ವಾರದ ಪ್ರಮುಖ ಸುದ್ದಿ: ವಾಹನ ವಿಮೆಯಲ್ಲಿ ಮಹತ್ವದ ಬದಲಾವಣೆ, ಹೊಸ ಕಾರುಗಳ ಬೆಲೆ ಭಾರೀ ಹೆಚ್ಚಳ..
ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಕೇಂದ್ರ ಸರ್ಕಾರವು ವಿಮೆ ಪ್ರೀಮಿಯಂಯಲ್ಲಿ ಬದಲಾವಣೆ ಪರಿಚಯಿಸಿದ್ದು, ಇದರ ಜೊತೆಗೆ ಆಟೋ ಉದ್ಯಮಕ್ಕೆ ಸಂಬಂಧಿತ ಕೆಲವು ಬದಲಾವಣೆಗಳನ್ನು ಘೋಷಣೆ ಮಾಡಲಾಗಿದೆ.
ಇನ್ನುಳಿದಂತೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಕಾರುಗಳ ಬೆಲೆ ಏರಿಕೆ ಹೆಚ್ಚು ಚರ್ಚಿತ ವಿಷಯವಾಗಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಈ ವಾರದ ಪ್ರಮುಖ ಸುದ್ದಿಗಳ ಮತ್ತಷ್ಟು ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

IRDAI ಹೊಸ ನಿಯಮ
ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರವು(IRDAI) ಜಾರಿಗೆ ತರುತ್ತಿರುವ ಹೊಸ ವಿಮಾ ನಿಯಮವು ವಾಹನ ಮಾಲೀಕರಿಗೆ ಅತ್ಯುತ್ತಮ ಆಯ್ಕೆಯಾಗಲಿದ್ದು, ಹೊಸ ನಿಯಮವು ವಿಮಾ ಮೊತ್ತವನ್ನು ನಿಮ್ಮ ಚಾಲನಾ ವಿಧಾನ ಅನುಸರಿಸಿ ನಿರ್ಧರಿಸುತ್ತದೆ. ವಾಹನಗಳಿಗೆ ಪಾವತಿಸುವ ವಿಮೆಯು ಚಾಲನಾ ವೈಖರಿಯನ್ನು ಆಧರಿಸಿ ಮೊತ್ತ ನಿರ್ಧಾರವಾಗಲಿದ್ದು, ನೀವು ಚೆನ್ನಾಗಿ ಮತ್ತು ಸುರಕ್ಷಿತವಾಗಿ ವಾಹನ ಚಲಾಯಿಸಿದರೆ ನೀವು ಕಡಿಮೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ ಪ್ರತಿಯೊಂದು ವಾಹನವು ಕೂಡಾ ಮೋಟಾರ್ ವೆಹಿಕಲ್ ಕಾಯ್ದೆ ಅನ್ವಯ ವಿವಿಧ ವರ್ಗಗಳಿಗೆ ಅನುಗುಣವಾಗಿ ವಿಮೆಯನ್ನು ಹೊಂದಿರಲೇಬೇಕಿರುವುದು ಕಡ್ಡಾಯವಾಗಿದೆ. ಇದು ವಾಹನಗಳಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದ್ದು, ವಾಹನ ಮಾದರಿಗಳನ್ನು ಆಧರಿಸಿ ಪ್ರೀಮಿಯಂ ಪಾವತಿ ನಿರ್ಧಾರವಾಗುತ್ತದೆ. ಹಾಗೆಯೇ ಇನ್ಮುಂದೆ ನೀವು ವಾಹನವನ್ನು ಚಾಲನೆಯನ್ನು ಆಧರಿಸಿ ವಿಮಾ ಮೊತ್ತವು ನಿರ್ಧಾರವಾಗಲಿದ್ದು, 'ನೀವು ಚಾಲನೆ ಮಾಡಿದ ರೀತಿಯನ್ನು ಆಧರಿಸಿ ಪ್ರೀಮಿಯಂ ಪಾವತಿಸಿಸಬೇಕಾಗುತ್ತದೆ.

