ವಾರದ ಸುದ್ದಿ: ಹೊಸ ಸ್ಲಾವಿಯಾ, ಕಂಪಾಸ್ ಟ್ರೈಲ್‌ಹಾಕ್ ಬಿಡುಗಡೆ, ಇವಿ ವಾಹನ ಖರೀದಿಗೆ ಸಬ್ಸಡಿ ಘೋಷಣೆ..
ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯ ಪರಿಣಾಮ ಇವಿ ವಾಹನ ಬಳಕೆಯು ದ್ವಿಗುಣಗೊಂಡಿದ್ದು, ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆ ಆಧರಿಸಿ ಇವಿ ವಾಹನಗಳ ಬಿಡುಗಡೆ ಪ್ರಕ್ರಿಯೆ ಕೂಡಾ ಜೋರಾಗುತ್ತಿದೆ. ಜೊತೆಗೆ ಸಾಮಾನ್ಯ ಕಾರುಗಳ ಬಿಡುಗಡೆ ಪ್ರಕ್ರಿಯೆ ಕೂಡಾ ಜೋರಾಗಿದ್ದು, ಈ ವಾರದ ಪ್ರಮುಖ ಸುದ್ದಿಗಳಲ್ಲಿ ವಿವಿಧ ಹೊಸ ವಾಹನಗಳ ಬಿಡುಗಡೆಯ ಮಾಹಿತಿ ಜೊತೆಗೆ ಆಟೋ ಉದ್ಯಮದಲ್ಲಿನ ಈ ವಾರದ ಬೆಳವಣಿಗೆಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಕರ್ನಾಟಕ ಬಜೆಟ್ 2022
2022-2023ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಾಗಿದ್ದು, ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಳ ಮಾಡದೆ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಪ್ರತಿ ಬಜೆಟ್‌ನಲ್ಲೂ ಆಯವ್ಯಯ ಮಂಡನೆಗೆ ತಕ್ಕಂತೆ ನೇರವಾಗಿ ಆದಾಯ ಕ್ರೂಢಿಕರಿಸುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಿಸಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಹೊಸ ತೆರಿಗೆ ವಿಧಿಸದೆ ಬಜೆಟ್ ಮಾಡಲಾಗಿದ್ದು, ಎಲ್ಲಾ ವಲಯಗಳ ಅಭಿವೃದ್ದಿಗೂ ಹೆಚ್ಚಿನ ಅನುದಾನ ನೀಡಲಾಗಿದೆ.

ಹೊಸ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಕೃಷಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಪ್ರತಿ ಎಕರೆಗೆ ರೂ.250 ಡೀಸೆಲ್ ಖರೀದಿಗೆ ಸಬ್ಸಡಿ ನೀಡಲು ನಿರ್ಧರಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸಲು 1.50 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳ ಖರೀದಿಗೆ ರೂ. 50 ಸಾವಿರ ಸಬ್ಸಡಿ ನೀಡುವುದಾಗಿ ರಾಜ್ಯ ಸರ್ಕಾರವು ಘೋಷಣೆ ಮಾಡಿದೆ.

ಇದಲ್ಲದೇ ಬೆಂಗಳೂರಿನ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆಯನ್ನು ತಡೆಯಲು ಸಾರ್ವಜನಿಕ ಸಾರಿಗೆ ಬಲಪಡಿಸುತ್ತಿರುವ ರಾಜ್ಯ ಸರ್ಕಾರವು ಮೂರನೇ ಹಂತದ ಮೆಟ್ರೋ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದಲ್ಲದೆ ರಾಜ್ಯ ಸರ್ಕಾರವು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಪ್ರಮುಖ ರಸ್ತೆ ಕಾಮಗಾರಿಗಳಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿ ವಾಹನ ಚಾಲನೆಯನ್ನು ಸರಳಗೊಳಿಸುತ್ತಿದೆ.

ದೇಶದ ಅತಿದೊಡ್ಡ ಇವಿ ಚಾರ್ಜಿಂಗ್ ನಿಲ್ದಾಣ ಆರಂಭ
ಗುರುಗ್ರಾಮ್ ಮೂಲದ ಅಲೆಕ್ಟ್ರಿಫೈ ಪ್ರೈವೇಟ್ ಲಿಮಿಟೆಡ್ ಕಂಪನಿಯು ಇವಿ ವಾಹನಗಳಿಗೆ ಪೂರಕವಾಗಿ ಬೃಹತ್ ಪ್ರಮಾಣದ ಚಾರ್ಜಿಂಗ್ ನಿಲ್ದಾಣಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಕಂಪನಿಯು ತನ್ನ ಎರಡನೇ ಚಾರ್ಜಿಂಗ್ ನಿಲ್ದಾಣವನ್ನು ಇದೀಗ ಅಧಿಕೃತವಾಗಿ ಆರಂಭಿಸಿದೆ. ದೆಹಲಿ-ಜೈಪುರ ಇ-ಹೆದ್ದಾರಿಯಲ್ಲಿ ನೆಲೆಗೊಂಡಿರುವ ಈ ಚಾರ್ಜಿಂಗ್ ನಿಲ್ದಾಣವು ಒಟ್ಟು 141 ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, 24 ಗಂಟೆಗಳಲ್ಲಿ ಕನಿಷ್ಠ 1 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಬಹುದಾಗಿದೆ.

