟ್ ಕೊಲಿಷನ್ ಎಚ್ಚರಿಕೆ ವ್ಯವಸ್ಥೆ, ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ ಮತ್ತು ಎಬಿಎಸ್ ಸೇರಿವೆ.


Click it and Unblock the Notifications