ಭವಿಷ್ಯದಲ್ಲಿ ಪೆಟ್ರೊಲ್ ಲಭ್ಯವಿರಲ್ಲ
ಇನ್ನು ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಸಂಪೂರ್ಣವಾಗಿ ಕಣ್ಮರೆಯಾಗಲಿದ್ದು, ಅದಕ್ಕೆ ಬದಲಾಗಿ ಎಥೆನಾಲ್ ಇಂಧನವನ್ನು ಬಳಸಬೇಕಾಗುತ್ತದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸಮಾರಂಭವೊಂದರಲ್ಲಿ ಭವಿಷ್ಯದ ಇಂಧನ ಲಭ್ಯತೆ ಕುರಿತು ಮಾತನಾಡಿದ್ದಾರೆ.

ಈಗಾಗಲೇ ಇಂಧನಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಮತ್ತು ಡೀಸೆಲ್, ಇವೆರಡೂ ಸಹ ಹಲವಾರು ಬಾರಿ ನೂರರ ಗಡಿ ದಾಟಿದೆ. ಇದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರುತ್ತಿವೆಯಾದರೂ ಯಾವುದು ಸಹ ಅಷ್ಟೊಂದು ದೊಡ್ಡ ಮಟ್ಟಿನ ಯಶಸ್ಸನ್ನು ಗಳಿಸುತ್ತಿಲ್ಲ. ಹೀಗಿರುವಾಗ ನಿತಿನ್ ಗಡ್ಕರಿಯವರು ಎಥೆನಾಲ್ ಇಂಧನದ ಕುರಿತಾಗಿ ಮಾತನಾಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಬಯೋ ಎಥೆನಾಲ್ ಇಂಧನಗಳೇ ಭಾರತದಲ್ಲಿ ಪೆಟ್ರೋಲ್ ಉತ್ಪನ್ನಗಳಿಗೆ ಬದಲಿಯಾಗಲಿದೆ. ಹಾಗೂ ಇದನ್ನೇ ಮುಂದಿನ ದಿನಗಳಲ್ಲಿ ಎಲ್ಲಾ ವಾಹನಗಳಲ್ಲೂ ಬಳಸಲಾಗುತ್ತದೆ. ಈಗಾಗಲೇ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಇಂಧನ ತಯಾರಕಾ ಕಂಪನಿಗಳಿಗೆ ಪ್ಲೆಕ್ಸಿಬಲ್ ಇಂಧನ ತಯಾರಿಸಲು ಸಲಹೆ ನೀಡಿದ್ದಾರೆ.

ಕಡ್ಡಾಯವಾಗಿ ಜಾರಿಗೆ ಬರಲಿದೆ ಸೇಫ್ಟೀ ರೇಟಿಂಗ್
ಭಾರತದಲ್ಲಿ ಶೀಘ್ರವೇ ಕಾರುಗಳಲ್ಲಿನ ಸುರಕ್ಷತೆಯ ಕುರಿತಾದ ಹೊಸ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತ ಸರ್ಕಾರವು ಆದೇಶವನ್ನು ಹೊರಡಿಸಲಿದೆ. ಈಗಾಗಲೇ ಸರ್ಕಾರವೂ ಕಾರ್‌ನ ಸುರಕ್ಷತೆಯ ಫೀಚರ್‌ಗೆ ಅನುಗುಣವಾಗಿ ಮತ್ತು ಅವುಗಳ ಕಾರ್ಯಕ್ಷಮತೆಗಳನ್ನು ಮಾನದಂಡವನ್ನಾಗಿರಿಸಿಕೊಂಡು ಸ್ಟಾರ್ ರೇಟಿಂಗನ್ನು ನೀಡುವ ನಿರ್ಧಾರವನ್ನು ಕೈಗೊಂಡಿದೆ.

ಕಾರು ಸುರಕ್ಷತೆಯ ಕುರಿತಾದ ನಿಯಮಗಳು ಭಾರತ್ ಎನ್‌ಸಿಪಿಎ ಅಥವಾ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ ನಿಯಮದಡಿಯಲ್ಲಿ ಜಾರಿಗೆ ತರಲಿದೆ. ಮೊದಲಿಗೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಯೋಜನೆ ಇರಲಿಲ್ಲ. ಆದರೆ ಈಗ ಇದು ಅವಶ್ಯ ಎಂದು ಸರಕಾರಕ್ಕೆ ಮನದಟ್ಟಾಗಿದೆ. ಯಾಕೆಂದರೆ ಸೇಫ್ಟೀ ಫೀಚರ್‌ಗಳು ಕಾರಿನ ಒಂದು ಅತ್ಯಾವಶ್ಯಕ ಘಟಕವಾಗಿದೆ.

ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ
ಹೊಸ ವರ್ಷದ ಆರಂಭದಲ್ಲಿ ಮತ್ತು ಮಾರ್ಚ್ ಮಧ್ಯಂತರದಲ್ಲಿ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದ್ದ ಪ್ರಮುಖ ಕಾರು ಕಂಪನಿಯು ಇದೀಗ ವರ್ಷದಲ್ಲಿ ಮೂರನೇ ಬಾರಿಗೆ ಬೆಲೆ ಏರಿಕೆ ಘೋಷಣೆ ಮಾಡಿವೆ. ಹೊಸ ಕಾರುಗಳ ಕೆಲವು ಕಾರಣಾಂತರಗಳಲ್ಲಿ ನಿರಂತರವಾಗಿ ಬೆಲೆ ಹೆಚ್ಚಳ ಪಡೆದುಕೊಳ್ಳುತ್ತಿದ್ದು, ಹೊಸ ದರ ಪಟ್ಟಿಯಲ್ಲಿ ಪ್ರಮುಖ ಕಾರುಗಳು ರೂ. 3 ಸಾವಿರದಿಂದ ರೂ. 60 ಸಾವಿರ ತನಕ ಹೆಚ್ಚಳ ಪಡೆದುಕೊಂಡಿವೆ.

ಐಷಾರಾಮಿ ಕಾರುಗಳ ಬೆಲೆಯಲ್ಲಿ ರೂ. 40 ಸಾವಿರದಿಂದ ರೂ. 1.80 ಲಕ್ಷದ ತನಕ ದರ ಹೆಚ್ಚಳವಾಗಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ರೆನಾಲ್ಟ್ ಕಿಗರ್ ಹೊಸ ಮೈಲಿಗಲ್ಲು
ರೆನಾಲ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಇದೀಗ ಹೊಸ ಕಾರಿನ ಉತ್ಪಾದನೆಯಲ್ಲಿ 50 ಸಾವಿರ ಯುನಿಟ್ ಉತ್ಪಾದನಾ ಮೈಲಿಗಲ್ಲು ಸಾಧಿಸಿದೆ. ಹೊಸ ಮೈಲಿಗಲ್ಲು ಸಂದರ್ಭಕ್ಕಾಗಿ ಕಂಪನಿಯು ಕಿಗರ್ ಕಾರು ಮಾದರಿಗಾಗಿ ಸ್ಟೆಲ್ತ್ ಬ್ಲ್ಯಾಕ್ ಬಣ್ಣದ ಆಯ್ಕೆ ನೀಡಿದ್ದು, ಹೊಸ ಬಣ್ಣದ ಆಯ್ಕೆಯು ಸ್ಪೋರ್ಟಿ ಸ್ಟೈಲ್ ಹೊಂದಿರುವ ಕಿಗರ್ ಮಾದರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಕಿಗರ್ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.62 ಲಕ್ಷ ಬೆಲೆ ಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ರೆನಾಲ್ಟ್ ಕಂಪನಿಗೆ ಹೊಸ ಕಿಗರ್ ಕಾರು ಮಾದರಿಯು ಉತ್ತಮ ಬೇಡಿಕೆ ತಂದುಕೊಡುತ್ತಿದೆ.

ಆಸ್ಟರ್ ಬೆಸ್ ವೆರಿಯೆಂಟ್ ಬಿಡುಗಡೆ
ಆಸ್ಟರ್ ಕಾರು ಮಾದರಿಯ ಬೆಲೆಯಲ್ಲಿ ಕಳೆದ ತಿಂಗಳ ಹಿಂದಷ್ಟೇ ಬೆಲೆ ಏರಿಕೆ ಮಾಡಿದ್ದ ಎಂಜಿ ಮೋಟಾರ್ ಕಂಪನಿಯು ಇದೀಗ ಬೆಲೆ ಕಡಿತದೊಂದಿಗೆ ಹೊಸ ವೆರಿಯೆಂಟ್ ಪರಿಚಯಿಸಿದ್ದು, ಹೊಸ ವೆರಿಯೆಂಟ್‌ನಲ್ಲಿ ಕಂಪನಿಯು ಕೆಲವು ತಾಂತ್ರಿಕ ಸೌಲಭ್ಯಗಳನ್ನು ಕೈಬಿಟ್ಟಿದೆ. ಸೆಮಿ ಕಂಡಕ್ಟರ್ ಕೊರತೆಯ ಪರಿಣಾಮ ಹೊಸ ಕಾರು ಮಾದರಿಯ ಪೂರೈಕೆ ಹೆಚ್ಚಿಸಲು ಹೊಸ ವೆರಿಯೆಂಟ್ ಪರಿಚಯಿಸಲಾಗಿದ್ದು, ಹೊಸ ವೆರಿಯೆಂಟ್‌ನಲ್ಲಿ ಪ್ರಮುಖ ಸುರಕ್ಷಾ ಸೌಲಭ್ಯಗಳನ್ನು ತೆಗೆದುಹಾಕಲಾಗಿದೆ.

