ಇ-ಕಾಮರ್ಸ್ ದೈತ್ಯ ಅಮೆಜಾನ್‍ನ ಮೊದಲ ಎಲೆಕ್ಟ್ರಿಕ್ ಕಾರು: ಡ್ರೈವರ್ ಬೇಕಿಲ್ಲ!
ವಿಶ್ವಾದ್ಯಂತ ವಾಹನ ಮಾರುಕಟ್ಟೆಯಲ್ಲಿ ಪ್ರತಿದಿನ ಒಂದಿಲ್ಲೊಂದು ಆವಿಷ್ಕಾರಗಳು ನಡೆಯುತ್ತಿರುತ್ತವೆ. ಸದ್ಯ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಪ್ರತಿಯೊಂದು ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದ್ದು, ಚಾಲಕ ರಹಿತ ವಾಹನಗಳನ್ನು ತಯಾರಿಸುವಲ್ಲಿ ಪ್ರಮುಖ ಕಂಪನಿಗಳು ನಿರತವಾಗಿವೆ. ಅದರಲ್ಲಿ ಅಮೆಜಾನ್ ಮುಂದಿದ್ದು, ದೊಡ್ಡ ಮೈಲಿಗಲ್ಲನ್ನು ನಿರ್ಮಿಸಿದೆ. ಆ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.
ಇ-ಕಾಮರ್ಸ್ ದೈತ್ಯ ಅಮೆಜಾನ್ ಮಾಲೀಕತ್ವದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಝೂಕ್ಸ್ ಇಂಕ್ (Zoox Inc) ತಯಾರಿಸಿರುವ ಎಲೆಕ್ಟ್ರಿಕ್ ಸ್ವಯಂ ಚಾಲನಾ ವಾಹನ (self-driving vehicle) ಅಥವಾ ರೋಬೋಟ್ಯಾಕ್ಸಿ, ಇದೇ ಮೊದಲ ಬಾರಿಗೆ ಸಾರ್ವಜನಿಕ ರಸ್ತೆಯಲ್ಲಿ ಪ್ರಯಾಣಿಕರನ್ನು ಯಶಸ್ವಿಯಾಗಿ ಹೊತ್ತೊಯ್ಯುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಸ್ಟೀರಿಂಗ್ ವೀಲನ್ನೇ ಹೊಂದಿರದ ಈ ವಾಹನವು ಕ್ಯಾಲಿಫೋರ್ನಿಯಾದ ಫೋಸ್ಟರ್ ಸಿಟಿಯಲ್ಲಿರುವ ಝೂಕ್ಸ್ ಕಂಪನಿಯ ಕ್ಯಾಂಪಸ್ ನಲ್ಲಿ ಸಂಚಾರ ನಡೆಸಿದೆ.

ಇದೇ ಮಾರ್ಗದಲ್ಲಿ ತನ್ನ ನೌಕರರಿಗಾಗಿ ರೋಬೋಟ್ಯಾಕ್ಸಿ ಕಾರ್ಯಚರಣೆಯನ್ನು ಮುಂದುವರೆಸಲು ಕಂಪನಿ ಬಯಲಿಸಿದೆ. ಆದರೆ, ಹೆಚ್ಚುವರಿ ಅನುಮತಿಗಾಗಿ ಕಾಯುತ್ತಿದೆ. ಅಲ್ಲದೆ, ಸಾರ್ವಜನಿಕ ರಸ್ತೆಯೊಂದರಲ್ಲಿ ಯಾವುದೇ ರೀತಿಯಲ್ಲಿ ಚಾಲಕನ ಸಹಾಯವಿಲ್ಲದೆ, 'ರೋಬೋಟ್ಯಾಕ್ಸಿ' ಪ್ರಯಾಣಿಕರನ್ನು ಸಾಗಿಸುತ್ತಿರುವುದು ಇದೇ ಮೊದಲು ಎಂದು ಕಂಪನಿ ಹೇಳಿಕೊಂಡಿದೆ. ಈ ವಾಹನವು 2020ರಿಂದ ಪರೀಕ್ಷಾ ಪರವಾನಿಗೆ (testing permit) ಹೊಂದಿದ್ದು, ಅದನ್ನು ಈವರೆಗೆ ಮರು ನೋಂದಣಿ ಮಾಡುತ್ತಲೇ ಬಂದಿದೆ.
ಅಮೆಜಾನ್ ಕಂಪನಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದು, ಅದರ ಭಾಗವಾಗಿ ಝೂಕ್ಸ್ ಹಾಗೂ ಜನರಲ್ ಮೋಟಾರ್ಸ್ ಕೋ ಸೇರಿದಂತೆ ಅನೇಕ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿದೆ. ಇದೇ ತಿಂಗಳ ಫೆಬ್ರುವರಿ 3 ರಂದು ಕ್ಯಾಲಿಫೋರ್ನಿಯಾದ ಮೋಟಾರು ವಾಹನ ಇಲಾಖೆ (department of motor vehicles)ಯಿಂದ ಸಾರ್ವಜನಿಕ ರಸ್ತೆಯಲ್ಲಿ ಈ ರೋಬೋಟ್ಯಾಕ್ಸಿ ಪರೀಕ್ಷಿಸಲು ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