ಅಲೆಕ್ಟ್ರಿಫೈ ಪ್ರೈವೇಟ್ ಲಿಮಿಟೆಡ್ ಕಂಪನಿಯು ಮುಂದಿನ ಮೂರು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 60 ಚಾರ್ಜಿಂಗ್ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಇದೇ ತಿಂಗಳಾಂತ್ಯಕ್ಕೆ 20ಕ್ಕೂ ನಿಲ್ದಾಣಗಳು ಕಾರ್ಯನಿರ್ವಹಣೆಗೆ ಸಿದ್ದವಾಗಿವೆ.

'ಎಂಜಿ ಚಾರ್ಜ್' ಆರಂಭ
ಎಂಜಿ ಮೋಟಾರ್ ಇಂಡಿಯಾ ಚಾರ್ಜಿಂಗ್ ನಿಲ್ದಾಣಗಳನ್ನು ದೇಶಾದ್ಯಂತ ವೇಗವಾಗಿ ವಿಸ್ತರಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, 'ಎಂಜಿ ಚಾರ್ಜ್' ಯೋಜನೆ ಅಡಿಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಸುಮಾರು ಒಂದು ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಗುರಿಹೊಂದಿದೆ.

ಹೊಸ ಯೋಜನೆಗಾಗಿ ಎಂಜಿ ಮೋಟಾರ್ ಕಂಪನಿಯು ಎಲೆಕ್ಟ್ರಿಪಿ(Electreefi) ಎಕ್ಸಿಗಾಂ(Exicom) ಇಚಾರ್ಜ್‌ಬೇಸ್(Echargebays) ಮತ್ತು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ಪ್ರಮುಖ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ವಸತಿ ಸಮುಚ್ಚಯಗಳಲ್ಲೂ ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದೆ.

ಸ್ಕೋಡಾ ಸ್ಲಾವಿಯಾ ಬಿಡುಗಡೆ
ಭಾರತದಲ್ಲಿ ರ‍್ಯಾಪಿಡ್ ಸೆಡಾನ್ ಮಾದರಿಯ ಮಾರಾಟ ಕೊನೆಗೊಳಿಸುವ ಉದ್ದೇಶದಿಂದ ಹೊಸ ಸ್ಲಾವಿಯಾ ಪರಿಚಯಿಸಲಾಗಿದ್ದು, ಸ್ಲಾವಿಯಾ ಕಾರು ಬಿಡುಗಡೆಯಾಗಿರುವುದರಿಂದ ಶೀಘ್ರದಲ್ಲಿಯೇ ರ‍್ಯಾಪಿಡ್ ಸೆಡಾನ್ ಮಾರಾಟವು ಸ್ಥಗಿತಗೊಳ್ಳಲಿದೆ. ರ‍್ಯಾಪಿಡ್ ಮಾದರಿಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಮತ್ತು ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ ಸ್ಲಾವಿಯಾ ಮಾದರಿಯು ಪ್ರಮುಖ ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

ಸ್ಕೋಡಾ ಕಂಪನಿಯು ಸ್ಲಾವಿಯಾ ಸೆಡಾನ್ ಮಾದರಿಯನ್ನು 1.0-ಲೀಟರ್ ಟಿಎಸ್ಐ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, 1.0 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.39 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.79 ಲಕ್ಷ ಬೆಲೆ ಹೊಂದಿದೆ.

ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಬಿಡುಗಡೆ
ಐಷಾರಾಮಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಸ್ಥಳೀಯವಾಗಿ ನಿರ್ಮಾಣಗೊಳಿಸಿದ ಮೇಬ್ಯಾಕ್ ಎಸ್-ಕ್ಲಾಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.50 ಕೋಟಿ ಬೆಲೆ ಹೊಂದಿದೆ.

ಮೇಬ್ಯಾಕ್ ಎಸ್-ಕ್ಲಾಸ್ ಎಸ್580 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2.50 ಕೋಟಿ ಬೆಲೆ ಹೊಂದಿದ್ದರೆ ಮೇಬ್ಯಾಕ್ ಎಸ್-ಕ್ಲಾಸ್ ಎಸ್680 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 3.20 ಕೋಟಿ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯಲ್ಲಿ 4 ಮ್ಯಾಟಿಕ್ ತಂತ್ರಜ್ಞಾನ ಪ್ರೇರಿತ 9 ಸ್ಪೀಡ್ ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಎರಡು ಎಂಜಿನ್ ಆಯ್ಕೆಗಳಿದ್ದು, ಎಸ್580 ಮಾದರಿಯಲ್ಲಿ 4.0-ಲೀಟರ್ ವಿ8 ಎಂಜಿನ್ ಮತ್ತು ಎಸ್680 ಮಾದರಿಯಲ್ಲಿ 6.0-ಲೀಟರ್ ವಿ12 ಎಂಜಿನ್ ಜೋಡಿಸಲಾಗಿದೆ.

ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಹೊಸ ದಾಖಲೆ
ಗ್ರಾಹಕರ ವಿಶ್ವಾಸದಂತೆ ಹೊಸ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ನೆಕ್ಸಾನ್ ಫೇಸ್‌ಲಿಫ್ಟ್ ಮಾದರಿಯ ಬಿಡುಗಡೆಯ ನಂತರ ಹೊಸ ಕಾರಿನ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟವು 2020ರ ಮಧ್ಯಂತರದಿಂದ ಭಾರತದಲ್ಲಿ ನಿರಂತರವಾಗಿ ಹೆಚ್ಚಳವಾಗಿದ್ದು, ಇದರಲ್ಲಿ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಅಗ್ರಸ್ಥಾನ ಕಾಯ್ದಕೊಂಡಿದೆ. 2017ರ ಕೊನೆಯಲ್ಲಿ ಬಿಡುಗಡೆಯಾಗಿದ್ದ ನೆಕ್ಸಾನ್ ಕಾರು ಕಳೆದ ವರ್ಷದ ಅವಧಿಯಲ್ಲಿ ಸುಮಾರು 1.50 ಲಕ್ಷ ಯುನಿಟ್ ಮಾರಾಟಗೊಂಡಿದ್ದು, ಇದೀಗ ಉತ್ಪಾದನಾ ಪ್ರಮಾಣವು 3 ಲಕ್ಷ ಯುನಿಟ್‌ಗೆ ತಲುಪಿದೆ.

ಮಾರುತಿ ಸುಜುಕಿ ಬಿಡಿಭಾಗಗಳ ಆನ್‌ಲೈನ್ ಸೇವೆ ಆರಂಭ!
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ನೈಜ ಬಿಡಿಭಾಗಗಳ (genuine accessories) ಆನ್‌ಲೈನ್ ಮಾರಾಟವನ್ನು ದೇಶಾದ್ಯಂತ 100ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ. ಮಾರುತಿ ಸುಜುಕಿ ನೈಜ ಅಕ್ಸೆಸರಿಗಳ ಮಾರಾಟಕ್ಕಾಗಿ ಕಂಪನಿ (ಎಂಎಸ್‌ಜಿಎ) ಕಳೆದ ವರ್ಷವೇ ವೆಬ್‌ಸೈಟ್ ಅನ್ನು ಆರಂಭಿಸಿದೆ.

ಆರಂಭದಲ್ಲಿ ಪರೀಕ್ಷಾರ್ಥವಾಗಿ ದೆಹಲಿ ಮತ್ತು ಎನ್‌ಸಿಆರ್‌ನ ಗ್ರಾಹಕರು ಮಾತ್ರ ಆನ್‌ಲೈನ್‌ನಲ್ಲಿ ಅಕ್ಸೆಸರಿಗಳನ್ನು ಖರೀದಿಸಬಹುದಾಗಿತ್ತು. ಇದೀಗ ಕಂಪನಿಯು ಈ ಸೇವೆಯನ್ನು 100ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ. ಬಳಕೆದಾರರು ವಾಹನ ಮಾದರಿ, ಪ್ರಕಾರ ಮತ್ತು ಉತ್ಪನ್ನ ವರ್ಗದ ಆಧಾರದ ಮೇಲೆ ಅಕ್ಸೆಸರಿಗಳನ್ನು ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ.

ಆಲ್‌ಟ್ರೊಜ್ ಡಿಸಿಎ ಬುಕ್ಕಿಂಗ್ ಆರಂಭ
ಟಾಟಾ ಕಂಪನಿಯು ಆಲ್‌ಟ್ರೊಜ್ ಕಾರು ಮಾದರಿಯ ಎಕ್ಸ್‌ಟಿ, ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ಮಾದರಿಗಳ 1.2 ಲೀಟರ್ ಪೆಟ್ರೋಲ್ ಆವೃತ್ತಿಯಲ್ಲಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮಾದರಿಯ ಹೈ ಎಂಡ್ ಮಾದರಿಗಳಲ್ಲಿ ಮಾತ್ರ ಎಎಂಟಿ ಆಯ್ಕೆ ಲಭ್ಯವಿರಲಿದೆ ಎನ್ನಲಾಗಿದೆ.

ಹೊಸ ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಗಾಗಿ ಕಂಪನಿಯು ಈಗಾಗಲೇ ರೂ.21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಸಹ ಚಾಲನೆ ನೀಡಿದ್ದು, ಇದೀಗ ಕಂಪನಿಯು ಹೊಸ ಕಾರು ಬಿಡುಗಡೆ ಮುನ್ನ ಹೊಸ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಡಿಸಿಎ ಮಾದರಿಯ ಜಾಹೀರಾತು ಪ್ರಕಟಿಸಿದೆ.


Click it and Unblock the Notifications