ಹೊಸ ವೆರಿಯೆಂಟ್‌ಗಳು ಸುಮಾರು ರೂ. 6 ಸಾವಿರದಿಂದ ರೂ. 12 ಸಾವಿರ ತನಕ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಮಾದರಿಯು ಪೆಟ್ರೋಲ್-ಮ್ಯಾನ್ಯುವಲ್ ಸಂಯೋಜನೆಯಲ್ಲಿ ಮಾತ್ರ ಲಭ್ಯವಿರುತ್ತವೆ. ಸೆಮಿಕಂಡಕ್ಟರ್ ಚಿಪ್ ಸಮಸ್ಯೆಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿರುವ ಎಂಜಿ ಕಂಪನಿಯು ಪ್ರಮುಖ ಸುರಕ್ಷಾ ವೈಶಿಷ್ಟ್ಯಗಳನ್ನು ಬಿಟ್ಟುಕೊಡಲು ಸಿದ್ಧವಿರುವ ಗ್ರಾಹಕರಿಗಾಗ 'EX' ರೂಪಾಂತರಗಳನ್ನು ಶೀಘ್ರದಲ್ಲೇ ವಿತರಿಸುವ ಭರವಸೆ ನೀಡಿದೆ.

ಅಲ್ಕಾಜರ್ ಬೆಸ್ ವೆರಿಯೆಂಟ್ ಬಿಡುಗಡೆ
ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಪ್ರೆಸ್ಟೀಜ್ ಎಕ್ಸಿಕ್ಯೂಟಿವ್ ಎಂದು ಕರೆಯಲ್ಪಡುವ ಅಲ್ಕಾಜರ್‌ನ ಹೊಸ ಬೇಸ್ ವೆರಿಯೆಂಟ್ ಅನ್ನು ಪರಿಚಯಿಸಿದೆ. ಈ ಹೊಸ ಹ್ಯುಂಡೈ ಅಲ್ಕಾಜರ್ ಪ್ರೆಸ್ಟೀಜ್ ಎಕ್ಸಿಕ್ಯೂಟಿವ್ ವೆರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15.89 ಲಕ್ಷವಾಗಿದೆ.

ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯ ಹಿಂದಿನ ಮೂಲ ರೂಪಾಂತರಕ್ಕೆ ಹೋಲಿಸಿದರೆ, ಇದು ರೂ.55,000 ಅಗ್ಗವಾಗಿದೆ. ಹ್ಯುಂಡೈ ಅಲ್ಕಾಜರ್ ಹೆಚ್ಚು ಜನಪ್ರಿಯವಾದ ಕ್ರೆಟಾ ಮಿಡ್ ಸೈಜ್ ಎಸ್‍ಯುವಿಯನ್ನು ಆಧರಿಸಿದ ಆವೃತ್ತಿಯಾಗಿದೆಮತ್ತು ಇದು ಎರಡು ಪ್ರಯಾಣಿಕರಿಗೆ ಹೆಚ್ಚುವರಿ ಆಸನಗಳನ್ನು ನೀಡುವಾಗ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ. ಅಲ್ಕಾಜರ್ ಅನ್ನು ಆರು ಅಥವಾ ಏಳು-ಆಸನಗಳನ್ನು ಹೊಂದಬಹುದು ಮತ್ತು ಪ್ರೆಸ್ಟೀಜ್, ಪ್ರೆಸ್ಟೀಜ್ (O), ಪ್ಲಾಟಿನಂ, ಪ್ಲಾಟಿನಂ (O), ಸಿಗ್ನೇಚರ್ ಮತ್ತು ಸಿಗ್ನೇಚರ್ (O) ಟ್ರಿಮ್ ಹಂತಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೇಟ್ ಕೂಪೆ ವಿತರಣೆ
ಇಟಲಿಯ ಸೂಪರ್‌ಕಾರ್ ನಿರ್ಮಾಣ ಕಂಪನಿಯಾದಂತಹ ಲ್ಯಾಂಬೋರ್ಗಿನಿಯು ಭಾರತದ ಮೊದಲ ಅವೆಂಟಡಾರ್ ಅಲ್ಟಿಮೇಟ್ ಕೂಪೆ ಯನ್ನು ಭಾರತದ ಗ್ರಾಹಕರೊಬ್ಬರಿಗೆ ವಿತರಣೆ ಮಾಡಿದೆ. ಇದಕ್ಕೂ ಮುಂಚೆ ಲ್ಯಾಂಬೋರ್ಗಿನಿಯು ಭಾರತಕ್ಕೆ ಲಿಮಿಟೆಡ್ ಎಡಿಷನ್‌ನ 2 ಅವೆಂಟಡಾರ್ ಅಲ್ಟಿಮೇಟ್ ರೋಡ್‌ಸ್ಟರ್ ಕಾರನ್ನು ವಿತರಿಸಿತ್ತು.

