ಟ್ರಕ್‌ಗಳಿಗೆ AC ಕಡ್ಡಾಯ! ಲಾರಿ ಡ್ರೈವರ್‌ಗಳು ಆತನಿಗೆ ದೇವಸ್ಥಾನ ಕಟ್ಟಲು ಹೊರಟಿದ್ದಾರೆ!
ಭಾರತದಲ್ಲಿ ಕಾರ್ಯನಿರ್ವಹಿಸುವ ಕಾರ್ಗೋ N2 ಮತ್ತು N3 ಟ್ರಕ್‌ಗಳಿಗೆ AC ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ಮುಂಬರುವ ಬೃಹತ್ ಟ್ರಕ್‌ಗಳಲ್ಲಿ ತಯಾರಕರು ಎಸಿಯನ್ನು ಪ್ರಮಾಣಿತವಾಗಿ ನೀಡಲಿದ್ದಾರೆ.
ಟ್ರಕ್ ಡ್ರೈವರ್‌ಗಳ ಕೆಲಸ ತುಂಬಾ ಶೋಚನೀಯವಾಗಿರುತ್ತದೆ, ನಿತ್ಯ 43-47 ಡಿಗ್ರಿಗಳ ಕಠಿಣ ತಾಪಮಾನದಲ್ಲೂ ಟ್ರಕ್ ಚಾಲನೆ ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರಿಗೂ ಆರಮದಾಯಕ ಚಾಲನಾ ಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಈ ನಿಯಮವನ್ನು ತಂದಿದ್ದು, ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್‌ಗಳನ್ನು ಶೀಘ್ರದಲ್ಲೇ ನೋಡಲಿದ್ದೇವೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸರ್ಕಾರವು ಕರಡು ಕಾನೂನಿಗೆ ಅನುಮೋದನೆ ನೀಡಿದೆ. ಈ ಮಸೂದೆಯ ಪ್ರಕಾರ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ N2 ಮತ್ತು N3 ಟ್ರಕ್‌ಗಳ ಕ್ಯಾಬಿನ್‌ನಲ್ಲಿ ಎಸಿ ಕಡ್ಡಾಯಗೊಳಿಸಬೇಕು. ಹೊಸ ಟ್ರಕ್‌ಗಳನ್ನು ತಯಾರಿಸುವ ಕಂಪನಿಗಳು ಇದನ್ನು ಅನುಸರಿಸಬೇಕು ಮತ್ತು ನಾನ್-ಎಸಿ ಟ್ರಕ್‌ಗಳನ್ನು ಮಾರಾಟ ಮಾಡಬಾರದು ಎಂದು ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಭಾರತದಲ್ಲಿ ರಸ್ತೆ ಸುರಕ್ಷತೆಯಲ್ಲಿ ಟ್ರಕ್ ಚಾಲಕರು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಹೆಚ್ಚು ದೂರ ಪ್ರಯಾಣಿಸುವವರು, ಈ ನಿರ್ಧಾರ ಟ್ರಕ್ ಚಾಲಕರಿಗೆ ಆರಾಮದಾಯಕ ಕೆಲಸದ ಪರಿಸ್ಥಿತಿಗಳನ್ನು ಒದಗಿಸುತ್ತದೆ. ಇದೊಂದು ಮೈಲಿಗಲ್ಲು ನಿರ್ಧಾರ ಎಂದು ನೋಡಬೇಕು. ಈ ಕರಡು ಕಾನೂನು ಕೇಂದ್ರ ಸರ್ಕಾರದ ಚಾಲಕರ ಸಮಸ್ಯೆಗಳನ್ನು ಪರಿಹರಿಸಲು ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ನಮ್ಮ ದೇಶದ ಟ್ರಕ್ ಚಾಲಕರು 43-47 ಡಿಗ್ರಿಗಳ ಕಠಿಣ ತಾಪಮಾನದಲ್ಲಿ ವಾಹನಗಳನ್ನು ಓಡಿಸುತ್ತಾರೆ. ಚಾಲಕರ ಸ್ಥಿತಿಯನ್ನು ನಾವು ಊಹಿಸಬಹುದು. ನಾನು ಸಚಿವನಾದ ನಂತರ AC ಕ್ಯಾಬಿನ್ ಅನ್ನು ಪರಿಚಯಿಸಲು ಉತ್ಸುಕನಾಗಿದ್ದೆ. ಆದರೆ ಟ್ರಕ್‌ಗಳ ಬೆಲೆ ಹೆಚ್ಚಾಗುತ್ತದೆ ಎಂದು ಕೆಲವರು ಇದನ್ನು ವಿರೋಧಿಸಿದರು. ಇದ್ಯಾವುದನ್ನು ಲೆಕ್ಕಿಸದೆ ಎಸಿ ಕ್ಯಾಬಿನ್‌ಗಳಿಗಾಗಿ ಫೈಲ್‌ಗೆ ಸಹಿ ಹಾಕಿರುವುದಾಗಿ ಈ ಹಿಂದೆಯೂ ಗಡ್ಕರಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಇದು 2025 ಜನವರಿಯಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಅಷ್ಟರೊಳಗೆ ಲಾರಿ ತಯಾರಕರು ಇದಕ್ಕೆ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಅವರು ಪ್ರಸ್ತುತ ಸಿದ್ಧಪಡಿಸುತ್ತಿರುವ ವಿನ್ಯಾಸದಲ್ಲಿ ಇತರ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಈ ಉದ್ದೇಶಕ್ಕಾಗಿಯೇ ಈ ಅವಧಿ ನೀಡಲಾಗಿದೆ. ಇನ್ನು 15 ದಿನಗಳಲ್ಲಿ ಅಧಿಕೃತ ಅಧಿಸೂಚನೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಕಾರ್ಗೋ ಟ್ರಕ್‌ಗಳನ್ನು N1, N2 ಮತ್ತು N3 ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಎನ್1 ಟ್ರಕ್‌ಗಳು ಗರಿಷ್ಠ 3.5 ಟನ್, N2 ಟ್ರಕ್‌ಗಳು 3.5 ಟನ್ ರಿಂದ 12 ಟನ್ ತೂಕದ ಸರಕುಗಳನ್ನು ಸಾಗಿಸುವ ಟ್ರಕ್‌ಗಳಾಗಿವೆ. N 3 ಟ್ರಕ್‌ಗಳು 12 ಟನ್‌ಗಳಿಗಿಂತ ಹೆಚ್ಚು ತೂಕದ ಸರಕುಗಳನ್ನು ಸಾಗಿಸುವ ಟ್ರಕ್‌ಗಳಾಗಿವೆ.
ಈಗ ಸರ್ಕಾರದ ಆದೇಶದಂತೆ N2 ಮತ್ತು N3 ಟ್ರಕ್‌ಗಳಿಗೆ ಮಾತ್ರ AC ಕಡ್ಡಾಯವಾಗಿದೆ. ಅಂದರೆ ಈ ಟ್ರಕ್‌ಗಳು ಭಾರೀ ಸರಕನ್ನು ಹೊತ್ತು ಕಡಿಮೆ ವೇಗದಲ್ಲಿ ದೂರದ ಪ್ರಯಾಣ ಮಾಡುತ್ತವೆ. ಇದರಿಂದ ಚಾಲಕರಿಗೆ ಸೌಕರ್ಯಕ್ಕೂ ಆದ್ಯತೆ ನೀಡಿ ಈ ಟ್ರಕ್‌ಗಳಲ್ಲಿ ಎಸಿ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.


Click it and Unblock the Notifications