ಝೂಕ್ಸ್ ಕಂಪನಿ ತಯಾರಿಸಿರುವ ಈ ರೋಬೋಟ್ಯಾಕ್ಸಿ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಸಾಮಾನ್ಯ ಕಾರುಗಳು ಹೊಂದಿರುವುದಂತೆ ಯಾವುದೇ ರೀತಿಯ ಸ್ಟೀರಿಂಗ್ ವೀಲ್ ಹಾಗೂ ಬ್ರೇಕ್ ಪೆಡಲ್ ಗಳನ್ನು ಹೊಂದಿಲ್ಲ. ಎರಡು ಸಾಲುಗಳ ಆಸನ ವ್ಯವಸ್ಥೆಯನ್ನು ಹೊಂದಿದ್ದು, ನಾಲ್ಕು ಮಂದಿ ಸುಲಭವಾಗಿ ಪ್ರಯಾಣಿಸಬಹುದು. ಸದ್ಯ, ಈ ರೋಬೋಟ್ಯಾಕ್ಸಿ ಗಂಟೆಗೆ 35 ಮೈಲು (56 ಕಿ.ಮೀ) ವೇಗದಲ್ಲಿ ಚಲಿಸಿದ್ದು, ಇದು ಒಂದು ರೀತಿಯಲ್ಲಿ ಅದ್ಭುತವೇ ಸರಿ ಎಂದು ಹಲವಾರು ಹೇಳುತ್ತಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಇಒ ಐಚಾ ಇವಾನ್ಸ್ ಅವರು, 'ಈ ರೋಬೋಟ್ಯಾಕ್ಸಿಯನ್ನು ವಾಣಿಜ್ಯ ಬಳಕೆಗೆ ಬಿಡುಗಡೆ ಮಾಡಲು ಎಲ್ಲ ರೀತಿಯಲ್ಲಿ ತಯಾರಿಯನ್ನು ನಡೆಸುತ್ತಿದ್ದೇವೆ. ಆದರೆ, ಸರ್ಕಾರದಿಂದ ಕೆಲವೊಂದು ಅನುಮತಿಯನ್ನು ಪಡೆಯಬೇಕಾಗಿದ್ದು, ಆ ಬಳಿಕವಷ್ಟೇ ಮಾರುಕಟ್ಟೆಗೆ ಬರಲಿದೆ. ಅಲ್ಲದೆ, ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸಲು ಯೋಗ್ಯವಾಗಿದೆಯೇ ಎಂದು ತಿಳಿಯಲು ಎಲ್ಲ ಮಾನದಂಡಗಳನ್ನು ಪರಿಶೀಲಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಇದೊಂದು ಉತ್ತಮ ಪ್ರಯಾಣಿಕ ವಾಹನವಾಗುವುದರಲ್ಲಿ ಎರಡು ಮಾತಿಲ್ಲ' ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಅಗ್ಗದ ಬೆಲೆಯ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಕ ಕಂಪನಿ ಶಿಯೋಮಿ ಕೂಡ ಎಲೆಕ್ಟ್ರಿಕ್ ಕಾರು ತಯಾರಿಕೆಯಲ್ಲಿ ನಿರತವಾಗಿದ್ದು, 'Xiaomi ms11' ಸೆಡಾನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ, ಕಂಪನಿಯು ಅಧಿಕೃತವಾಗಿ ಈ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರದರ್ಶಿಸುವ ಮೊದಲೇ ಪೋಟೋಗಳು ಲೀಕ್ ಆಗುವ ಮೂಲಕ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ವರದಿ ಪ್ರಕಾರ, ಒಂದೇ ಚಾರ್ಜ್‌ನಲ್ಲಿ 1000 KM ರೇಂಜ್ ನೀಡುವ ಬ್ಯಾಟರಿ ಪ್ಯಾಕ್ ಹೊಂದಿರುವಂತೆ ಈ ಕಾರನ್ನು ವಿನ್ಯಾಸ ಮಾಡಲಾಗುತ್ತಿದೆಯಂತೆ.
ವಿಶ್ವಾದ್ಯಂತ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಆಧರಿತವಾಗಿ ವಿವಿಧ ಕಂಪನಿಗಳು ಚಾಲಕ ರಹಿತ ವಾಹನಗಳನ್ನು ತಯಾರಿಸುತ್ತಿರುವುದು ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಆದರೆ, ಈವರೆಗೆ ಇಂತಹ ಯಾವುದೇ ವಾಹನಗಳು ಮಾರುಕಟ್ಟೆಗೆ ಬಂದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ನಿಟ್ಟಿನಲ್ಲಿ ಅಮೆಜಾನ್ ಒಡೆತನದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಝೂಕ್ಸ್ ದೊಡ್ಡ ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು. ಈ ವಾಹನ ಖರೀದಿಗೆ ದೊರೆತ ಮೇಲೆ ಇದರ ಕಾರ್ಯಕ್ಷಮತೆ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಗಲಿದೆ.


Click it and Unblock the Notifications