ಭಾರತಕ್ಕೆ ಬಂದಿರುವಂತಹ ಮೊದಲ ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೇಟ್ ಕೂಪೆ ಕಾರು ಇಟಾಲಿಯನ್ ಮಾರ್ಕ್‌ನ ಕಡು ನೇರಳೆ ಬಣ್ಣ ಹೊಂದಿದ್ದು, ಇದನ್ನು ಕಂಪನಿಯು ಐಕಾನಿಕ್ ವೋಯಿಲಾ ಪೆಸಿಫೆ ಪರ್ಪಲ್ ಕಲರ್ ಎಂದು ಹೆಸರಿಸಿದ್ದಾರೆ.ಈ ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೇಟ್ ಕೂಪೆ ಕಾರನ್ನು ಮುಂಬೈನ ಗ್ರಾಹಕರೊಬ್ಬರು ಖರೀದಿಸಿದ್ದು, ಅವೆಂಟಡಾರ್ ಅಲ್ಟಿಮೇಟ್ ರೋಡ್‌ಸ್ಟರ್ ಕಾರ್‌ನಂತೆ ಈ ಅವೆಂಟಡಾರ್ ಅಲ್ಟಿಮೇಟ್ ಕೂಪೆಯಲ್ಲೂ V12 ಎಂಜಿನ್ ಜೋಡಿಸಲಾಗಿದೆ.

ಮ್ಯಾಗ್ನೈಟ್ ರೆಡ್ ಎಡಿಷನ್ ಬುಕಿಂಗ್ ಶುರು
ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ನಿಸ್ಸಾನ್ ಕಂಪನಿಯು ಇದುವರೆಗೆ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡಿದೆ. ಹೀಗಾಗಿ ಹೊಸ ಕಾರಿಗಾಗಿ ವಿಶೇಷ ಮಾದರಿಯೊಂದು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಬಿಡುಗಡೆಯಾಗಲಿರುವ ರೆಡ್ ಎಡಿಷನ್ ಮಾದರಿಗಾಗಿ ಕಂಪನಿಯು ಇದೀಗ ಬುಕಿಂಗ್ ಆರಂಭಿಸಿದೆ.

ಬಿಡುಗಡೆಯಾಗಲಿರುವ ಹೊಸ ನಿಸ್ಸಾನ್ ಮ್ಯಾಗ್ನೈಟ್ ರೆಡ್ ಎಡಿಷನ್ ಆಕರ್ಷಕ ನೋಟದೊಂದಿಗೆ ವಿಭಿನ್ನ ಅವತಾರವನ್ನು ಹೊಂದಿರಲಿದ್ದು, ವಿಶೇಷ ಮಾದರಿಯು ಇದೇ ತಿಂಗಳು 18ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದಕ್ಕಾಗಿ ಕಂಪನಿಯು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬುಕಿಂಗ್ ಆರಂಭಿಸಿದ್ದು, ವಿಶೇಷ ಮಾದರಿಯು ಎಕ್ಸ್‌ವಿ ವೆರಿಯೆಂಟ್ ಆಧರಿಸಿ ನಿರ್ಮಾಣಗೊಂಡಿದೆ.


Click it and Unblock the Notifications